ಭಾನುವಾರ, ಮೇ 31, 2020
27 °C
ಮುಖ್ಯಮಂತ್ರಿ ಎಚ್ಚರಿಕೆ: ಕ್ಷಮೆಯಾಚಿಸಿದ ಸಚಿವ

ರೈತ ಮಹಿಳೆಯರನ್ನು ನಿಂದಿಸಿದ ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

protest

ಬೆಂಗಳೂರು/ ತುಮಕೂರು: ರೈತ ಮಹಿಳೆಯರನ್ನು ಕಟು ಮಾತುಗಳಲ್ಲಿ ನಿಂದಿಸಿದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಬೇಡಿಕೆ ತೀವ್ರಗೊಂಡಿದೆ.

ಕೋಲಾರಕ್ಕೆ ಬುಧವಾರ ಭೇಟಿ ನೀಡಿದ್ದ ಮಾಧುಸ್ವಾಮಿ ಅವರು, ಕೆರೆ ಒತ್ತುವರಿ ತೆರವಿಗೆ ಒತ್ತಡ ಹಾಕಲು ಮುಂದಾದ ರೈತ ಸಂಘ ಹಾಗೂ ಹಸಿರುಸೇನೆಯ ಮಹಿಳಾ ಸದಸ್ಯರನ್ನು ಉದ್ದೇಶಿಸಿ ರ‍್ಯಾಸ್ಕಲ್‌, ಮುಚ್ಚುಬಾಯಿ ಎಂದು ಬೈಯ್ದಿದ್ದರು. ಈ ಪ್ರಕರಣ ಸರ್ಕಾರಕ್ಕೆ ಮುಜುಗರವನ್ನೂ ಉಂಟು ಮಾಡಿದೆ.

ಏತನ್ಮಧ್ಯೆ, ಮಾಧುಸ್ವಾಮಿ ಅವರು ಮಾಧ್ಯಮದ ಮೂಲಕ ಮಹಿಳೆಯರ ಕ್ಷಮೆ ಯಾಚಿಸಿದ್ದಾರೆ. ‘ರ‍್ಯಾಸ್ಕಲ್ ಎನ್ನುವ ಪದ ಬಳಸಬಾರದಿತ್ತು. ಈ ಪದ ಬಳಕೆಯಿಂದ ಆ ಹೆಣ್ಣು ಮಗಳು ಸೇರಿದಂತೆ ಯಾರಿಗೇ ನೋವಾಗಿದ್ದರೂ ಕ್ಷಮೆ ಕೋರುತ್ತೇನೆ’ ಎಂದು ಹೇಳಿದರು.

‘ನಾನು ಯಾರಿಂದಲೂ ಮುತ್ತು ಕೊಡಿಸಿಕೊಂಡಿಲ್ಲ. ಸಿದ್ದರಾಮಯ್ಯ ನನ್ನನ್ನೇನೂ ಮಂತ್ರಿ ಮಾಡಿಲ್ಲ. ನನಗೂ ಸ್ವಾಭಿಮಾನ ಇದೆ. ನಮ್ಮ ಪಕ್ಷದ ನಾಯಕರು ಸಚಿವ ಸ್ಥಾನ ಬಿಡಿ ಎಂದರೆ ಒಂದು ಕ್ಷಣವೂ ಇರುವುದಿಲ್ಲ’ ಎಂದು ಅವರು ಹೇಳಿದರು.

‘ಮಂತ್ರಿಯಾದವರು ಅವರಿವರ ಬಳಿ ಹೋಗಿ ಬೈಯಿಸಿಕೊಳ್ಳಲು ಸಾಧ್ಯವಿಲ್ಲ. ಆಕೆ ನನ್ನನ್ನು ಕೆರಳಿಸುವಂತೆ ಮಾತ
ನಾಡಿದರು. ಆದೇಶ ಕೊಡಬೇಡ, ರಿಕ್ವೆಸ್ಟ್ ಮಾಡಿಕೊ ಎಂದರೂ ಕೇಳಲಿಲ್ಲ. ಇದರಿಂದ ನನಗೂ ಸಿಟ್ಟು ಬಂತು. ನನಗೂ ಸ್ವಾಭಿಮಾನ ಇದೆ’ ಎಂದು ಹೇಳಿದರು.

ಎರಡನೇ ಬಾರಿ ಮುಜುಗರ: ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಪಟ್ಟಣದಲ್ಲಿ ವೃತ್ತವೊಂದಕ್ಕೆ ಕನಕದಾಸರ ಹೆಸರಿಡುವ ವಿಚಾರವಾಗಿ 2019ರ ನವೆಂಬರ್‌ನಲ್ಲಿ ಕುರುಬ ಸಮುದಾಯದ ‍ಪ್ರತಿನಿಧಿಗಳು ಮತ್ತು ಮಾಧುಸ್ವಾಮಿ ನಡುವೆ ಜಟಾಪಟಿ ನಡೆದಿತ್ತು. ಶಾಂತಿ ಸಭೆಯಲ್ಲಿ ಕಾಗಿನೆಲೆ ಕನಕಗುರು ಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಜತೆ ಮಾಧುಸ್ವಾಮಿ ಹಗುರವಾಗಿ ನಡೆದುಕೊಂಡಿದ್ದಾರೆ ಎಂದು ರಾಜ್ಯದ ವಿವಿಧ ಕಡೆ ಕುರುಬ ಸಮುದಾಯದವರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಯಡಿಯೂರಪ್ಪ ಅವರೇ ಕ್ಷಮೆಯಾಚಿಸಿ ವಿವಾದಕ್ಕೆ ತೆರೆ ಎಳೆದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು