ಬುಧವಾರ, ಆಗಸ್ಟ್ 4, 2021
21 °C
ಕೊರೊನಾ ಸಂಕಷ್ಟದ ಸಮಯ–ಸೇವೆಯೇ ಸಂಘಟನೆ ಎಂಬ ಚಿಂತನೆ

ರಾಜ್ಯ ಬಿಜೆಪಿಯ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ಮಹಾನ್‌ ಸೇವಾ ಕಾರ್ಯಗಳ ಬಗ್ಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಪಕ್ಷದ ಕಾರ್ಯವನ್ನು ಪ್ರಧಾನಿ ಕೊಂಡಾಡಿದರು.

ಪ‍ಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ಅವರು ಪಕ್ಷದ ಕಚೇರಿಯಿಂದ ವಿಡಿಯೊ ಸಂವಾದ ಮೂಲಕ ರಾಜ್ಯದಲ್ಲಿ ಕೈಗೊಂಡ ಸೇವಾ ಕಾರ್ಯಗಳ ಮಾಹಿತಿ ನೀಡಿದರು.

1.50 ಕೋಟಿ ಆಹಾರ ಕಿಟ್ ವಿತರಿಸಲಾಗಿದೆ. ವಲಸೆ ಕಾರ್ಮಿಕರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸಲಾಗಿದೆ. ಲಕ್ಷಾಂತರ ಮುಖಗವಸು, ಸ್ಯಾನಿಟೈಸರ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಜನರ ಸಂಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸುವ ಕೆಲಸ ಆಗಿದೆ ಎಂದು ವಿವರಿಸಿದ ಅವರು, ಪಿಪಿಟಿ ಪ್ರದರ್ಶನದ ಮೂಲಕ ಸುಮಾರು 15 ನಿಮಿಷಗಳ ಅವಧಿಯಲ್ಲಿ ಪಕ್ಷದ ವತಿಯಿಂದ ಮಾಡಿದ ಕೆಲಸಗಳನ್ನು ವಿವರಿಸಿದರು. ಹಿಂದಿ ಭಾಷೆಯಲ್ಲೇ ಅವರು ವಿವರಣೆ ನೀಡಿದರು.

ಪ್ರಧಾನಿ ಮೆಚ್ಚುಗೆ: ಪ್ರಧಾನಿ ಅವರು ಈ ವಿವರಣೆ ಕೇಳಿ ತೃಪ್ತಿ ವ್ಯಕ್ತಪಡಿಸಿ, ರಾಜ್ಯದ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದರು. ಪ್ರತಿ ರಾಜ್ಯದ ವಿವರಣೆ ಕೊನೆಗೊಂಡಾಗಲೂ ಪ್ರಧಾನಿ ಅವರು ಸಂಕ್ಷಿಪ್ತವಾಗಿ ಮಾತನಾಡಿ ಮೆಚ್ಚುಗೆ ಸೂಚಿಸಿದರು.

ಇದಕ್ಕೆ ಮೊದಲು ರಾಜಸ್ಥಾನ, ಮಹಾರಾಷ್ಟ್ರ, ಬಿಹಾರ, ದೆಹಲಿ ರಾಜ್ಯಗಳಲ್ಲಿ ನಡೆದಿರುವ ಸೇವಾ ಕಾರ್ಯಗಳ ಮಾಹಿತಿಯನ್ನು ಪ್ರಧಾನಿ ಅವರಿಗೆ ನೀಡಲಾಯಿತು. ಬಳಿಕ ಅಸ್ಸಾಂ ಮತ್ತು ಉತ್ತರ ಪ್ರದೇಶಗಳ ವಿವರಣೆ ನೀಡಲಾಯಿತು.

ನವದೆಹಲಿಯಿಂದ ವಿಡಿಯೊ ಸಂವಾದ ಮೂಲಕ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದ್ದರು. ಪ್ರಧಾನಿ ಮೋದಿ ಅವರು ತಮ್ಮ ಕಚೇರಿಯಿಂದ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು