ಶುಕ್ರವಾರ, ನವೆಂಬರ್ 22, 2019
26 °C

ನಮ್ಮ ಮೆಟ್ರೊ | ಹೋರಾಟದ ಬಳಿಕ ಹಿಂದೆ ಸರಿದ ‘ಹಿಂದಿ ಫಲಕ’

Published:
Updated:

ಸೆಪ್ಟೆಂಬರ್ 14 ಹಿಂದಿ ದಿವಸ್‌. ಹಿಂದಿ ದಿನಾಚರಣೆಯ ಪರ-ವಿರೋಧದ ಚರ್ಚೆಗಳು ಕರ್ನಾಟಕದಲ್ಲಿ ಗರಿಗೆದರಿದೆ. ಈ ಹಿನ್ನೆಲೆಯಲ್ಲಿ ಹಿಂದಿ ದಿವಸ್ ಆರಂಭವಾದ ಕಾಲಘಟ್ಟವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

ರೈಲಿಗಾಗಿ ಕಾಯುತ್ತಿದ್ದವರಿಗೆ ಮೂರು ಕೋಚ್‌ಗಳ ರೈಲು ಬರಲಿದೆ ಎನ್ನುವ ಬದಲು ಮೂರು ರೈಲು ತರಬೇತುದಾರರು ಬರಲಿದ್ದಾರೆ ಎಂದು ಹೇಳಿದರೆ ಹೇಗೆ?

ಆ ದಿನ ಮೆಟ್ರೊ ನಿಲ್ದಾಣವೊಂದರಲ್ಲಿ ರೈಲು ಬುರುವಿಕೆಯನ್ನೇ ಎದುರುನೋಡುತ್ತಿದ್ದವರಿಗೆ ಆದ ಅನುಭವ ಅದು. ರೈಲು ಬರಲು ಇನ್ನೆಷ್ಟು ಹೊತ್ತು ಬೇಕು ಎಂದು ಅಲ್ಲಿನ ಮಾಹಿತಿ ಫಲಕದತ್ತ ಕಣ್ಣಾಯಿಸಿದವರು ಒಂದು ಕ್ಷಣ ಕಣ್ಣು ಮಿಟುಕಿಸಲೇ ಇಲ್ಲ. ಆ ಫಲಕದಲ್ಲಿ ಹೀಗೆ ‘ಮೂರು ರೈಲು ತರಬೇತುದಾರರು ಬರಲಿದ್ದಾರೆ ಎಂದು ಪ್ರದರ್ಶನವಾಗುತ್ತಿತ್ತು. ಕೆಲವರು ನಕ್ಕು ಸುಮ್ಮನಾದರು. ಮತ್ತೆ ಕೆಲವರು ಬೇಸರಪಟ್ಟುಕೊಂಡರು. ‘ನಮ್ಮ ಮೆಟ್ರೊ’ದಲ್ಲಿ ಸಿರಿಗನ್ನಡ ಬಡವಾದದ್ದನ್ನು ಕಂಡು, ಏನನ್ನಬೇಕೋ ತೋಚದ ಇನ್ನುಳಿದವರು ಸುಮ್ಮನೆ ರೈಲು ಹತ್ತಿ ಮನೆಯದ್ದೋ ಕಚೇರಿಯದ್ದೋ ದಾರಿ ಹಿಡಿದರು.

ಕನ್ನಡದಲ್ಲಿ ನೀಡಬೇಕಾದ ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಿ ಅನುವಾದಿಸಿದ್ದರಿಂದ ಆದ ಪ್ರಮಾದ ಅದು. ರೈಲಿನ ‘ಕೋಚ್‌’ ಎಂಬ ಇಂಗ್ಲಿಷ್‌ ಪದಕ್ಕೆ ಕನ್ನಡದಲ್ಲಿ ‘ಬೋಗಿ’ ಎನ್ನಲಾಗುತ್ತದೆ. ಅದನ್ನು ಅನುವಾದಿಸುವಾಗ ಎಚ್ಚರಿಕೆ ವಹಿಸಿದ್ದರೆ ಈ ಪ್ರಮಾದವೇ ಇರುತ್ತಿರಲಿಲ್ಲ. ‘ಬೋಗಿಯು ಕಣ್ಗಾವಲಿನಲ್ಲಿದೆ’ ಎಂದು ಸರಳವಾಗಿ ಬರೆಯುವ ಬದಲು ಸಾಮಾನ್ಯ ಜನರಿಗೆ ಅರ್ಥವಾಗದಂತೆ ‘ಕೋಚ್‌ ನಿಗ್ರಾಹಣೆಯಲ್ಲಿದೆ’ ಎಂದು ಬಳಸಲಾಗುತ್ತದೆ. ಕನ್ನಡ ಭಾಷಿಕ ರಾಜ್ಯ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುವ ಮೆಟ್ರೊ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನವೂ ಇಲ್ಲವೇ? ಎನ್ನುವ ಗೊಣಗಾಟಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಗೂಗಲ್‌ ಅನುವಾದದ ಯಥಾವತ್‌ ಎನ್ನುವಂತೆ ಕೇಳುತ್ತಿದ್ದ ಧ್ವನಿವರ್ಧಕ ಪ್ರಕಟಣೆಗಳೂ ಕನ್ನಡಿಗರಿಗೆ ಕಿರಿಕಿಯಾಗಲಾರಂಭಿಸಿದ್ದವು. 

ಮಾತ್ರವಲ್ಲ ನಿಲ್ದಾಣಗಳಲ್ಲಿ ಕೆಲಸ ಮಾಡುವ ಹೆಚ್ಚಿನವರು ಹೊರಭಾಷಿಕರು. ಇದರಿಂದಾಗಿ ಬೇರೆ ಭಾಷೆ ಬಾರದ ಹಾಗೂ ಅನಕ್ಷರಸ್ಥ ಕನ್ನಡ ಪ್ರಯಾಣಿಕರಿಗೆ ಸಂವಹನ ಸಮಸ್ಯೆಯೂ ಆಗುತ್ತಿತ್ತು. ಎಷ್ಟೋ ಸಂದರ್ಭದಲ್ಲಿ ಮಾಹಿತಿಯನ್ನು ಸರಿಯಾಗಿ ತಿಳಿಯಲಾರದೆ, ತಮ್ಮ ಸ್ಥಳ ಬಿಟ್ಟು ಇನ್ನೆಲ್ಲೋ ಹೋಗಿ ಇಳಿದು ತೊಂದರೆ ಅನುಭವಿಸಿದ್ದೂ ಇದೆ.

ಇದನ್ನೂ ಓದಿ: ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಹಿಂದಿ ರಾಷ್ಟ್ರಭಾಷೆ ಎಂಬ ಮಿಥ್ಯೆ

ನಾಮಫಲಕದಲ್ಲಿ ಕಾಣಿಸುವ ಪರಭಾಷೆ, ಧ್ವನಿವರ್ಧಕಗಳ ಪ್ರಕಟಣೆಯಲ್ಲಿನ ದೋಷ, ಹೆಚ್ಚಾಗಿ ಕಾಣಸಿಗುವ ಬೇರೆ ಭಾಷೆಯ ಸಿಬ್ಬಂದಿ, ಮತ್ತಿತರೆ ವಿಚಾರಗಳ ಬಗ್ಗೆ ಆಗಾಗ ಸಣ್ಣಪುಟ್ಟ ಗಲಾಟೆಗಳಾಗುತ್ತಿದ್ದವು. ಈ ಎಲ್ಲ ಎಡವಟ್ಟುಗಳ ನಡುವೆ ಮೆಟ್ರೊ ನಿಗಮದಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆ ಅಡಿಯಲ್ಲಿ ಹಿಂದಿ ಭಾಷೆಗೆ ಪ್ರಾಶಸ್ತ್ಯ ನೀಡಲಾಯಿತು. ಇದರಿಂದಾಗಿ ಆಗೊಮ್ಮೆ ಹೀಗೊಮ್ಮೆ ಸಣ್ಣಗೆ ಚಿಮ್ಮುತ್ತಿದ್ದ ಅಸಮಾಧಾನದ ಕಿಡಿಗಳು ಒಟ್ಟಿಗೆ ಸೇರಿ ಮೆಟ್ರೊದಲ್ಲಿ ಹಿಂದಿ ಬಳಕೆ ವಿರೋಧಿ ಆಂದೋಲನಕ್ಕೆ ಮುನ್ನುಡಿ ಬರೆದವು.

ಹಿಂದಿ ಹೇರಿಕೆಗೆ ತಿರುಗೇಟು
2011ರಲ್ಲಿ ಮೆಟ್ರೊ ರೈಲು ಓಡಾಟ ಆರಂಭವಾದಾಗಿನಿಂದಲೂ ಮೆಟ್ರೊ ನಾಮ ಫಲಕಗಳಲ್ಲಿ ಹಿಂದಿ ಬಳಕೆ ಬಗ್ಗೆ ಅಸಮಾಧಾನ ಇತ್ತಾದರೂ ಸ್ಫೋಟಗೊಂಡದ್ದು ಮಾತ್ರ 2016ರಿಂದ ಈಚೆಗೆ. 2016ರ ಡಿಸೆಂಬರ್‌ನಲ್ಲಿ ಕೇಂದ್ರ ನಗರಾಭಿವೃದ್ಧಿ ಇಲಾಖೆ, ತ್ರಿಭಾಷಾ ಸೂತ್ರದ ಅನ್ವಯ ಮೆಟ್ರೊ ನಿಲ್ದಾಣಗಳ ನಾಮಫಲಕ ಹಾಗೂ ಸೂಚನಾ ಫಲಕಗಳು ಪ್ರಾದೇಶಿಕ ಭಾಷೆ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಹಿಂದಿ ಅಳವಡಿಕೆ ಬಗ್ಗೆ ಕೇಂದ್ರ ಸರ್ಕಾರವೂ ಹೆಚ್ಚು ಮುತುವರ್ಜಿ ವಹಿಸಿದ್ದು ಹಾಗೂ ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೊಂದಾಣಿಕೆ ಸಾಧ್ಯವಾಗದೇ ಇದ್ದುದರಿಂದಾಗಿ ಹಿಂದಿ ಬಳಕೆ ವಿರೋಧದ ಕಿಚ್ಚು ಹೊತ್ತಿಕೊಂಡಿತು.

ಇದನ್ನೂ ಓದಿ: ನಮ್ಮ ನೆಲದಲ್ಲಿ ನಾವೇಕೆ ಇಂಥ ಪಾಡು ಅನುಭವಿಸಬೇಕು

ಕೇಂದ್ರದ ಸೂಚನೆಯನ್ನು ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಬುದ್ಧಿಜೀವಿಗಳು ತೀವ್ರವಾಗಿ ಖಂಡಿಸಿದ್ದರು. ಪ್ರತಿಭಟನೆಯ ಸ್ವರೂಪ ಹಿಂಸೆಯ ರೂಪ ಪಡೆದುಕೊಳ್ಳುವ ಸೂಚನೆ ಅರಿತ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕೇಂದ್ರದ ಸೂಚನೆಯನ್ನು ಮರು ಪರಿಶೀಲಿಸಬೇಕು’ ಎಂದು ಕೇಂದ್ರದ ಆಗಿನ ನಗರಾಭಿವೃದ್ಧಿ ಸಚಿವ ನರೇಂದ್ರ ಸಿಂಗ್‌ ತೋಮರ್‌ಗೆ ಪತ್ರ ಬರೆದು ಒತ್ತಾಯಿಸಿದ್ದರು.

‘ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್ ಬಳಕೆಯಲ್ಲಿದೆ. ಮೆಟ್ರೊ ಪ್ರಯಾಣಿಕರು ಕನ್ನಡ ಮತ್ತು ಇಂಗ್ಲಿಷ್‌ ಲಿಪಿಯಲ್ಲಿರುವ ಫಲಕಗಳನ್ನು ನೋಡಿಕೊಂಡು ಮೆಟ್ರೊ ಬಳಸುತ್ತಿದ್ದಾರೆ. ಹೀಗಿರುವಾಗ ಫಲಕಗಳಲ್ಲಿ ಹಿಂದಿ ಬಳಕೆ ಅಗತ್ಯವಿಲ್ಲ’ ಎಂದೂ ಪತ್ರದಲ್ಲಿ ಪ್ರತಿಪಾದಿಸಿದ್ದರು.

ಇದನ್ನೂ ಓದಿ: ಹಿಂದಿ ಹೇರಿಕೆ ವಿರುದ್ಧ ಟ್ವಿಟರ್‌ ಅಭಿಯಾನ

ಕೇಂದ್ರದ ನಿಲುವು ಒಪ್ಪುವಂತಹದಲ್ಲ. ಮೆಟ್ರೊ ಯೋಜನೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಮಪ್ರಮಾಣದಲ್ಲಿ ಹೂಡಿಕೆ ಮಾಡಿವೆ. ರೈಲು ಕಾರ್ಯಾಚರಣೆ, ಮೂಲ ಸೌಕರ್ಯ ಒದಗಿಸುತ್ತಿರುವುದು ನಮ್ಮ ರಾಜ್ಯ. ಬೆಂಗಳೂರು ಮೆಟ್ರೊ ನಿಗಮದ(ಬಿಎಂಆರ್‌ಸಿಎಲ್‌) ನಷ್ಟ ತುಂಬಿಕೊಡುವ ಜವಾಬ್ದಾರಿಯೂ ರಾಜ್ಯದ್ದು. ಹೀಗಾಗಿ, ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎನ್ನುತ್ತಾ ಕನ್ನಡ ಪರ ಹೋರಾಟಗಾರರು ಬೀದಿಗಿಳಿದರು.

‘ಕರ್ನಾಟಕದಲ್ಲಿ ಕನ್ನಡ ಬಳಕೆಗೆ ಪ್ರಾಶಸ್ತ್ಯ ಇರಬೇಕು ಎಂದು ಕನ್ನಡಿಗರು ಭಾವಿಸುವುದು ತಪ್ಪಲ್ಲ. ಭಾಷೆ ಮತ್ತು ಸಂಸ್ಕೃತಿ ಜತೆಗಿನ ಜನರ ಭಾವನಾತ್ಮಕ ನಂಟನ್ನು ಗೌರವಿಸಬೇಕಾದುದು ನಮ್ಮ ಕರ್ತವ್ಯ. ಹಿಂದಿ ಲಿಪಿಯ ಸೂಚನೆ ಇಲ್ಲದೆಯೂ ಜನರು ರೈಲನ್ನು ಬಳಸಬಲ್ಲರು’ ಎನ್ನುತ್ತಾ ರಾಜ್ಯ ಸರ್ಕಾರವು, ‘ಹಿಂದಿ ಲಿಪಿ ಇಲ್ಲದಂತೆ ನಾಮ ಫಲಕ, ಸೂಚನಾ ಫಲಕಗಳನ್ನು ಮರು ವಿನ್ಯಾಸಗೊಳಿಸಬೇಕು’ ಎಂದು ಬಿಎಂಆರ್‌ಸಿಎಲ್‌ಗೆ ಸೂಚಿಸಿತು. ಇದಾದ ಬಳಿಕ ಹೋರಾಟಗಾರರ ಹುರುಪು ಇನ್ನಷ್ಟು ಹೆಚ್ಚಿತು.

ಕನ್ನಡೇತರರ ನೇಮಕಕ್ಕೆ ವಿರೋಧ
ಬಿಎಂಆರ್‌ಸಿಎಲ್‌ನಲ್ಲಿ ಅಧಿಕ ಸಂಖ್ಯೆಯಲ್ಲಿ ಕನ್ನಡೇತರರನ್ನು ನೇಮಕ ಮಾಡಿಕೊಂಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅಗತ್ಯ ಕ್ರಮ ಕೈಗೊಳ್ಳುವಂತೆ 2018ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಒತ್ತಾಯಿಸಿತ್ತು.

ಮೆಟ್ರೊ ನಿಗಮದಲ್ಲಿ ಕನ್ನಡ ಭಾಷೆ ಬಳಕೆಗೆ ಪ್ರಾತಿನಿಧ್ಯ ಇಲ್ಲ. 2011ರಿಂದಲೂ ಆಡಳಿತ ಹಾಗೂ ನಾಮಫಲಕದಲ್ಲಿ ಭಾಷಾ ನೀತಿಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿದೆ. ಮೆಟ್ರೊ ನಾಮಫಲಕದಲ್ಲಿ ದ್ವಿಭಾಷೆ ಅನುಷ್ಠಾನ ಹಾಗೂ ಆಡಳಿತದಲ್ಲಿ ಕನ್ನಡ ಭಾಷಾ ಸಂಸ್ಕೃತಿಯನ್ನು ಬಿಂಬಿಸುವಂತ ವ್ಯವಸ್ಥೆ ಜಾರಿಯಾಗಲು ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು ಎಂದು ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಮನವಿ ಮಾಡಿದ್ದರು.

ಮೆಟ್ರೊ ನಿಗಮದಲ್ಲಿ ಸ್ವಚ್ಛತೆ, ಭದ್ರತಾ ಸೇವೆಗಳು ಸೇರಿದಂತೆ ವಿವಿಧ ಕೆಲಸಗಳಿಗೆ ನೇಮಿಸಿಕೊಳ್ಳಲಾಗುತ್ತಿರುವ ಹೊರಗುತ್ತಿಗೆ ನೌಕರರಲ್ಲಿ ಹೆಚ್ಚಿನವರು ಕನ್ನಡೇತರರು. ಉನ್ನತ ಹುದ್ದೆಗಳಿಗೂ ಕನ್ನಡಿಗರ ನೇಮಕವಾಗುತ್ತಿಲ್ಲ. ನೇಮಕಕ್ಕೆ ಸಂಬಂಧಿಸಿದಂತೆ ಸರೋಜಿನಿ ಮಹಿಷಿ ವರದಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗುತ್ತಿದೆ ಎಂದು ದೂರಿದ್ದರು.

ದ್ವಿಭಾಷಾ ಸೂತ್ರಕ್ಕೆ ಬೆಂಬಲವೇಕೆ?
‘ಬೆಂಗಳೂರಿನಲ್ಲಿ ಉತ್ತರ ಭಾರತೀಯರಿಗಿಂತ ಹೆಚ್ಚಾಗಿ ತೆಲುಗು, ತಮಿಳು, ಮಲಯಾಳಿ, ಗುಜರಾತಿ ಭಾಷೆಯವರು ಇದ್ದಾರೆ. ಈ ಎಲ್ಲ ಭಾಷೆಗಳನ್ನೂ ಮೆಟ್ರೊದಲ್ಲಿ ಬಳಸಲು ಸಾಧ್ಯವೇ? ಹೊರರಾಜ್ಯಗಳಿಗೆ ಹೋದ ಕನ್ನಡಿಗರು ಅಲ್ಲಿನ ಭಾಷೆಯನ್ನು ಕಲಿತಿಲ್ಲವೇ. ಹೊಟ್ಟೆಪಾಡಿಗಾಗಿ ಇಲ್ಲಿಗೆ ಬರುವವರು ಈ ನೆಲದ ಭಾಷೆಯನ್ನು ಕಲಿಯಬೇಕು ಎನ್ನುವುದು ತಪ್ಪಲ್ಲ’

‘ದಕ್ಷಿಣ ಭಾರತದವರು ಹಿಂದಿಯನ್ನು ಕಲಿಯಬೇಕು ಎಂದಾದರೆ ಉತ್ತರ ಭಾರತದವರು ದಕ್ಷಿಣದ ಭಾಷೆಗಳನ್ನೂ ಕಲಿಯಲಿ. ಒಂದು ಭಾಷೆ ಇನ್ನೊಂದರ ಮೇಲೆ ಆಕ್ರಮಣ ಮಾಡುವುದು ಸರಿಯಲ್ಲ. ಹಿಂದಿ ರಾಷ್ಟ್ರಭಾಷೆಯಲ್ಲ. ಹಾಗಾಗಿ ತ್ರಿಭಾಷಾ ಸೂತ್ರಕ್ಕೆ ತಾತ್ವಿಕ ತಳಹದಿ ಇಲ್ಲ’ ಎಂಬೆಲ್ಲಾ ಅಂಶಗಳು ಹಿಂದಿ ವಿರೋಧಿ ಹೋರಾಟದ ಅಸ್ತ್ರವಾದವು. ಆಗಿನ ಸರ್ಕಾರವೂ ಬೆಂಬಲ ನೀಡಿದ್ದು ಪ್ರತಿಭಟನೆಗಳಿಗೆ ಹೆಚ್ಚು ಬಲ ತಂದುಕೊಟ್ಟವು.

ಟ್ವಿಟರ್‌ ಅಭಿಯಾನ
ಹಿಂದಿ ಭಾಷೆ ಬಳಕೆಯನ್ನು ವಿರೋಧಿಸಿ ಟ್ವಿಟರ್‌ ಹಾಗೂ ಫೇಸ್‌ಬುಕ್‌ನಲ್ಲಿ #nammametrohindibeda (ನಮ್ಮಮೆಟ್ರೊಹಿಂದಿಬೇಡ), #nammametrokannadasaaku (ನಮ್ಮಮೆಟ್ರೊಕನ್ನಡಸಾಕು) ಅಭಿಯಾನ ಆರಂಭಿಸಲಾಗಿತ್ತು.

‘ಮೈಸೂರು ರಸ್ತೆ–ಬೈಯಪ್ಪನಹಳ್ಳಿ(ನೇರಳೆ) ಮಾರ್ಗದ ಮೆಟ್ರೊ ನಿಲ್ದಾಣಗಳಲ್ಲಿನ ನಾಮ ಫಲಕಗಳಲ್ಲಿ ಈ ಹಿಂದೆ ಕ್ರಮವಾಗಿ ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಹೆಸರುಗಳನ್ನು ಪ್ರಕಟಿಸಲಾಗುತ್ತಿತ್ತು. ಆದರೆ, ಯಲಚೇನಹಳ್ಳಿ–ನಾಗಸಂದ್ರ(ಹಸಿರು) ಮಾರ್ಗ ಆರಂಭವಾದ ಬಳಿಕ ಅಲ್ಲಿನ ನಿಲ್ದಾಣಗಳಲ್ಲಿ ಹಿಂದಿಯನ್ನು ಎರಡನೇ ಸ್ಥಾನಕ್ಕೆ ತಂದು ಕ್ರಮವಾಗಿ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾಹಿತಿ ಹಾಕಲಾಗಿದೆ. ಹೀಗೆಯೇ ಮುಂದುವರಿದರೆ ಕನ್ನಡವನ್ನು ಮಾಯ ಮಾಡಿ ಹಿಂದಿಗೆ ಮೊದಲ ಸ್ಥಾನ ನೀಡಲಿದ್ದಾರೆ’ ಎಂಬ ಕಳವಳ ಟ್ವಿಟರ್ ಅಭಿಯಾನದ್ದಾಗಿತ್ತು.

ಸಾಕಷ್ಟು ಜನರು ಅಭಿಯಾನವನ್ನು ಬೆಂಬಲಿಸಿ ರಾಜ್ಯ ಸರ್ಕಾರ ಹಾಗೂ ಮೆಟ್ರೊ ನಿಗಮದ ಗಮನ ಸೆಳೆಯಲು ಪ್ರಯತ್ನಿಸಿದ್ದರು.

ಕನ್ನಡ ಅಭಿವೃದ್ಧಿ ಪಾಧಿಕಾರದಿಂದ ನೋಟಿಸ್‌ 
‘..ಹಿಂದಿ ಬೇಡ’ ಟ್ವಿಟರ್‌ ಅಭಿಯಾನ ಸಂಬಂಧ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಉಲ್ಲೇಖಿಸಿ ಕನ್ನಡ ಅಭಿವೃದ್ಧಿ ಪಾಧಿಕಾರವು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಅವರಿಗೆ ನೋಟಿಸ್‌ ನೀಡಿತ್ತು. ಮಾತ್ರವಲ್ಲದೆ ಹಿಂದಿ ಬಳಕೆಗೆ ಸಮಜಾಯಿಸಿ ನೀಡುವಂತೆ ಸೂಚಿಸಿತ್ತು.

ಹಿಂದಿಗೆ ಮಸಿ: ಕರವೇ ಕಾರ್ಯಕರ್ತರ ಬಂಧನ
ನಾಮಫಲಕಗಳಲ್ಲಿ ಹಿಂದಿ ಬಳಕೆಯನ್ನು ವಿರೋಧಿಸಿ ಪ್ರತಿಭಟನೆ ಕೈಗೊಂಡಿದ್ದ ‘ಕರ್ನಾಟಕ ರಕ್ಷಣಾ ವೇದಿಕೆ’ ಕಾರ್ಯಕರ್ತರು 2017ರ ಜುಲೈನಲ್ಲಿ ನಿಲ್ದಾಣಗಳಲ್ಲಿದ್ದ ಹಿಂದಿ ನಾಮಫಲಕಗಳಿಗೆ ಮಸಿ ಬಳಿದು, ಹಿಂದಿ ಹೇರಿಕೆಯ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ಬೆಳಿಗ್ಗೆ 4 ಗಂಟೆಯ ಸುಮಾರಿಗೆ ನಗರದ 40 ಮೆಟ್ರೊ ನಿಲ್ದಾಣಗಳ ಬಳಿಗೆ ಪ್ರತ್ಯೇಕ ತಂಡಗಳಲ್ಲಿ ಬಂದಿದ್ದ ಕಾರ್ಯಕರ್ತರು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ್ದರು. ‘ಮೆಟ್ರೊ ರಾಜ್ಯ ಸರ್ಕಾರದ ಯೋಜನೆ. ಅದು ಕೇಂದ್ರದ ವ್ಯಾಪ್ತಿಗೆ ಬರುವುದಿಲ್ಲ. ಆದಾಗ್ಯೂ ಹಿಂದಿ ಬಳಕೆ ಮಾಡುತ್ತಿರುವುದು ಖಂಡನೀಯ’ ಎಂಬುದು ಕಾರ್ಯಕರ್ತರ ನಿಲುವಾಗಿತ್ತು. ಬಿಎಂಆರ್‌ಸಿಎಲ್‌ ಈ ಕೂಡಲೇ ಹಿಂದಿ ಫಲಕಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಅದೇ ವೇಳೆ ಕೆ.ಆರ್‌.ಮಾರುಕಟ್ಟೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸುತ್ತಿದ್ದ 12 ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

ಕೆಲದಿನಗಳ ಬಳಿಕ ಮೆಜೆಸ್ಟಿಕ್‌ ನಿಲ್ದಾಣದ ಬಳಿ ಹಿಂದಿ ನಾಮಫಲಕಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದ ಕಾರ್ಯಕರ್ತರು ಹೋರಾಟದ ಸ್ವರೂಪ ಬದಲಿಸಿ ಮೆಟ್ರೊ ನಿಗಮಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದರು.

ಹಿಂದಿ ದಿವಸ್‌ಗೂ ವಿರೋಧ
ಹಿಂದಿ ದಿವಸ್ ಆಚರಣೆಗೆ ವಿರೋಧ ವ್ಯಕ್ತಪಡಿಸಿರುವ ನೆಟ್ಟಿಗರು ಟ್ವಿಟರ್‌ನಲ್ಲಿ #WeDontWantHindiDivas ಮತ್ತು #WeWantBharataBhashaDivasa ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ಯ ಭಾಷೆಗಳ ಆಚರಣೆ ನಮ್ಮ ರಾಜ್ಯದಲ್ಲಿ ಏಕೆ? ದೇಶದ ಬೇರೆ ರಾಜ್ಯಗಳಲ್ಲಿ ಯಾವತ್ತಾದರೂ ಕನ್ನಡ ದಿವಸ, ತುಳು ದಿವಸ, ಕೊಡವ ದಿವಸಗಳನ್ನು ಆಚರಿಸಲಾಗುತ್ತದೆಯೇ ಎಂದು ಪ್ರಶ್ನಿಸಿ, ‘ಎಲ್ಲರೂ ಒಟ್ಟಾಗಿ ಹೇಳೋಣ, ಹಿಂದಿ ದಿವಸ್ ಬೇಡ’ ಎಂದು ಕರೆ ನೀಡಿದ್ದಾರೆ.

ಹಿಂದಿ ಬಳಕೆಗೆ ಸಮರ್ಥನೆಯೂ ಇದೆ
‘ಭಾರತದಲ್ಲಿ ಇಂದು ಹಿಂದಿ, ಇಂಗ್ಲೀಷ್‌ ಭಾಷೆಗಳು ಅನಿವಾರ್ಯವೆನಿಸುವಷ್ಟರ ಮಟ್ಟಿಗೆ ಪ್ರಭುತ್ವ ಸಾಧಿಸಿವೆ. ಅಷ್ಟಕ್ಕೂ.. ರೈಲು ನಿಲ್ದಾಣ, ಅಂಚೆ ಕಚೇರಿ, ವಿಮಾನ ನಿಲ್ದಾಣ ಮುಂತಾದ ಪ್ರಮುಖ ಇಲಾಖೆಗಳ ಕಚೇರಿಗಳು ಕೇಂದ್ರದ ತ್ರಿಭಾಷಾ ಸೂತ್ರಕ್ಕೆ ಒಳಪಟ್ಟಿವೆ. ಇಲ್ಲೆಲ್ಲ ಬಹುದಿನಗಳಿಂದ ಜಾರಿಯಲ್ಲಿರುವ ಹಿಂದಿಗೆ ಒಗ್ಗಿಹೋಗಿರುವ ನಾವು ‘ಹಿಂದಿ ಹೇರಿಕೆ’ ಎಂಬ ತಕರರಾನ್ನು ಮೆಟ್ರೊ ವಿಚಾರದಲ್ಲಿ ಮಾತ್ರವೇ ಎತ್ತುತ್ತಿರುವುದು ಯಾಕಾಗಿ ಎಂಬುದೇ ಅರ್ಥವಾಗದ ಗೊಂದಲ’ ಎನ್ನುತ್ತಾ ಹಲವರು ಹಿಂದಿ ಬಳಕೆಗೆ ಬೆಂಬಲ ಸೂಚಿಸಿದ್ದಾರೆ.

‘ಕನ್ನಡ ಭಾಷೆಯು ನಮ್ಮ ಮಾತೃ ಭಾಷೆ ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಬದುಕುವುದಕ್ಕಾಗಿ ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗಳು ಬೇಕೇಬೇಕು' ಎಂಬುದು ಕೆಲವರು ನೀಡುವ ಸಮರ್ಥನೆ. ತಮ್ಮ ಸಮರ್ಥನೆಗೆ ಇತಿಹಾಸದ ಬೆಂಬಲವನ್ನೂ ಪಡೆದುಕೊಳ್ಳುವ ಅವರು, 'ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಭಾಷೆಯು ಜನರನ್ನು ಒಂದುಗೂಡಿಸುತ್ತದೆ. ಅದರಿಂದ ದೇಶದ ಏಕೀಕರಣ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ನೆರವಾಗುತ್ತದೆ ಎಂದು ನಂಬಿದ್ದರು. ಹಾಗಾಗಿ ಅವರು ದಕ್ಷಿಣ ಭಾರತದಲ್ಲಿ ಹಿಂದಿ ಭಾಷೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ವನ್ನು ಸ್ಥಾಪಿಸಿದ್ದರು. ರಾಷ್ಟ್ರದ ಐಕ್ಯತೆಗಾಗಿ ಹಿಂದಿಯನ್ನು ಎಲ್ಲ ರಾಜ್ಯಗಳು ಅಳವಡಿಸಿಕೊಳ್ಳುವುದು ಒಳ್ಳೆಯದು’ ಎಂದು ವಾದಿಸುತ್ತಾರೆ.

ಇನ್ನಷ್ಟು...

ಹಿಂದಿ ಕಲಿಕೆ ಕಡ್ಡಾಯವಲ್ಲ, ಹಿಂದಿ ಭಾಷೆ ಆಯ್ಕೆ ಮಾತ್ರ- ಕೇಂದ್ರ ಸರ್ಕಾರ​

ಶಿಕ್ಷಣದಲ್ಲಿ ಹಿಂದಿ ಹೇರಿಕೆ- ಹಿಂದೆ ಸರಿದ ಕೇಂದ್ರ

ಗ್ರಾಮೀಣ ಬ್ಯಾಂಕ್‌- ಸ್ಥಳೀಯಭಾಷೆ ಅರಿತವರೇ ನೇಮಕವಾಗಲಿ

ಮಹಿಷಿ ವರದಿ ಕಾನೂನು ವ್ಯಾಪ್ತಿಗೆ

ಕನ್ನಡ ಚೆಕ್ ನಿರಾಕರಣೆ: ದಂಡ

18 ಸಾವಿರ ಹುದ್ದೆಯಲ್ಲಿ ಕನ್ನಡಿಗರಿಗೆ ದಕ್ಕಿದ್ದು 1,060!

ಹಿಂದಿ ಹೇರಿಕೆ: ಕಾವು ಏರಿಕೆ​

ಭಾಷೆಯನ್ನು ಹೇರಬಾರದು: ತ್ರಿಭಾಷಾ ಸೂತ್ರದ ಬಗ್ಗೆ ಸಿಎಂ ಟ್ವೀಟ್‌ ​

ಹಿಂದಿ ಹೇರಿಕೆಯ ಹಿಂದೆ ಮುಂದೆ...​

ಪ್ರತಿಕ್ರಿಯಿಸಿ (+)