ಸೋಮವಾರ, ಫೆಬ್ರವರಿ 24, 2020
19 °C

ಪಿಯು ಕಾಲೇಜು: ಬೇಕಾಬಿಟ್ಟಿ ಸಮಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 3.30ರವರೆಗೆ ಪಾಠ ಪ್ರವಚನ ನಡೆಯಬೇಕು ಎಂಬ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ, ಕೆಲವು ಕಾಲೇಜುಗಳಿಂದ ಬೇಕಾಬಿಟ್ಟಿ ಸಮಯ ನಿಗದಿಪಡಿಸಿಕೊಳ್ಳಲಾಗಿದೆ ಎಂಬ ದೂರು ಪೋಷಕರಿಂದ ಕೇಳಿಬಂದಿದೆ.

‘2014ರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿದ ಸುತ್ತೋಲೆಯಂತೆ ಒಂದು ಗಂಟೆ ಊಟದ ವಿರಾಮ ಸಹಿತ ಆರು ಗಂಟೆಗಳ ಪಾಠ, ಪ್ರವಚನ ಕಡ್ಡಾಯ. ಬೆಳಿಗ್ಗೆ 9.30ಗೆ ಕಾಲೇಜು ಆರಂಭವಾದರೆ ಸಂಜೆ 3.30ತನಕ, 10 ಗಂಟೆಗೆ ಆರಂಭವಾದರೆ ಸಂಜೆ 4ರವರೆಗೆ, 10.30ಕ್ಕೆ ಆರಂಭವಾದರೆ 4.30ರವರೆಗೆ ತರಗತಿಗಳು ನಡೆಯಬೇಕು ಎಂಬ ನಿಯಮ ಇದೆ. ಆದರೆ ಹಲವು ಕಡೆಗಳಲ್ಲಿ ಬೆಳಿಗ್ಗೆ 7.30ಕ್ಕೆ ಕಾಲೇಜು ಆರಂಭಿಸಿ, 11.30ಕ್ಕೆ ಮುಗಿಸುವ ಪರಿಪಾಠ ಇದೆ’ ಎಂದು ಹಲವು ಪೋಷಕರು ‘ಪ್ರಜಾವಾಣಿ’ಗೆ ದೂರು ನೀಡಿದ್ದಾರೆ.

‘ಬೆಳಿಗ್ಗೆ 7.30ಕ್ಕೆ ಕಾಲೇಜು ಆರಂಭಿಸಿದರೆ ವಿದ್ಯಾರ್ಥಿಗಳು ಉಪಾಹಾರ ಸೇವಿಸದೆ ಕಾಲೇಜಿಗೆ ಬರಬೇಕಾಗುತ್ತದೆ. 11.30ಕ್ಕೆ ಕಾಲೇಜು ಮುಗಿದ ಮೇಲೆ ಅವರು ಮನೆಗೆ ಹೋಗದೆ ಅಧ್ಯಯನ ಹೊರತಾದ ವಿಷಯಗಳಲ್ಲಿ ಗಮನ ಹರಿಸುವ, ದುಶ್ಚಟಗಳಿಗೆ ದಾಸರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಏಕರೂಪದ ಸಮಯದ ವ್ಯವಸ್ಥೆ ಇರುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಪೋಷಕರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಇಲಾಖೆಯ ನಿರ್ದೇಶಕಿ ಎಂ.ಕನಗವಲ್ಲಿ ಅವರನ್ನು ಸಂಪರ್ಕಿಸಿದಾಗ, ‘ಇಲಾಖೆಯ ಮಾರ್ಗಸೂಚಿಯಂತೆ ಬೆಳಿಗ್ಗೆ 9.30ರಿಂದ ಸಂಜೆ 3.30ರವರೆಗೆ ತರಗತಿ ನಡೆಯಬೇಕು, ಇದರಲ್ಲಿ ಒಂದು ಗಂಟೆಯ ಊಟದ ವಿರಾಮವೂ ಸೇರುತ್ತದೆ. ಇದನ್ನು ಕಾಲೇಜುಗಳು ಪಾಲಿಸಬೇಕಾಗುತ್ತದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು