ಶನಿವಾರ, ಸೆಪ್ಟೆಂಬರ್ 19, 2020
27 °C

ಪ್ರಸಾದ ತಯಾರಿಗೆ ಮಾನದಂಡ: ಧಾರ್ಮಿಕ ಸಂಸ್ಥೆಗಳಿಂದ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದೇವಸ್ಥಾನಗಳಲ್ಲಿ ಭಕ್ತರಿಗೆ ನೀಡುವ ಪ್ರಸಾದ ತಯಾರಿಕೆಗೆ ಮಾನದಂಡ ನಿಗದಿಗೊಳಿಸಬೇಕು ಎಂಬ ಆಹಾರ ಸಂರಕ್ಷಣಾ ಹಾಗೂ ಗುಣಮಟ್ಟ ನಿಯಂತ್ರಣ ಪ್ರಾಧಿಕಾರದ ಪ್ರಸ್ತಾವಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಪ್ರಾಧಿಕಾರದ ಸಿಇಒ ಪವನ್‌ ಕುಮಾರ್ ಅಗರವಾಲ್‌ ತಿಳಿಸಿದರು.

‘ಆರಂಭದಲ್ಲಿ ಈ ಕುರಿತು ವಿರೋಧ ವ್ಯಕ್ತವಾಗಿತ್ತು. ಈ ವಿಚಾರದಲ್ಲಿ ಅವಸರ ಮಾಡಲಾಗದು. ಏಕೆಂದರೆ, ಇಲ್ಲಿ ಧರ್ಮ ಹಾಗೂ ಭಕ್ತಿಯ ವಿಚಾರ ಅಡಗಿದೆ. ತಂತ್ರಜ್ಞಾನದ ಅಳವಡಿಕೆ ದೊಡ್ಡ ವಿಚಾರವಲ್ಲ. ಆದರೆ, ಧಾರ್ಮಿಕ ಭಾವನೆಗಳಿಗೆ ತೊಡಕಾಗದಂತೆ ಮುತುವರ್ಜಿ ವಹಿಸುವುದಕ್ಕೆ ಗಮನ ನೀಡಬೇಕಿದೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ತಿರುಪತಿ ದೇವಸ್ಥಾನದಿಂದ ವಿರೋಧವಿತ್ತು. ಈಗ ಅವರೂ ನಮಗೆ ಸಹಮತ ವ್ಯಕ್ತ‍ಪಡಿಸಿದ್ದಾರೆ. ನಮ್ಮ ತಂಡವು ದೇವಸ್ಥಾನ ಆಡಳಿತ ಮಂಡಳಿಗಳ ಜತೆ ನಿರಂತರ ಮಾತುಕತೆಯಲ್ಲಿ ತೊಡಗಿದೆ. ಪ್ರಸಾದ ತಯಾರಿಯಲ್ಲಿ ಗುಣಮಟ್ಟ ಮಾನದಂಡ ಪಾಲಿಸುವಂತೆ ಮನವರಿಕೆ ಮಾಡಿದೆ. ಪ್ರಸಾದ ತಯಾರಿಗೆ ನೂರಾರು ವರ್ಷಗಳ ಇತಿಹಾಸವಿದೆ; ಅದಕ್ಕೆ ಯಾರೂ ಮೂಗು ತೂರಿಸಬಾರದು ಎಂಬ ಧಾರ್ಮಿಕ ಸಂಸ್ಥೆಗಳ ನಿಲುವಿಗೆ ನಾವು ಬದ್ಧರಾಗಿದ್ದೇವೆ. ನಾವು ಮಧ್ಯ ಪ್ರವೇಶ ಮಾಡುವುದಿಲ್ಲ. ಬದಲಿಗೆ, ಧಾರ್ಮಿಕ ಸಂಸ್ಥೆಗಳೇ ಗುಣಮಟ್ಟ ಪರೀಕ್ಷಿಸಿ ಭಕ್ತರಿಗೆ ನೀಡುವಂತೆ ಕೋರಿಕೆ ಸಲ್ಲಿಸಿದ್ದೇವೆ’ ಎಂದು ಹೇಳಿದರು.

ಕರ್ನಾಟಕ ಶ್ಲಾಘನೀಯ:

ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸುವಲ್ಲಿ ಕರ್ನಾಟಕವು ಮುತುವರ್ಜಿ ವಹಿಸಿದೆ. ಯಾವುದೇ ಲೋಪಗಳಾಗದಂತೆ ಎಚ್ಚರವಹಿಸಿದೆ ಎಂದು ಶ್ಲಾಘಿಸಿದರು.

‘ಬಿಸಿಯೂಟ ಯೋಜನೆ ಜಾರಿಯಾದ ಸಮಯದಲ್ಲೇ ಕೇಂದ್ರ ಸರ್ಕಾರವು ಹಲವು ಗುಣಮಟ್ಟ ಮಾನದಂಡಗಳನ್ನು ಸಿದ್ಧಪಡಿಸಿತ್ತು. ಶಾಲೆಗಳ ಆಡಳಿತ ಮಂಡಳಿಗಳು ಅವನ್ನು ಸೂಕ್ತವಾಗಿ ಪಾಲಿಸಬೇಕು. ಈ ಶಾಲೆಗಳಲ್ಲಿ ಈ ಮಾನದಂಡಗಳ ‍ಪಾಲನೆಯಾಗುತ್ತಿರುವ ಕುರಿತು ನಿಗಾ ಇಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕುರಿತು ನಾವು ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದ್ದೇವೆ’ ಎಂದರು.

ಆಹಾರ ರಕ್ಷಣಾ ಅಧಿಕಾರಿಗಳ ನೇಮಕವಾಗಲಿ:

ದೇಶದಲ್ಲಿ ಆಹಾರ ಸಂರಕ್ಷಣಾ ನಿಯಮಗಳ ಪಾಲನೆಯಾಗಬೇಕಾದರೆ ಆಹಾರ ರಕ್ಷಣಾ ಅಧಿಕಾರಿಗಳ ನೇಮಕವಾಗಬೇಕು ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಸುಮಾರು 824 ಅಧಿಕಾರಿಗಳ ಕೊರತೆ ಇದೆ. ಕೆಲವು ರಾಜ್ಯಗಳಲ್ಲಿ ಆಹಾರ ರಕ್ಷಣಾ ಅಧಿಕಾರಿಗಳು ಕಡಿಮೆಯಿದ್ದಾರೆ. ಕೆಲವೆಡೆ ಉತ್ತಮ ಸಂಖ್ಯೆಯಲ್ಲಿದ್ದಾರೆ. ತಮಿಳುನಾಡಿನಲ್ಲಂತೂ ಅಗತ್ಯಕ್ಕಿಂತ ಅಧಿಕಾರಿಗಳಿದ್ದಾರೆ ಎಂದು ಉದಾಹರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು