ಶನಿವಾರ, ಜುಲೈ 31, 2021
28 °C
ರಾತ್ರಿ ಸೇವೆಯ ಬಸ್ ದರ ಶೇ 20ರಿಂದ ಶೇ 40ರಷ್ಟು ಹೆಚ್ಚಳ

ಟ್ರಾವೆಲ್ಸ್ ಉದ್ಯಮ ಚೇತರಿಕೆ: ಪ್ರಯಾಣ ದರದ ಬರೆ

ವಿಜಯಕುಮಾರ್‌ ಎಸ್‌.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಟ್ರಾವೆಲ್ಸ್ ಉದ್ಯಮ ದಿನದಿಂದ ದಿನಕ್ಕೆ ಚೇತರಿಕೆ ಕಾಣುತ್ತಿರುವ ನಡುವೆಯೇ ಖಾಸಗಿ ಬಸ್ ಪ್ರಯಾಣ ದರವನ್ನು ಶೇ 20 ರಿಂದ ಶೇ 40ರಷ್ಟು ಹೆಚ್ಚಳ ಮಾಡಲಾಗಿದೆ.

ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರವೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಶೇ 15ರಿಂದ ಶೇ 20ರಷ್ಟು ಖಾಸಗಿ ಬಸ್‌ಗಳ ಸಂಚಾರವೂ ಆರಂಭವಾಗಿದೆ. ಪ್ರತಿ ಟ್ರಿಪ್‌ ಮುಗಿದ ಕೂಡಲೇ ಇಡೀ ಬಸ್‌ ಅನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಹವಾನಿಯಂತ್ರಿತ ರಹಿತ ವ್ಯವಸ್ಥೆ ಕಲ್ಪಿಸಲಾಗಿದೆ.

ರಾತ್ರಿ ಪ್ರಯಾಣದ ಬಸ್‌ಗಳಲ್ಲಿ ಈ ಹಿಂದೆ ನೀಡುತ್ತಿದ್ದ ಹೊದಿಕೆಯನ್ನು ಈಗ ನೀಡದೆ ಕೆಎಸ್‌ಆರ್‌ಟಿಸಿ ಮಾದರಿಯನ್ನೇ ಖಾಸಗಿ ಬಸ್‌ಗಳಲ್ಲೂ ಅನುಸರಿಸಲಾಗುತ್ತಿದೆ. ಕಿಟಕಿಗಳಿಗೆ ಇದ್ದ ಸ್ಕ್ರೀನ್‌ಗಳನ್ನೂ ತೆಗೆಯಲಾಗಿದೆ. ಥರ್ಮಲ್ ಸ್ಕ್ಯಾನ್‌ ಮೂಲಕ ಎಲ್ಲಾ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. 

‘30 ಆಸನಗಳಿರುವ ಬಸ್‌ನಲ್ಲಿ 20 ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಲಾಗುತ್ತಿದೆ. ಎರಡು ಸೀಟ್ ಒಟ್ಟಿಗೆ ಇರುವ ಕಡೆ ಅಪರಿಚಿತ ಪ್ರಯಾಣಿಕರನ್ನು ಕೂರಿಸುತ್ತಿಲ್ಲ. ಒಂದೇ ಕುಟುಂಬದ ಸದಸ್ಯರು ಬಂದರೆ ಮಾತ್ರ ಅಕ್ಕ–ಪಕ್ಕದಲ್ಲಿ ಕೂರಿಸಲಾಗುತ್ತಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿರುವ ಕಾರಣ ಬಸ್‌ಗಳಲ್ಲಿ ಸಂಚರಿಸಲು ಪ್ರಯಾಣಿಕರು ಹೆದರುವ ಅಗತ್ಯ ಇಲ್ಲ’ ಎಂದು ಕರ್ನಾಟಕ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸದಾನಂದ ಚಾತ್ರ ತಿಳಿಸಿದರು.

‘ಸದ್ಯ ಬೆಂಗಳೂರು ಕಡೆಗೆ ಮಾತ್ರ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರಿನಿಂದ ಇತರೆ ನಗರಗಳಿಗೆ ಬಸ್‌ಗಳು ಖಾಲಿ ಸಂಚರಿಸುತ್ತಿವೆ. ಹೀಗಾಗಿ ಪ್ರಯಾಣ ದರ ಏರಿಕೆ ಅನಿವಾರ್ಯತೆ ಇದೆ. ರಾತ್ರಿ ಪ್ರಯಾಣದ ಡಿಲಕ್ಸ್ ಬಸ್‌ಗಳಲ್ಲಿ ₹800 ಇದ್ದ ದರ ₹1,200ಕ್ಕೆ ಹೆಚ್ಚಿಸಲಾಗಿದೆ. ಸ್ಥಳೀಯವಾಗಿ ಸಂಚರಿಸುವ ಬಸ್‌ಗಳ ದರವನ್ನು ಸರ್ಕಾರ ನಿಗದಿ ಮಾಡಿರುವಂತೆ ಶೇ 15ರಷ್ಟು ಮಾತ್ರ ಹೆಚ್ಚಿಸಲಾಗಿದೆ’ ಎಂದು ಹೇಳಿದರು. 

‘ಏಪ್ರಿಲ್ ಮತ್ತು ಜೂನ್ ತಿಂಗಳ ತೆರಿಗೆ ವಿನಾಯಿತಿ ದೊರೆತಿದೆ. ಜೂನ್ ತಿಂಗಳ ತೆರಿಗೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಹೀಗಾಗಿ ಬಸ್‌ಗಳನ್ನು ರಸ್ತೆಗೆ ಇಳಿಸಲು ಮಾಲೀಕರು ಹೆದರುತ್ತಿದ್ದಾರೆ. ವಿನಾಯಿತಿ ದೊರೆತರೆ ಮಾಲೀಕರು ಮನಸ್ಸು ಮಾಡುತ್ತಾರೆ’ ಎಂದರು.

ಜೂನ್‌ನಲ್ಲೂ ತೆರಿಗೆ ವಿನಾಯಿತಿ: ಒತ್ತಾಯ
‘ಕೊರೊನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ನಡುವೆ ಅಂತರ ಕಾಯ್ದುಕೊಳ್ಳಲು ಆಸನಗಳನ್ನು ಖಾಲಿ ಬಿಡಲಾಗುತ್ತಿದೆ. ಆದರೂ, ಬಸ್‌ನಲ್ಲಿ ಇರುವ ಸೀಟ್ ಆಧರಿಸಿ ಸಾರಿಗೆ ಇಲಾಖೆಗೆ ತೆರಿಗೆ ಪಾವತಿಸಬೇಕಾಗಿದೆ’ ಎಂದು ಭಾರತೀಯ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಕೆ.ಟಿ. ರಾಜಶೇಖರ್ ಹೇಳಿದರು.

‘53 ಸೀಟುಗಳಿರುವ ಬಸ್‌ಗೆ ಮೂರು ತಿಂಗಳ ಅವಧಿಗೆ ₹6.75 ಲಕ್ಷ ತೆರಿಗೆ ಪಾವತಿಸಬೇಕಾಗುತ್ತದೆ. ಇರುವ ಆಸನಗಳಲ್ಲಿ ಶೇ 50ರಷ್ಟು ಪ್ರಯಾಣಿಕರೂ ಬಸ್ ಹತ್ತುತ್ತಿಲ್ಲ. ಹೀಗಾಗಿ ತೆರಿಗೆ ಪ್ರಮಾಣವನ್ನು ಜೂನ್‌ನಲ್ಲೂ ಶೇ 50ರಷ್ಟು ಇಳಿಸಬೇಕು. ಈ ಸಂಬಂಧ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು