ಶನಿವಾರ, ಏಪ್ರಿಲ್ 10, 2021
30 °C
ವಿಶೇಷ ಮಕ್ಕಳ ಈಜು ಗುರು ರಜನಿ ಲಕ್ಕ ಮಾರ್ಗದರ್ಶನ

ಕೈಗಳಿಲ್ಲದ ಮುಸ್ತಫಾ ಈಜು ಕಲಿತಾಗ..

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಅಪಘಾತದಿಂದ ಎರಡೂ ಕೈಗಳನ್ನು ಭುಜದವರೆಗೆ ಕಳೆದುಕೊಂಡ ತಾಲ್ಲೂಕಿನ ಕೊಳಗಲ್‌ ಗ್ರಾಮದ ಬಡ ಕುಟುಂಬದ ಯುವಕ 21ರ ಮುಸ್ತಫಾನಿಗೆ ನಗರದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬಳ್ಳಾರಿ ಕ್ರೀಡಾ ಸಂಕೀರ್ಣದ ಈಜುಕೊಳವೆಂದರೆ ಈಗ ಖುಷಿಯೋ ಖುಷಿ.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಕಾಲಿನಿಂದಲೇ ಪರೀಕ್ಷೆ ಬರೆದು ಅತ್ಯಧಿಕ ಅಂಕ ಗಳಿಸಿ ಜಿಲ್ಲೆಯ ಗಮನ ಸೆಳೆದಿದ್ದ ಮುಸ್ತಫಾನಿಗೆ, ‘ಕೈಗಳಿಲ್ಲದಿದ್ದರೇನಂತೆ? ಕಾಲಿನಿಂದಲೇ ಈಜಬಹುದು’ ಎಂಬ ಆತ್ಮವಿಶ್ವಾಸವನ್ನು ತರಬೇತುದಾರರಾದ ರಜನಿ ಲಕ್ಕಾ ಮೂಡಿಸಲಾರಂಭಿಸಿದ್ದಾರೆ.

‘ಈಜು ಕಲಿಯಬೇಕು’ ಎಂಬ ಆಸೆಯಿಂದ ಕ್ರೀಡಾ ಸಂಕೀರ್ಣಕ್ಕೆ ಬಂದ ಮುಸ್ತಫಾನಿಗೆ ಉತ್ತೇಜನ ನೀಡುವವರು ದೊರಕಲಿಲ್ಲ. ರಜನಿಯವರ ಹೆಸರು ಕಿವಿಗೆ ಬಿದ್ದ ಕೂಡಲೇ ಆತ ಅವರನ್ನು ಸಂಪರ್ಕಿಸಿದ. ಈಜುಡುಗೆ ಖರೀದಿಸಲೂ ಹಣಕಾಸಿನ ತೊಂದರೆಯುಳ್ಳ ಆತನಿಗೆ ರಜನಿಯವರೇ ಉಡುಗೆ ಖರೀದಿಸಿ ಕೊಟ್ಟರು.

ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಸುರೇಶ್‌ಬಾಬು ಅವರ ಅನುಮತಿ ಪಡೆದು ಒಂದು ವಾರದಿಂದ ಉಚಿತವಾಗಿ ಅಭ್ಯಾಸವನ್ನೂ ಆರಂಭಿಸಿದರು. ಸದ್ಯಕ್ಕೆ ಮಕ್ಕಳ ಈಜು ಕೊಳದಲ್ಲಿ ಆತನಿಗೆ ತರಬೇತಿ ನೀಡುತ್ತಿದ್ದಾರೆ.

ಈ ಕುರಿತು ಹರ್ಷ ವ್ಯಕ್ತಪಡಿಸಿದ ಮುಸ್ತಫಾ, ‘ಎರಡೂ ಕೈ ಇಲ್ಲದೆ ಈಜಾಡಲು ಆಗುತ್ತದೆಯೇ ಎಂಬ ಅನುಮಾನವಿತ್ತು. ಮೊದಲ ದಿನವೇ ಅದನ್ನು ಹೋಗಲಾಡಿಸಿದ ರಜನಿ ಮೇಡಂ, ಕಾಲನ್ನು ಬಳಸಿಯೇ ಈಜಾಡುವುದನ್ನು ಹೇಳಿಕೊಡುತ್ತಿದ್ದಾರೆ’ ಎಂದರು.

ಎಲ್ಲರಂತಲ್ಲ ಈ ಗುರು: ಕಣ್ಣು ಕಾಣದ, ಕೈಕಾಲುಗಳಿಲ್ಲದ, ಬುದ್ಧಿಮಾಂದ್ಯ ಮಕ್ಕಳಿಗೆ ಐದು ವರ್ಷದಿಂದ ಈಜು ಹೇಳಿಕೊಡುತ್ತಿರುವ ರಜನಿ, ಅಂಗವಿಕಲರಾದ ಹಿರಿಯರಿಗೂ ಒಂದು ವರ್ಷದಿಂದ ಈಜು ಹೇಳಿಕೊಡುತ್ತಿದ್ದಾರೆ.

ಪೋಲಿಯೊ ಕಾರಣಕ್ಕೆ ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡಿರುವ ಗೃಹಿಣಿ ಕವಿತಾ ಒಂದು ವರ್ಷದಿಂದ ತರಬೇತಿ ಪಡೆಯುತ್ತಿದ್ದು, ದೊಡ್ಡ ಈಜುಕೊಳದಲ್ಲಿ ನಿರ್ಭಯವಾಗಿ ಈಜಾಡುತ್ತಾರೆ. ಬ್ರೆಸ್ಟ್‌ಸ್ಟ್ರೋಕ್‌, ಬ್ಯಾಕ್‌ ಸ್ಟ್ರೋಕ್‌ನಲ್ಲಿ ಪರಿಣತಿ ಸಾಧಿಸಿದ್ದಾರೆ. ‘ಫ್ರೀಸ್ಟೈಲ್‌ನಲ್ಲಿ ಅವರು ಇನ್ನೂ ಪಳಗುತ್ತಿದ್ದಾರೆ’ ಎಂದು ರಜನಿ ತಿಳಿಸಿದರು.

61ನೇ ವಯಸ್ಸಿನಲ್ಲೂ ಯುವಜನರನ್ನು ಮೀರಿಸುವಂತೆ ಈಜಾಡುವ ರಜನಿ, 46ನೇ ವಯಸ್ಸಿಗೆ ಈಜು ಕಲಿತರೆಂಬುದು ವಿಶೇಷ. ‘ವಿಶೇಷ ಮಕ್ಕಳಿಗೆ ಈಜು ಕಲಿಸುವುದು ದೇವರು ನನಗೆ ಕೊಟ್ಟ ಅವಕಾಶ ಎಂದೇ ತಿಳಿದುಕೊಂಡಿರುವೆ. ಮಕ್ಕಳ ಫಿಟ್‌ನೆಸ್‌ ಉತ್ತಮವಾಗಬೇಕು. ಭವಿಷ್ಯ ಉಜ್ವಲವಾಗಬೇಕು. ಈಜು ಕಲಿತ ಬಳಿಕ ಅವರ ಕೀಳರಿಮೆ, ಹಿಂಜರಿಕೆ ಮನೋಭಾವ ಕಡಿಮೆಯಾಗಿ ಆತ್ಮವಿಶ್ವಾಸ ಮೂಡಿದೆ’ ಎಂದರು.

14 ವರ್ಷದೊಳಗಿನ ಗುಂಪಿನಲ್ಲಿರುವ, ಎರಡೂ ಕಾಲಿಲ್ಲದ ಗೋಪಿಚಂದ್‌, ಬೆನ್ನಿನ ನರಸಮಸ್ಯೆಯುಳ್ಳ ಯೋಜಿತ್‌, 14 ವರ್ಷ ಮೇಲ್ಪಟ್ಟ ಕಿವುಡ ಮೂಗ ಉತ್ತೇಜ್‌, ಬುದ್ಧಿಮಾಂದ್ಯರಾದ ಪ್ರಶಾಂತ್‌, ನಿಖಿಲ್‌ ಇದುವರೆಗೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟ ಸೇರಿ ವಿವಿಧ ಸ್ಪರ್ಧೆಗಳಲ್ಲಿ 80 ಪದಕಗಳನ್ನು ಗಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು