ಸೋಮವಾರ, ಜೂನ್ 1, 2020
27 °C

ಗಡಿ ಮುಚ್ಚಿದ್ದಕ್ಕೆ ಆಕ್ಷೇಪಿಸಿ ಪ್ರಧಾನಿಗೆ ಪತ್ರ ಬರೆದ ಕೇರಳ ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೇರಳದಲ್ಲಿ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದು ಕೊಡಗು ಸಂಪರ್ಕಿಸುವ ಎಲ್ಲ ರಸ್ತೆಗಳಿಗೂ ಆಳೆತ್ತರದ ಮಣ್ಣು ಹಾಕಿ ಬಂದ್‌ ಮಾಡಲಾಗಿದೆ. ಈ ಕ್ರಮಕ್ಕೆ ಆಕ್ಷೇಪಿಸಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕದ ಪೊಲೀಸರು, ಕೇರಳಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್‌ ಮಾಡಿದ್ದಾರೆ. ಇಂತಹ ತುರ್ತು ಸಂದರ್ಭದಲ್ಲಿ ಕೇರಳಕ್ಕೆ ಅಗತ್ಯ ವಸ್ತುಗಳ ಸರಬರಾಜಿಗೆ ಅಡ್ಡಿಯಾಗಿದೆ. ವಿರಾಜಪೇಟೆ– ಮಾಕುಟ್ಟ– ಕಣ್ಣನೂರು ರಸ್ತೆ ಬಂದ್‌ ಆಗಿರುವ ಕಾರಣ ತೀವ್ರ ಸಮಸ್ಯೆಯಾಗಿದೆ. ಅತ್ತ ಕಾಸರಗೋಡಿನಿಂದ ಮಂಗಳೂರು ಆಸ್ಪತ್ರೆಗೆ ರೋಗಿಗಳು ಡಯಾಲಿಸಿಸ್‌ಗೆ ತೆರಳಲೂ ಸಾಧ್ಯವಾಗುತ್ತಿಲ್ಲ. ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ವಿಜಯನ್‌ ಪತ್ರದಲ್ಲಿ ಕೋರಿದ್ದಾರೆ.

ಯಾವುದೆ ಕಾರಣಕ್ಕೂ ಒತ್ತಡಕ್ಕೆ ಮಣಿದು ವಾಹನ ಸಂಚಾರಕ್ಕೆ ಅನುವು ಮಾಡಬಾರದು. ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ವಾಹನ ಸಂಚಾರಕ್ಕೆ ಅನುವು ಮಾಡಿದರೆ ಕೊಡಗು ಜಿಲ್ಲೆಯ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಮನವಿ ಮಾಡಿದ್ದಾರೆ. ಜಿಲ್ಲಾಡಳಿತವು ಉತ್ತಮವಾದ ಕ್ರಮ ಕೈಗೊಂಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ‘ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅನುಮತಿ ನೀಡಿದರೆ ನಾವೇ ಹೆದ್ದಾರಿ ಬಂದ್‌ ಮಾಡುತ್ತೇವೆ’ ಎಂದೂ ಎಚ್ಚರಿಸಿದ್ದಾರೆ.

‘ಕೇರಳ ಸರ್ಕಾರ ಎಷ್ಟೇ ಒತ್ತಡ ಹೇರಿದರೂ ಹೆದ್ದಾರಿ ತೆರವು ಮಾಡುವುದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದು ಕೊಡಗಿನ ಜನರೂ ಸ್ವಲ್ಪ ನಿರಾಳರಾಗಿದ್ದಾರೆ. ಕರಿಕೆ ಮೂಲಕ ಕಾಸರಗೋಡು, ಮಾಕುಟ್ಟ ಮೂಲಕ ಕಣ್ಣಾನೂರು, ಕುಟ್ಟದಿಂದ ಮಾನಂದವಾಡಿ ತಲುಪಲು ಮೂರು ಮಾರ್ಗಗಳಿವೆ.

ಕೊಡಗು ಮೂಲಕ ತಲುಪುವ ಎಲ್ಲಾ ಮಾರ್ಗಗಳಿಗೂ ಮಣ್ಣು ಹಾಕಿ ಮುಚ್ಚಲಾಗಿದೆ. ಕೇರಳದಲ್ಲಿ ಸದ್ಯಕ್ಕೆ ಆತಂಕದ ವಾತಾವರಣವಿದ್ದು ಕಾರ್ಮಿಕರು ಕಾಲುದಾರಿಯಲ್ಲಿ ನಡೆದು ಕೊಡಗಿನತ್ತ ಬರುತ್ತಿದ್ದಾರೆ. ಕಾಲು ದಾರಿಗಳನ್ನೂ ಬಂದ್‌ ಮಾಡಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಸೂಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು