ಶನಿವಾರ, ಜೂಲೈ 11, 2020
29 °C
*ರೈತರಿಗೆ ಉಪಯೋಗವಾಗದ ಸರ್ಕಾರದ ಷರತ್ತುಗಳು* ಕೈ ಕೊಟ್ಟ ಗಿರಣಿಗಳು, ಮಧ್ಯವರ್ತಿಗಳಿಂದ ಕಡಿಮೆ ಬೆಲೆಗೆ ಖರೀದಿ

ಭತ್ತದ ದರ ಕುಸಿತ: ಕಂಗಾಲಾದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಕ್ಕಿ ಗಿರಣಿಗಳು ರೈತರಿಂದ ನೇರವಾಗಿ ಭತ್ತವನ್ನು ಖರೀದಿಸದ ಕಾರಣ ವಿವಿಧ ಜಿಲ್ಲೆಗಳಲ್ಲಿ ಭತ್ತದ ಬೆಳೆಗಾರರು ಮಧ್ಯವರ್ತಿಗಳಿಗೆ ಅತಿ ಕಡಿಮೆ ಧಾರಣೆಗೆ ಭತ್ತವನ್ನು ಮಾರುವ ಪರಿಸ್ಥಿತಿ ಎದುರಾಗಿದೆ.

ಇದರಿಂದಾಗಿ ರಾಜ್ಯದಲ್ಲಿ ಭತ್ತದ ಧಾರಣೆ ಕುಸಿದು ಹೋಗಿದೆ. ಉತ್ತಮ ಫಸಲು ಬಂದರೂ ನ್ಯಾಯೋಚಿತ ಬೆಲೆ ಸಿಗದೇ ರೈತ ಕಂಗಾಲಾಗಿದ್ದಾನೆ. 

ಅಕ್ಕಿ ಗಿರಣಿಯವರು ಭತ್ತವನ್ನು ರೈತರಿಂದ ಖರೀದಿ ಮಾಡಿ, ಅವರ ಬಳಿಯೇ ದಾಸ್ತಾನು ಇಟ್ಟುಕೊಳ್ಳಬೇಕೆಂದು ಜಿಲ್ಲಾಡಳಿತಗಳು ನಿರ್ದೇಶನ ಕೊಟ್ಟಿದ್ದರೂ ಗಿರಣಿ ಮಾಲೀಕರು ಅದನ್ನು ಪಾಲಿಸುತ್ತಿಲ್ಲ. ಗಿರಣಿ ಮಾಲೀಕರು ಮತ್ತು ಮಧ್ಯವರ್ತಿಗಳ ಒಳ ಒಪ್ಪಂದವೇ ಇದಕ್ಕೆ ಕಾರಣ ಎಂದು ಮೂಲಗಳು ಹೇಳಿವೆ.

ಮತ್ತೊಂದೆಡೆ ಭತ್ತದ ಖರೀದಿಗಾಗಿ ಸರ್ಕಾರ ವಿಧಿಸಿರುವ ಷರತ್ತು ಕೂಡ ರೈತರಿಗೆ ಪ್ರಯೋಜನವಾಗಿಲ್ಲ. ಒಬ್ಬ ರೈತನಿಂದ ಸರ್ಕಾರ 30 ಕ್ವಿಂಟಲ್ ಭತ್ತ ಖರೀದಿ ಮಾಡುವುದಾಗಿ ಸರ್ಕಾರ ಹೇಳಿದೆ. ‘ಫ್ರ್ಯೂಟ್‌ ಆ್ಯಪ್‌’ ಮೂಲಕ ಭತ್ತದ ಖರೀದಿಗೆ ಸರ್ಕಾರ ಮುಂದಾಗಿದೆ.

ಭತ್ತದ ಕೊಯ್ಲು ಮುಗಿದು ಅದನ್ನು ಅಕ್ಕಿ ಗಿರಣಿಗೆ ತರುವ ಹಂತದಲ್ಲೇ ಧಾರಣೆ ಕುಸಿದಿರುವುದು ರೈತರನ್ನು ಆತಂಕಕ್ಕೆ ಗುರಿ ಮಾಡಿದೆ. ಮುಂಗಾರು ಹಂಗಾಮಿಗೆ ಕೇಂದ್ರ ಸರ್ಕಾರ ಘೋಷಿಸಿದ್ದ ಬೆಂಬಲ ಬೆಲೆ ಅವಧಿ ಇದೇ 31 ಕ್ಕೆ ಮುಗಿಯಲಿದೆ. ಸಾಮಾನ್ಯ ಭತ್ತ ಕ್ವಿಂಟಲ್‌ಗೆ ₹1,815 ಮತ್ತು ‘ಎ’ ಗ್ರೇಡ್‌ ಭತ್ತಕ್ಕೆ ₹1,835 ಕೇಂದ್ರ ಸರ್ಕಾರ ನಿಗದಿ ಮಾಡಿದೆ.

ಭತ್ತ ಖರೀದಿಗಾಗಿ ಕೇಂದ್ರ ತೆರೆಯಲು ಮೇ 14 ರಂದು ಆದೇಶ ಹೊರಡಿಸಲಾಗಿದೆ. ಆದರೆ, ಮೇ 31 ರೊಳಗೆ ಖರೀದಿಸಬೇಕಾಗಿದೆ. ಕಡಿಮೆ ಅವಧಿಯಲ್ಲಿ ರೈತರು ಆ್ಯಪ್‌ನಲ್ಲಿ ನೋಂದಣಿ ಮಾಡಿ, ಒಯ್ಯುವುದು ಕಷ್ಟ ಎಂಬ ದೂರು ಇದೆ.

ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ ಕ್ವಿಂಟಾಲ್‌ ಭತ್ತಕ್ಕೆ ಸರ್ಕಾರ ₹1,830 ದರ ನಿಗದಿಪಡಿಸಲಾಗಿದೆ. ಆದರೆ, ಸದ್ಯ ಭತ್ತ ₹1,450ರಿಂದ ₹1,500ಕ್ಕೆ ಖರೀದಿಯಾಗುತ್ತಿದೆ. ಅಕ್ಕಿ ಗಿರಣಿಗಳು ರೈತರಿಂದ ಖರೀದಿ ಮಾಡಿ, ಅವರ ಬಳಿಯೇ ದಾಸ್ತಾನು ಮಾಡಿಕೊಳ್ಳಬೇಕೆಂದು ಜಿಲ್ಲಾಡಳಿತ ನಿರ್ದೇಶನ ಕೊಟ್ಟರೂ ಅದನ್ನು ಪಾಲಿಸುತ್ತಿಲ್ಲ. ಹೀಗಾಗಿ ಭತ್ತ ಬೆಳೆಗಾರರು ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಶೇ 1ರಷ್ಟು ಭತ್ತ ಖರೀದಿ ಆಗಿಲ್ಲ. ಹೆಸರಿಗೆ ಮಾತ್ರ ಭತ್ತ ಖರೀದಿ ಕೇಂದ್ರಗಳು ಎಂಬಂತಾಗಿವೆ.

ದಾವಣಗೆರೆ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಇದೆ. ಇಲ್ಲಿ ಮೇ 22 ರಂದು ಭತ್ತ ಕ್ವಿಂಟಲ್‌ಗೆ ಕನಿಷ್ಠ ₹1,320 ಗರಿಷ್ಠ ₹2,060 ಇತ್ತು. ಮೇ 23 ರಂದು ಕನಿಷ್ಠ ₹1,300 ಮತ್ತು ಗರಿಷ್ಠ ₹2,050 ಕ್ಕೆ ಇಳಿಕೆಯಾಗಿದೆ. 

ರಾಯಚೂರು ಜಿಲ್ಲೆಯಲ್ಲಿ ಕೋವಿಡ್‌ ಲಾಕ್‌ಡೌನ್‌ ಆರಂಭದಲ್ಲಿ ಭತ್ತದ ದರ ಕ್ವಿಂಟಲ್‌ಗೆ ಗರಿಷ್ಠ ₹1,950 ರವರೆಗೂ ಇತ್ತು. ಈಗ ಮಾರುಕಟ್ಟೆ ದರ ಗರಿಷ್ಠ ₹1,600 ಕುಸಿದಿದೆ. ಬೆಂಬಲ ಬೆಲೆ ₹1,815 ದರದಲ್ಲಿ ಪ್ರತಿ ರೈತನಿಂದ ಗರಿಷ್ಠ 30 ಕ್ವಿಂಟಲ್‌ ಭತ್ತವನ್ನು ಸರ್ಕಾರ ಖರೀದಿಸುತ್ತಿದೆ. ಜಿಲ್ಲೆಯಲ್ಲಿ ಒಟ್ಟು 1,13,858 ಹೆಕ್ಟೇರ್‌ಗಳಲ್ಲಿ ಭತ್ತ ಬೆಳೆಯಲಾಗಿತ್ತು.

ಇದೀಗ ಭತ್ತದ ಎರಡನೇ ಕಟಾವು ಕೂಡಾ ಬಹುತೇಕ ಮುಕ್ತಾಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು