ಬುಧವಾರ, ಜನವರಿ 22, 2020
19 °C
ಬಳ್ಳಾರಿ ಜಿಲ್ಲೆಗೆ ಎರಡು ಪ್ರಶಸ್ತಿ; ಮದ್ದೇರು ಗ್ರಾ.ಪಂ.ಗೂ ಅಗ್ರ ಪುರಸ್ಕಾರ

ನರೇಗಾ: ಕನಕಪುರಕ್ಕೆ ಮೊದಲ ರ್‍ಯಾಂಕ್‌

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅತ್ಯಂತ ಹೆಚ್ಚು ಕಾಮಗಾರಿಗಳನ್ನು ಪೂರ್ಣಗೊಳಿಸಿದ ದೇಶದ ಮೊದಲ ತಾಲ್ಲೂಕು ಎಂಬ ಕೀರ್ತಿಗೆ ರಾಮನಗರ ಜಿಲ್ಲೆಯ ಕನಕಪುರ ಭಾಜನವಾಗಿದೆ.

ಕೇಂದ್ರ ಸರ್ಕಾರವು 2018–19ನೇ ಸಾಲಿನ ನರೇಗಾ ವಾರ್ಷಿಕ ರ್‍ಯಾಂಕಿಂಗ್‌ ಪುರಸ್ಕಾರ ಪ್ರಕಟಿಸಿದೆ. ನರೇಗಾ ಕಾಮಗಾರಿಗಳ ಅನುಷ್ಠಾನ ಪ್ರಕ್ರಿಯೆಯು ಸಂಪೂರ್ಣ ಆನ್‌ಲೈನ್ ಆಗಿದ್ದು, ಪ್ರತಿ ಜಿಲ್ಲಾ ಪಂಚಾಯಿತಿಯೂ ತಾನು ಕೈಗೊಂಡ ಕಾಮಗಾರಿಗಳ ವಿವರಗಳನ್ನು ವೆಬ್‌ ಪೋರ್ಟಲ್‌ನಲ್ಲಿ ಸೇರಿಸುತ್ತದೆ. ಇದರ ಆಧಾರದ ಮೇಲೆ ವಾರ್ಷಿಕ ರ್‍ಯಾಂಕ್‌ಗಳನ್ನು ಘೋಷಿಸಲಾಗುತ್ತಿದೆ.

ಈ ಸಾಲಿನಲ್ಲಿ ರಾಜ್ಯದ ಮೂರು ಜಿಲ್ಲೆಗಳು ಈ ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಕಾಮಗಾರಿ ಪೂರ್ಣಗೊಳಿಸಿದ ದೇಶದ ತಾಲ್ಲೂಕುಗಳ ಪೈಕಿ ಕನಕಪುರ ಮೊದಲ ಸ್ಥಾನದಲ್ಲಿ ನಿಂತಿದೆ. 2015–16ನೇ ಸಾಲಿನಲ್ಲಿ ತಾಲ್ಲೂಕಿನಲ್ಲಿ ಈ ಯೋಜನೆ ಅಡಿ ಕೈಗೆತ್ತಿಕೊಳ್ಳಲಾದ ಎಲ್ಲ ಕಾಮಗಾರಿಗಳೂ ಪೂರ್ಣಗೊಂಡಿವೆ. 2016–17ನೇ ಸಾಲಿನಲ್ಲಿ ಆರಂಭಗೊಂಡ ಕಾಮಗಾರಿಗಳ ಪೈಕಿ ಐದು ಮಾತ್ರ ಬಾಕಿ ಇವೆ. 2017–18ನೇ ಸಾಲಿನ ಕಾಮಗಾರಿಗಳಲ್ಲಿ 15 ಮಾತ್ರ ಪ್ರಗತಿಯಲ್ಲಿವೆ.

ನಂಜುಂಡಪ್ಪ ಆಯೋಗದ ವರದಿಯಂತೆ ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಕನಕಪುರವೂ ಒಂದು. ಇಲ್ಲಿನ ಕೃಷಿ ಬಹುತೇಕ ಮಳೆ ಆಶ್ರಿತವಾಗಿದ್ದು, ತಾಲ್ಲೂಕು ನಿರಂತರವಾಗಿ ಬರಕ್ಕೆ ಸಿಲುಕುತ್ತಿದೆ. ಇಂತಹ ಪ್ರದೇಶದಲ್ಲಿ ನರೇಗಾದ ಅಡಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕೃಷಿ ಹೊಂಡ ಹಾಗೂ ಚೆಕ್‌ ಡ್ಯಾಮ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಇಲ್ಲಿನ ಅಂತರ್ಜಲ ಮಟ್ಟ ವೃದ್ಧಿಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಉಳಿದ ಪ್ರಶಸ್ತಿ: ನರೇಗಾದಲ್ಲಿ ಜಿಯೋ ವ್ಯವಸ್ಥೆ ಅನುಷ್ಠಾನಕ್ಕಾಗಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮದ್ದೇರು ಗ್ರಾಮ ಪಂಚಾಯಿತಿಗೆ ದೇಶದಲ್ಲೇ ಮೊದಲ ರ್‍ಯಾಂಕ್ ದೊರೆತಿದೆ. ಗ್ರಾ.ಪಂ. ಮಟ್ಟದಲ್ಲಿ ಕಾಮಗಾರಿಯ ಪರಿಣಾಮಕಾರಿ ಅನುಷ್ಠಾನ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಗುಂಡಗಟ್ಟಿ ಗ್ರಾ.ಪಂ. ನಾಲ್ಕನೇ ರ್‍ಯಾಂಕ್ ಗಳಿಸಿದೆ. ಜಿಲ್ಲಾವಾರು ಅನುಷ್ಠಾನ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಗೆ 10ನೇ ರ್‍ಯಾಂಕ್‌ ಸಿಕ್ಕಿದೆ.

*
ಕಾಮಗಾರಿ ಅನುಷ್ಠಾನ ಮತ್ತು ಮುಕ್ತಾಯದಲ್ಲಿ ಕನಕಪುರ ದೇಶದಲ್ಲೇ ಮುಂದಿದೆ. ಪ್ರತಿ ವರ್ಷದ ನಿರ್ವಹಣೆ ಆಧರಿಸಿ ಈ ರ್‍ಯಾಂಕಿಂಗ್ ದೊರೆತಿದೆ
-ಇಕ್ರಂ, ಜಿ.ಪಂ. ಸಿಇಒ, ರಾಮನಗರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು