ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧದ ವೇಳೆ ಪ್ರತಿಪಕ್ಷಗಳು ಸರ್ಕಾರದ ಬೆನ್ನಿಗೆ ನಿಲ್ಲಬೇಕು:ದತ್ತಾತ್ರೇಯ ಹೊಸಬಾಳೆ

ವಿಡಿಯೊ ಸಂದರ್ಶನ
Last Updated 20 ಮೇ 2020, 2:02 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್ಎಸ್) ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡಿದೆ. ಕೊರೊನಾ ಸಂತ್ರಸ್ತರು ಮತ್ತು ಲಾಕ್‌ಡೌನ್‌ನಿಂದ ಸಂಕಷ್ಟ ಅನುಭವಿಸುತ್ತಿರುವವರಿಗೆ ಸಾಕಷ್ಟು ನೆರವು ನೀಡುತ್ತಿದೆ. ಜೊತೆ ಜೊತೆಗೇ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಾಗೂ ಸಾಮಾಜಿಕ ಸ್ಥಿತಿಯನ್ನು ಉತ್ತಮಪಡಿಸಲೂ ನೆರವಾಗುತ್ತಿರುವುದಾಗಿ ಆರ್‌ಎಸ್ಎಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳುತ್ತಾರೆ.

ಅವರ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ಇಡೀ ವಿಶ್ವ ಕೊರೊನಾ ವಿರುದ್ಧ ಹೋರಾಡುತ್ತಿದೆ. ಭಾರತದಲ್ಲಿ ಜನರು ಇದಕ್ಕೆ ಹೇಗೆ ಸ್ಪಂದಿಸುತ್ತಿದ್ದಾರೆ?

ದತ್ತಾತ್ರೇಯ ಹೊಸಬಾಳೆ: ಕೊರೊನಾ ವಿರುದ್ಧದ ಹೋರಾಟದಲ್ಲಿ ಜನರು ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದಾರೆ. ಇದಕ್ಕಾಗಿ ನಾವು ಭಾರತದ ಜನರಿಗೆ ವಂದನೆ ಹೇಳಬೇಕು. ಜನಸಾಮಾನ್ಯರಿಗೆ ತೊಂದರೆಯಾಗಿದೆ. ಅವರ ಅನ್ನಕ್ಕೆ ಕಲ್ಲು ಬಿದ್ದಿದೆ. ಆದರೂ ಅವರು ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ನಮ್ಮ ಜನರು ಅನಕ್ಷರಸ್ಥರಿರಬಹುದು, ಬಡವರಿರಬಹುದು; ಆದರೆ, ಅವಿವೇಕಿಗಳಲ್ಲ. ಇದು ನಮ್ಮ ಸಮಾಜದ ಅಂತಃಸತ್ವ. ಲಾಕ್‌ಡೌನ್ ಕಾಲದಲ್ಲಿ ಎಲ್ಲಿಯೂ ಮಿಲಿಟರಿ ಕರೆದು ಜನರನ್ನು ನಿಯಂತ್ರಿಸುವ ಸ್ಥಿತಿ ಬರಲಿಲ್ಲ. ಕೊರೊನಾ ವಾರಿಯರ್ಸ್‌ಗೆ ಸ್ವಯಂ ಸ್ಫೂರ್ತಿಯಿಂದ ಗೌರವ ನೀಡಿದರು.

* ವಿರೋಧ ಪಕ್ಷಗಳಿಂದ ಸರ್ಕಾರಕ್ಕೆ ಸಹಕಾರ ಸಿಕ್ಕಿದೆ ಎಂದು ನಿಮಗೆ ಅನ್ನಿಸುತ್ತದೆಯೇ?

ಕೊರೊನಾ ವಿರುದ್ಧ ದೇಶ ಸಮರ ಸಾರಿದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸರ್ಕಾರದ ಬೆನ್ನಿಗೆ ನಿಲ್ಲಬೇಕಿತ್ತು. ಆದರೆ ನಮ್ಮ ದೌರ್ಭಾಗ್ಯ, ಅದಾಗಲಿಲ್ಲ. ಅಮೆರಿಕದಲ್ಲಿ 9/11 ಆಯ್ತು. ಇಡೀ ದೇಶ ಅಂದರೆ ವಿರೋಧ ಪಕ್ಷಗಳು, ಮಾಧ್ಯಮದವರು ಎಲ್ಲರೂ ಸರ್ಕಾರದ ಪರವಾಗಿ ನಿಂತರು. ಆದರೆ ಅಂತಹ ಸ್ಥಿತಿ ಇಲ್ಲಿ ಆಗಲಿಲ್ಲ. 1971ರಲ್ಲಿ ಬಾಂಗ್ಲಾ ವಿರುದ್ಧ ಯುದ್ಧವಾದಾಗ ಅಟಲ್ ಬಿಹಾರಿ ವಾಜಪೇಯಿ ಅವರು ಸರ್ಕಾರದ ಪರವಾಗಿದ್ದರು. ಇಡೀ ದೇಶ ಕೂಡ ಸರ್ಕಾರದ ಬೆನ್ನಿಗೆ ನಿಂತಿತ್ತು. ಈಗಲೂ ಅಂತಹ ಸ್ಥಿತಿ ನಿರ್ಮಾಣವಾಗಬೇಕಿತ್ತು. ಯುದ್ಧ ಕಾಲದಲ್ಲಿ ಟೀಕೆ ಬೇಡ. ಯುದ್ಧ ಮುಗಿದ ನಂತರ ರಾಜಕೀಯ, ಆರೋಪ–ಪ್ರತ್ಯಾರೋಪ ಇರಲಿ. ಇದು ಎಲ್ಲ ರಾಜಕೀಯ ಪಕ್ಷಗಳ ನಡವಳಿಕೆ ಆಗಬೇಕು.

* ಕೊರೊನಾ ಹರಡುವ ವಿಷಯದಲ್ಲಿ ಮುಸ್ಲಿಮರ ವಿರುದ್ಧ ಆರೋಪಗಳು ಬಂದವು. ಅದಕ್ಕೆ ಏನಂತೀರಿ?

ಈ ಬಗ್ಗೆ ಈಗಾಗಲೇ ಮೋಹನ್ ಭಾಗವತ್ ಅವರು ಉತ್ತರ ನೀಡಿದ್ದಾರೆ. ಯಾವುದೋ ಒಂದು ಗುಂಪು ತಪ್ಪು ಮಾಡಿದೆ ಎಂದರೆ ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ. ಸಮುದಾಯವೊಂದು ತಪ್ಪು ಮಾಡಿದರೆ ಆ ಸಮುದಾಯದ ಮುಖಂಡರು ಬುದ್ಧಿ ಹೇಳಬೇಕು. ಅದು ಹಿಂದುವಾದರೂ ಸೈ, ಮುಸ್ಲಿಂ ಆದರೂ ಸೈ. ಇಂತಹ ಸಂದರ್ಭದ ಉಪಯೋಗ ಪಡೆಯುವ ವಿಘ್ನ ಸಂತೋಷಿಗಳು, ಪಟ್ಟಭದ್ರರು ಇರುತ್ತಾರೆ. ಅಂಥವರು ಹಿಂದೂಗಳಲ್ಲಿಯೂ ಇದ್ದಾರೆ. ಅವರನ್ನು ಮಟ್ಟಹಾಕಬೇಕು.

* ದೇಶದ ಆರ್ಥಿಕ ಪರಿಸ್ಥಿತಿ ಮೊದಲೇ ಹದಗೆಟ್ಟಿತ್ತು. ಕೊರೊನಾ ನಂತರ ಅದು ಇನ್ನಷ್ಟು ಹೀನಾಯ ಸ್ಥಿತಿಗೆ ಹೋಗಿದೆ. ಅದನ್ನು ಮೇಲೆತ್ತಲು ಏನು ಮಾಡಬೇಕು?

400 ವರ್ಷಗಳಿಂದಲೂ ನಾವು ಐರೋಪ್ಯ ಆರ್ಥಿಕತೆಯನ್ನು ಅವಲಂಬಿಸಿದ್ದೇವೆ. ಯೂರೋ ಕೇಂದ್ರಿತ ಆರ್ಥಿಕತೆ ವಿಫಲವಾಗಿದೆ. ಹೊಸ ಅವಕಾಶ ಈಗ ಸೃಷ್ಟಿಯಾಗಿದೆ. ಭಾರತದ ಪಾಲೂ ಇದರಲ್ಲಿ ಇರಲಿದೆ. ಭಾರತ ಮತ್ತು ವಿಶ್ವ ಈವರೆಗೆ ಅನುಸರಿಸಿಕೊಂಡು ಬಂದ ಆರ್ಥಿಕ ನೀತಿ ಸರಿ ಇಲ್ಲ ಎನ್ನುವುದನ್ನು ಕೊರೊನಾ ಸಾಬೀತುಪಡಿಸಿದೆ. ಗ್ಲೋಬಲೈಸೇಷನ್ ನಿಂದ ಲೋಕಲೈಸೇಷನ್‌ಗೆ ಹೊರ
ಳಲು ಇದು ಸಕಾಲ. ಈಗ ನಮ್ಮದು ಗ್ಲೋಕಲೈಸೇಷನ್ (ದೇಸಿ ಜಾಗತೀಕರಣ) ಆಗಬೇಕು. ನಾವು ಈವರೆಗೆ ಅನುಸರಿಸುತ್ತಾ ಬಂದ ಆರ್ಥಿಕ ನೀತಿಯೇ ವಲಸೆ ಕಾರ್ಮಿಕರ ಸಮಸ್ಯೆಗೆ ಮೂಲ ಕಾರಣ. ಅವರು ಇರುವ ಸ್ಥಳದಲ್ಲಿಯೇ ಅವರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಗುಳೇ ಹೋಗುವುದಕ್ಕೆ ಕಾರಣ. ಇದನ್ನು ಅರ್ಥ ಮಾಡಿಕೊಂಡು ಹೊಸ ಆರ್ಥಿಕ ನೀತಿಯನ್ನು ಅನುಸರಿಸಬೇಕು. ಎಲ್ಲದಕ್ಕೂ ಯಾಂತ್ರೀಕರಣ ಮದ್ದಲ್ಲ. ಆದರೆ ಯಾಂತ್ರೀಕರಣವನ್ನು ಬಿಡಲೂ ಬರುವುದಿಲ್ಲ. ಅದಕ್ಕೆ ದೀನದಯಾಳ್ ಉಪಾಧ್ಯಾಯ ಅವರು ಮೂರು ಅಂಶಗಳನ್ನು ಹೇಳಿದ್ದರು. ಎಕಾನಮಿ (ಆರ್ಥಿಕತೆ), ಎಕಾಲಜಿ (ಪರಿಸರ) ಮತ್ತು ಎಥಿಕ್ಸ್ (ನೈತಿಕತೆ) ಇರುವ ವ್ಯವಸ್ಥೆ ಬರಬೇಕು ಎಂದಿದ್ದರು. ಈಗ ಅದಕ್ಕೆ ಕಾಲ ಬಂದಿದೆ. ಗಾಂಧೀಜಿ ಅವರೂ ಗ್ರಾಮ ಸ್ವರಾಜ್ಯದ ಬಗ್ಗೆ ಹೇಳಿದ್ದರು. ಅದನ್ನೂ ಗಮನಿಸಬೇಕು. ಗ್ರಾಮಗಳ ಸಮುಚ್ಛಯ ಮಾಡಿಕೊಂಡು ಅಭಿವೃದ್ಧಿಪಡಿಸಬೇಕು. ಅಂದಾಗ ಮಾತ್ರ ಆರ್ಥಿಕವಾಗಿ ನಾವು ಮೇಲೇಳಲು ಸಾಧ್ಯ. ವಲಸೆ ಕಾರ್ಮಿಕರ ಸಮಸ್ಯೆಗೂ ಇದರಲ್ಲಿ ಪರಿಹಾರ ಇದೆ. ಭಾರತದ ನವೋತ್ಥಾನವೇ ಈಗ ನಮ್ಮ ಗುರಿಯಾಗಬೇಕು.

ಆರ್‌ಎಸ್ಎಸ್ ನೆರವು

ದೇಶದಲ್ಲಿ ಲಾಕ್‌ಡೌನ್ ಆದ ತಕ್ಷಣ ಆರ್‌ಎಸ್ಎಸ್ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದೆ. ದೇಶಾದ್ಯಂತ ಸುಮಾರು 3.5 ಲಕ್ಷ ಕಾರ್ಯಕರ್ತರು ಸಮಾಜದ ಸಹಯೋಗದಿಂದ ಜನರಿಗೆ ನೆರವು ನೀಡಿದ್ದಾರೆ. ಭೋಜನ, ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ ಒದಗಿಸಿದ್ದಾರೆ. ಕೊರೊನಾ ಅಲ್ಲದೆ ಇತರ ರೋಗಿಗಳ ಉಪಯೋಗಕ್ಕಾಗಿ ರಕ್ತದಾನ ಮಾಡಿದ್ದಾರೆ. ಅದಲ್ಲದೆ ಕೌಟುಂಬಿಕ ಒತ್ತಡವನ್ನು ತಡೆಯುವುದಕ್ಕಾಗಿ ಕೌನ್ಸೆಲಿಂಗ್ ಕೂಡಾ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT