ಬಡಗಲಪುರ ನಾಗೇಂದ್ರ ರೈತ ಸಂಘದ ಅಧ್ಯಕ್ಷ

7
ಕೆ.ಟಿ.ಗಂಗಾಧರ ಅನುಪಸ್ಥಿತಿಯಲ್ಲಿ ನಿರ್ಣಯ, ಸಭೆಯಲ್ಲಿ ಗದ್ದಲ

ಬಡಗಲಪುರ ನಾಗೇಂದ್ರ ರೈತ ಸಂಘದ ಅಧ್ಯಕ್ಷ

Published:
Updated:
Prajavani

ಚಿತ್ರದುರ್ಗ: ರೈತ ಮುಖಂಡ ಕೆ.ಟಿ.ಗಂಗಾಧರ ಬೆಂಬಲಿಗರ ವಿರೋಧದ ನಡುವೆಯೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೂತನ ಅಧ್ಯಕ್ಷರಾಗಿ ಬಡಗಲಪುರ ನಾಗೇಂದ್ರ ಅವರನ್ನು ರಾಜ್ಯ ಕಾರ್ಯಕಾರಿಣಿ ಮಂಗಳವಾರ ಆಯ್ಕೆ ಮಾಡಿತು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ನಾಯಕರ ಆಯ್ಕೆಗೆ ಸಹಮತ ವ್ಯಕ್ತಪಡಿಸಿ ಗಂಗಾಧರ ಅವರು ನೀಡಿದ ಪತ್ರವನ್ನು ಆಧರಿಸಿ ಈ ಪ್ರಕ್ರಿಯೆ ನಡೆಯಿತು. ಮುಂದಿನ ಏಳು ತಿಂಗಳ ಅವಧಿಗೆ ನಾಗೇಂದ್ರ ಅವರು ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಅಧ್ಯಕ್ಷರ ಬದಲಾವಣೆಗೆ ಜ.5ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನವಾಗಿತ್ತು. ಆಯ್ಕೆಯ ಅಧಿಕಾರವನ್ನು ರಾಜ್ಯ ಪದಾಧಿಕಾರಿಗಳಿಗೆ ನೀಡಲಾಗಿತ್ತು. ಪದಾಧಿಕಾರಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ರಾಜ್ಯ ಕಾರ್ಯಕಾರಣಿ ಅನುಮೋದನೆ ನೀಡಿತು. ಇದರಲ್ಲಿ 26 ಜಿಲ್ಲೆಯ ಪ್ರತಿನಿಧಿಗಳು, ಕಾಯಂ ಆಹ್ವಾನಿತರು ಹಾಗೂ ರೈತ ಸಂಘದ ವರಿಷ್ಠರು ಹಾಜರಿದ್ದರು.

ಗಂಗಾಧರ ಅವರ ಅನುಪಸ್ಥಿತಿಯಲ್ಲಿ ಅಧ್ಯಕ್ಷರ ಬದಲಾವಣೆಗೆ ಕೈಗೊಂಡ ನಿರ್ಣಯಕ್ಕೆ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದರು. ರೈತ ಸಂಘದ ವರಿಷ್ಠರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಇದರಿಂದ ಸಭೆಯಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

‘ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ನಡೆದ ರೈತ ಚಳವಳಿ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೀಳಾಗಿ ಪ್ರತಿಕ್ರಿಯಿಸಿದ್ದರು. ರೈತ ಮಹಿಳೆಗೆ ಅವಮಾನಿಸಿದ್ದು ಕಾರ್ಯಕರ್ತರನ್ನು ಕೆರಳಿಸಿತ್ತು. ಹೀಗಾಗಿ, ಕಬ್ಬು ಬೆಳಗಾರರ ಸಮಸ್ಯೆಗೆ ಸಂಬಂಧಿಸಿದಂತೆ ಚರ್ಚಿಸಲು ಮುಖ್ಯಮಂತ್ರಿ ಕರೆದಿದ್ದ ಸಭೆ ಬಹಿಷ್ಕರಿಸಲು ತೀರ್ಮಾನಿಸಲಾಗಿತ್ತು. ಸಂಘದ ನಿರ್ಧಾರವನ್ನು ಉಲ್ಲಂಘಿಸಿ ಗಂಗಾಧರ ಅವರು ಸಭೆಯಲ್ಲಿ ಪಾಲ್ಗೊಂಡಿದ್ದೇ ಬದಲಾವಣೆಗೆ ಕಾರಣ’ ಎಂದು ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಾಗೇಂದ್ರ ಅವರಿಂದ ತೆರವಾದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಿತ್ರದುರ್ಗದ ನುಲೆನೂರು ಶಂಕರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಮಂಗಳೂರು ಜಿಲ್ಲೆಯ ರವಿಕಿರಣ್‌ ಪೂಣಚ ಹಾಗೂ ರಾಯಚೂರಿನ ಸೂರಯ್ಯ ಸ್ವಾಮಿ ಆರ್‌.ಎಸ್‌.ಮಠ ಅವರನ್ನು ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಲಾಯಿತು.

ಇದನ್ನೂ ಓದಿ: ಚುಕ್ಕಿ ನಂಜುಂಡಸ್ವಾಮಿ ರಾಜೀನಾಮೆ ಘೋಷಣೆ

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !