ಭಾನುವಾರ, ಸೆಪ್ಟೆಂಬರ್ 19, 2021
31 °C
ಶಾಲೆ ಆರಂಭಕ್ಕೆ 23 ದಿನಗಳಷ್ಟೇ ಬಾಕಿ: ಟೆಂಡರ್‌ ಪ್ರಕ್ರಿಯೆ ಶೀಘ್ರ ಪ್ರಾರಂಭ

ಅರ್ಧ ರಾಜ್ಯಕ್ಕೆ ಶಾಲಾ ಸಮವಸ್ತ್ರ ವಿಳಂಬ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಎರಡು ಕಂದಾಯ ವಿಭಾಗ ವ್ಯಾಪ್ತಿಗಳ ಶಾಲಾ ಮಕ್ಕಳಿಗೆ ಈ ವರ್ಷ ಮೊದಲ ಸೆಟ್‌ನ ಸಮವಸ್ತ್ರ ಪೂರೈಕೆಯೇ ವಿಳಂಬವಾಗುವ ಸಾಧ್ಯತೆ ಇದೆ.

ಶಾಲೆ ಆರಂಭಕ್ಕೆ ಇನ್ನು 23 ದಿನವಷ್ಟೇ ಬಾಕಿ ಇದೆ. ಎರಡು ಕಂದಾಯ ವಿಭಾಗ ವ್ಯಾಪ್ತಿಯಲ್ಲಿ ಸಮವಸ್ತ್ರ ವಿತರಿಸಲು ಸಿದ್ಧತೆ ನಡೆದಿದೆ. ಆದರೆ ಇತರ ಎರಡು ವಿಭಾಗಗಳಲ್ಲಿ ಈ ಪ್ರಕ್ರಿಯೆ ಈಗಲೂ ಟೆಂಡರ್‌ ಹಂತದಲ್ಲಷ್ಟೇ ಇದೆ. ಹೀಗಿದ್ದರೂ ಶೀಘ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಆಯುಕ್ತ ಎಂ.ಟಿ.ರೇಜು ಸೋಮವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಮೊದಲ ಬಾರಿಗೆ ಕರೆದ ಟೆಂಡರ್‌ನಲ್ಲಿ ಒಬ್ಬರಷ್ಟೇ ಬಿಡ್‌ ಸಲ್ಲಿಸಿದ್ದರು. ಹೀಗಾಗಿ ಎರಡನೇ ಬಾರಿಗೆ ಟೆಂಡರ್‌ ಕರೆಯಲಾಗಿದೆ. ಶೀಘ್ರ ಬಿಡ್‌ದಾರರನ್ನು ಅಂತಿಮಗೊಳಿಸಿ ಸಮವಸ್ತ್ರ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಚುನಾವಣಾ ನೀತಿ ಸಂಹಿತೆಯಿಂದಾಗಿ ಈ ಪ್ರಕ್ರಿಯೆ ವಿಳಂಬವಾಗಿಲ್ಲ ಎಂದರು.

ನವದೆಹಲಿಯಲ್ಲಿ ಶೀಘ್ರದಲ್ಲೇ ಸರ್ವ ಶಿಕ್ಷಣ ಅಭಿಯಾನದ ಯೋಜನೆ ಅನುಷ್ಠಾನ ಸಭೆ ನಡೆಯಲಿದ್ದು, ರಾಜ್ಯದಲ್ಲಿ ಈ ವರ್ಷ ಎರಡು ಜೊತೆ ಸಮವಸ್ತ್ರ ನೀಡುವಂತೆ ಒತ್ತಾಯಿಸಲಾಗುವುದು. ಕೇಂದ್ರವು ಇದಕ್ಕೆ ಸಮ್ಮತಿ ನೀಡುವ ನಿರೀಕ್ಷೆ ಇದೆ ಎಂದು ಹೇಳಿದರು.

ಅರ್ಹ ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣೆಗೂ ಸಿದ್ಧತೆ ನಡೆದಿದ್ದು, ಜೂನ್‌ 1ರ ವೇಳೆಗೆ ಎಲ್ಲರಿಗೂ ಸೈಕಲ್‌ ವಿತರಿಸುವುದು ಅಸಾಧ್ಯವಾಗಬಹುದು, ಆದರೆ ವಿತರಣೆಯಲ್ಲಿ ವಿಳಂಬ ಆಗದಂತೆ ಎಚ್ಚರ ವಹಿಸಲಾಗುವುದು ಎಂದರು.

ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಸಿದ್ಧತೆ

‘ಈ ವರ್ಷದ ಬಜೆಟ್‌ನಲ್ಲಿ ಘೋಷಿಸಿದಂತೆ 1,000 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ’ ಎಂದು ಎಂ.ಟಿ.ರೇಜು ವಿವರಿಸಿದರು. ‘ಇಂಗ್ಲಿಷ್‌ ಭಾಷೆಯ ಮೇಲೆ ಹಿಡಿತ ಇರುವ ರಾಜ್ಯದ 5 ಸಾವಿರ ಶಿಕ್ಷಕರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಾಗಿದೆ. ಕನ್ನಡ ಪಠ್ಯವನ್ನೇ ಇಂಗ್ಲಿಷ್‌ಗೆ ಭಾಷಾಂತರಿಸಿ ಬೋಧಿಸಲಾಗುತ್ತದೆ. ಗಣಿತ ಮತ್ತು ಇಂಗ್ಲಿಷ್‌ ಪಠ್ಯಗಳು ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿ ಇರಲಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು