ಮಂಗಳವಾರ, ಫೆಬ್ರವರಿ 25, 2020
19 °C
ಹಣದ ಮುಂದೆ ಎಲ್ಲವೂ ಗೌಣ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಗುರು ಕುಟುಂಬದಲ್ಲಿ ಕಲಹ; ಹರಿದ ₹15 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧ ಎಚ್‌.ಗುರು ಕುಟುಂಬ ಸದಸ್ಯರಿಗೆ ನೆರವಿನ ಮಹಾಪೂರವೇ ಹರಿದು ಬಂದಿದ್ದು, ಇಲ್ಲಿಯವರೆಗೆ ₹15 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಆದರೆ ಈ ಹಣವೇ ಕುಟುಂಬ ಸದಸ್ಯರ ನಡುವೆ ಘರ್ಷಣೆ ತಂದಿಟ್ಟಿದೆ.

ಗುರು ಪತ್ನಿ ಕಲಾವತಿ ಅವರ ಬ್ಯಾಂಕ್‌ ಖಾತೆ ವಿವರ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಜನರು ಅಪಾರ ಪ್ರಮಾಣದಲ್ಲಿ ಹಣ ಜಮೆ ಮಾಡಿದ್ದಾರೆ. ₹50ರಿಂದ ಲಕ್ಷಾಂತರ ರೂಪಾಯಿವರೆಗೂ ಹಣ ಹಾಕಿದ್ದಾರೆ. ವಿದೇಶಿ ಉದ್ಯಮಿಯೊಬ್ಬರು ₹1 ಕೋಟಿ ಸಹಾಯ ಮಾಡಿದ್ದಾರೆ. ರಾಜ್ಯ ಸರ್ಕಾರದ ₹25 ಲಕ್ಷ ಪರಿಹಾರ, ಅಂಬಾನಿ ಕಂಪನಿಯಿಂದ ₹25 ಲಕ್ಷ, ಇನ್ಫೊಸಿಸ್‌ ಫೌಂಡೇಷನ್‌ನಿಂದ ₹10 ಲಕ್ಷ, ನ್ಯಾಷನಲ್‌ ಟ್ರಾವೆಲ್ಸ್‌ನಿಂದ ₹10 ಲಕ್ಷ, ಆಳ್ವಾಸ್‌ ಶಿಕ್ಷಣ ಸಂಸ್ಥೆಯಿಂದ ₹10 ಲಕ್ಷ ಸೇರಿ ದಾನಿಗಳು ದಾರಾಳವಾಗಿ ದಾನ ಮಾಡಿದ್ದಾರೆ. ಅಂಬರೀಷ್‌ ಪತ್ನಿ ಸುಮಲತಾ 20 ಗುಂಟೆ ಆಸ್ತಿ ಘೋಷಿಸಿದ್ದಾರೆ. ಶಾಲಾ ಮಕ್ಕಳು, ಶಿಕ್ಷಕರು, ಸರ್ಕಾರಿ ನೌಕರರು, ಸಾರ್ವಜನಿರು ಹಣದ ಹೊಳೆಯನ್ನೇ ಹರಿಸಿದ್ದಾರೆ. ಈ ಹಣವೇ ಈಗ ಕುಟುಂಬ ಸದಸ್ಯರ ಸಂಬಂಧಕ್ಕೆ ಮುಳ್ಳಾಗಿದೆ.

ಹಣ ಹಂಚಿಕೆ ವಿಚಾರದಲ್ಲಿ ಗುರು ಪತ್ನಿ, ತಂದೆ– ತಾಯಿ ಹಾಗೂ ಸಹೋದರರ ನಡುವೆ ಘರ್ಷಣೆ ನಡೆದಿದೆ. ಮನೆಯಲ್ಲಿ ತಡರಾತ್ರಿವರೆಗೂ ಜಗಳವಾಡಿರುವ ವಿಷಯ ಗುಡಿಗೆರೆ ಕಾಲೊನಿಯ ಚರ್ಚೆಯ ವಿಷಯವಾಗಿದೆ. ಕುಟುಂಬ ಸದಸ್ಯರು ಹೊಡೆದಾಟ ಮಾಡಿಕೊಂಡಿದ್ದು ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಪ್ರಕರಣ ದಾಖಲು ಮಾಡಿಕೊಳ್ಳದ ಪೊಲೀಸರು, ಈ ವಿಷಯ ಸಮಾಜಕ್ಕೆ ಗೊತ್ತಾದರೆ ಕೆಟ್ಟ ಸಂದೇಶ ಹೋಗುತ್ತದೆ. ತಿಥಿ ಕಾರ್ಯ ಮುಗಿಯುವವರೆಗೂ ಘರ್ಷಣೆ ಬೇಡ. ತಿಥಿ ಮುಗಿಸಿಕೊಂಡು ಬನ್ನಿ. ನಂತರ ಸಮಸ್ಯೆ ಪರಿಹರಿಸೋಣ ಎಂದು ಬುದ್ಧಿ ಹೇಳಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಲಾವತಿ ಮದುವೆ ವಿಚಾರ: ಹಣ ಬೇರೆಡೆ ಹೋಗುವುದು ಬೇಡ. ಕಿರಿಯ ಮಗ ಮಧುವನ್ನು ಮದುವೆ ಮಾಡಿಕೊಳ್ಳುವಂತೆ ಗುರು ತಾಯಿ ಚಿಕ್ಕಹೊಳ್ಳಮ್ಮ ಅವರು ಕಲಾವತಿ ಅವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಆದರೆ, ಕಲಾವತಿ ಈ ಪ್ರಸ್ತಾವವನ್ನು ನಿರಾಕರಿಸಿದ್ದಾರೆ. ಅಲ್ಲದೆ ಕಲಾವತಿ ಕಡೆಯವರು ತವರು ಮನೆಗೆ ಕರೆದೊಯ್ಯಲು ತುದಿಗಾಲ ಮೇಲೆ ನಿಂತಿದ್ದಾರೆ ಎಂಬ ವಿಚಾರ ಗುರು ತಂದೆ– ತಾಯಿ, ಸಹೋದರರಿಗೆ ನುಂಗಲಾಗದ ತುತ್ತಾಗಿದೆ.

ಗರ್ಭಿಣಿಯಲ್ಲ: ಕಲಾವತಿ ಗರ್ಭಿಣಿಯಾಗಿದ್ದಾರೆ ಎಂಬ ವಿಚಾರವೂ ಕುಟುಂಬ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಅನಾವರಣಗೊಳಿಸಿದೆ. ಗುರು ತಾಯಿ ಹೊನ್ನಮ್ಮ, ಸೊಸೆ ನಾಲ್ಕು ತಿಂಗಳ ಗರ್ಭಿಣಿ ಎಂದು ಹೇಳಿದ್ದರು. ಆದರೆ ಕಲಾವತಿ ಇದನ್ನು ನಿರಾಕರಿಸಿದ್ದರು.

ವೈದ್ಯರು ಮಧ್ಯಪ್ರವೇಶ ಮಾಡಿ ಸ್ಪಷ್ಟನೆ ನೀಡಿದ ನಂತರ, ಗರ್ಭಿಣಿ ಅಲ್ಲ ಎಂಬ ವಿಚಾರ ಬೆಳಕಿಗೆ ಬಂದಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು