ಶನಿವಾರ, ಏಪ್ರಿಲ್ 17, 2021
32 °C
ರೋಟರಿ ನೆರವಿನಲ್ಲಿ ಶಿರಸಿ ಎಂ.ಇ.ಎಸ್. ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ

ವಿದ್ಯಾರ್ಥಿಗಳೀಗ ಜಲರಾಶಿ ಮಾಲೀಕರು!

ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನಲ್ಲಿ ಇತ್ತೀಚೆಗೆ ಧಾರಾಕಾರ ಮಳೆ ಸುರಿಯುತ್ತಿದೆ. ಮನೆಯಂಗಳ, ರಸ್ತೆ, ಚರಂಡಿ ಎಲ್ಲೆಂದರಲ್ಲಿ ನೀರು ಧಾರೆಯಾಗಿ ಹರಿದು ಹೋಗುವ ದೃಶ್ಯ ಕಾಣಸಿಗುತ್ತದೆ. ಆದರೆ, ಇಲ್ಲಿ ಮಾತ್ರ ಬೀಳುವ ಮಳೆ ನೀರು ಓಡುವುದಿಲ್ಲ, ದೊಡ್ಡ ದೊಡ್ಡ ಟ್ಯಾಂಕ್‌ಗಳಲ್ಲಿ ಸಂಗ್ರಹವಾಗುತ್ತದೆ !

ಹೌದು, ಶಿರಸಿಯ ಎಂಇಎಸ್ ಶಿಕ್ಷಣ ಸಂಸ್ಥೆಯು ಜಲರಾಶಿಯ ಮಾಲೀಕನಾಗಿ ಬೀಗುತ್ತಿದೆ. ವಿದ್ಯಾರ್ಥಿನಿಯರ ನಾಲ್ಕು ಹಾಸ್ಟೆಲ್‌ಗಳ ಆವರಣದಲ್ಲಿ ಸ್ಥಳೀಯ ರೋಟರಿ ಸಂಸ್ಥೆಯು ಅಂತರರಾಷ್ಟ್ರೀಯ ರೋಟರಿ ಸಂಸ್ಥೆ, ವಿವಿಧೆಡೆಯ ರೋಟರಿ ಕ್ಲಬ್‌ಗಳ ಸಹಕಾರದಲ್ಲಿ ₹58 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಬೃಹತ್ ಮಳೆ ನೀರು ಸಂಗ್ರಹ ವ್ಯವಸ್ಥೆಯಲ್ಲಿ ಈಗ ಸುಮಾರು 6.5 ಲಕ್ಷ ಲೀಟರ್ ನೀರು ಶೇಖರಣೆಯಾಗಿದೆ.

‘ಪ್ರತಿವರ್ಷ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಹಾಸ್ಟೆಲ್ ಮಕ್ಕಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ಜತೆಗೆ, ಮಕ್ಕಳಲ್ಲಿ ಜಲ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಯ ಆವರಣದಲ್ಲಿಯೇ ಈ ವ್ಯವಸ್ಥೆ ಮಾಡಲಾಗಿದೆ. ಮಳೆ ನೀರು ಸಂಗ್ರಹ, ಜಲ ಮರುಪೂರಣ ಮತ್ತು ನೀರಿನ ಮಿತಬಳಕೆಯ ಬಗ್ಗೆ ಅರಿವು ಮೂಡಿಸುವುದು ಯೋಜನೆಯ ಮುಖ್ಯ ಉದ್ದೇಶ’ ಎಂದು ಯೋಜನೆ ಮಂಜೂರುಗೊಳ್ಳುವ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾಗಿದ್ದ ಪ್ರವೀಣ ಕಾಮತ್ ಮಾಹಿತಿ ನೀಡಿದರು.

‘ಬಾವಿಯ ಸಮೀಪ 10 ಇಂಗು ಗುಂಡಿಗಳು, 40 ಲಕ್ಷ ಲೀಟರ್ ಸಾಮರ್ಥ್ಯದ ಮೂರು ಸಣ್ಣ ಕೆರೆಗಳನ್ನು ಸಹ ನಿರ್ಮಿಸಲಾಗಿದೆ. ಇದರಿಂದ ಸುತ್ತಲಿನ 2–3 ಕಿ.ಮೀ ವ್ಯಾಪ್ತಿಯ ನಿವಾಸಿಗಳಿಗೆ ಬೇಸಿಗೆಯಲ್ಲಿ ಜಲದ ಅಭಾವ ಎದುರಾಗಲಾರದು. ಭೂವಿಜ್ಞಾನಿ ಡಾ.ಜಿ.ವಿ. ಹೆಗಡೆ, ಅಮೆರಿಕ ರೋಟರಿ ಕ್ಲಬ್‌ ಪ್ರಮುಖ ಡಾ.ವಸಂತ ಪ್ರಭು, ಆನಂದ ಕುಲಕರ್ಣಿ, ಸ್ಥಳೀಯ ಕ್ಲಬ್ ಸದಸ್ಯರ ಮಾರ್ಗದರ್ಶನ ಹಾಗೂ ನೆರವಿನಿಂದ ಇಷ್ಟು ದೊಡ್ಡ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗಿದೆ’ ಎಂದರು.

‘ನಾಲ್ಕು ಕಟ್ಟಡಗಳ ಚಾವಣಿ ಮೇಲೆ ಬೀಳುವ ಮಳೆ ನೀರು, 5,000 ಲೀಟರ್ ಸಾಮರ್ಥ್ಯದ 126 ಪ್ಲಾಸ್ಟಿಕ್ ಟ್ಯಾಂಕ್ ಹಾಗೂ ನಾಲ್ಕು ಸಿಮೆಂಟ್ ಟ್ಯಾಂಕ್‌ಗಳಲ್ಲಿ ಸಂಗ್ರಹವಾಗುತ್ತದೆ. ಮಿಕ್ಕಿ ಹರಿಯುವ ನೀರನ್ನು ತೆರೆದ ಬಾವಿಗೆ ಮರುಪೂರಣ ಮಾಡಲಾಗುತ್ತದೆ. ಹಾಸ್ಟೆಲ್‌ಗಳಲ್ಲಿರುವ ಸುಮಾರು 550 ಮಕ್ಕಳು ಮಳೆಗಾಲದಲ್ಲಿ ಶುದ್ಧೀಕರಣಗೊಂಡ ಮಳೆ ನೀರನ್ನು ದೈನಂದಿನ ಚಟುವಟಿಕೆಗೆ ಬಳಕೆ ಮಾಡಬಹುದು. ಟ್ಯಾಂಕ್‌ಗಳಲ್ಲಿ ಶೇಖರಣೆಯಲ್ಲಿರುವ ನೀರು ಬೇಸಿಗೆಯ ಎರಡು ತಿಂಗಳ ನೀರಿನ ಬೇಡಿಕೆಯನ್ನು ನಿವಾರಿಸುತ್ತದೆ’ ಎಂದು ಯೋಜನೆಯ ತಂತ್ರಜ್ಞ ಅರುಣ ನಾಯಕ ತಿಳಿಸಿದರು.

* ಆರು ತಿಂಗಳಲ್ಲಿ ಪೂರ್ಣಗೊಂಡ ಮಳೆ ನೀರು ಸಂಗ್ರಹ ಕಾಮಗಾರಿಯ ಉದ್ಘಾಟನೆ ಜುಲೈ 14ರಂದು ನಡೆಯಲಿದೆ
-ಪ್ರವೀಣ ಕಾಮತ್, ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು