ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಸ್ಥಗಿತ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ಧಾರಕ್ಕೆ ವಿರೋಧ

ಪ್ರಶಸ್ತಿಗಳು, ವಿದ್ಯಾರ್ಥಿ ವೇತನ ಮುಂದುವರಿಸುವಂತೆ ಒತ್ತಾಯ
Last Updated 9 ಮೇ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಅನುದಾನದ ಕೊರತೆ ಎಂಬ ಕಾರಣಕ್ಕೆಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರಶಸ್ತಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಸ್ಥಗಿತ ಮಾಡಿರುವ ಕ್ರಮಕ್ಕೆ ಸಾಂಸ್ಕೃತಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

2020–21ನೇ ಸಾಲಿನಲ್ಲಿ ಸರ್ಕಾರವು ಪ್ರಾಧಿಕಾರದ ಅನುದಾನಕ್ಕೆ ಕತ್ತರಿ ಹಾಕಿ,ಕೇವಲ ₹ 2 ಕೋಟಿ ನೀಡಿದೆ. ಇದರಿಂದಾಗಿ ಪ್ರಾಧಿಕಾರವು ಸರ್ವಸದ್ಯರ ಸಭೆಯಲ್ಲಿ‘ಕನ್ನಡ ಮಾಧ್ಯಮ ಪ್ರಶಸ್ತಿ’, ‘ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ’ ಹಾಗೂ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವವರಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಸ್ಥಗಿತ ಮಾಡುವ ನಿರ್ಧಾರ ಕೈಗೊಂಡಿದೆ.

ಪ್ರಾಧಿಕಾರದ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಸಾಹಿತಿಗಳು, ಪ್ರಾಧ್ಯಾಪಕರು ಹಾಗೂ ಸಾಂಸ್ಕೃತಿಕ ವಲಯದ ಗಣ್ಯರು, ಕನ್ನಡ ಭಾಷೆಯ ಪ್ರಸಾರ ಹಾಗೂ ಪ್ರೋತ್ಸಾಹದ ಸಂಬಂಧ ವಿದ್ಯಾರ್ಥಿ ವೇತನವನ್ನು ಮುಂದುವರಿಸುವಂತೆ ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಾಧಿಕಾರದ ನಿರ್ಧಾರ ವಿರುದ್ಧ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

‘ವಿದ್ಯಾರ್ಥಿ ವೇತನಕ್ಕೆ ಪ್ರಾಧಿಕಾರವು ₹ 80 ಲಕ್ಷ ಮಾತ್ರ ವೆಚ್ಚ ಮಾಡುತ್ತಿತ್ತು. ಸರ್ಕಾರಕ್ಕೆ ಇದು ಯಾವುದೇ ಕಾರಣಕ್ಕೂ ಹೊರೆಯಾಗಲಾರದು. ಇತರ ರಾಜ್ಯ ಸರ್ಕಾರಗಳು ಇಲ್ಲಿಗಿಂತ ಹತ್ತು ಪಟ್ಟು ಹಣವನ್ನು ಭಾಷೆ, ಸಂಸ್ಕೃತಿಗಳ ಪ್ರಚಾರಕ್ಕೆ ಹೊರರಾಜ್ಯಗಳಲ್ಲಿ ಖರ್ಚು ಮಾಡುತ್ತಿವೆ. ಪ್ರಾಧಿಕಾರದ ಅಧ್ಯಕ್ಷರು ಈ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿ, ವಿದ್ಯಾರ್ಥಿ ವೇತನವನ್ನು ಮುಂದುವರಿಸಬೇಕು’ ಎಂದು ವಿಮರ್ಶಕ ಎಸ್.ಆರ್. ವಿಜಯಶಂಕರ ಒತ್ತಾಯಿಸಿದ್ದಾರೆ.

‘ಕೇಂದ್ರ ಸರ್ಕಾರವು ಹಿಂದಿ, ಸಂಸ್ಕೃತ ಓದುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುತ್ತಿದೆ. ಕನ್ನಡದಲ್ಲಿ ಅಧ್ಯಯನ ಮಾಡುತ್ತಿರುವವರಿಗೆ ನಮ್ಮ ಸರ್ಕಾರವೇ ಶಿಷ್ಯವೇತನ ಕೊಡದಿದ್ದರೆ ಇನ್ನೂ ಯಾರು ನೀಡುತ್ತಾರೆ? ‘ಅಕ್ಕ’ ಮೊದಲಾದ ಅಮೆರಿಕ ಯಾತ್ರೆಗೆ ಕೋಟಿಗಟ್ಟಲೇ ಹಣ ಖರ್ಚು ಮಾಡುವ ಸರ್ಕಾರಕ್ಕೆ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲು ಆಗುವುದಿಲ್ಲವೇ? ಶಿಷ್ಯವೇತನ ನೀಡುವುದರಿಂದ ಅವರೆಲ್ಲ ಕನ್ನಡದ ರಾಯಭಾರಿಗಳಾಗುತ್ತಾರೆ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಮುಂದೆ ಬರದಿದ್ದರೆ ಅಲ್ಲಿನ ರಾಜ್ಯ ಸರ್ಕಾರಗಳು ಕನ್ನಡ ವಿಭಾಗಕ್ಕೆ ನೀಡುತ್ತಿದ್ದ ಅನುದಾನವನ್ನೂ ಸ್ಥಗಿತ ಮಾಡುವ ಸಾಧ್ಯತೆಯೂ ಇದೆ’ ಎಂದು ಅವರು ಎಚ್ಚರಿಸಿದ್ದಾರೆ.

ಜೋಳಿಗೆ ಹಿಡಿಯಿರಿ: ವಿಧಾನ ಪರಿಷತ್‌ನಮಾಜಿ ಸದಸ್ಯ ರಮೇಶ್ ಬಾಬು, ‘ಪ್ರಾಧಿಕಾರ ಕನ್ನಡ ಕಟ್ಟುವ ಕೆಲಸ ಮಾಡಬೇಕು. ವಿವಿಧ ಪ್ರಶಸ್ತಿಗಳು ಹಾಗೂ ವಿದ್ಯಾರ್ಥಿ ವೇತನ ಸ್ಥಗಿತ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಪ್ರಾಧಿಕಾರದ ಈ ನಿರ್ಧಾರ ಪಲಾಯನವೇ ಅಥವಾ ಆತ್ಮ ವಂಚನೆಯೇ’ ಎಂದು ಪ‍್ರಶ್ನಿಸಿದ್ದಾರೆ.

‘ಪ್ರಾಧಿಕಾರವು ಕೆಲ ಸವಲತ್ತುಗಳನ್ನು ಕಡಿತ ಮಾಡಿ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು. ಅವಶ್ಯಕತೆ ಬಂದಲ್ಲಿ ಜೋಳಿಗೆ ಹಿಡಿಯಿರಿ. ಇದರಿಂದ ಪ್ರಾಧಿಕಾರದ ಜತೆಗೆ ಅಧ್ಯಕ್ಷರ ಮೇಲಿನ ಗೌರವವೂ ಹೆಚ್ಚಲಿದೆ’ ಎಂದು ತಿಳಿಸಿದ್ದಾರೆ.

ಶಿಷ್ಯವೇತನಕ್ಕೆ ವಿಶೇಷ ಅನುದಾನ ಕೊಡಿ

‘ಹೊರ ರಾಜ್ಯಗಳಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗಗಳು ಉಳಿದು ಬೆಳೆಯಬೇಕಾದರೆ ಶಿಷ್ಯವೇತನದಂತಹ ಪ್ರೋತ್ಸಾಹಕ ಕ್ರಮಗಳು ತೀರಾ ಅಗತ್ಯವಾಗಿದ್ದು, ಇದಕ್ಕೆ ಬೇಕಾದ ₹ 40 ಲಕ್ಷವನ್ನು ವಿಶೇಷ ಅನುದಾನ ರೂಪದಲ್ಲಿ ನೀಡಬೇಕು’ ಎಂದು ಹಿರಿಯ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ‘ವಿಶೇಷ ಅನುದಾನ ನೀಡಲು ಸಾಧ್ಯವಿಲ್ಲವೆಂದಾದರೆ ಈಗಿರುವ ಅನುದಾನದಲ್ಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆದ್ಯತೆಯ ಮೇಲೆ ಶಿಷ್ಯವೇತನ ನೀಡಲು ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

‘ಮಹಾರಾಷ್ಟ್ರ, ಅವಿಭಜಿತ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗಗಳಿದ್ದು, ಪ್ರತಿ ವಿದ್ಯಾರ್ಥಿಗೆ ತಲಾ ₹ 25 ಸಾವಿರ ಶಿಷ್ಯವೇತನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕೊಡಲಾಗುತ್ತಿತ್ತು. ಪ್ರಾಧಿಕಾರಕ್ಕೆ ಅನುದಾನ ಕಡಿತವಾಗಿದೆ ಎಂಬ ಕಾರಣಕ್ಕೆ ಶಿಷ್ಯವೇತನ ನಿಲ್ಲಿಸುವುದು ತಪ್ಪು. ಇಂತಹ ಶಿಷ್ಯವೇತನ ಪಡೆಯುವವರು 150ಕ್ಕಿಂತ ಹೆಚ್ಚಿಲ್ಲ. ಈ ಪ್ರೋತ್ಸಾಹ ನೀಡದಿದ್ದರೆ ಮುಂದೊಂದು ದಿನ ಸ್ನಾತಕೋತ್ತರ ವಿಭಾಗಗಳೇ ಮುಚ್ಚಿಹೋಗುವ ಅಪಾಯ ಇದೆ’ ಎಂದು ಎಚ್ಚರಿಸಿದ್ದಾರೆ.

₹ 4 ಕೋಟಿಯಲ್ಲಿ ನಿರ್ವಹಣೆ

‘ಸರ್ಕಾರ ವಾರ್ಷಿಕ ₹ 4 ಕೋಟಿ ಅನುದಾನವನ್ನು ನೀಡುತ್ತಿತ್ತು. ಅದರಲ್ಲಿಯೇ ಪ್ರಶಸ್ತಿಗಳು ಹಾಗೂ ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆವು. 2016ರಲ್ಲಿ ಪ್ರಾಧಿಕಾರದ ಅಧ್ಯಕ್ಷನಾಗಿ ನಾನು ನೇಮಕವಾದಾಗ ವಾರ್ಷಿಕ ಅನುದಾನ ₹ 6 ಕೋಟಿ ಬಿಡುಗಡೆಯಾಗಿತ್ತು. ಪ್ರಾಧಿಕಾರಕ್ಕೆ ಅನಗತ್ಯ ಎನಿಸಿದ ನುಡಿಜಾತ್ರೆಯಂತಹ ಕಾರ್ಯಕ್ರಮ ನಿಲ್ಲಿಸಿದೆ. ಆಗಿನ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡು ಮುಂದಿನ ವರ್ಷದ ಅನುದಾನವನ್ನು ₹ 4 ಕೋಟಿಗೆ ಇಳಿಸಿದೆ. ನನ್ನ ಅವಧಿಯಲ್ಲಿ ವಾರ್ಷಿಕ ಅನುದಾನ ₹ 8 ಕೋಟಿ ಇರಲಿಲ್ಲ’ ಎಂದು ಪ್ರಾಧಿಕಾರದ ಹಿಂದಿನ ಅಧ್ಯಕ್ಷರಾದ ಎಸ್.ಜಿ. ಸಿದ್ಧರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT