ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಜಾನುವಾರು ಮೇವಿನ ಸಮಸ್ಯೆ ಉಲ್ಬಣಗೊಂಡಿದ್ದು, ಹುಲ್ಲಿಗಾಗಿ ತೀವ್ರ ಹುಡುಕಾಟ ಆರಂಭವಾಗಿದೆ. ಹಣ ಕೊಟ್ಟರೂ ಹುಲ್ಲು ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮುಖ್ಯವಾಗಿ ಸೀಮೆ ಹಸು ಸಾಕಿರುವ ಹಾಲು ಉತ್ಪಾದಕರು ಕಂಗಾಲಾಗಿದ್ದಾರೆ.

ಮಳೆ ಸರಿಯಾಗಿ ನಡೆದಿದ್ದರೆ ಈಗ ಸುಗ್ಗಿ ಸಂಭ್ರಮ ಮನೆ ಮಾಡಬೇಕಾಗಿತ್ತು. ಆದರೆ ಬಿತ್ತಿದ ಕಾಳು ಮಣ್ಣುಪಾಲಾದ ಪರಿಣಾಮವಾಗಿ ಸೊಲಿಗೆ ಕಾಳು ಮನೆ ಸೇರಿಲ್ಲ. ಜತೆಗೆ ಹಿಡಿ ಹುಲ್ಲು ಕೈಗೆ ಸಿಕ್ಕಿಲ್ಲ. ಅಳಿದುಳಿದ ಹುಲ್ಲು ಈಗಾಗಲೇ ಮುಗಿದು ಹೋಗಿದೆ. ದನ ಸಾಕುವ ಜವಾಬ್ದಾರಿ ಹೊತ್ತ ಗ್ರಾಮೀಣ ಮಹಿಳೆಯರು ಹಾಗೂ ಪುರುಷರು ಬಯಲಿನ ಮೇಲೆ ಒಣಗಿದ ಹುಲ್ಲನ್ನು ಒರೆದು ತಂದು ಜಾನುವಾರು ಜೀವ ಉಳಿಸುವ ಕಾರ್ಯ ಮಾಡುತ್ತಿದ್ದಾರೆ.

ಸೀಮೆ ಹಸು ಪಾಲನೆ ಇಲ್ಲಿನ ರೈತರ ಮುಖ್ಯ ಕಸುಬು. ಮೊದಲ ಮಳೆಯಾದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ರೈತರು, ಜಾನುವಾರು ಮೇವಿಗಾಗಿ, ಜೋಳ ಬಿತ್ತನೆ ಮಾಡಿದ್ದರು. ಮೊಳಕೆಯೂ ಬಂದಿತ್ತು. ಆದರೆ ಮತ್ತೆ ಮಳೆ ಕೈಕೊಟ್ಟಿದ್ದರಿಂದ ಜೋಳದ ಪೈರು ಒಣಗಿ ಸುರುಗಾಗಿದೆ. ಇಷ್ಟು ದಿನ ಕೊಳವೆ ಬಾವಿಗಳ ಆಶ್ರಯದಲ್ಲಿ ಬೆಳೆದಿದ್ದ ಮುಸುಕಿನ ಜೋಳದ ದಂಟು ಖರೀದಿಸಿ ಸೀಮೆ ಹಸುಗಳಿಗೆ ಮೇವಾಗಿ ನೀಡಲಾಗುತ್ತಿತ್ತು. ಜಾನುವಾರು ಮೇವು ಬೆಳೆಯುತ್ತಿದ್ದ ರೈತರು ಟೊಮೆಟೊ ಬೆಳೆಯಲು ಪ್ರಾರಂಭಿಸಿದ ಮೇಲೆ ಖರೀದಿಸಲು ಹಸಿರು ಮೇವಿನ ಲಭ್ಯತೆ ಪ್ರಮಾಣ ಕುಸಿಯಿತು.

‘ಈಗಾಗಲೇ ಹಸಿರು ಮೇವಿನ ಕೊರತೆಯಿಂದ ಹಾಲಿನಲ್ಲಿ ಎಸ್‌ಎನ್‌ಎಫ್ ಪ್ರಮಾಣ ಕಡಿಮೆಯಾಗಿ, ನಿರೀಕ್ಷಿತ ದರ ಸಿಗುತ್ತಿಲ್ಲ. ಪಶು ಆಹಾರದ ಬೆಲೆ ಗಗನಕ್ಕೇರಿದ್ದು, ಹಾಲು ಉತ್ಪಾದನೆ ವೆಚ್ಚದಾಯಕ ಕಸುಬಾಗಿ ಪರಿಣಮಿಸಿದೆ’ ಎಂದು ಶ್ರೀನಿವಾಸಪುರದ ಹಾಲು ಉತ್ಪಾದಕ ವೆಂಕಟರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾವಿನ ತೋಟಗಳಲ್ಲಿ ಬೆಳೆದಿದ್ದ ಹುಲ್ಲು ಒಣಗಿ ಹೋಗಿದೆ. ಕಾಡು ಮೇಡಲ್ಲಿ ದೊರೆಯುವ ಹುಲ್ಲಿನ ಪರಿಸ್ಥಿತಿಯೂ ಇದೇ ಆಗಿದೆ. ಹಾಗಾಗಿ ಅನ್ಯ ಮಾರ್ಗವಿಲ್ಲದೆ, ಅದೇ ಹುಲ್ಲನ್ನು ಸಂಗ್ರಹಿಸಿ ತಂದು ದನಗಳ ಬಾಯಿಗೆ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ದೂರ ಪ್ರದೇಶಗಳಿಗೆ ಬೈಕ್ ಮೇಲೆ ಹೋಗಿ ಹುಲ್ಲು ಸಂಗ್ರಹಿಸಿ ತರುವ ರೈತರಿಗೂ ಕೊರತೆಯಿಲ್ಲ.

‘ಒಂದು ವಾರದಿಂದ ಒಣ ಹುಲ್ಲು ಖರೀದಿಸಲು ಸುತ್ತಾಡುತ್ತಿದ್ದೇನೆ. ಹುಲ್ಲು ಸಿಗುತ್ತಿಲ್ಲ. ಅಪ್ಪಿತಪ್ಪಿ ಕೆಲವು ಗ್ರಾಮಗಳ ಸಮೀಪ ದನ ಹೊಂದಿಲ್ಲದ ರೈತರು ಲಭ್ಯವಿರುವ ಹುಲ್ಲು ಮಾರಲು ಮುಂದೆ ಬಂದರೂ, ಒಂದು ಟ್ರಾಕ್ಟರ್ ಹುಲ್ಲಿಗೆ ₹ 15 ರಿಂದ 17 ಸಾವಿರ ಕೇಳುತ್ತಾರೆ. ಅದರ ಮೇಲೆ ಸಾಗಿಸಲು ದುಬಾರಿ ಟ್ರಾಕ್ಟರ್ ಬಾಡಿಗೆ ಕೊಡಬೇಕು. ಅಷ್ಟು ಹಣ ಕೊಟ್ಟು ಹುಲ್ಲು ಖರೀದಿಸಿ ಜಾನುವಾರು ಪಾಲನೆ ಮಾಡುವುದಾದರೂ ಹೇಗೆ?’ ಎಂಬುದು ಪನಸಮಾಕನಹಳ್ಳಿ ಗ್ರಾಮದ ಕೃಷಿಕ ಕೃಷ್ಣಪ್ಪ ಅವರ ಪ್ರಶ್ನೆ.

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹಸಿರು ಮೇವು ಸಿಗದ ಸಂದರ್ಭದಲ್ಲಿ ಅರಳಿ, ಬೇವು ಮತ್ತಿತರ ಮರಗಳಿಂದ ಸೊಪ್ಪು ಕೊಯ್ದು ಜಾನುವಾರುಗಳಿಗೆ ಹಾಕುವುದು ರೂಢಿ. ಆದರೆ ಸುಗ್ಗಿ ಕಾಲದಲ್ಲಿಯೇ ಮೇವಿನ ಸಮಸ್ಯೆ ತಲೆದೋರಿದ್ದು, ರೈತರು ಮರದ ಸೊಪ್ಪನ್ನು ಕೊಯ್ದು ದನಕರುಗಳಿಗೆ ಹಾಕುತ್ತಿದ್ದಾರೆ. ದನಗಳನ್ನು ಮಾರಿ ಕೈತೊಳೆದುಕೊಳ್ಳಲು ಕೆಲವು ರೈತರು ಮುಂದಾಗಿದ್ದಾರಾದರೂ, ಬರದ ಬವಣೆಯಿಂದಾಗಿ ರೈತರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಬೇರೆ ಉದ್ದೇಶಕ್ಕಾಗಿ ಖರೀದಿಸುವವರು ಅತ್ಯಂತ ಕಡಿಮೆ ಬೆಲೆಗೆ ಕೇಳುತ್ತಾರೆ.

ಕೆರೆ, ಕುಂಟೆಗಳು ಖಾಲಿಯಾಗಿರುವುದರಿಂದ ಜಾನುವಾರು ಕುಡಿಯುವ ನೀರಿನ ಸಮಸ್ಯೆಯೂ ಉಂಟಾಗಿದೆ. ಅಲ್ಪ ಸ್ವಲ್ಪ ನೀರುಳ್ಳ ದೂರದ ಹಳ್ಳಗಳಿಗೆ ಹೋಗಿ, ಕುರಿ, ಮೇಕೆ, ಎತ್ತು, ಎಮ್ಮೆಗಳ ದಾಹ ನೀಗಲಾಗುತ್ತಿದೆ. ನೀರು ಕುಡಿಸಲು ಊರಿಂದ ಊರಿಗೆ ಕುರಿ ಮೇಕೆಗಳನ್ನು ಹೊಡೆದುಕೊಂಡು ಹೋಗುವುದು ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.