ಶುಕ್ರವಾರ, ಜನವರಿ 22, 2021
28 °C
ಸಮರ್ಥ ನಾಯಕತ್ವದ ಕೊರತೆ / ಆಡಳಿತ ಮಂಡಳಿಯ ಎಡಬಿಡಂಗಿತನ

ಒಳನೋಟ| ಹಾಪ್ ಕಾಮ್ಸ್: ವಿಶ್ವಾಸ ಉಳಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರು ದಶಕಗಳ ಅನುಭವ ಹಾಗೂ ಬ್ರಾಂಡ್ ಕುರಿತಾದ ಗ್ರಾಹಕರ ವಿಶ್ವಾಸವನ್ನೇ ಬಂಡವಾಳವಾಗಿಸಿಕೊಂಡು ಪುಟಿದೇಳುವ ಎಲ್ಲ ಅವಕಾಶಗಳು ಹಾಪ್ ಕಾಮ್ಸ್ ಗೆ ಇದ್ದರೂ ಸಮರ್ಥ ನಾಯಕತ್ವ ಮತ್ತು ಆಡಳಿತ ಮಂಡಳಿಯ ಇಚ್ಛಾಶಕ್ತಿ ಕೊರತೆಯಿದೆ.

ನಿರ್ದೇಶಕರಾಗಿದ್ದ ಹೆಚ್ಚಿನವರಲ್ಲಿ ರೈತರ ಬಗೆಗಿನ ಕಾಳಜಿಗಿಂತ ವೈಯಕ್ತಿಕ ಪ್ರತಿಷ್ಠೆ ಮತ್ತು ರಾಜಕೀಯ ಭವಿಷ್ಯಕ್ಕೆ ಹುದ್ದೆಯನ್ನು ವೇದಿಕೆಯನ್ನಾಗಿಸಿಕೊಂಡವರೇ ಹೆಚ್ಚು. ಅದಕ್ಕೆ ತಕ್ಕಂತೆ ಕೌಶಲ್ಯ ರಹಿತ ಸಿಬ್ಬಂದಿ, ತೋಟಗಾರಿಕೆ ಮತ್ತು ಸಹಕಾರ ಇಲಾಖೆಗಳ ನಡುವಿನ ಸಮನ್ವಯ ಕೊರತೆ, ಸರ್ಕಾರದ ಮಲತಾಯಿ ಧೋರಣೆಗಳು ದೇಶದಲ್ಲೇ ದೈತ್ಯ ರೈತರ ಸಹಕಾರ ಸಂಸ್ಥೆಯಾಗಿ ರೂಪುಗೊಳ್ಳಬಹುದಾಗಿದ್ದ ಹಾಪ್ ಕಾಮ್ಸ್ ಅನ್ನು ಅವನತಿಯತ್ತ ದೂಡಿವೆ.

ಭದ್ರಬುನಾದಿ ಹಾಗೂ ಉತ್ತಮ ಹೆಸರು ಹೊಂದಿ ರುವ ಹಾಪ್‌ಕಾಮ್ಸ್‌ಗೆ ಬೇಡಿಕೆ– ಪೂರೈಕೆ ನಡುವೆ ಕೊಂಡಿಯಾಗುವ ಅರ್ಹತೆ ಮತ್ತು ಸಾಮರ್ಥ್ಯ ಇದೆ. ಆದರೆ, ಬೇಡಿಕೆಯನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಲೋಪಗಳನ್ನು ಸರಿಪಡಿಸಿಕೊಂಡು ಮುನ್ನಡಿ ಇಡಬೇಕಿದೆ.

ಬೇಡಿಕೆ ಅರಿತೇ ರಿಲಯನ್ಸ್‌ ಫ್ರೆಷ್‌, ಮೋರ್‌, ಫಾರ್ಮ್‌ ಫ್ರೆಷ್‌ ಮುಂತಾದ ಕಂಪನಿಗಳು  ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ಆಕರ್ಷಕ ಮಳಿಗೆಗಳನ್ನು ರೂಪಿಸಿ, ಅಚ್ಚುಕಟ್ಟಾಗಿ ತರಕಾರಿಗಳನ್ನು ಜೋಡಿಸಿ, ಬುಧವಾರ ಸಂತೆ, ವಾರಾಂತ್ಯದ ರಿಯಾಯಿತಿಗಳ ಹೆಸರಿನಲ್ಲಿ ಗ್ರಾಹಕರನ್ನು ಸೆಳೆಯುತ್ತಿವೆ. ಮಾತ್ರವಲ್ಲ, ರೈತರ ಜಮೀನುಗಳಿಗೆ ನುಗ್ಗಿ ಅಲ್ಲೇ ಖರೀದಿ ಮತ್ತು ಗ್ರೇಡಿಂಗ್ ಮಾಡುವ ಜಾಲ ರೂಪಿಸಕೊಂಡಿವೆ. ಆದರೆ ಇಂತಹ ಸಾಧ್ಯತೆಗಳನ್ನು  ಬಳಸಿಕೊಳ್ಳುವಲ್ಲಿ  ಹಾಪ್‌ಕಾಮ್ಸ್‌ ಹಿಂದೆ ಬೀಳುತ್ತಿದೆ.

ಇದನ್ನೂ ಓದಿ: ಪ್ರಾಮಾಣಿಕ ನಾಯಕತ್ವದ ಕೊರತೆ: ಅವಸಾನದತ್ತ ಹಾಪ್‌ಕಾಮ್ಸ್

‘ಅಧಿಕಾರಿಗಳು ಮನಸ್ಸು ಮಾಡಿದರೆ ಹಾಪ್‌ಕಾಮ್ಸ್‌ನಲ್ಲೂ ಕ್ರಾಂತಿಕಾರಿ ಸುಧಾರಣೆ ಸಾಧ್ಯ. ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಸರ್ಕಾರದಿಂದ ತಕ್ಕ ಬೆಂಬಲ ಬೇಕು. ಹಾಪ್‌ಕಾಮ್ಸ್ ಈಗಲೂ 19ನೇ ಶತಮಾನದಲ್ಲೇ ಇದೆ. ಅದರ ಮಳಿಗೆಗಳನ್ನು ಹಾಗೂ ಖಾಸಗಿ ಮಳಿಗೆಗಳನ್ನು ಹೋಲಿಸಿ ನೋಡಿ. ಖಾಸಗಿ ಮಳಿಗೆಗಳಲ್ಲಿ ತರಕಾರಿಗಳನ್ನೇ ಗ್ರೆಡೇಷನ್‌ ಮಾಡಿ ಅಚ್ಚುಕಟ್ಟಾಗಿ ಜೋಡಿಸಿಡುತ್ತಾರೆ’ ಎನ್ನುತ್ತಾರೆ ಕೃಷಿಕ ಅರುಣಾ ಅರಸ್. 

‘ಕೆಎಂಎಫ್‌ ಮಳಿಗೆಗಳನ್ನು ನೋಡಿ. ಹೆಚ್ಚುವರಿ ಹಾಲು ಪೂರೈಕೆಯಾದರೆ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತಾರೆ. ಆದರೆ, ಹಾಪ್‌ಕಾಮ್ಸ್‌ನವರು ಬೇಡಿಕೆಗಿಂತ ಹೆಚ್ಚು ಉತ್ಪನ್ನ ಬಂದರೆ ಖರೀದಿಸುವುದಿಲ್ಲ. ಖರೀದಿಸಿದ ತಕ್ಷಣ ಹಣ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಬೇಕು. ನಿಖರ ತೂಕಕ್ಕೆ ಕಂಪ್ಯೂಟರೀಕೃತ ವ್ಯವಸ್ಥೆ ಮಾಡಬೇಕು. ಬೆಳಗಿನ ಉಪಾಹಾರಕ್ಕೆ ಬೇಕಾದ ದೋಸೆ ಹಿಟ್ಟಿನಿಂದ ರಾತ್ರಿ ಊಟಕ್ಕೆ ಬೇಕಾಗುವ ಪದಾರ್ಥವರೆಗಿನ ಎಲ್ಲವೂ ಒಂದೇ ಮಳಿಗೆಯಲ್ಲಿ ಸಿಗುವಂತಾಗಬೇಕು’ ಎಂದು ಸಲಹೆ ನೀಡಿದರು.

ನಿವೃತ್ತ ನಿರ್ದೇಶಕ ಡಾ.ಡಿ.ಎಲ್‌.ಮಹೇಶ್ವರ್‌ ಹೇಳುವುದೇ ಬೇರೆ, ‘ಕೆಎಂಎಫ್‌ ಉತ್ತಮ ಮಾರುಕಟ್ಟೆ ಕಂಡುಕೊಳ್ಳಲು ಸರ್ಕಾರದ ಉತ್ತೇಜನ ಕಾರಣ. ಅದೇ ಕಾಳಜಿಯನ್ನು ಹಾಪ್ ಕಾಮ್ಸ್ ಮೇಲೆ ತೋರಿಸಿಲ್ಲ. ಲೀಟರ್‌ ಹಾಲಿಗೆ ಸರ್ಕಾರ ₹ 5 ಸಬ್ಸಿಡಿ ನೀಡುತ್ತಿದೆ. ಅದೇ ರೀತಿ, ಹಣ್ಣು– ತರಕಾರಿ ಬೆಳೆಗಾರರಿಗೂ ಪ್ರತಿ 100 ಕೆ.ಜಿ.ಗೆ ಇಂತಿಷ್ಟು ಎಂದು ಸಬ್ಸಿಡಿ ನೀಡಿದರೆ ಎಲ್ಲ ರೈತರು ಹಾಪ್‌ಕಾಮ್ಸ್‌ಗೆ ತಮ್ಮ ಉತ್ಪನ್ನ ಮಾರುತ್ತಾರೆ. ಸಾಗಣೆ ವೆಚ್ಚ, ತೂಕ ಕಳೆದುಕೊಳ್ಳುವಿಕೆಯ ನಷ್ಟ ಭರಿಸಲು ಈ ಸಬ್ಸಿಡಿ ನೆರವಾಗುತ್ತದೆ. ಮಾರುಕಟ್ಟೆಯಲ್ಲಿ ದರ ಏರಿಳಿತದ ಅಪಾಯವೂ ಕಡಿಮೆ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು. 

ಹಾಲು ಒಕ್ಕೂಟದಂತೆ ತೋಟಗಾರಿಕಾ ಬೆಳೆಗಳ ಮಂಡಳಿ (ಕೆಎಚ್‌ಎಫ್‌) ಇದೆ. ಕೃಷಿ ಹಾಗೂ ತೋಟಗಾರಿಕಾ ಬೆಳೆಗಾರರ 250ಕ್ಕೂ ಅಧಿಕ ಸಹಕಾರ ಸಂಘಗಳು ರಾಜ್ಯದಲ್ಲಿವೆ. ಈ ಸವಲತ್ತನ್ನು ರೈತರಿಗೆ ತಲುಪಿಸುವುದು ಕಷ್ಟವಾಗದು. ಹಣ್ಣು–ತರಕಾರಿ ಬೆಳೆಯುವ ಪ್ರದೇಶ ಜಾಸ್ತಿ, ಉತ್ಪಾದನೆ ಜಾಸ್ತಿ, ಬೇಡಿಕೆ ಜಾಸ್ತಿ ಹಾಗೂ ಅವುಗಳ ಅವಲಂಬಿತರೂ ಜಾಸ್ತಿ. ಆದರೂ ಅವುಗಳ ಮಾರಾಟಕ್ಕೆ ಅಗತ್ಯ ಪ್ರೋತ್ಸಾಹ, ಸೌಲಭ್ಯ ಸಿಗುತ್ತಿಲ್ಲ. ಬೆಂಗಳೂರು ನಗರದ ಮಾರುಕಟ್ಟೆಯ ಶೇ 5 ರಷ್ಟನ್ನೂ ಹಾಪ್‌ಕಾಮ್ಸ್ ತಲುಪಿಲ್ಲ. ಇಲ್ಲಿನ ಮಾರುಕಟ್ಟೆಯ ಮೂರನೇ ಒಂದು ಭಾಗದಷ್ಟನ್ನಾದರೂ ಹಾಪ್‌ಕಾಮ್ಸ್‌ ನಿರ್ವಹಣೆ ಮಾಡುವಂತಾಗಬೇಕು. ಇದಕ್ಕೆ ಸೂಕ್ತ ಮೇಲ್ವಿಚಾರಣೆ ಅಗತ್ಯ ಇದೆ ಎನ್ನುತ್ತಾರೆ ಮಹೇಶ್ವರ್‌.

‘ಹಣ್ಣು ತರಕಾರಿಗಳಿಗೆ ವಿಶೇಷ ಮಾರುಕಟ್ಟೆ, ಈರುಳ್ಳಿ, ಆಲೂಗಡ್ಡೆ , ಸೊಪ್ಪು ಮುಂತಾದ ತೋಟ ಗಾರಿಕಾ ಉತ್ಪನ್ನಗಳಿಗೆ ಎರಡನೇ ಹಂತದ ಸುಧಾರಿತ ಮಾರುಕಟ್ಟೆಗಳ ಅವಶ್ಯಕತೆ ಇದೆ. ಹಣ್ಣು ತರಕಾರಿಗಳಿಗೂ ವೈಜ್ಞಾನಿಕ ಮಾನದಂಡ ರೂಪಿಸಿ ದರ ನಿಗದಿಪಡಿಸಬೇಕಿದೆ. ಮಾರುಕಟ್ಟೆ ಇಂಟೆಲಿಜೆನ್ಸ್‌ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. 10 ಕೆ.ಜಿ ಆಲೂಗಡ್ಡೆ ಬಿಸಾಡಿದರೆ ದರ ಕುಸಿತ ಎಂದು ಗುಲ್ಲೆಬ್ಬಿಸಲಾಗುತ್ತದೆ. ಆದರೆ, ಅದೇ ದಿನ ಬೇರೆ ನಗರದಲ್ಲಿ ಅದಕ್ಕೆ ಉತ್ತಮ ದರ ಇರುತ್ತದೆ. ಹೆಚ್ಚುವರಿ ತರಕಾರಿಯನ್ನು ಬೇಡಿಕೆ ಇರುವ ಕಡೆಗೆ ತುರ್ತಾಗಿ ಕಳುಹಿಸುವ ರಿಸ್ಕ್ ತೆಗೆದುಕೊಳ್ಳಬೇಕು’ ಎಂದು ಅಭಿಪ್ರಾಯಪಡುತ್ತಾರೆ ಮಹೇಶ್ವರ್.

ಔಷಧ ಮಳಿಗೆ ದಿನದ 24 ತಾಸು ತೆರೆದಿರು ವಂತೆಯೇ ಹಾಪ್‌ಕಾಮ್ಸ್‌ ಮಳಿಗೆಗಳಲ್ಲೂ ಗ್ರಾಹಕರಿಗೆ ಬೇಕೆನಿಸಿದಾಗ ತಾಜಾ ತರಕಾರಿ ಸಿಗುವಂತಿರಬೇಕು. ಶೇ 75ಕ್ಕೂ ಹೆಚ್ಚು ರೈತರು ಹಾಗೂ ಬಹುತೇಕ ಗ್ರಾಹಕರು ಈಗಲೂ ಹಾಪ್‌ಕಾಮ್ಸ್‌ ಮೇಲೆ ವಿಶ್ವಾಸ ಇಟ್ಟಿದ್ದಾರೆ. ತಂತ್ರಜ್ಞಾನದಲ್ಲಿರುವ ಅವಕಾಶ ಬಳಸಿ ಮೇಲ್ದರ್ಜೆಗೇರಬೇಕು. ತಜ್ಞರನ್ನು ನೇಮಿಸಿಕೊಂಡು ಮುಂದುವರಿಯಬೇಕು. ಈಗ ಸಂಸ್ಥೆಯಲ್ಲಿ ಆಧುನಿಕ ಮಾರುಕಟ್ಟೆ ಕೌಶಲದ ಬಗ್ಗೆ ತಿಳಿವಳಿಕೆ ಹೊಂದಿರುವವರ ಕೊರತೆ ಇದೆ. ಅವರಿಗೆ ತರಬೇತಿ ನೀಡುವ ಪ್ರಯತ್ನಗಳೂ ಆಗಿಲ್ಲ. ಇವೆಲ್ಲ ಕೊರತೆಗಳನ್ನು ನೀಗಿಸಬೇಕು ಎಂದರು.

‘ಗೋವಾ, ಮೆಟ್ಟುಪಾಳ್ಯ, ತಿರುವನಂತಪುರದಲ್ಲಿ ಹಣ್ಣು–ತರಕಾರಿಗಳಿಗೆ ದೊಡ್ಡ ದೊಡ್ಡ ಮಾರುಕಟ್ಟೆಗಳಿವೆ. ರೈಲಿನಲ್ಲಿ ಸಂಜೆ ಹಣ್ಣು ತರಕಾರಿ ಕಳುಹಿಸಿದರೆ ಮರುದಿನ ಈ ನಗರಗಳಿಗೆ ತಲುಪುತ್ತದೆ. ಇಂತಹ ಹೊಸ ಸಾಧ್ಯತೆ ಕಂಡುಕೊಳ್ಳಬೇಕು. ಮಾರುಕಟ್ಟೆ ವಿಸ್ತರಣೆಗೆ ಬಂಡವಾಳ ಬೇಕು. ಇದಕ್ಕೆ ಸರ್ಕಾರದ ನೆರವು ಅಗತ್ಯ’ ಎಂದರು.

‘ಇವೆಲ್ಲ ಹೇಳುವುದು ಸುಲಭ. ಮಾರುಕಟ್ಟೆಯಲ್ಲಿ ಯಶಸ್ವಿಯಾಗಬೇಕಾದರೆ ಪರಿಸ್ಥಿತಿ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ಖಾಸಗಿ ಸಂಸ್ಥೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಅವರದು ಲಾಭದ ಲೆಕ್ಕಾಚಾರ ಮಾತ್ರ. ಆದರೆ, ನಮ್ಮ ಕೈಕಾಲನ್ನು ಕಟ್ಟಿ ಹಾಕಿ ಈಜಿ ಎಂದರೆ ಈಜುವುದು ಹೇಗೆ. ಸಾಕಷ್ಟು ಅಪಾಯಕ್ಕೆ ಒಡ್ಡಿಕೊಳ್ಳಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲ’ ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ ಹಾಪ್‌ಕಾಮ್ಸ್‌ ಅಧಿಕಾರಿಗಳು.

‘ನಾವು ಹಣ್ಣು– ತರಕಾರಿ ಮಾರಾಟದಿಂದ ಬಂದ ಹಣದಲ್ಲಿ ಸಂಸ್ಥೆ ನಿರ್ವಹಣೆಗೆ ಶೇ 8ರಷ್ಟು ಮಾತ್ರ ಇಟ್ಟುಕೊಂಡು ಉಳಿದುದೆಲ್ಲವನ್ನೂ ರೈತರಿಗೆ ಮರಳಿಸುತ್ತೇವೆ. ತಿಂಗಳಿಗೆ ₹ 2 ಕೋಟಿವರೆಗೆ ಸಂಬಳ ಹಾಗೂ ನಿರ್ವಹಣೆಗೆ ತೆಗೆದಿಡಬೇಕು. ಇದ್ದುದನ್ನೇ ಹದ್ದುಬಸ್ತಿನಲ್ಲಿ ನಡೆಸಿಕೊಂಡು ಹೋಗುವುದೇ ದೊಡ್ಡದು’ ಎಂಬ ವಾದ ಹಾಪ್‌ಕಾಮ್ಸ್‌ನದು.

ಆರು ದಶಕಗಳ ಅನುಭವ ಹೊಂದಿರುವ ಈ ಸಂಸ್ಥೆಯನ್ನು ಸುಸ್ಥಿರವಾಗಿ ನಿಲ್ಲಿಸಬೇಕು. ಇದು ಸರ್ಕಾರದ ಜೊತೆ ಜನರ ಹಾಗೂ ರೈತರ ಜವಾಬ್ದಾರಿ ಕೂಡ. ರೈತರಿಗೆ ಅನುಕೂಲ, ಸಾರ್ವಜನಿಕರಿಗೂ ಅನುಕೂಲ. ಆದರೂ ಏತಕ್ಕೆ ಸುಧಾರಣೆ ತರಲು ಸಾಧ್ಯವಾಗುತ್ತಿಲ್ಲ ಎನ್ನುವುದು ದೊಡ್ಡ ಪ್ರಶ್ನೆ.

‘ಆನ್‌ಲೈನ್‌ ಮಾರುಕಟ್ಟೆ– ಸಂಚಾರ ಮಳಿಗೆಗೆ ಒತ್ತು’
ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿರುವ ಹಾಪ್‌ಕಾಮ್ಸ್‌ ಆನ್‌ಲೈನ್‌ ಮಾರುಕಟ್ಟೆ ಪ್ರವೇಶಕ್ಕೆ ಸಿದ್ಧತೆ ನಡೆಸಿದೆ.

‘ಬಿಗ್‌ಬ್ಯಾಸ್ಕೆಟ್‌ ರೀತಿಯಲ್ಲಿ ಹಾಪ್‌ಕಾಮ್ಸ್‌ ಕೂಡಾ ಆನ್‌ಲೈನ್‌ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಈ ಸಂಬಂಧ ಕೆಲವು ಏಜೆನ್ಸಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್‌. ‍ಪ್ರಸಾದ್‌ ತಿಳಿಸಿದರು. 

‘ಸಂಸ್ಥೆ ಬಳಿ ಸದ್ಯಕ್ಕೆ 10 ಸಂಚಾರ ಮಳಿಗೆಗಳಿವೆ. ಸಾವಿರಾರು ಮನೆಗಳಿರುವ ಅಪಾರ್ಟ್‌ಮೆಂಟ್‌ಗಳ ಬಳಿ ನಿಲ್ಲಿಸಿ ವ್ಯಾಪಾರ ನಡೆಸುತ್ತವೆ. ಈ ಹೊಸ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇನ್ನೂ 20 ಸಂಚಾರ ಮಳಿಗೆಗಳನ್ನು ಖರೀದಿಸುತ್ತಿದ್ದೇವೆ’ ಎಂದರು.

‘ಫಲಮಿತ್ರ ಆ್ಯಪ್‌ ರೂಪಿಸಿ’
ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ಕ್ಷಣ ಕ್ಷಣಕ್ಕೆ ಮಳೆ ಮಾಹಿತಿ ನೀಡುವ ಆ್ಯಪ್‌ಗಳು ನಮ್ಮಲ್ಲಿವೆ. ಅದೇ ರೀತಿ, ಮಾರುಕಟ್ಟೆಯಲ್ಲಿ ಎಲ್ಲಿ ಯಾವ ಹಣ್ಣು ತರಕಾರಿಗೆ ಬೇಡಿಕೆ ಇದೆ ಎಂಬ ಮಾಹಿತಿ ನೀಡುವ ಫಲಮಿತ್ರ ಆ್ಯಪ್‌ ತಯಾರಿಸಬೇಕು. ಬೇಡಿಕೆ ಹೆಚ್ಚಳ ಹಾಗೂ ಕುಸಿತದ ಬಗ್ಗೆ ಮಾಹಿತಿ ನೀಡುವ ಇಂತಹ ಆ್ಯಪ್‌ಗಳು ಮಾರುಕಟ್ಟೆ ಸುಧಾರಣೆ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಬಲ್ಲವು ಎಂದು ಡಾ.ಮಹೇಶ್ವರ್‌ ಅಭಿಪ್ರಾಯಪಟ್ಟರು.

ಮನೆಮನೆಗೆ ತಲುಪಿಸಿ: ಬೆಂಗಳೂರಲ್ಲಿ ಆಧುನಿಕ ಬಡವರು ಬಹಳಷ್ಟು ಸಂಖ್ಯೆಯಲ್ಲಿ ಇದ್ದಾರೆ. ಸ್ವಿಗ್ಗಿ, ಝೊಮ್ಯಾಟೊದಂತಹ ಆ್ಯ‍ಪ್ ಆಧಾರಿತ ಸೇವೆಗಳನ್ನು ಹಣ್ಣು– ತರಕಾರಿ ಮಾರಾಟಕ್ಕೂ ಬಳಸಿಕೊಳ್ಳಬಹುದು. ಕರೆ ಮಾಡಿದ ತಕ್ಷಣ ಮನೆಗೆ ಹಣ್ಣು– ತರಕಾರಿ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ಸರ್ಕಾರ ಏನು ಮಾಡಬೇಕು?
ಹಿಂದೆ ಬೆಂಗಳೂರು ನಗರದಲ್ಲಿ ಪಾರ್ಕ್ ಗಳಲ್ಲಿ ಮಳಿಗೆ ತೆರೆಯಲು ಅವಕಾಶವಿತ್ತು. ಪಾರ್ಕ್ ಆ್ಯಕ್ಟ್ ತಿದ್ದುಪಡಿ ಬಳಿಕ ಸಿಗುತ್ತಿಲ್ಲ. ಹೀಗಾಗಿ ಹೊಸ ಬಡಾವಣೆ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಮೂಲಸೌಕರ್ಯ ನಿವೇಶನಗಳನ್ನು ಆದ್ಯತೆ ಮೇರೆಗೆ ಹಾಪ್ ಕಾಮ್ಸ್ ಗೆ ನೀಡಬೇಕು. ಎರಡು ಇಲಾಖೆಗಳ ನಡುವೆ ಸಮನ್ವಯ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಒಂದೇ ಇಲಾಖೆ ಅಡಿ ಸಂಸ್ಥೆಯನ್ನು ತರಬೇಕು. ಮೌಲ್ಯವರ್ಧನೆಗಾಗಿ ತಂತ್ರಜ್ಞಾನ ಅಳವಡಿಕೆ ಮತ್ತು ಘಟಕ ಸ್ಥಾಪನೆಗೆ ಜಾಗ ಮತ್ತು ಆರ್ಥಿಕ ನೆರವು ನೀಡಬೇಕು. ಖಾಸಗಿಯವರಿಗೆ ಪ್ರಾಂಚೈಸಿ ಕೊಡಲು ಅವಕಾಶ ನೀಡಬೇಕು. ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ ಮಾರುಕಟ್ಟೆ ಕೌಶಲಗಳನ್ನು ಕಲಿಸಬೇಕು. ಅಗತ್ಯವಿದ್ದಲ್ಲಿ ಮಾತ್ರ ಕೌಶಲ್ಯಹೊಂದಿರುವ ಸಿಬ್ಬಂದಿ ನೇಮಕ ಮಾಡಬೇಕು.ಶೀಥಲಗೃಹ, ಮಾರುಕಟ್ಟೆ ಜಾಲ ವಿಸ್ತರಣೆ, ಆಧುನಿಕ ಮಳಿಗೆಗಳ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಬೇಕು.

ಬಿಸಿಯೂಟ ಸಿದ್ಧಪಡಿಸುವ ಶಾಲೆ/ಹಾಸ್ಟೆಲ್, ಆಸ್ಪತ್ರೆ, ಪುನರ್ವಸತಿ ಕೇಂದ್ರಗಳ ಸಹಿತ ಎಲ್ಲ ಸರ್ಕಾರಿ ಸಂಸ್ಥೆಗಳಿಂದ ಖರೀದಿ ಕಡ್ಡಾಯಗೊಳಿಸಬೇಕು. ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಕೆಲವೊಂದು ಕಠಿಣ ನಿರ್ಧಾರ ಕೈಗೊಳ್ಳಬೇಕು. ಹೊರ ರಾಜ್ಯ ಮತ್ತು ವಿದೇಶಗಳಿಗೆ ರಫ್ತು ಸಾಧ್ಯತೆಗಳನ್ನು ಪರಿಗಣಿಸಬೇಕು. ಮಳಿಗೆಗಳಿಗೆ ಒಂದು ಹೊತ್ತು ಸರಬರಾಜು ಮಾಡುವ ಪದ್ಧತಿಯನ್ನು ಬೆಳಗಿನ ಜಾವ ಮತ್ತು ಮಧ್ಯಾಹ್ನದ ನಂತರ ಎಂದು ವಿಂಗಡಿಸಿ ಬೆಳಗ್ಗೆ ಮತ್ತು ಸಂಜೆ ತಾಜಾ ತರಕಾರಿ ಮತ್ತು ಹಣ್ಣು ಸಿಗುವಂತೆ ನೋಡಿಕೊಳ್ಳಬೇಕು. ಉಳಿದ ಉತ್ಪನ್ನಗಳನ್ನು ಮೌಲ್ಯವರ್ಧನೆಗೆ ಹಿಂಪಡೆಯುವ ಸಾಧ್ಯತೆಗಳನ್ನು ಪರಿಶೀಲಿಸಬೇಕು. ಜನರು ಹೆಚ್ಚು ಆಕರ್ಷಿತರಾಗುತ್ತಿರುವ ಸಾವಯವ ಉತ್ಪನ್ನಗಳ ಮಾರಾಟಕ್ಕೂ ಆದ್ಯತೆ ಮೇರೆಗೆ ಅವಕಾಶ ಕಲ್ಪಿಸಬೇಕು. ಹದಗೆಟ್ಟಿರುವ ಆಡಳಿತವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ದಕ್ಷ ಮತ್ತು ‍ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕು.

**

₹ 360: ಹಾಪ್‌ಕಾಮ್ಸ್‌ ಸದಸ್ಯತ್ವ ಶುಲ್ಕ
500 ಕೆ.ಜಿ.: ಮತದಾನದ ಹಕ್ಕು ಪಡೆಯಲು 3 ವರ್ಷಗಳಲ್ಲಿ ರೈತರು ಮಾರಾಟ ಮಾಡಬೇಕಾದ ಹಣ್ಣು/ ತರಕಾರಿ
6,780: ರೈತ ಸದಸ್ಯರು

**

ಖರೀದಿ ಕೇಂದ್ರಗಳು
* ಚನ್ನಪಟ್ಟಣ
* ಸರ್ಜಾಪುರ
* ಹೊಸಕೋಟೆ
* ಮಾಲೂರು
* ದೊಡ್ಡಬಳ್ಳಾಪುರ
* ತಿಪ್ಪಸಂದ್ರ
* ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು