ಶನಿವಾರ, ಜನವರಿ 25, 2020
15 °C

ಸಿಎಎ ಪರ ರ್‍ಯಾಲಿಗೆ ವಿದ್ಯಾರ್ಥಿಗಳ ಬಳಕೆ: ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬೀದರ್‌ನಲ್ಲಿ ನಡೆಸಿದ ರ್‍ಯಾಲಿಗೆ ವಿದ್ಯಾರ್ಥಿಗಳನ್ನು ಬಳಸಿಕೊಂಡದ್ದು ಖಂಡನೀಯ ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ಹೇಳಿದ್ದಾರೆ.

ರ್‍ಯಾಲಿಗೆ ಲಿಂಗಾಯತ, ವೀರಶೈವ ಮಠಾಧೀಶರು ಹಾಗೂ ಸಂಘಟನೆಗಳ ನೀರಸ ಬೆಂಬಲ ವ್ಯಕ್ತವಾಗಿದೆ. ಆರ್‌ಎಸ್‍ಎಸ್ ಪ್ರಾಯೋಜಿತ ರ್‍ಯಾಲಿಗೆ ಲಿಂಗಾಯತ ಮುಖಂಡರನ್ನು ಬಳಸಿಕೊಂಡು, ಲಿಂಗಾಯತರು ಆರ್‌ಎಸ್‍ಎಸ್ ಸಮರ್ಥಕರು ಎಂದು ತೋರಿಸಿಕೊಳ್ಳಲು ಹಾಕಿದ ಗಾಳಕ್ಕೆ ಲಿಂಗಾಯತ ಪ್ರಬುದ್ಧರು ಬೀಳಲಿಲ್ಲ ಎಂದು ತಿಳಿಸಿದ್ದಾರೆ.

ಸಂಘಟಕರು ಆಹ್ವಾನ ನೀಡಿದ ವೀರಶೈವ, ಲಿಂಗಾಯತ ಮಠಾಧೀಶರಲ್ಲಿ ಬಹುತೇಕರು ಭಾಗವಹಿಸಲಿಲ್ಲ. ಭಾಲ್ಕಿ ಹಿರೇಮಠದ ಕಿರಿಯ ಸ್ವಾಮೀಜಿ ಒಲ್ಲದ ಮನಸ್ಸಿನಿಂದ ಭಾಗವಹಿಸಿದ್ದು ಎದ್ದು ಕಾಣುತ್ತಿತ್ತು. ಲಿಂಗಾಯತ, ವೀರಶೈವ ಸಂಘಟನೆಗಳೂ ಬೆಂಬಲ ವ್ಯಕ್ತಪಡಿಸಲಿಲ್ಲ. ಇದು ಆರ್‌ಎಸ್‍ಎಸ್, ಬಿಜೆಪಿಗೆ ದೊಡ್ಡ ಹೊಡೆತವಾಗಿದೆ. ಬಿಜೆಪಿ ಮುಖಂಡರು ಎಂಟು ದಿನ ಪ್ರಯತ್ನ ನಡೆಸಿದರೂ ರ್‍ಯಾಲಿಗೆ ಯಶಸ್ವಿಯಾಗಲಿಲ್ಲ ಎಂದು ಟೀಕಿಸಿದ್ದಾರೆ.

ಸಮಾಜದಲ್ಲಿ ಶಾಂತಿಗೆ ಭಂಗ ಉಂಟು ಮಾಡುವ, ಜನರನ್ನು ಮರಳು ಮಾಡುವ ಹಾಗೂ ಜಾತಿ, ಧರ್ಮಗಳಲ್ಲಿ ಭೇದ ಹುಟ್ಟಿಸುವ ಇಂತಹ ಕಾಯ್ದೆಯನ್ನು ಜನ ಒಪ್ಪಿಲ್ಲ ಎನ್ನುವುದನ್ನು ರ್‍ಯಾಲಿಯ ವೈಫಲ್ಯ ಸಾರಿ ಹೇಳಿದೆ ಎಂದು ಆರೋಪಿಸಿದ್ದಾರೆ.

ಲಿಂಗಾಯತರು, ವೀರಶೈವರು, ಮಠಾಧೀಶರು ಆರ್‌ಎಸ್‍ಎಸ್‌ಗೆ ಮರಳು ಆಗುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಈಗಲಾದರೂ ಬಿಜೆಪಿ ನಾಯಕರು ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಹಾಗೂ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು