ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಗೊಂದಲದಿಂದ ವರದಿ ವಿಳಂಬ !

ನಿಗದಿತ ಅವಧಿಯಲ್ಲಿ ವರದಿ ನೀಡಲು ವಿಫಲ l ಸೋಂಕು ಶಂಕಿತರಲ್ಲಿ ಹೆಚ್ಚಿದ ಆತಂಕ
Last Updated 3 ಜೂನ್ 2020, 1:50 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಕೊರೊನಾ ಸೋಂಕು ಶಂಕಿತರ ಸಂಖ್ಯೆ ಒಂದೇ ಸಮನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಯಾರಿಗೆ ಪರೀಕ್ಷೆ ಮಾಡಬೇಕು, ಯಾರಿಗೆ ಅಗತ್ಯವಿಲ್ಲ ಎಂಬ ಗೊಂದಲ ಆರೋಗ್ಯ ಇಲಾಖೆಯನ್ನು ಕಾಡಲಾರಂಭಿಸಿದೆ. ಇನ್ನೊಂದೆಡೆ ಪ್ರಯೋಗಾಲಯಗಳು ನಿಗದಿತ ಅವಧಿಯೊಳಗೆ ವರದಿಗಳನ್ನು ನೀಡದ ಕಾರಣ ಸೋಂಕು ಶಂಕಿತರು ಆತಂಕಕ್ಕೆ ಒಳಗಾಗಿದ್ದಾರೆ.

ಕೋವಿಡ್‌ ಪೀಡಿತರ ಸಂಖ್ಯೆ 3 ಸಾವಿರದ ಗಡಿ ದಾಟಿದ ಬೆನ್ನಲ್ಲಿಯೇ ಇಲಾಖೆ ಪರೀಕ್ಷಾ ನಿಯಮಗಳನ್ನು ಸಡಿಲಿಸಿ, ಸೋಂಕು ಲಕ್ಷಣಗಳು ಇರುವವರಿಗೆ ಮಾತ್ರ ಪರೀಕ್ಷೆ ಮಾಡಲು ಮುಂದಾಗಿದೆ. ಪ್ರಾರಂಭಿಕ ದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗೆ ಪ್ರಯೋಗಾಲಯಗಳು ಇರಲಿಲ್ಲ. ಮಾದರಿಗಳನ್ನು ಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ (ಎನ್‌ಐವಿ) ಕಳುಹಿಸಲಾಗುತ್ತಿತ್ತು. ಇದರಿಂದಾಗಿ ವರದಿಗಳು ಕೈಸೇರುವುದು ತಡವಾಗುತ್ತಿತ್ತು. ಆಗ ಪ್ರತಿ ನಿತ್ಯ ಸರಾಸರಿ 100 ಮಾದರಿಗಳನ್ನು ಪರೀಕ್ಷೆ ಮಾಡಲಾಗುತಿತ್ತು. ಈಗ ಪ್ರಯೋಗಾಲಯಗಳ ಸಂಖ್ಯೆ 60ರ ಗಡಿ ದಾಟಿದ್ದು, ಒಂದು ದಿನದಲ್ಲಿ ಗರಿಷ್ಠ 16 ಸಾವಿರ ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ.

ಮಾರ್ಚ್‌ ತಿಂಗಳಲ್ಲಿ 2,308 ಗಂಟಲ ಮಾದರಿಗಳನ್ನು ಪರೀಕ್ಷೆ ಮಾಡಲಾಗಿತ್ತು. ಏಪ್ರಿಲ್ ತಿಂಗಳಲ್ಲಿ 55,034 ಮಾದರಿಗಳ ಪರೀಕ್ಷೆ ನಡೆದಿದೆ. ಮೇ ತಿಂಗಳಲ್ಲಿ2 ಲಕ್ಷಕ್ಕೂ ಅಧಿಕ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಆದರೆ, ವರದಿಗಳು ಮಾತ್ರ ಸಮಯಕ್ಕೆ ಸರಿಯಾಗಿ ಬರದಿರುವ ಕಾರಣ ಸೋಂಕು ಶಂಕಿತರು ಆತಂಕದಲ್ಲಿಯೇ ದಿನಗಳನ್ನು ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಅವಧಿ ಮುಗಿಸಿ, ಮನೆಗೆ ತೆರಳಿದ ಬಳಿಕ ವರದಿಗಳು ಬರುತ್ತಿವೆ. ಪ್ರಯೋಗಾಲಯಗಳ ಈ ಕ್ರಮದಿಂದ ಸೋಂಕಿತ ವ್ಯಕ್ತಿಗಳ ಕುಟುಂಬದ ಸದಸ್ಯರಿಗೂ ಸೋಂಕು ಹರಡುವ ಭೀತಿ ಶುರುವಾಗಿದೆ.

ವಿಳಂಬಕ್ಕೆ ಕಾರಣವೇನು?: ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರ, ಬೀದರ್, ಧಾರವಾಡ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 5ಸಾವಿರಕ್ಕೂ ಅಧಿಕ ಮಾದರಿಗಳ ವರದಿ ಬರಬೇಕಿದೆ. ಜಿಲ್ಲೆಗಳಲ್ಲಿ ಹೆಚ್ಚಿನ ಸಾಮರ್ಥ್ಯದ ಪ್ರಯೋಗಾಲಯಗಳು ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಮಾದರಿಗಳನ್ನು ಬೇರೊಂದು ಜಿಲ್ಲೆಗೆ ರವಾನಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪ್ರಯೋಗಾಲಯದ ಆರ್‌ಟಿಪಿಸಿಆರ್ ಯಂತ್ರದಲ್ಲಿ ಒಂದು ಬ್ಯಾಚ್‌ನ ಮಾದರಿ ಪರೀಕ್ಷೆಗೆ 3 ರಿಂದ 3.30 ಗಂಟೆ ಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ದಾಖಲು ಮಾಡುವ ಪ್ರತಿ ಅಂಕಿ ಅಂಶಗಳನ್ನು ಕೇಂದ್ರ ಸರ್ಕಾರಕ್ಕೆ ಆನ್‍ಲೈನ್‌ನಲ್ಲಿ ಕಳುಹಿಸಬೇಕಾಗುತ್ತದೆ. ಇದು ಕೂಡ ವಿಳಂಬಕ್ಕೆ ಕಾರಣ.

ಲಕ್ಷಣ ಇದ್ದವರಿಗೆ ಪರೀಕ್ಷೆ: ಇಲಾಖೆಯುಸಾಂಸ್ಥಿಕ ಕ್ವಾರಂಟೈನ್‌ ಅವಧಿಯಲ್ಲಿ ಸೋಂಕು ಲಕ್ಷಣಗಳನ್ನು ಹೊಂದಿರದವರಿಗೆ ಕೋವಿಡ್‌ ಪರೀಕ್ಷೆಯ ವಿನಾಯಿತಿ ನೀಡಿದೆ. ಇಷ್ಟಾಗಿಯೂ ಸೋಂಕು ಶಂಕಿತರ ವರದಿ ಸೂಕ್ತ ಸಮಯಕ್ಕೆ ಬರುತ್ತಿಲ್ಲ. ವ್ಯಕ್ತಿಗೆ ಸೋಂಕು ತಗುಲಿಲ್ಲ ಎಂದಾದಲ್ಲಿ ಅವರಿಗೆ ಈ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಯೂ ಇಲ್ಲ.

‘ಕೆಲವು ಕೋವಿಡ್‌ ಪರೀಕ್ಷಾ ವರದಿ ವಿಳಂಬವಾಗುತ್ತಿದೆ. ಶೀಘ್ರದಲ್ಲಿಯೇ ಪ್ರತ್ಯೇಕ ಆಸ್ಪತ್ರೆಯನ್ನು ಗುರುತಿಸಿ, ವರದಿಗಳು ಆದಷ್ಟು ಬೇಗ ತಲುಪಲು ಕ್ರಮ ವಹಿಸಲಾಗುವುದು’ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT