ಶನಿವಾರ, ಮಾರ್ಚ್ 6, 2021
30 °C
ಯಡಿಯೂರಪ್ಪ, ವಿಜಯೇಂದ್ರ ‘ಆಪ್ತ’ರ ಹೆಸರಿನಲ್ಲಿ ಅಧಿಕಾರಿಗಳಿಗೆ ಕರೆ

ಸಚಿವರೇ ಇಲ್ಲ: ನಡೆಯಿತು ಗುತ್ತಿಗೆದಾರರ ಸಭೆ!

ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಪುತ್ರ ಬಿ.ವೈ. ವಿಜಯೇಂದ್ರ ಅವರ ಆಪ್ತರು ಎಂದು ಹೇಳಿಕೊಂಡು ಉಮೇಶ್‌ ಹಾಗೂ ಬಿನ್ನಿ ಎಂಬುವರು ಗುತ್ತಿಗೆದಾರರ ಸಭೆ ನಡೆಸಿರುವುದು ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಇಬ್ಬರ ನಡೆಗೆ ಕೆಲವು ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕ ನೀರಾವರಿ ನಿಗಮದ ಕಚೇರಿಯಲ್ಲೇ ಮೂರು ದಿನಗಳ ಹಿಂದೆ ಈ ಇಬ್ಬರು ಸಭೆ ನಡೆಸಿದ್ದಾರೆ. ಸಭೆಗೆ ಹಾಜರಾಗುವಂತೆ ಮೆಘಾ ಕನ್‌ಸ್ಟ್ರಕ್ಷನ್‌, ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಸೇರಿದಂತೆ ₹100 ಕೋಟಿಗಿಂತ ಹೆಚ್ಚಿನ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಕರೆ ಮಾಡಿದ್ದರು. ಈ ಪೈಕಿ, ಕೆಲವು ಗುತ್ತಿಗೆದಾರರಷ್ಟೇ ಸಭೆಯಲ್ಲಿ ಭಾಗವಹಿಸಿದ್ದರು. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಅನುಷ್ಠಾನಗೊಂಡ ನೀರಾವರಿ ಯೋಜನೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.

‘ಜುಲೈ ತಿಂಗಳಲ್ಲಿ ಅನುಮೋದನೆ ನೀಡಿರುವ ಯೋಜನೆಗಳಿಗೆ ತಡೆ ನೀಡಲಾಗಿದ್ದು, ಆ ಯೋಜನೆಗಳ ಗುತ್ತಿಗೆದಾರರನ್ನು ಬದಲಿಸುತ್ತೇವೆ. ನಮ್ಮ ಮಾತು ಹೇಳಿದರೆ ನಿಮಗೆ ಈ ಗುತ್ತಿಗೆಗಳನ್ನು ಕೊಡಿಸುತ್ತೇವೆ’ ಎಂದು ಗುತ್ತಿಗೆದಾರರ ಓಲೈಸುವ ಪ್ರಯತ್ನ ಮಾಡಿದರು’ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಗುತ್ತಿಗೆದಾರರೊಬ್ಬರು ತಿಳಿಸಿದರು.

ಅಧಿಕಾರಿಗಳಿಗೆ ಕರೆ– ಆರೋಪ: ‘ನಮ್ಮದೇ ಸರ್ಕಾರ ಬಂದಿದ್ದು, ನಿಮಗೆ ಬೇಕಾದ ಜಾಗಕ್ಕೆ ವರ್ಗ ಮಾಡಿಸುತ್ತೇವೆ ಎಂದು ಉಮೇಶ್‌ ಹಾಗೂ ಬಿನ್ನಿ ಎನ್ನುವವರು ಕರೆ ಮಾಡಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಹಲವು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಇಬ್ಬರು ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌, ಅಬಕಾರಿ, ಪೊಲೀಸ್‌ ಅಧಿಕಾರಿಗಳು ಹಾಗೂ ಕೆಲವು ತಹಶೀಲ್ದಾರ್‌ಗಳಿಗೆ ಕರೆ ಮಾಡಿ ವರ್ಗ ಮಾಡಿಸುವುದಾಗಿ ಆಮಿಷ ಒಡ್ಡಿದ್ದಾರೆ ಎಂದು ಅಧಿಕಾರಿಗಳು ದೂರಿದ್ದಾರೆ.

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸರ್ಕಾರ ಉರುಳಿಸಲು ನೆರವಾದವರಿಗೆ ಕಮಿಟ್‌ಮೆಂಟ್‌ ತೀರಿಸಬೇಕಾಗಿದೆ. ಹೀಗಾಗಿ, ನೀವು ನೆರವಾಗಲೇಬೇಕು ಎಂದು ಸೂಚನೆ ನೀಡುತ್ತಿದ್ದಾರೆ. ಏನು ಮಾಡುವುದೆಂದು ನಮಗೂ ಗೊತ್ತಾಗುತ್ತಿಲ್ಲ’ ಎಂದು ಐಎಎಸ್‌, ಐಪಿಎಸ್‌ಗೆ ಹುದ್ದೆ ಬಡ್ತಿ ಪಡೆದಿರುವ ಇಬ್ಬರು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯೆಗಾಗಿ ಬಿ.ವೈ.ವಿಜಯೇಂದ್ರ ಅವರು ಮೊಬೈಲ್‌ಗೆ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

ಗುತ್ತಿಗೆದಾರರ ಮೇಲೆ ಒತ್ತಡ; ಕುಮಾರಸ್ವಾಮಿ ಆರೋಪ

‘ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ಬಿ.ವೈ. ವಿಜಯೇಂದ್ರ ಅವರು ನಗರದ ಬಿಲ್ಡರ್‌ಗಳ ಸಭೆ ನಡೆಸಿ ₹100 ಕೋಟಿ ಬೇಡಿಕೆ ಇಟ್ಟಿದ್ದಾರೆ. ಬಿಲ್ಡರ್‌ಗಳು ಎದುರಿಸುತ್ತಿರುವ ಸಮಸ್ಯೆ ಇದ್ದರೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳೇ ಸಭೆ ನಡೆಸಬೇಕಿತ್ತು. ಅದು ಬಿಟ್ಟು ಹೋಟೆಲ್‌ನಲ್ಲಿ ಸಭೆ ನಡೆಸಿದ್ದು ಏಕೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

‘ಕೆಲವು ಇಲಾಖೆಗಳಲ್ಲಿ ಗುತ್ತಿಗೆದಾರರಿಂದ ಶೇ 6ರಿಂದ 10 ರಷ್ಟು ಕಮಿಷನ್‌ ಪಡೆಯುವ ಪದ್ಧತಿ ಹಿಂದೆಲ್ಲ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಗುತ್ತಿಗೆದಾರರು ಪಡೆಯುವ ಲಾಭಾಂಶದಲ್ಲಿ ಶೇ 50 ಕೇಳುವ (₹30 ಕೋಟಿ ಲಾಭ ಗಳಿಸಿದ್ದರೆ ₹15 ಕೋಟಿ) ಸಂಸ್ಕೃತಿ ಆರಂಭವಾಗಿದೆ. ಇದೊಂದು ಹೊಸ ಬೆಳವಣಿಗೆ’ ಎಂದು ಅವರು ಹೇಳಿದರು.

‘ಹೇಮಾವತಿ ನಾಲೆ ಆಧುನೀಕರಣ ಕಾಮಗಾರಿ ಹೆಸರಿನಲ್ಲಿ ಎಚ್‌.ಡಿ.ರೇವಣ್ಣ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಲು ಹಿರಿಯ ಐಎಎಸ್‌ ಅಧಿಕಾರಿ ಅಜಯ್‌ ಸೇಠ್‌ ನೇತೃತ್ವದಲ್ಲಿ ಸಮಿತಿ ರಚಿಸಿದ್ದೆ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಇತ್ತೀಚೆಗೆ ಕರೆ ಮಾಡಿ ₹100 ಕೋಟಿ ಕೊಡುವಂತೆ ಕೇಳಿದ್ದಾರೆ. ಶಾಸಕರ ಖರೀದಿಗಾಗಿ ಖರ್ಚು ಮಾಡಿದ್ದರು. ಅದಕ್ಕೆ ಈಗ ವಸೂಲಿ ಶುರುವಾಗಿದೆ’ ಎಂದು ಆರೋಪಿಸಿದರು.

‘ಬೆಂಗಳೂರಿನ ಆಯಕಟ್ಟಿನ ಹುದ್ದೆಗೆ ₹15 ಕೋಟಿ ಕೊಟ್ಟು ಒಬ್ಬರು ಬಂದಿದ್ದಾರೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾಧಿಕಾರಿಗಳ ಬದಲಾವಣೆಗೂ ಯತ್ನ ನಡೆದಿದ್ದು, ಆ ಹುದ್ದೆಗಳಿಗೆ ತಲಾ ₹7.5 ಕೋಟಿ ಬೇಡಿಕೆ ಇಟ್ಟಿದ್ದಾರೆ’ ಎಂದು ಆರೋಪಿಸಿದರು.

**

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆಗಿರುವ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಮಾತನಾಡುವುದು ಇದೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತೇನೆ
- ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ನ ಹಿರಿಯ ಶಾಸಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು