ಭಾನುವಾರ, ಸೆಪ್ಟೆಂಬರ್ 26, 2021
21 °C

12 ಸಲ ಸೋತ ಆರ್‌ಸಿಬಿನೇ ಬಿಡ್ಲಿಲ್ಲಾ, ಜೆಡಿಎಸ್‌ ಬಿಡ್ತೀವಾ?: ಘೋಷವಾಕ್ಯ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಒಂದೂ ಸ್ಥಾನವನ್ನು ಗೆಲ್ಲದೇ ಹೀನಾಯವಾಗಿ ಸೋತಿರುವ ಹೊತ್ತಲೇ, ಪಕ್ಷದ ಕಾರ್ಯಕರ್ತರು ಘೋಷ ವಾಕ್ಯವೊಂದನ್ನು ಸಾಮಾಜಿಕ ತಾಣದಲ್ಲಿ ವೈರಲ್‌ ಮಾಡಿದ್ದಾರೆ. 

ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೊರೆದಿದ್ದ 17 ಶಾಸಕರ ಪೈಕಿ 15 ಶಾಸಕರ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಮವಾರ 12 ಕ್ಷೇತ್ರಗಳನ್ನು ಗೆದ್ದು ಬೀಗಿತ್ತು. ಕಾಂಗ್ರೆಸ್‌ ಎರಡು, ಪಕ್ಷೇತರ ಒಂದು ಸ್ಥಾನ ಬಿಟ್ಟರೆ, ಜೆಡಿಎಸ್‌ ಒಂದೂ ಸ್ಥಾನ ಗೆಲ್ಲಲಿಲ್ಲ. ಜೆಡಿಎಸ್‌ನ ಭದ್ರಕೋಟೆ ಎನಿಸಿದ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯಲ್ಲೂ ಬಿಜೆಪಿ ಗೆದ್ದಿದ್ದು ಜೆಡಿಎಸ್‌ಗೆ ಭಾರಿ ಮುಖಭಂಗ ಉಂಟು ಮಾಡಿತ್ತು. ಮಂಡ್ಯದಂಥ ಜಿಲ್ಲೆಯಲ್ಲೇ ಸೋಲುಂಟಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ ರಾಜ್ಯದಲ್ಲಿ ನೆಲೆ ಕಳೆದುಕೊಳ್ಳುತ್ತಿದೆ ಎಂದು ರಾಜಕೀಯ ವ್ಯಾಖ್ಯಾನಗಳು ಕೇಳಿಬಂದಿದ್ದವು. 

ಹೀಗಿರುವಾಗಲೇ ಆ ಪಕ್ಷದ ಕಾರ್ಯಕರ್ತರು ಘೋಷವಾಕ್ಯವೊಂದನ್ನು ಸಾಮಾಜಿಕ ತಾಣದಲ್ಲಿ ವೈರಲ್‌ ಮಾಡಿದ್ದಾರೆ. ‘12 ಸಾರಿ ಸೋತ ಆರ್‌ಸಿಬಿ ನೇ. ಬಿಟ್ಟಿಲ್ಲ ಇನ್ನು ಜೆಡಿಎಸ್ ಬಿಡ್ತೀವಾ...ಮತ್ತೆ ಗೆದ್ದೆ ಗೆಲ್ಲುತ್ತೇವೆ...’ ಎಂಬುದು ಆ ಘೋಷ ವಾಕ್ಯವಾಗಿದೆ.  

ಜೆಡಿಎಸ್‌ ಬೆಂಬಲಿತ ನೂರಾರು ಮಂದಿ ಈ ಸಾಲನ್ನು ತಮ್ಮ ಫೇಸ್‌ಬುಕ್‌ ವಾಲ್‌ಗಳಲ್ಲಿ ಪೋಸ್ಟ್‌ ಮಾಡುವ ಮೂಲಕ ವೈರಲ್‌ ಮಾಡಿದ್ದಾರೆ. 

ಯಶಸ್ವಿ ತಂಡವಾಗಿ ಹೊರಹೊಮ್ಮಿದರೂ ಒಂದು ಬಾರಿಯೂ ಕಪ್‌ಗೆಲ್ಲದ ಆರ್‌ಸಿಬಿ

ಇಂಡಿಯನ್‌ ಪ್ರಿಮಿಯರ್‌ ಲೀಗ್‌ (ಐಪಿಎಲ್‌) ನಲ್ಲಿ ರಾಯಲ್‌ ಚಾಲೆಂಜರ್‌ ಬೆಂಗಳೂರು ತಂಡ ಯಶಸ್ವಿ ತಂಡ ಎನಿಸಿಕೊಂಡಿದೆಯಾದರೂ, ಈ ವರೆಗೆ ಒಂದು ಬಾರಿಯೂ ಕಪ್‌ ಗೆದ್ದಿಲ್ಲ. 12 ಆವೃತ್ತಿಗಳಲ್ಲಿ  ಮೂರು ಬಾರಿ ರನ್ನರ್‌ಅಪ್‌ ಆಗಿರುವ ತಂಡ, ಎರಡು ಬಾರಿ ಪ್ಲೇಆಫ್‌ಗೆ ಹೋಗಿದೆ. 

ಕಳೆದ ಬಾರಿಯ ಐಪಿಎಲ್‌ನಲ್ಲಿ ‘ಈ ಸಲ ಕಪ್‌ ನಮ್ದೆ’ ಎಂಬ ಕ್ರಿಕೆಟ್‌ ಅಭಿಮಾನಿಗಳ ಘೋಷಣೆಯಾಗಿತ್ತು. ಅದನ್ನೇ ಜೆಡಿಎಸ್‌ 2018ರ ವಿಧಾನಸಭೆಯ ಚುನಾವಣೆಯಲ್ಲೂ ಬಳಸಿಕೊಂಡಿತ್ತು. ಸ್ವತಃ ಕುಮಾರಸ್ವಾಮಿ ಅವರೇ ಸಮಾವೇಶವೊಂದರಲ್ಲಿ ಈ ಘೋಷವಾಕ್ಯವನ್ನು ಹೇಳಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು