ಶುಕ್ರವಾರ, ಆಗಸ್ಟ್ 6, 2021
22 °C
ಕೆಲವೆಡೆ ಸಂಚಾರಕ್ಕೆ ಅಡ್ಡಿ

ರಾಜ್ಯದ ವಿವಿಧೆಡೆ ಭಾರಿ ಮಳೆ: ಅಡಿಕೆ, ತೆಂಗಿನ ಮರಗಳು ನೆಲಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ವಿವಿಧ ಭಾಗದಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ಬೆಳೆಗೆ ಹಾನಿಯಾಗಿದೆ. 

ಧಾರವಾಡ, ಬಳ್ಳಾರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿಯಲ್ಲಿ ಸೋಮವಾರ ಭಾರಿ ಮಳೆಯಾಗಿದೆ.

ಬೆಳಗಾವಿಯ ಬೈಲಹೊಂಗಲದಲ್ಲಿ ಭಾನುವಾರ ರಾತ್ರಿಯಿಡಿ ಸುರಿದ ಮಳೆ ಸೋಮವಾರವೂ ಮುಂದುವರಿಯಿತು. ಗೋಕಾಕದ ಲಕ್ಷ್ಮಿ ಬಡಾವಣೆಯ ಮುಖ್ಯ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮೇಲೆ ಮಳೆ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು.

ಶುಕ್ರವಾರ ರಾತ್ರಿಯಿಂದ ‌ಸೋಮವಾರ ಬೆಳಗಿನ ಜಾವದವರೆಗೆ ಕಲಬುರ್ಗಿ ಜಿಲ್ಲೆಯಲ್ಲಿ ಸರಾಸರಿ 10 ಮಿ.ಮೀ. ಮಳೆ ಬಿದ್ದಿದ್ದು, ಕಲಬುರ್ಗಿ ತಾಲ್ಲೂಕಿನ ಫರಹತಾಬಾದ್‌ನಲ್ಲಿ 25 ಮಿ.ಮೀ., ಚಿತ್ತಾಪುರ ಹೋಬಳಿಯಲ್ಲಿ 20 ಮಿ.ಮೀ. ಮಳೆ ಸುರಿದಿದೆ. ಸೇಡಂ ತಾಲ್ಲೂಕಿನಲ್ಲಿಯೂ ಉತ್ತಮ ಮಳೆಯಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರದಲ್ಲಿ ಉತ್ತಮ ಮಳೆಯಾಗಿದೆ. ಸುರಪುರದಲ್ಲಿ 31.4 ಮಿ.ಮೀ.,ಶಹಾಪುರದಲ್ಲಿ 20.2 ಮಿ.ಮೀ.,  ನಾರಾಯಣಪುರ 13.8, ಕೆಂಭಾವಿಯಲ್ಲಿ 10 ಮಿ.ಮೀ ಮಳೆ ಸುರಿದಿದೆ.

ಕೊಡಗು ಜಿಲ್ಲೆಯಲ್ಲಿ ತುಂತುರು ಮಳೆಯಾಗಿದೆ. ಬಕ್ಕ, ಚೇರಂಬಾಣೆ, ಭಾಗಮಂಡಲ, ತಲಕಾವೇರಿ, ನಾಪೋಕ್ಲು ಭಾಗದಲ್ಲಿ ಜೋರು ಮಳೆಯಾಗಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಹೊತ್ತು ಧಾರಾಕಾರ ಮಳೆಯಾಗಿದೆ. 

ಶಿವಮೊಗ್ಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಜೋರು ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣ ಸೇರಿ ತಾಲ್ಲೂಕಿನ ಕಸಬಾ ಹೋಬಳಿಯ ಹಲವು ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲೂ ಧಾರಾಕಾರ ಮಳೆಯಾ
ಗಿದ್ದು, ಭಾನುವಾರ ರಾತ್ರಿ ಸುರಿದ ಬಿರುಗಾಳಿ, ಮಳೆಗೆ ಹಲವೆಡೆ ಬೆಳೆಹಾನಿಯಾಗಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಭಾನುವಾರ ತಡ ರಾತ್ರಿ ಚದುರಿದಂತೆ ಮಳೆಯಾಗಿದೆ. ಮಳೆಗೆ ಅಡಿಕೆ, ಬಾಳೆ ಹಾಗೂ ಹಲವಾರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬಸವಾಪಟ್ಟಣ ಸಮೀಪದ ಕಾರಿಗನೂರಿನಲ್ಲಿ ಭಾನುವಾರ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ಸುಮಾರು 250 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಸಹಸ್ರಾರು ಅಡಿಕೆ, ಬಾಳೆ, ತೆಂಗು ಮತ್ತು ತೇಗದ ಮರಗಳು ನೆಲಕ್ಕುರುಳಿವೆ.  ನಾಲ್ಕು ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಕಾರಿಗನೂರು ಕ್ರಾಸ್‌ ಸಮೀಪದ ಬೆಲ್ಲ ತಯಾ
ರಿಕಾ ಘಟಕದ ಚಾವಣಿ ಹಾರಿ ಹೋಗಿದೆ.

ಕರಾವಳಿಯಲ್ಲಿ ಉತ್ತಮ ಮಳೆ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸರಾಸರಿ 6.86 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಭಾರಿ ಮಳೆಗೆ ಭೂ ಕುಸಿತ ಕಂಡಿದ್ದ ಬೆಳ್ತಂಗಡಿಯಲ್ಲಿ ಸೋಮವಾರ 12.3 ಮಿ.ಮೀ. ಮಳೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದ್ದು, ಆಗಾಗ ತುಂತುರು ಮಳೆ ಸುರಿಯಿತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆ ಹಾರ ಭಾಗದಲ್ಲಿ ನಸುಕಿನಿಂದಲೂ ಧಾರಾಕಾರವಾಗಿ ಸುರಿದಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು