ಮಂಗಳವಾರ, ಜನವರಿ 21, 2020
27 °C

ರಾಜಕಾರಣಿಗಳಲ್ಲಿ ಸಭ್ಯತೆಯ ಎಲ್ಲೆ ಮೀರದಿರಲಿ: ಪ್ರೊ.ಬಿ.ಕೆ.ಚಂದ್ರಶೇಖರ್‌ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಈಚಿನ ದಿನಗಳಲ್ಲಿ ರಾಜಕಾರಣಿಗಳು ಸಭ್ಯತೆಯ ಎಲ್ಲೆಯನ್ನು ಮೀರಿ ನಡೆದುಕೊಳ್ಳುತ್ತಿರುವುದು ಅಸ‌ಹ್ಯ ಹುಟ್ಟಿಸುತ್ತಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಚಂದ್ರಶೇಖರ್‌ ಬೇಸರ ವ್ಯಕ್ತಪಡಿಸಿದರು.

‘ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರು ಇಷ್ಟಬಂದ ಹಾಗೆ ಮಾತನ್ನು ಹರಿಬಿಡುತ್ತಿದ್ದಾರೆ. ಇದು ಯಾರಿಗೆ ಮಾದರಿ? ಕಾಂಗ್ರೆಸ್ ನಾಯಕರಲ್ಲೂ ಇಂಥವರು ಕೆಲವರಿದ್ದಾರೆ. ಪಕ್ಷ ಯಾವುದೇ ಆಗಲಿ, ರಾಜಕಾರಣಿಗಳು ಸಭ್ಯತೆಯ ಎಲ್ಲೆ ಮೀರಬಾರದು. ಸಮಾಜಕ್ಕೆ ಒಳ್ಳೆಯ ಮಾದರಿಯನ್ನು ಸೃಷ್ಟಿಸಬೇಕೇ ಹೊರತು ಕೆಟ್ಟದ್ದನ್ನಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರಿ ಸಂಸ್ಥೆಗಳ ದುರುಪಯೋಗ: ‘ಸಿಬಿಐ, ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳನ್ನು ಈಗಿನ ಸರ್ಕಾರ ಗರಿಷ್ಠಮಟ್ಟದಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಇವುಗಳನ್ನು ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿರುವ ಸರ್ಕಾರ, ಹಲವು ನಾಯಕರ ಮೇಲೆ ಜಿದ್ದು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಅಸಹ್ಯ ಮೂಡಿಸುತ್ತಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ನಾಯಕರಾದ ಪಿ.ಚಿದಂಬರಂ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ನಡೆಸಿಕೊಂಡಿದ್ದು ಅಮಾನವೀಯತೆಯ ಪರಾಕಾಷ್ಠೆ ಮಾತ್ರವೇ ಅಲ್ಲದೇ, ಅದು ಪ್ರಜಾಪ್ರಭುತ್ವ ವಿರೋಧಿ ನಡೆಯೂ ಆಗಿದೆ. ಆರೋಪಿಯನ್ನು ಸೆರೆಯಲ್ಲಿಟ್ಟು ತನಿಖೆ ಮಾಡುವುದನ್ನು ಯಾವುದೇ ಕಾರಣಕ್ಕೂ ಬೆಂಬಲಿಸಬಾರದು. ಅದು ವೈಯಕ್ತಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದಕ್ಕೆ ಸಮ’ ಎಂದು ಅವರು ವಿಶ್ಲೇಷಿಸಿದರು.

‘ಚಿದಂಬರಂ, ಶಿವಕುಮಾರ್ ಅವರನ್ನು ಸುದೀರ್ಘ ಕಾಲ ಬಂಧನದಲ್ಲಿಟ್ಟು ತನಿಖೆ ನಡೆಸಿದ ಮೇಲೆ, ಬಲವಾದ ವರದಿಯೊಂದು ಸಿದ್ಧವಾಗಬೇಕಿತ್ತು. ಅಂತಹ ವರದಿ ಕಾಣಲೇ ಇಲ್ಲವಲ್ಲ!’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು