ಉಡುಪಿ: ನೌಕಾಪಡೆಯ ಐಎನ್‌ಎಸ್ ಕೊಚ್ಚಿನ್ ಹಡಗು ಡಿಕ್ಕಿ ಹೊಡೆದು ಸುವರ್ಣ ತ್ರಿಭುಜ ಬೋಟ್ ಸಮುದ್ರದಲ್ಲಿ ಮುಳುಗಿದೆ. ನೌಕಾದಳ ಮೀನುಗಾರರ ಕಗ್ಗೊಲೆ ನಡೆಸಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗಂಭೀರ ಆರೋಪ ಮಾಡಿದರು.
ಕಾಪುವಿನ ಮೂಳೂರಿನಲ್ಲಿರುವ ಸಾಯಿರಾಧಾ ರೆಸಾರ್ಟ್ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಲೋಕಸಭಾ ಚುನಾವಣೆ ಮುಗಿದ ಬಳಿಕ ಉಡುಪಿ ಶಾಸಕರ ನೇತೃತ್ವದಲ್ಲಿ ಬೋಟ್ ಹುಡುಕುವ ನಾಟಕ ಮಾಡಿದ್ದು ಖಂಡನೀಯ. ಮೀನುಗಾರರ ಹೆಣದ ಮೇಲಿನ ರಾಜಕೀಯವನ್ನು ಖಂಡಿಸುತ್ತೇನೆ ಎಂದರು.
ಕೇಂದ್ರ ಸರ್ಕಾರ ಹಾಗೂ ನೌಕಾಪಡೆಯಿಂದ ಆಗಿರುವ ತಪ್ಪಿಗೆ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಹೀಯಾಳಿಸಿದ್ದ ಬಿಜೆಪಿ ಈಗ ಸಂಪೂರ್ಣ ಬೆತ್ತಲಾಗಿದೆ. ಮೀನುಗಾರರಿಗೆ ಭದ್ರತೆ ಕೊಡಬೇಕಾಗಿದ್ದ ನೌಕಾದಳ ತಪ್ಪೆಸಗಿರುವುದು ಖಂಡನೀಯ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಒಸತ್ತಾಯಿಸಿದರು.
ಈಗಾಗಲೇ ಮೀನುಗಾರ ಸಮುದಾಯದ ಮುಖಂಡರಾದ ಜಿ.ಶಂಕರ್ ಅವರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದೆ. ಮೀನುಗಾರರು ಬದುಕುಳಿದಿರುವ ಆಶಾಭಾವ ಉಳಿದಿಲ್ಲ. ಮೃತಪಟ್ಟ ಮೀನುಗಾರರ ಕುಟುಂಬಗಳಿಗೆ ಕನಿಷ್ಠ 10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದೇವೆ ಎಂದರು.
ಮುಖ್ಯಮಂತ್ರಿಗಳು ಈಗಾಗಲೇ ಮೀನುಗಾರಿಕಾ ಸಚಿವರೊಂದಿಗೆ ಚರ್ಚಿಸಿದ್ದು ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.