ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಡುತೋಪು ಕಟಾವಿಗೆ ವಿರೋಧ

4 ಸಾವಿರ ಹೆಕ್ಟೇರ್‌ನಲ್ಲಿ 11 ಲಕ್ಷ ಮರ: ಈ ಪ್ರದೇಶದಲ್ಲಿ ಗುಡ್ಡ ಕುಸಿಯುವ ಭೀತಿ
Last Updated 19 ಸೆಪ್ಟೆಂಬರ್ 2019, 19:35 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡಿನ ನದಿ ಕಣಿವೆಗಳು, ಇಳಿಜಾರು ಪ್ರದೇಶಗಳಲ್ಲಿ ಬೆಳೆಸಿರುವ ನೆಡುತೋಪುಗಳ ಕಟಾವಿಗೆ ಸರ್ಕಾರ ಸಮ್ಮತಿ ಸೂಚಿಸಿದ್ದು, ಗುಡ್ಡಗಳು ಕುಸಿಯುತ್ತಿರುವ ಈ ಸಮಯದಲ್ಲಿ ಕಟಾವು ಮಾಡದಂತೆ ಪ್ರಬಲ ವಿರೋಧ ವ್ಯಕ್ತವಾಗಿದೆ.

ಈ ಬಾರಿ ಸುರಿದ ಮಳೆಗೆ ಹಲವು ಗುಡ್ಡ-ಬೆಟ್ಟಗಳು ಕಿಲೋಮೀಟರ್‌ಗಟ್ಟಲೆ ಜರುಗಿವೆ. ಕೆಲ ಗುಡ್ಡಗಳು ಬಾಯ್ತೆರೆದು ಬಿರುಕು ಬಿಟ್ಟಿವೆ.

ಪಶ್ಚಿಮಘಟ್ಟದ ವ್ಯಾಪ್ತಿಯ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 4 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಸಲಾದ 11 ಲಕ್ಷ ಮರಗಳಕಟಾವಿಗೆಸಿದ್ಧತೆ ನಡೆದಿದೆ.

ಉರುವಲು ಕಟ್ಟಿಗೆ, ಪ್ಲೈವುಡ್, ಕಾಗದ ಕಾರ್ಖಾನೆ ಮತ್ತಿತರ ವಾಣಿಜ್ಯ ಉದ್ದೇಶಕ್ಕಾಗಿ ಅರಣ್ಯ ಇಲಾಖೆ ನೆಡುತೋಪುಗಳನ್ನು ಬೆಳೆಸುತ್ತದೆ. 10ರಿಂದ 15 ವರ್ಷಗಳ ನಂತರ ಈ ಮರಗಳ ಕಟಾವು ಮಾಡಿ ಹರಾಜು ಹಾಕುತ್ತದೆ.

ಸೂಕ್ಷ್ಮ ಪ್ರದೇಶಗಳು:ಗೇರುಸೊಪ್ಪಾ, ಶಂಕರನಾರಾಯಣ (ವಾರಾಹಿ), ಕತಗಾಲ (ಅಘನಾಶಿನಿ), ಕಾಳಿ, ಬೇಡ್ತಿ, ಶರಾವತಿ ಕಣಿವೆಗಳು, ತುಂಗಾ, ಭದ್ರಾ, ಕಾವೇರಿ ಕಣಿವೆಗಳಲ್ಲಿ ನೆಡುತೋಪು ಬೆಳೆಸಲಾಗಿದೆ. ಕೋಗಾರ, ಅಮ್ಮನಘಟ್ಟ, ನಗರ, ಜೋಯಿಡಾ, ತಿನೇಘಾಟ್, ಬಿಸಗೋಡು, ನಂದೊಳ್ಳಿ, ಕದ್ರಾ, ವಾನಳ್ಳಿ, ಉಂಚಳ್ಳಿ, ಕೊಡಚಾದ್ರಿ, ಬಸರಿಕಟ್ಟೆ, ಕುಮಾರಧಾರಾ, ಕೊಪ್ಪ, ಕಳಸ, ಸಾಲ್ಕೋಡ, ಮಹಿಮೆ ಕ್ಯಾದಗಿ, ಮಸ್ಕಿ, ಹೆಗ್ಗರಣಿ ಮೊದಲಾದ ಇಳಿಜಾರು ಬೆಟ್ಟಗಳಲ್ಲಿ ಇರುವ ನೆಡುತೋಪುಗಳನ್ನು ಸದ್ಯದ ಪರಿಸ್ಥಿತಿಯಲ್ಲಿ ಕಟಾವು ಮಾಡಿದರೆ ಭೂ ಕುಸಿತವಾಗುವ ಸಾಧ್ಯತೆ ಇದೆ. ಮಲೆನಾಡಿನ ಸದ್ಯದ ಪರಿಸ್ಥಿತಿ ಕಟಾವಿಗೆ ಪೂರಕವಾಗಿಲ್ಲ. ಈಚೆಗೆ ಸುರಿದ ಮಳೆಗೆ ಹಲವು ಗುಡ್ಡಗಳು ಕುಸಿದಿವೆ. ಈ ಬೆಳವಣಿಗೆ ಇನ್ನಷ್ಟು ಕುಸಿತಕ್ಕೆ ದಾರಿಯಾಗಬಹುದು ಎಂದು ಕಳವಳ ವ್ಯಕ್ತಪಡಿಸುತ್ತಾರೆ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ.

ಕೊಡಗಿನಲ್ಲಿ ನಡೆದ ಭೂಕುಸಿತಗಳಿಗೆ ಅರಣ್ಯ ನಾಶವೇ ಕಾರಣ. ಕುಸಿತ ತಡೆಯಲು ಅರಣ್ಯ ನಾಶ ತಪ್ಪಿಸಬೇಕು. ಖಾಲಿ ಇದ್ದ ಭೂಮಿಗೆ ಹಸಿರು ಹೊದಿಕೆ ನಿರ್ಮಿಸಬೇಕು ಎಂದು ಭಾರತೀಯ ಭೂ ವಿಜ್ಞಾನ ಸರ್ವೇಕ್ಷಣಾಲಯದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ನದಿ ಕಣಿವೆಗಳು, ಇಳಿಜಾರು ಪ್ರದೇಶಗಳಲ್ಲಿ ನೆಡುತೋಪು ಕಟಾವು ಮಾಡಿದರೆ ಹಸಿರು ರಕ್ಷಾ ಕವಚಕ್ಕೆ ಧಕ್ಕೆಯಾಗಿ ಮಣ್ಣಿನ ಮೇಲ್ಪದರ ಕೊಚ್ಚಿ ಹೋಗುತ್ತದೆ. ಈಗ ಕಟಾವು ಆರಂಭಿಸಿದರೆ ಮುಂದಿನ ಮಳೆಗಾಲದಲ್ಲಿ ಭೂ ಕುಸಿತ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ, ಕಟಾವು ಮಾಡಲು ಅವಕಾಶ ನೀಡಬಾ
ರದು’ ಎಂದು ಆಗ್ರಹಿಸುತ್ತಾರೆ ಪರಿಸರ ವಿಜ್ಞಾನಿಗಳಾದ ಡಾ.ಟಿ.ವಿ. ರಾಮಚಂದ್ರ, ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಡಾ.ವಾಮನ್ ಆಚಾರ್ಯ.

***

ನೆಡುತೋಪು ಕಟಾವಿಗೆ ಆದೇಶ ಇದೆ. ಆದರೆ ನೆಡುತೋಪು ಪ್ರದೇಶವನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಿಲ್ಲ. ಹಾಗಾಗಿ ಕಟಾವು ವಿಳಂಬವಾಗುತ್ತದೆ. ಆಂಥೋನಿ ಮರಿಯಪ್ಪ‌

- ಉಪ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT