ಗುರುವಾರ , ಜುಲೈ 7, 2022
23 °C

ರಮೇಶ್ ಕುಮಾರ್ ನಡೆ, ನುಡಿಯೇ ನಾಟಕ: ಎಚ್‌.ವಿಶ್ವನಾಥ್‌ ಲೇವಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಸಂತೆಗೆ ಹೋಗಿ ಕುರಿ ಹಿಡಿದುಕೊಂಡು ಕ್ಯಾಮೆರಾಕ್ಕೆ ಫೋಸು ಕೊಡುವ ರಮೇಶ್‌ಕುಮಾರ್‌ದು ಬರೀ ನಾಟಕ. ಅವರ ನಡೆ ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ ಎಂಬಂತಾಗಿದೆ’ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಲೇವಡಿ ಮಾಡಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಸ್ಲಿಮರು ಮೋದಿಯ ಎದೆಗೆ ಒದ್ದು ಹೊರಗೆ ಹಾಕಬೇಕೆಂದು ರಮೇಶ್‌ಕುಮಾರ್‌ ಹೇಳಿರುವುದು ಶೋಭೆಯಲ್ಲ. ಅವರ ಹೇಳಿಕೆ ಜನಾಂಗೀಯ ಗಲಭೆಗೆ ಪ್ರಚೋದನೆ ನೀಡುತ್ತದೆ’ ಎಂದು ಕಿಡಿಕಾರಿದರು.

‘ರಮೇಶ್‌ಕುಮಾರ್‌ ಜನಾಂಗಗಳ ನಡುವೆ ಘರ್ಷಣೆಯಾಗುವಂತೆ ಮಾತನಾಡಿರುವುದು ಖಂಡನೀಯ. ಪಕ್ಷಾಂತರದ ಕಾರಣಕ್ಕೆ 17 ಮಂದಿಯನ್ನು ಅಂತರಪಿಶಾಚಿ ಮಾಡಿದ್ದ ಈ ಮನುಷ್ಯ ಜಾತ್ಯಾತೀತತೆ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್‌ನಲ್ಲೇ ಇದ್ದು, ಆ ಪಕ್ಷದ ಋಣ ತಿಂದು ಕೋಲಾರದಲ್ಲಿ ದಲಿತ ಅಭ್ಯರ್ಥಿಯನ್ನು ಸೋಲಿಸಿದ ರಮೇಶ್‌ಕುಮಾರ್‌ಗೆ ಪಕ್ಷಾಂತರ ಕಾಯ್ದೆ ಅನ್ವಯವಾಗುವುದಿಲ್ಲವೇ?’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸುಖದಾಯಕವಾಗಿಲ್ಲ. ₹ 4 ಲಕ್ಷ ಕೋಟಿ ಸಾಲ ಇದೆ. ಮುಖ್ಯವಾಗಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಬಜೆಟ್ ಜನಪ್ರಿಯವಾಗಿದ್ದರೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕೆ ಮಾಡಿರುವುದರಲ್ಲಿ ಅರ್ಥವಿಲ್ಲ. ನಾನು ಚುನಾವಣೆ ಹೇಗೆ ಮಾಡಿದ್ದೀನಿ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಆದರೆ, ಅವರು ಮಂಡ್ಯದಲ್ಲಿ ಲೋಕಸಭೆ ಚುನಾವಣೆ ಹೇಗೆ ನಡೆಸಿದರೆಂದು ಎಲ್ಲರಿಗೂ ಗೊತ್ತಿದೆ’ ಎಂದರು.

‘ಕುಮಾರಸ್ವಾಮಿ ಅವರು ಮಗನ ಆರತಕ್ಷತೆ ಕಾರ್ಯಕ್ರಮಕ್ಕೆ ಥಾಯ್ಲೆಂಡ್‌ ದೇಶದಿಂದ ಹಾರ ತರಿಸಿದ್ದಾರೆ. 50 ಎಕರೆಯಲ್ಲಿ ಸೆಟ್ ನಿರ್ಮಿಸಿ ಮದುವೆ ಮಾಡಲು ಹೊರಟಿದ್ದಾರೆ. ಅವರು ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು ಎಂಬುದನ್ನು ಮೊದಲು ಕಲಿಯಲಿ’ ಎಂದು ವಾಗ್ದಾಳಿ ನಡೆಸಿದರು.

ಅನಿರೀಕ್ಷಿತ ಬೆಳವಣಿಗೆ: ‘ಬಿಜೆಪಿ ಅಧಿಕಾರಕ್ಕೆ ಬರಲು ನಾನೂ ಕಾರಣಕರ್ತ. ಜೂನ್ ನಂತರ ನನ್ನನ್ನು ವಿಧಾನ ಪರಿಷತ್‌ ಸದಸ್ಯನಾಗಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಭರವಸೆ ಕೊಟ್ಟಿದ್ದರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ 6 ತಿಂಗಳ ನಂತರ ವಿಧಾನ ಪರಿಷತ್‌ಗೆ ಆಯ್ಕೆಯಾಗಬೇಕಿತ್ತು. ಆದರೆ, ಪಕ್ಷದ ನಿರ್ಧಾರದಂತೆ ಅವರನ್ನು ಸದಸ್ಯರಾಗಿ ಮಾಡಲಾಗಿದೆ’ ಎಂದು ಮಾಜಿ ಸಚಿವ ಆರ್‌.ಶಂಕರ್ ಹೇಳಿದರು

‘ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಜೂನ್‌ ನಂತರ ರಾಜ್ಯ ರಾಜಕಾರಣ ಗರಿಗೆದರಲಿದ್ದು, ಅನಿರೀಕ್ಷಿತ ಬೆಳವಣಿಗೆಗಳು ನಡೆಯಲಿವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು