ಪ್ರಜ್ವಲ್ ಸುಳ್ಳು ಮಾಹಿತಿ ನೀಡಿದ ಆರೋಪ: ವರದಿ ನೀಡಲು ಡಿ.ಸಿಗೆ ಸೂಚನೆ

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ, ಮೇ 17ರೊಳಗೆ ವರದಿ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯಿಂದ ಪತ್ರ ಬಂದಿದೆ.
ಅಫಿಡವಿಟ್‌ನಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಅನೇಕ ಅಂಶಗಳನ್ನು ಪ್ರಜ್ವಲ್ ಮರೆಮಾಚಿದ್ದಾಗಿ ಬಿಜೆಪಿ ಅಭ್ಯರ್ಥಿ ಎ. ಮಂಜು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
‘ಜಿಲ್ಲಾಧಿಕಾರಿ ವರದಿ ಆಧರಿಸಿ ಮುಂದಿನ ಹೆಜ್ಜೆ ಇಡುತ್ತೇವೆ. ಒಂದು ವೇಳೆ ಶಿಸ್ತು ಕ್ರಮಕ್ಕೆ ಮುಂದಾದರೆ ಪ್ರಜ್ವಲ್ ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇರುವುದಿಲ್ಲ. ನನ್ನ ಪ್ರಕಾರ ಪ್ರಜ್ವಲ್ ವಿರುದ್ಧ ಕ್ರಮ ಆಗುತ್ತದೆ' ಎಂದು ಮಂಜು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್‌ನ ಜಿಲ್ಲಾ ಚುನಾವಣಾ ಏಜೆಂಟ್, ವಕೀಲ ಮಳಲಿ ಜಯರಾಂ, ‘ಈ ಆರೋಪ ರಾಜಕೀಯ ದುರುದ್ದೇಶವಷ್ಟೆ. ಈಗಾಗಲೇ ಚುನಾವಣಾ ಪ್ರಕ್ರಿಯೆ ಮುಗಿದಿದೆ. ಜಿಲ್ಲಾ ಚುನಾವಣಾ ಅಧಿಕಾರಿ ಒಮ್ಮೆ ನಾಮಪತ್ರ ಅಂಗೀಕರಿಸಿದ ಮೇಲೆ ಅದೇ ನಾಮಪತ್ರವನ್ನು ರದ್ದು ಮಾಡಲು ಕಾನೂನಿನಲ್ಲಿ ಅವಕಾಶವೂ ಇಲ್ಲ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ, ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು’ ಎಂದರು.
‘ಬಿಜೆಪಿ ಅಭ್ಯರ್ಥಿ ಅನಗತ್ಯ ವಿವಾದ ಮಾಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಚುನಾವಣಾ ಆಯೋಗಕ್ಕೆ ನಾವು ಸ್ಪಷ್ಟನೆ ನೀಡಿದ್ದೇವೆ. ಚುನಾವಣಾ ಆಯೋಗ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಏನನ್ನೂ ಕೇಳಿಲ್ಲ. ಅಷ್ಟೇ ಅಲ್ಲ, ಚುನಾವಣಾ ಫಲಿತಾಂಶವನ್ನೂ ತಡೆ ಹಿಡಿಯಲು ಸಾಧ್ಯ ಇಲ್ಲ’ ಎಂದು ಜಯರಾಂ ತಿಳಿಸಿದರು.
ಈ ಬಗ್ಗೆ ತನಿಖೆ ನಡೆಯು ತ್ತಿರುವುದರಿಂದ ಪ್ರತಿಕ್ರಿಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.