ಶನಿವಾರ, ಜೂನ್ 6, 2020
27 °C

ಗುಣಮಟ್ಟದ ಶಿಕ್ಷಣ ನೀಡುವ ವಿವಿ ರೂಪಿಸಿದ ಹೆಮ್ಮೆ: ಸಿಯುಕೆ ಕುಲಪತಿ ಮಾತು

ಗಣೇಶ ಡಿ.ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ದೇಶದ 28 ರಾಜ್ಯಗಳ ವಿದ್ಯಾರ್ಥಿಗಳು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದತ್ತ ಮುಖಮಾಡಿದ್ದಾರೆ. ಅಗತ್ಯ ಮೂಲಸೌಲಭ್ಯ ಕಲ್ಪಿಸಿ, ಶೈಕ್ಷಣಿಕ ಗುಣಮಟ್ಟ ಸುಧಾರಿಸಿದ್ದೇ ಇದಕ್ಕೆ ಕಾರಣ. ದೇಶದ ಪ್ರಮುಖ ವಿವಿಗಳ ಸಾಲಿನಲ್ಲಿ ನಮ್ಮ ವಿವಿಯೂ ಸ್ಥಾನ ಪಡೆದಿದೆ ಎಂಬುದೇ ನನಗೆ ಹೆಮ್ಮೆ’

ಆಳಂದ ತಾಲ್ಲೂಕು ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ ಕುಲಪತಿ ಪ್ರೊ.ಎಸ್‌.ಎಂ. ಮಹೇಶ್ವರಯ್ಯ ಅವರು ಹೇಳಿದ ಮಾತಿದು.

ಮಹೇಶ್ವರಯ್ಯ ಅವರ ಅವಧಿ ಮುಗಿದಿದೆ. ಲಾಕ್‌ಡೌನ್‌ ಕಾರಣ ಕೇಂದ್ರ ಸರ್ಕಾರ ಅವರನ್ನು ಮುಂದಿನ ಆದೇಶದ ವರೆಗೆ ಕುಲಪತಿ ಹುದ್ದೆಯಲ್ಲಿ ಮುಂದುವರೆಸಿದೆ.

ವಿವಿಯ ಶೈಕ್ಷಣಿಕ ಪ್ರಗತಿಯ ಬಗ್ಗೆ ಅವರು ಹೇಳಿದ್ದಿಷ್ಟು...

‘ನಾನು ಕುಲಪತಿಯಾಗಿ ಬಂದಾಗ ಕೆಲ ತಿಂಗಳ ಹಿಂದಷ್ಟೇ ವಿವಿ ಸ್ವಂತ ಕ್ಯಾಂಪಸ್‌ಗೆ ಸ್ಥಳಾಂತರಗೊಂಡಿತ್ತು. ಎರಡು ಹಾಸ್ಟೆಲ್‌ಗಳು ಮಾತ್ರ ಇದ್ದವು. ಕಲಬುರ್ಗಿ ನಗರದಲ್ಲಿ ಖಾಸಗಿ ಕಟ್ಟಡಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ದನ ಕಟ್ಟಲೂ ಯೋಗ್ಯವಲ್ಲದ ಒಂದು ಕಟ್ಟಡಕ್ಕೆ ₹80 ಸಾವಿರ ಬಾಡಿಗೆ ಪಾವತಿಸಲಾಗುತ್ತಿತ್ತು. ಸಾರಿಗೆ ಸಂಸ್ಥೆಯ 13 ಬಸ್‌ಗಳ ಸೇವೆ ಪಡೆದು ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿತ್ತು. ಸಾರಿಗೆ ವೆಚ್ಚವೇ ವಾರ್ಷಿಕ ₹2 ಕೋಟಿ ಪಾವತಿಸಬೇಕಿತ್ತು. ಕಟ್ಟಡಗಳ ನಿರ್ಮಾಣ, ಮೂಲಸೌಲಭ್ಯ ಕಲ್ಪಿಸಿಕೊಳ್ಳುವುದು ದೊಡ್ಡ ಸವಾಲಾಗಿತ್ತು’.

‘ಗುತ್ತಿಗೆದಾರರ ಬೆನ್ನುಬಿದ್ದು, ಟಿನ್‌ ಶೆಡ್‌ಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಿದೆ. ವಿದ್ಯಾರ್ಥಿಗಳೂ ಖುಷಿಯಿಂದ ಹೊಸ ಕ್ಯಾಂಪಸ್‌ಗೆ ಬಂದರು. ಸಾರಿಗೆ ವೆಚ್ಚ ಮತ್ತು ಖಾಸಗಿ ಕಟ್ಟಡ ಬಾಡಿಗೆ ₹3.50 ಕೋಟಿ ಉಳಿಸಿದೆ. ಕಟ್ಟಡ ನಿರ್ಮಾಣಕ್ಕೆ ನಿಗದಿಯಾಗಿದ್ದ ಹಣದಲ್ಲಿ ₹82 ಕೋಟಿ ಉಳಿಸಿದ್ದೇನೆ. ಕಾಮಗಾರಿ ವಿಳಂಬಕ್ಕಾಗಿ ₹32 ಕೋಟಿ ದಂಡ ವಸೂಲಿ ಮಾಡಿದ್ದೇನೆ’. 

‘ನೀರಿನ ಸಮಸ್ಯೆ ಬೆಂಬಿಡದೆ ಕಾಡಿತು. ನೀರು ಕೊಡಲಾಗದಿದ್ದರೆ ವಿವಿಯನ್ನು ಮುಚ್ಚಿ ಎಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ಪತ್ರ ಬರೆದಿದ್ದೂ ಆಯಿತು. ಹೇಗೋ ನೀರಿನ ವ್ಯವಸ್ಥೆ ಮಾಡಿಕೊಂಡು ವಿವಿ ನಡೆಸಿದ್ದೂ ಆಯಿತು. ₹3 ಕೋಟಿ ವೆಚ್ಚಮಾಡಿ ಕ್ಯಾಂಪಸ್‌ನಲ್ಲಿಯೇ 25 ಲಕ್ಷ ಲೀಟರ್‌ ಸಾಮರ್ಥ್ಯದ ನೆಲಮಟ್ಟದ ಟ್ಯಾಂಕ್‌ ನಿರ್ಮಿಸಿಕೊಂಡೆವು. ಈಗ 1950 ವಿದ್ಯಾರ್ಥಿಗಳು ಇದ್ದಾರೆ. ನೀರಿನ ಸಮಸ್ಯೆ ಇರದೇ ಹೋಗಿದ್ದರೆ 4 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬಹುದಾಗಿತ್ತು. ಯಾವುದೇ ಸರ್ಕಾರಗಳೂ ನಮ್ಮ ವಿವಿಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಿಲ್ಲ ಎಂಬ ನೋವು ನನಗಿದೆ’.

‘ನಮ್ಮ ವಿವಿಗೆ ‘ನ್ಯಾಕ್’‌ ‘ಬಿ ++’ ಮಾನ್ಯತೆ ನೀಡಿದೆ. ಮುಂದೆ ‘ಎ’ ಗ್ರೇಡ್‌ಗೆ ಹೋಗಲಿದೆ. ಇದು ನಮ್ಮ ಶೈಕ್ಷಣಿಕ ಶಾಧನೆ. ನಮ್ಮ ವಿವಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ. ಐದು ವರ್ಷಗಳ ಹಿಂದೆ 3 ಸಾವಿರ ಅರ್ಜಿಗಳಷ್ಟೇ ಬಂದಿದ್ದವು. ಕಳೆದ ವರ್ಷ ನಮ್ಮಲ್ಲಿ ಪ್ರವೇಶ ಕೋರಿ 65 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು’.

‘50 ಜನ ಕಾಯಂ ಬೋಧಕರು, 100 ಜನ ಅತಿಥಿ ಉಪನ್ಯಾಸಕರು ಇದ್ದರು. ಅತ್ಯುತ್ತಮ ಬೋಧಕರು ಬೇಕು ಎಂಬ ಕಾರಣಕ್ಕೆ ನೇಮಕಾತಿ ಮಾಡಿಕೊಂಡಿದ್ದೇವೆ. ಆ ಪೈಕಿ 70 ಜನರಿಗೆ ನೇಮಕಾತಿ ಆದೇಶ ನೀಡಿದ್ದು, ಇನ್ನು 10 ಜನರಿಗೆ ಕೊಡಬೇಕಿದೆ. ಅರ್ಹರು ಸಿಗದ ಕಾರಣ ಇನ್ನೂ 50 ಹುದ್ದೆಗಳ ಭರ್ತಿ ಸಾಧ್ಯವಾಗಿಲ್ಲ’.

‘₹5 ಕೋಟಿಯ ಸಾಫ್ಟ್‌ವೇರ್‌ ಖರೀದಿಸಿ, ಅಂತರರಾಷ್ಟ್ರೀಯ ಗುಣಮಟ್ಟದ ಇ–ಗ್ರಂಥಾಲಯ ಸ್ಥಾಪಿಸಲಾಗಿದೆ. 6 ಸಭಾಂಗಣ ನಿರ್ಮಿಸಿದ್ದೇವೆ. ವಿಪ್ರೊ ಸಂಸ್ಥೆಯ ₹12 ಕೋಟಿ ನೆರವಿನಲ್ಲಿ ವಿವಿಯ ಇಡೀ ಕ್ಯಾಂಪಸ್‌ಗೆ ವೈಫೈ ವ್ಯವಸ್ಥೆ ಕಲ್ಪಿಸಿದ್ದೇವೆ. ₹23 ಕೋಟಿ ವೆಚ್ಚದಲ್ಲಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಈ ವರ್ಷ ಕೇಂದ್ರ ಸರ್ಕಾರ ₹132 ಕೋಟಿ ಅನುದಾನ ನೀಡಿದೆ. ಇದರಲ್ಲಿ ಅಗತ್ಯ ಉಪಕರಣಗಳ ಖರೀದಿಗೆ ₹45 ಕೋಟಿ ಮೀಸಲಿಡಸಲಾಗಿದೆ. ಕ್ಲಾಸ್‌ರೂಮ್‌ ನಿರ್ಮಾಣ, ₹54 ಕೋಟಿ ವೆಚ್ಚದಲ್ಲಿ ಎರಡು ಹಾಸ್ಟೆಲ್‌ ನಿರ್ಮಾಣಗೊಳ್ಳಲಿವೆ’.

‘ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಆಹ್ವಾನಿಸಿ ಘಟಿಕೋತ್ಸವ ಮಾಡಿದ್ದು, ಗೌರವ ಡಾಕ್ಟರೇಟ್‌ ನೀಡಿಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿದ್ದು. ಹೈದರಾಬಾದ್‌ ಐಐಟಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿವಿಯ ಎಂಜಿನಿಯರಿಂಗ್‌ ವಿಭಾಗಕ್ಕೆ ಹೊಸರೂಪ ನೀಡಿದ ತೃಪ್ತಿ ಇದೆ’ ಎಂದು ಅವರು ಹೇಳಿದರು.

35 ಸಾವಿರ ಮರ 
‘640 ಎಕರೆ ವಿಸ್ತಾರದ ಕ್ಯಾಂಪಸ್‌ನಲ್ಲಿ ₹1 ಕೋಟಿ ವೆಚ್ಚದಲ್ಲಿ ಕೆರೆ ಕಟ್ಟಿಸಿದ್ದೇನೆ. 35 ಸಾವಿರ ಮರಗಳನ್ನು ನೆಟ್ಟಿದ್ದು, ಅವುಗಳಿಗೆ ನಿರಂತರ ನೀರುಣಿಸಿ ಪೋಷಿಸುವ ವ್ಯವಸ್ಥೆ ಮಾಡಿದ್ದೇನೆ. ಇನ್ನು 10 ವರ್ಷ ಕಳೆದರೆ ಈ ಮರಗಳ ಬೇವಿನ ಬೀಜದಿಂದಲೇ ವಿವಿಗೆ ಲಕ್ಷಾಂತರ ಆದಾಯ ಬರಲಿದೆ’ ಎಂದು ಮಹೇಶ್ವರಯ್ಯ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು