ಗುರುವಾರ , ಜನವರಿ 23, 2020
19 °C
ತುಮಕೂರಿನಲ್ಲಿ ರೈತ ಸಮಾವೇಶ * ಭವಿಷ್ಯದ ಸಮಸ್ಯೆಗಳಿಗೂ ಪರಿಹಾರದ ಚಿಂತನೆ

ಕೃಷಿ ಸಮಸ್ಯೆಗಳಿಗೆ ಸಮಗ್ರ ಪರಿಹಾರ: ಪ್ರಧಾನಿ ಮೋದಿ ಅಭಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ನಾಲ್ಕನೇ ಕಂತಿನ ಹಣ 12 ಸಾವಿರ ಕೋಟಿಯನ್ನು ದೇಶದ 6 ಕೋಟಿ ರೈತರ ಬ್ಯಾಂಕ್‌ ಖಾತೆಗಳಿಗೆ ಏಕಕಾಲದಲ್ಲಿ ಜಮಾ ಮಾಡುವ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಲ್ಲಿ ನಡೆದ ರೈತ ಸಮಾವೇಶದಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿದ ಮೋದಿ ಅವರು, 'ಕೃಷಿ ಕ್ಷೇತ್ರದ ಬಿಕ್ಕಟ್ಟುಗಳಿಗೆ ಬಿಡಿ ಬಿಡಿಯಾದ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಬದಲು ಸಮಗ್ರ ದೃಷ್ಟಿಕೋನದಿಂದ ಸಮಸ್ಯೆ ಪರಿಹರಿಸುವ ಚಿಂತನೆ ನಮ್ಮದು. ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಸಮರ್ಪಕವಾದ ಗೋದಾಮುಗಳು, ಶೈತ್ಯಾಗಾರಗಳನ್ನು ನಿರ್ಮಿಸುತ್ತಿದ್ದೇವೆ. ದೇಶದ ಯಾವುದೇ ಮಂಡಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಇ–ಮಂಡಿ (ಎಲೆಕ್ಟ್ರಾನಿಕ್‌ ಮಂಡಿ) ರೂಪಿಸಿದ್ದೇವೆ' ಎಂದರು.

‘ಈ ಹಿಂದೆ ಸರ್ಕಾರದಿಂದ ₹ 1 ಅನುದಾನ ಬಿಡುಗಡೆಯಾದರೆ, ಅದರಲ್ಲಿ 15 ಪೈಸೆ ಮಾತ್ರ ಫಲಾನುಭವಿಗೆ ತಲುಪುತ್ತಿತ್ತಂತೆ. ಬಾಕಿ ಮೊತ್ತ ಮಧ್ಯವರ್ತಿಗಳ ಪಾಲು ಆಗುತ್ತಿತ್ತು ಎಂದರ್ಥವಲ್ಲವೇ? ಆದರೆ, ನಮ್ಮ ಸರ್ಕಾರ ಪ್ರತಿ ಫಲಾನುಭವಿ ರೈತನ ಖಾತೆಗೆ ನೇರವಾಗಿ ಮೊತ್ತ ಜಮೆ ಮಾಡುತ್ತಿದೆ. ಕಿಸಾನ್‌ ಸಮ್ಮಾನ್‌ ಯೋಜನೆ ಅನುಷ್ಠಾನಗೊಂಡ ರಾಜ್ಯಗಳಲ್ಲಿ ಕೋಟ್ಯಂತರ ರೈತರಿಗೆ ಅನುಕೂಲ ಆಗುತ್ತಿದೆ. ಇದರಿಂದ ಹೊರಗುಳಿದ ರಾಜ್ಯಗಳು ಸಹ ಈ ಯೋಜನೆ ಜಾರಿಗೆ ಸ್ವಯಂ ಪ್ರೇರಿತರಾಗಿ ಈ ವರ್ಷವಾದರೂ ಮುಂದೆ ಬರಲಿ' ಎಂದು ಅವರು ಆಶಿಸಿದರು.

'ದೇಶದ ಆರ್ಥಿಕತೆಯನ್ನು 2025ರ ವೇಳೆಗೆ ₹ 350 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ನಮ್ಮದು. ಇದರ ಸಾಧನೆಗೆ ಕೃಷಿ ಕ್ಷೇತ್ರದ ಕೊಡುಗೆಯೂ ಬಹಳ ಮುಖ್ಯ. ಅದಕ್ಕಾಗಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಕೇಂದ್ರಿತ ಕೃಷಿಗೆ ಒತ್ತು ಕೊಡುತ್ತಿದ್ದೇವೆ. ರಫ್ತು ಮಾಡಬಹುದಾದ ಕೃಷಿ ಉತ್ಪನ್ನದ ಬೆಳೆಗಳಿಗೆ ದಕ್ಷಿಣ ಭಾರತದ ಹವಾಮಾನ ಮತ್ತು ಮಣ್ಣು ಸೂಕ್ತವಾಗಿದೆ' ಎಂದು ಅವರು ಹೇಳಿದರು.

ಬೆಳಗಾವಿ, ಮೈಸೂರಿನ ದಾಳಿಂಬೆ, ಚಿಕ್ಕಬಳ್ಳಾಪುರ, ಬೆಂಗಳೂರಿನ ಗುಲಾಬಿ ಈರುಳ್ಳಿ, ಚಿಕ್ಕಮಗಳೂರು, ಕೊಡಗು, ಹಾಸನದ ಕಾಫಿ ಬೆಳೆಗಳ ಪ್ರಸಿದ್ಧಿಯನ್ನು ಉಲ್ಲೇಖಿಸಿದ ಅವರು, ದಕ್ಷಿಣ ಭಾರತದಲ್ಲಿ ಸಂಬಾರ ಪದಾರ್ಥಗಳು, ಮೀನುಗಾರಿಕೆ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ ಎಂದರು.

2016- 17ರಿಂದ 2018- 19ರವರೆಗಿನ ಮೂರು ವರ್ಷದ ಅವಧಿಯ ಕೃಷಿ ಕರ್ಮಣ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಪೈಕಿ 2018- 19ರ ಸಾಲಿನಲ್ಲಿ ದ್ವಿದಳ ಧಾನ್ಯ ಇಳುವರಿಗಾಗಿ ಕರ್ನಾಟಕಕ್ಕೆ ಬಂದ ಪ್ರಶಸ್ತಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತು ಕೃಷಿ ಇಲಾಖೆ ನಿರ್ದೇಶಕ ರಾಜೇಂದ್ರ ಕಟಾರಿಯಾ ಅವರು ಸ್ವೀಕರಿಸಿದರು. ಕಿಸಾನ್‌ ಸಮ್ಮಾನ್‌ ಫಲಾನುಭವಿಗಳ ಪೈಕಿ 1ನೇ ಕೋಟಿ, 2ನೇ ಕೋಟಿ... ಹೀಗೆ 8ನೇ ಕೋಟಿಯ ಕ್ರಮ ಸಂಖ್ಯೆ ಪಡೆದ 8 ಮಂದಿ ರೈತರಿಗೆ ಪ್ರಮಾಣ ಪತ್ರ ವಿತರಿಸಿದರು.

ಕನ್ನಡದಲ್ಲಿ ಶುಭಾಶಯ
‘ಎಲ್ಲರಿಗೂ ನಮಸ್ಕಾರ. ಮೊದಲಿಗೆ ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಲು(ಳು). ಹಾಗೂ ಸುಗ್ಗಿಯ ಹಬ್ಬ ಸಂಕ್ರಾಂತಿಯ ಶುಭಾಶಯಗಲು’ ಎಂದು ಮೋದಿ ಮಾತು ಆರಂಭಿಸಿದರು. ಪ್ರಧಾನಿಯ ಕನ್ನಡ ನುಡಿಗೆ ಕರತಾಡನ ಜೋರಾಗಿಯೇ ಕೇಳಿಬಂತು.

ಪ್ರತಿಭಟನೆಗೆ ಮುಂದಾದ ರೈತರು ಪೊಲೀಸ್ ವಶಕ್ಕೆ
ಪ್ರಧಾನಿ ನರೇಂದ್ರ ಮೋದಿ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ವಿವಿಧೆಡೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ತುಮಕೂರು ನಗರದಲ್ಲಿ ನಡೆಯುವ ರೈತ ಸಮಾವೇಶಕ್ಕೆ ಆಗಮಿಸಿ ಕಪ್ಪುಪಟ್ಟಿ ಪ್ರದರ್ಶಿಸಲು ಮುಂದಾಗಿದ್ದ ರೈತ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ನಂತರ ಬಿಡುಗಡೆ ಮಾಡಿದರು.

 ಪ್ರಧಾನಿ ನರೇಂದ್ರ ಮೋದಿ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ವಿವಿಧೆಡೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ತುಮಕೂರು ನಗರದಲ್ಲಿ ನಡೆಯುವ ರೈತ ಸಮಾವೇಶಕ್ಕೆ ಆಗಮಿಸಿ ಕಪ್ಪುಪಟ್ಟಿ ಪ್ರದರ್ಶಿಸಲು ಮುಂದಾಗಿದ್ದ ರೈತ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ನಂತರ ಬಿಡುಗಡೆ ಮಾಡಿದರು.

 ಮೀನುಗಾರಿಕೆ: ಪ್ರತ್ಯೇಕ ಬಂದರು ನಿರ್ಮಾಣಕ್ಕೆ ₹ 7,500 ಕೋಟಿ
ದಕ್ಷಿಣ ಭಾರತದಲ್ಲಿ ಮೀನುಗಾರಿಕೆಗೆ ಒತ್ತು ನೀಡಿ, ರಫ್ತಿಗೂ ಉತ್ತೇಜಿಸುತ್ತಿದ್ದೇವೆ. 'ನೀಲಿ ಕ್ರಾಂತಿ' ಅಡಿ ಮೀನುಗಾರಿಕೆ ಅಭಿವೃದ್ಧಿಗಾಗಿ ಪ್ರತಿ ರಾಜ್ಯಕ್ಕೆ ₹ 2,500 ಕೋಟಿ ನೀಡಿದ್ದೇವೆ. ಮೀನಿನ ವ್ಯಾಪಾರಕ್ಕೆ ಮಾರುಕಟ್ಟೆ ವ್ಯವಸ್ಥೆ ಮಾಡುತ್ತಿದ್ದೇವೆ. ದಕ್ಷಿಣ ಭಾರತದಲ್ಲಿ ಮೀನುಗಾರಿಕೆಗಾಗಿಯೇ ಪ್ರತ್ಯೇಕ ಬಂದರು ನಿರ್ಮಿಸಲು ₹ 7,500 ಕೋಟಿ ವಿಶೇಷ ಅನುದಾನ ಮೀಸಲಿಟ್ಟಿದ್ದೇವೆ. ಆಳ ಸಮುದ್ರದ ಮೀನುಗಾರಕೆಗಾಗಿ ಹೋಗುವ ಮೀನುಗಾರರಿಗೆ ಸುಧಾರಿತ ಸಂಪರ್ಕ ಸಾಧನಗಳನ್ನು ವಿತರಿಸುತ್ತಿದ್ದೇವೆ. ದಿಕ್ಕು ದೆಸೆ ತಿಳಿದುಕೊಳ್ಳಲು ಇಸ್ರೊ ರೂಪಿಸಿದ ವಿಶೇಷ ಉಪಕರಣವನ್ನೂ ನೀಡಿದ್ದೇವೆ ಎಂದು ಮೋದಿ ತಿಳಿಸಿದರು.

ತಮಿಳುನಾಡು ಮೀನುಗಾರರಿಗೆ ₹ 80 ಲಕ್ಷದ ದೋಣಿ
ತಮಿಳುನಾಡಿನ ಮೂವರು ಸಾಂಪ್ರದಾಯಿಕ ಮೀನುಗಾರರಿಗೆ ಆಳ ಸಮುದ್ರದಲ್ಲಿನ ಮೀನುಗಾರಿಕೆಗಾಗಿ ₹ 80 ಲಕ್ಷ ಮೌಲ್ಯದ ಸುಧಾರಿತ ತಾಂತ್ರಿಕತೆ ಒಳಗೊಂಡ ದೋಣಿಯನ್ನು ನೀಡಲಾಯಿತು. ಪ್ರಧಾನಿಯವರು ದೋಣಿಯ ಸಣ್ಣ ಪ್ರತಿಕೃತಿಯನ್ನು ಮೀನುಗಾರರಿಗೆ ನೀಡುವ ಮೂಲಕ ಸೌಲಭ್ಯವನ್ನು ಹಸ್ತಾಂತರಿಸಿದರು. ಈ ಮೊತ್ತದಲ್ಲಿ ₹ 16 ಲಕ್ಷವನ್ನು ತಮಿಳುನಾಡು ಸರ್ಕಾರ ನೀಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು