ಸೋಮವಾರ, ಸೆಪ್ಟೆಂಬರ್ 20, 2021
29 °C

ಮಳೆ, ಗಾಳಿ, ಸಿಡಿಲಿಗೆ ಹಲವೆಡೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನವರೆಗೆ ತುಮಕೂರು, ಮಂಡ್ಯ ಹಾಗೂ ದಾವಣಗೆರೆ ಜಿಲ್ಲೆಯ ಕೆಲ ಕಡೆ ಮಳೆ ಗಾಳಿ, ಸಿಡಿಲ ಅಬ್ಬರಕ್ಕೆ ಮರಗಳು ಉರುಳಿದ್ದು, ಕೋಳಿ ಫಾರಂಗೆ ಹಾನಿಯಾಗಿದ್ದು, ಸಿಡಿಲಿಗೆ ಒಂದು ಮನೆಛಿದ್ರವಾಗಿದೆ.

ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆಯ ಇಂದ್ರಬೆಟ್ಟ ಗ್ರಾಮದ ಸಾಹಿತಿ ಕುಮಾರ್ ಅವರ ಮನೆಗೆ ಸಿಡಿಲು ಬಡಿದು ಮನೆ ಬಿದ್ದಿದೆ. ಮನೆಯಲ್ಲಿದ್ದವರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಪಕ್ಕದ ಮನೆಯರಿಗೆ ಅಲ್ವಸ್ವಲ್ಪ ಗಾಯಗಳಾಗಿವೆ ಎಂದು ತಿಳಿದಿದೆ.

ತಿಪಟೂರು ತಾಲ್ಲೂಕಿನ ಆಲ್ಬೂರು ಅಣಪನಹಳ್ಳಿ ಗ್ರಾಮದ ಮಲ್ಲೇಶ್ ಅವರ ಕೋಳಿ ಫಾರಂ ಮೇಲೆ ಹಲಸಿನ ಮರ ಬಿದ್ದು, ಎರಡು ಸಾವಿರಕ್ಕೂ ಹೆಚ್ಚು ಕೋಳಿಗಳು ಸತ್ತಿವೆ. ಮಧುಗಿರಿ ತಾಲ್ಲೂಕು ಗೂಲಹಳ್ಳಿ ಕಟ್ಟೆ ಏರಿಯಲ್ಲಿ ರಂಧ್ರ ಬಿದ್ದು ಮಳೆ ನೀರು ಪೋಲಾಗಿದೆ. ಅದೇ ರೀತಿ ಚಿಕ್ಕಮಾಲೂರು ಗ್ರಾಮದ ಮಾಲೇಗೌಡ ಎಂಬುವರ ಮನೆ ಸಿಮೆಂಟ್ ಶೀಟ್ ಮಳೆಗಾಳಿಗೆ ಹಾರಿವೆ. ಇದೇ ತಾಲ್ಲೂಕಿನ ಪುರವರ ಹೋಬಳಿಯ ನಾಗರಾಜು ಎಂಬುವರ ದನದ ಕೊಟ್ಟಿಗೆಗೆ ಸಿಡಿಲು ಬಡಿದು ಬೆಂಕಿಗೆ ಆಹುತಿಯಾಗಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಕೆಂಚೇಗೌಡನಕೊಪ್ಪಲಿನ ಲೋಕೇಶ್ ಎಂಬುವವರ ನಾಟಿ ಕೋಳಿ ಫಾರಂ ಕುಸಿದು ಬಿದ್ದಿದೆ.

ಫಾರಂನಲ್ಲಿ ಸಾಕಿದ್ದ ಸಾವಿರ ನಾಟಿ ಕೋಳಿ ಮರಿಗಳು ಸತ್ತಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ತೆಂಗಿನ ಮರಗಳು ಉರುಳಿವೆ.

ಪಟ್ಟಣದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ರಾತ್ರಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೆಲವೆಡೆ ಹುಲ್ಲಿನ ಮೆದೆಗಳು ಹಾಗೂ ಮನೆಯ ಚಾವಣಿ, ಹೆಂಚುಗಳು ಹಾರಿ ಹೋಗಿವೆ.

ಮನೆ ಗೋಡೆ ಕುಸಿತ: ಮಳವಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿದ ಮಳೆಯಿಂದಾಗಿ ಮನೆ ಗೋಡೆ, ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ರಾಗಿ ಬೊಮ್ಮನಹಳ್ಳಿಯಲ್ಲಿ ನಂಜುಂಡಶೆಟ್ಟಿ ಎಂಬುವರ ಮನೆ ಗೋಡೆ ಕುಸಿದಿದೆ. ಕಿರುಗಾವಲು ಸಮೀಪದ ಕೊದೇನಕೊಪ್ಪಲು ಗ್ರಾಮದಲ್ಲಿ ವಿದ್ಯುತ್ ಕಂಬ ಬಿದ್ದಿದೆ.

ಹಲಗೂರು ಸಮೀಪದ ಕುಂತೂರು ಗ್ರಾಮದಲ್ಲಿ ತೆಂಗಿನಮರವೊಂದು ಅರ್ಧಕ್ಕೆ ತುಂಡಾಗಿ ಪಕ್ಕದಲ್ಲೇ ಇದ್ದ ಪುಟ್ಟೇಗೌಡ ಎಂಬುವರ ಮನೆ ಮೇಲೆ ಬಿದ್ದಿದ್ದು, ಚಾವಣಿ ಜಖಂಗೊಂಡಿದೆ. ಕುಂದೂರು ಗ್ರಾಮದ ಭರತ್ ಎಂಬುವರು ಎರಡು ಎಕರೆ ಬಾಳೆ ತೋಟ ನಾಶವಾಗಿದೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಶುರುವಾದ ಮಳೆ ಬುಧವಾರ ಬೆಳಗಿನ ಜಾವದ ತನಕ ಹನಿಯಿತು. ರಾಯಾಪುರ ಗ್ರಾಮದ ಸರ್ಕಾರಿ ಪಶು ಚಿಕಿತ್ಸಾ ಕೇಂದ್ರದ ಔಷಧ ಉಗ್ರಾಣಕ್ಕೆ ಮಳೆ ನೀರು ನುಗ್ಗಿ ಔಷಧಗಳು ಹಾಳಾಗಿವೆ. ದೇವಸಮುದ್ರ ಹೋಬಳಿಯ ಹಲವು ಗ್ರಾಮಗಳ ತೋಟಗಳಲ್ಲಿ ನೀರು ನಿಂತುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು