ಶನಿವಾರ, ಸೆಪ್ಟೆಂಬರ್ 18, 2021
21 °C
ಕೃಷಿ, ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ: ಕೃಷಿ ಹವಾಮಾನ ತಜ್ಞರ ಸಲಹೆ

ಇನ್ನೂ 80 ವರ್ಷ ಅತಿವೃಷ್ಟಿ, ಅನಾವೃಷ್ಟಿ!

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಮುಂದಿನ 80 ವರ್ಷಗಳ ಕಾಲ ಅತಿವೃಷ್ಟಿ ಮತ್ತು ಅನಾವೃಷ್ಟಿ ಕಟ್ಟಿಟ್ಟ ಬುತ್ತಿಯಾಗಿದ್ದು, ಅದಕ್ಕೆ ಪೂರಕವಾಗಿ ಕುಡಿಯುವ ನೀರು ಮತ್ತು ನೀರಾವರಿ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಸಂಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ. 

ಕೃಷಿ ಹವಾಮಾನ ತಜ್ಞ ಡಾ.ಎಂ.ಬಿ.ರಾಜೇಗೌಡ ಹಿಂದಿನ 105 ವರ್ಷಗಳ ಹವಾಮಾನ ಅಂಕಿ– ಅಂಶದ ಆಧಾರದ ಮೇಲೆ 2100 ನೇ ಇಸವಿವರೆಗೆ ಹವಾಮಾನ ಮುನ್ಸೂಚನೆಯ ಅಧ್ಯಯನ  ನಡೆಸಿ,ಪರಿಣಾಮಗಳ  ವಿಶ್ಲೇಷಣೆ ನಡೆಸಿದ್ದಾರೆ.

ಭವಿಷ್ಯದಲ್ಲಿ ಎದುರಾಗುವ ಸಂಕಷ್ಟದ ದಿನಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರಕ್ಕೆ ಕೆಲವು ಸಲಹೆಗಳನ್ನೂ ನೀಡಿದ್ದಾರೆ.

ಜಾಗತಿಕ ತಾಪಮಾನದ ಏರಿಕೆಯಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಮಸ್ಯೆಯು ಮುಂದಿನ ದಿನಗಳಲ್ಲಿ ಸಾಮಾನ್ಯ ಎನಿಸಲಿದೆ. ಇದರಿಂದ ಮುಂದಿನ ವರ್ಷಗಳಲ್ಲಿ ಆಹಾರ ಕೊರತೆಯೂ ತೀವ್ರವಾಗಲಿದೆ. ಬರ, ಭಾರಿ ಮಳೆ, ಭೂಕುಸಿತ ಮತ್ತು ಪ್ರವಾಹ ಮರುಕಳಿಸಲಿದೆ. ಮಳೆಗಾಲದ ಬದಲಾವಣೆಯಿಂದ ಹರಿದು ಹೋಗುವ ಮಳೆ ನೀರಿನಲ್ಲಿ ವ್ಯತ್ಯಾಸ, ಮಣ್ಣಿನಲ್ಲಿ ತೇವಾಂಶ ಕೊರತೆ ಮುಂತಾದ ಕಾರಣಗಳಿಂದ ಬೆಳೆ ಇಳುವರಿ ಕುಂಠಿತವಾಗುತ್ತದೆ ಎಂದು ರಾಜೇಗೌಡ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿಯೂ ಮುಂಬರುವ ವರ್ಷಗಳಲ್ಲಿ ಭಾರಿ ಮಳೆ ಮುಂದುವರಿಯುವುದರಿಂದ, ಅಲ್ಲಿನ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತದೆ. ಉತ್ತರ ಕರ್ನಾಟಕದ ಕೆಲವು ನದಿಗಳಿಗೆ ಹರಿದು ಬರುವ ಭಾರಿ ಪ್ರಮಾಣದ ನೀರನ್ನು ತಡೆದುಕೊಳ್ಳುವಷ್ಟು ಆಳ, ಅಗಲ ಮತ್ತು ಸುಲಭವಾಗಿ ಹರಿದು ಹೋಗಲು ಇಳಿಜಾರು ವ್ಯವಸ್ಥೆ ಇಲ್ಲದಿರುವುದರಿಂದ ಸಮಸ್ಯೆಗಳು ಸೃಷ್ಟಿ ಆಗುತ್ತವೆ ಎಂದರು.

ಪರಿಹಾರ ಮಾರ್ಗಗಳೇನು?: ಮಹಾರಾಷ್ಟ್ರ ನಮ್ಮ ರಾಜ್ಯದ ನದಿಗಳಿಗೆ ನೀರು ಬಿಡುವ ಸ್ಥಳಗಳ ಸಮೀಪದಲ್ಲೇ ಕಾಲುವೆಗಳನ್ನು ನಿರ್ಮಿಸಿ ವಿವಿಧ ಜಿಲ್ಲೆಗಳ ಸಾವಿರಾರು ಕೆರೆಗಳನ್ನು ತುಂಬಿಸುವ ಜಾಲಗಳನ್ನು ರೂಪಿಸಬೇಕು. ಗುರುತ್ವಾಕರ್ಷಣೆಯಿಂದ ನೀರು ಹರಿಸಲು ಸಾಧ್ಯವಾಗದೇ ಇದ್ದರೆ, ಅಂತಹ ಕಡೆಗಳಲ್ಲಿ ಏತ ನೀರಾವರಿ ವ್ಯವಸ್ಥೆ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಕಾಲುವೆ ಜಾಲಗಳಿಂದ ಪ್ರಯೋಜನ

l ನೆರೆಯ ರಾಜ್ಯಗಳ ನದಿಗಳ ನೀರು ನಮ್ಮ ರಾಜ್ಯ ಪ್ರವೇಶಿಸುವುದಕ್ಕೆ ಮೊದಲೇ ಕಾಲುವೆಗಳ ಮೂಲಕ ಬೇರೆಡೆಗೆ ಹರಿಸುವುದರಿಂದ ಮುಂದೆ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ತಗ್ಗುತ್ತದೆ. ಪ್ರವಾಹ ಉಂಟಾಗುವುದಿಲ್ಲ.

l ಕಾಲುವೆಗಳ ಜಾಲದ ಮೂಲಕ ನೀರನ್ನು ಕೆರೆಗೆ ತುಂಬಿಸುವುದರಿಂದ ಕೃಷಿ ಮತ್ತು ಕುಡಿಯುವ ಉದ್ದೇಶಕ್ಕೆ ಬಳಸಬಹುದು.

l ಸಾವಿರಾರು ಕೆರೆಗಳನ್ನು ನದಿ ನೀರಿನಿಂದ ತುಂಬಿಸುವುದರಿಂದ ಸುತ್ತಲಿನ ಭೂಮಿಯ ಅಂತರ್ಜಲ ಮಟ್ಟವೂ ವೃದ್ಧಿಯಾಗುತ್ತದೆ. ಹೀಗೆ ಅಂತರ್ಜಲ ಮಟ್ಟ ಏರುವುದರಿಂದ ನಂತರದ 3– 4 ವರ್ಷಗಳು ಹವಾಮಾನ ವೈಪರೀತ್ಯದಿಂದ ಮಳೆ ಕಡಿಮೆ ಆದರೂ ಅಂತರ್ಜಲವನ್ನು ಬಳಕೆ ಮಾಡಬಹುದು.

l ನಿರಂತರ ಮೂರು ನಾಲ್ಕು ವರ್ಷಗಳು ಬರಗಾಲ ಇದ್ದರೂ ಆ ಬಳಿಕ ಒಂದೆರಡು ವರ್ಷಗಳ ಅತಿವೃಷ್ಟಿಯಿಂದ ನೀರು ಅಧಿಕ ಪ್ರಮಾಣದಲ್ಲಿ ಸಿಗುತ್ತದೆ. ಅದನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಇದರಿಂದ ಕೃಷಿಯಲ್ಲೂ ಸಮತೋಲನ ಸಾಧಿಸಬಹುದು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು