ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರ ಸೋಲು: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಪ್ರಜ್ವಲ್ ನಿರ್ಧಾರ

‘ಕ್ಷೇತ್ರ ತ್ಯಾಗ ಮಾಡುತ್ತಿಲ್ಲ, ಇದು ನನ್ನ ಕರ್ತವ್ಯ’
Last Updated 24 ಮೇ 2019, 11:20 IST
ಅಕ್ಷರ ಗಾತ್ರ

ಹಾಸನ:ತುಮಕೂರಿನಲ್ಲಿ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರ ಸೋಲಿನ ಹಿನ್ನಲೆಯಲ್ಲಿ ತನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಪ್ರಜ್ವಲ್‌ ರೇವಣ್ಣ ನಿರ್ಧರಿಸಿದ್ದಾರೆ.

‘ಕೇಂದ್ರದಲ್ಲಿ ರೈತರ ಪರ ದನಿ ಎತ್ತುವವರು ಗೌಡರು. ಅವರ ಮನವೊಲಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆದಿಯಾಗಿ ಎಲ್ಲಾ ಹಿರಿಯ ನಾಯಕರಲ್ಲೂ ಮನವಿ ಮಾಡುತ್ತೇನೆ. ಜಿಲ್ಲೆಯಲ್ಲಿ ದೇವೇಗೌಡರದ್ದೇ ಒಂದು ಅಗಾಧ ಶಕ್ತಿ ಇದೆ. ಅವರ ಸೋಲು ದುಃಖ ತಂದಿದೆ. ಹೀಗಾಗಿ ಹೋರಾಟವೇ ಜೀವನ ಎಂದುಕೊಂಡು ಬಂದಿರುವ ಅವರಿಗೆ ಮತ್ತೆ ಶಕ್ತಿ ತುಂಬುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ಗೌಡರ ಸೋಲಿನಿಂದ ಇಡೀ ರಾತ್ರಿ ಯೋಚನೆ ಮಾಡಿ ರಾಜೀನಾಮೆ ನೀಡಲು ಮನಸ್ಸು ಮಾಡಿದ್ದೇನೆ. ಜಿಲ್ಲೆಯ ಜನರಿಗೆ ಅಗೌರವ ತರುವ ಭಾವನೆಯಿಂದ ಹೀಗೆ ಮಾಡುತ್ತಿಲ್ಲ. ನಮ್ಮ ಪಕ್ಷದ ಬೇರು-ಬುನಾದಿ ದೇವೇಗೌಡರು. ಹೀಗಾಗಿ ಅವರಿಗೆ ಶಕ್ತಿ ತುಂಬಲು ಈ ಚಿಂತನೆ ಮಾಡಿದ್ದೇನೆ’ ಎಂದ ಪ್ರಜ್ವಲ್‌, ‘ಅವರನ್ನು ಮತ್ತೆ ಗೆಲ್ಲಿಸಿ ವಿಜಯೋತ್ಸವ ಆಚರಿಸಬೇಕು ಎಂಬುದು ನನ್ನ ಹೆಬ್ಬಯಕೆಯಾಗಿದೆ. ಇದರಲ್ಲಿ ಯಾವುದೇ ಒತ್ತಡ ಅಥವಾ ಸ್ವಾರ್ಥ ಇಲ್ಲ’ ಎಂದು ಹೇಳಿದರು.

ಬೆಂಗಳೂರಿನಲ್ಲಿ ದೇವೇಗೌಡರನ್ನು ಸ್ವತಃ ಭೇಟಿ ಮಾಡಿ ಮನ ವೊಲಿಸುವೆ. ಇದಕ್ಕೆ ಮನ್ನಣೆ ಸಿಗುವ ವಿಶ್ವಾಸ ಇದೆ ಎಂದರು.

‘ಗೆದ್ದ ಮರು ದಿನವೇ ರಾಜೀನಾಮೆ ಕೊಡುತ್ತಿದ್ದಾನೆ ಎಂದು ತಪ್ಪು ತಿಳಿಯಬೇಡಿ ಎಂದು ತವರು ಜಿಲ್ಲೆಯ ಜನರಲ್ಲಿ ಮನವಿ ಮಾಡಿದ ಯುವ ನಾಯಕ, ನಿಮ್ಮ ಪ್ರೀತಿ ವಿಶ್ವಾಸವನ್ನು ಕೊನೆವರೆಗೂ ಉಳಿಸಿಕೊಳ್ಳುವೆ. ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷಕ್ಕೆ ಶಕ್ತಿ ತುಂಬುವುದರ ಜೊತೆಗೆ ಜನಪರ ಹೋರಾಟ ಮಾಡುವೆ’ ಎಂದರು.

‘ಲೋಕಸಭೆ ಚುನಾವಣೆಯಲ್ಲಿ ಸೀಟು ಕೇಳಿರಲಿಲ್ಲ. ಅವರೇ ಆಶೀರ್ವಾದ ಮಾಡಿ ಗೆಲ್ಲಿಸಿದರು. ಯಾರ ಒತ್ತಡಕ್ಕೂ ಮಣಿದು ಈ ನಿರ್ಧಾರ ಕೈಗೊಂಡಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪರಾಜಿತ ಅಭ್ಯರ್ಥಿ, ಬಿಜೆಪಿಯ ಎ.ಮಂಜು, ‘ಮೊಮ್ಮಗನಿಗೆ ತಾತ ಕ್ಷೇತ್ರ ತ್ಯಾಗ ಮಾಡುವುದು, ತಾತನಿಗೆ ಮೊಮ್ಮಗ ಕ್ಷೇತ್ರ ತ್ಯಾಗ ಮಾಡುವುದು ಹಾಸ್ಯಾಸ್ಪದ. ಪ್ರಚಾರಕ್ಕಾಗಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ ಅಷ್ಟೇ. ಪ್ರಜ್ವಲ್‌ಗೆ ತಪ್ಪಿನ ಅರಿವಾಗಿದೆ. ಮೊದಲೇ ದೇವೇಗೌಡರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರೆ ಸೋಲುತ್ತಿರಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT