ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸಾಧನೆ ಮನೆ-ಮನೆಗೆ ತಲುಪಿಸಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ದಾವಣಗೆರೆ ವಿಭಾಗ ಮಟ್ಟದ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಸಭೆಯಲ್ಲಿ ಹೇಳಿಕೆ
Last Updated 7 ಜೂನ್ 2020, 14:38 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಬಿಜೆಪಿ ಕೈಗೊಂಡ ನೆರವಿನ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಮನೆ-ಮನೆಗೂ ಕರಪತ್ರ ವಿತರಿಸಿ‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೂಚನೆ ನೀಡಿದರು.

ಹಿರಿಯೂರಿನ ಹುಳಿಯಾರು ರಸ್ತೆಯ ಸುಗ್ಗಿ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ದಾವಣಗೆರೆ ವಿಭಾಗ ವ್ಯಾಪ್ತಿಯ ಜಿಲ್ಲೆಗಳ ಸಭೆಯ ನೇತೃತ್ವವಹಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ದೇಶದ ಜನತೆಗಾಗಿ ಈವರೆಗೂ ಯಾವ್ಯಾವ ಯೋಜನೆ ಜಾರಿಗೊಳಿಸಿದೆ ಎಂಬುದನ್ನು ಜನತೆಗೆ ತಿಳಿಸಬೇಕು. ಆಹಾರದ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ಮೋದಿ ಅವರು, ಪಡಿತರ ಚೀಟಿ ಇಲ್ಲದವರಿಗೂ ಆಧಾರ್ ಕಾರ್ಡ್‌ ತೋರಿಸಿದರೆ ಸಾಕು ಆಹಾರ ಧಾನ್ಯ ವಿತರಿಸಲು ಕ್ರಮ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೊರೊನಾ ಲಾಕ್‌ಡೌನ್‌ ನಂತರ ಈವರೆಗೂ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿ’ ಎಂದು ತಿಳಿಸಿದರು.

‘ಕೊರೊನಾದಿಂದ ಸಂಕಷ್ಟಕ್ಕೆ ತುತ್ತಾದವರಿಗೆ ಪಕ್ಷ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ನೆರವು ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಈವರೆಗೂ 3 ಕೋಟಿ ಆಹಾರ ಕಿಟ್ ವಿತರಣೆ, 2 ಕೋಟಿ ತಯಾರಿಸಿದ ಆಹಾರ ಪೊಟ್ಟಣ ವಿತರಿಸಲಾಗಿದೆ’ ಎಂದು ಹೇಳಿದರು.

ಸಂಘಟನೆಗೆ ಡಿಜಿಟಲ್ ಸ್ಪರ್ಶ: ‘ಕೊರೊನಾ ನಂತರ ಸಾಮಾಜಿಕ ಜಾಲತಾಣ ಬಳಸಿಕೊಂಡು ಆನ್‌ಲೈನ್‌ ಮೂಲಕ ವಿಡಿಯೊ ಕಾನ್ಫರೆನ್ಸ್ ಹಾಗೂ ದೂರವಾಣಿ ಕರೆ ಮಾಡಿ ಪಕ್ಷ ಸಂಘಟಿಸಲು ಮುಂದಾಗಿದ್ದೇನೆ. ಇದಕ್ಕೆ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಸ್ಪಂದಿಸಿದ್ದಾರೆ. ಕೊರೊನಾ ಇರುವವರೆಗೂ ಇದು ಹೀಗೆ ಮುಂದುವರೆಯಬೇಕು. ಪಕ್ಷ ಬಲವರ್ಧನೆಗೆ ನೀವುಗಳು ಶ್ರಮಿಸಬೇಕು’ ಎಂದು ಸೂಚಿಸಿದರು.

ದಾವಣಗೆರೆ ವಿಭಾಗದ ಮೂರು ಸಂಘಟನಾತ್ಮಕ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು ನಂತರ ದಾವಣಗೆರೆ ಜಿಲ್ಲೆಯ ಮುಖಂಡರೊಂದಿಗೆ ಸಭೆ ನಡೆಸಲಾಯಿತು. ಪ್ರತಿ ಜಿಲ್ಲೆಯ ಸಭೆ ನಡೆಯುವಾಗ 20 ಜನ ಮಾತ್ರ ಪಾಲ್ಗೊಂಡಿದ್ದರು.

ಪಕ್ಷದ ರಾಜ್ಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ಸಂಸದರಾದ ಜಿ.ಎಸ್. ಬಸವರಾಜು, ಎ. ನಾರಾಯಣಸ್ವಾಮಿ, ಮೂರು ಜಿಲ್ಲೆಗಳ ಶಾಸಕರು, ವಿಭಾಗದ ಪ್ರಮುಖರು, ಜಿಲ್ಲಾ ಘಟಕದ ಅಧ್ಯಕ್ಷರು, ಮಂಡಲ ಅಧ್ಯಕ್ಷರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT