ಸೋಮವಾರ, ಮಾರ್ಚ್ 8, 2021
29 °C

ರಾಜ್ಯದಲ್ಲಿ ಅಲ್ಲಲ್ಲಿ ಮಳೆ: ಮೂರು ಸೇತುವೆ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಮಲೆನಾಡು ಸೇರಿದಂತೆ ಎಲ್ಲೆಡೆ ಮುಂಗಾರು ಮಳೆ ಕ್ಷೀಣಿಸಿದೆ. ಆದರೆ, ನೆರೆಯ ಮಹಾ
ರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ಹಾಗೂ ಅದರ ಉಪನದಿಗಳ ಒಳಹರಿವು ಹೆಚ್ಚಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ರಸ್ತೆ ಮಟ್ಟದ ಮೂರು ಸೇತುವೆಗಳ ಮೇಲೆ ನೀರು ಹರಿಯುತ್ತಿದೆ.

ಕೃಷ್ಣಾ ಮತ್ತು ಅದರ ಉಪನದಿಗಳಾದ ದೂಧ್‌ಗಂಗಾ, ವೇದಗಂಗಾ ಮತ್ತು ಪಂಚಗಂಗಾ ನದಿಗಳ ಒಳಹರಿವು ಹೆಚ್ಚಾಗಿದೆ. ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ ಹಾಗೂ ಮಹಾರಾಷ್ಟ್ರದ ದತ್ತವಾಡ ಗ್ರಾಮಗಳ ಮಧ್ಯೆ ಇರುವ ಸೇತುವೆ, ನಿಪ್ಪಾಣಿ ತಾಲ್ಲೂಕಿನ ಭೋಜವಾಡಿ-ಕುನ್ನೂರ ಗ್ರಾಮಗಳ ನಡುವಿನ ಸೇತುವೆ ಹಾಗೂ ಕಾರದಗಾ–ಭೋಜ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಈ ಸೇತುವೆಗಳಿಗೆ ಪರ್ಯಾಯ ಮಾರ್ಗಗಳಿದ್ದು, ಜನರ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ.

ರಾಜಾಪುರ ಬ್ಯಾರೇಜ್‌ನಿಂದ 23 ಸಾವಿರ ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಸೇರುತ್ತಿದೆ. ರಾಜಾಪುರ ಬ್ಯಾರೇಜ್‌ನ ಎಲ್ಲ 36 ಗೇಟ್‌ಗಳನ್ನು ತೆರೆಯಲಾಗಿದೆ.

ಮಳೆ ಕ್ಷೀಣ: ಎರಡು ದಿನಗಳಿಂದ ಸತತ ಸುರಿದ ಮಳೆ ಸೋಮವಾರ ಬಿಡುವು ನೀಡಿತ್ತು. ಬೆಳಗಾವಿ, ಉತ್ತರ ಕನ್ನಡ, ಹುಬ್ಬಳ್ಳಿ ಧಾರವಾಡದಲ್ಲಿ ಬೆಳಿಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣವಿತ್ತು. ವಿಜಯಪುರ ಹಾಗೂ ಜಿಲ್ಲೆಯ ತಿಕೋಟದಲ್ಲಿ ಮಳೆಯಾಗಿದೆ. ಕಾರವಾರದಲ್ಲಿ ಬೆಳಿಗ್ಗೆ 20 ನಿಮಿಷ ಸಾಧಾರಣ ಮಳೆ ಸುರಿದಿದೆ.

ಸಾಧಾರಣ ಮಳೆ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ಮೂಡಿಗೆರೆ, ಕಳಸ, ಎನ್.ಆರ್‌.ಪುರ, ಕೊಪ್ಪ, ಶೃಂಗೇರಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಿಗ್ಗಾ ಮತ್ತು ಕೆರೆಕಟ್ಟೆಯಲ್ಲಿ ತಲಾ 53 ಮಿ.ಮೀ, ಹರಿಹರಪುರದಲ್ಲಿ 50 ಮಿ.ಮೀ ಮಳೆ
ಯಾಗಿದೆ. ತುಂಗಾ ನದಿಯ ಹರಿವು ತುಸು ಏರಿಕೆಯಾಗಿದೆ. ಕೊಟ್ಟಿಗೆಹಾರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹದ ಮಳೆಯಾಗಿದೆ.

ಧಾರಾಕಾರ ಮಳೆ: ಕಲಬುರ್ಗಿಯಲ್ಲಿ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಅಫಜಲಪುರ ಮತ್ತು ಆಳಂದ ತಾಲ್ಲೂಕುಗಳಲ್ಲೂ ಉತ್ತಮ ಮಳೆಯಾಗಿದ್ದು, ಯಾದಗಿರಿಯಲ್ಲಿ ತುಂತುರು ಮಳೆಯಾಯಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು