ಅರಿವಿನ ಜತೆ ಬದುಕು ಕೊಟ್ಟ ಲೋಕಗುರು

7

ಅರಿವಿನ ಜತೆ ಬದುಕು ಕೊಟ್ಟ ಲೋಕಗುರು

Published:
Updated:

ಮುಂಜಾವಿನ 5ರ ಹೊತ್ತು. ಸ್ವಾಮೀಜಿ ನಡೆದು ಬರುತ್ತಿದ್ದರೆ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳೆಲ್ಲ ಲಘುಬಗೆಯಿಂದಲೇ ಏಳುತ್ತಿದ್ದರು. ನಿತ್ಯದ ಕರ್ಮ ಮುಗಿಸಿ ಪ್ರಾರ್ಥನೆಗೆ ಅಣಿಯಾಗುತ್ತಿದ್ದರು. ಶ್ವೇತವರ್ಣದ ಪಂಚೆ, ಭುಜದ ಮೇಲೊಂದು ತಿಳಿಗುಲಾಬಿ ವರ್ಣದ ಬೈರಾಸು (ಶಾಲು) ಹೊದ್ದು ಮಠದ ಆವರಣಕ್ಕೆ ಸಾಲಾಗಿ ಅಡಿ ಇಡುತ್ತಲೇ ಅಂದಿನ ಪ್ರಾರ್ಥನೆ ಶುರು. ಸ್ವಾಮೀಜಿಯೊಂದಿಗೆ ಸಾವಿರಾರು ಮಕ್ಕಳ ಕಂಠದಿಂದ ಮೊಳಗುತ್ತಿದ್ದ ಆ ಪ್ರಾರ್ಥನೆ ಕೇಳಲೆಂದೇ ನಿತ್ಯ ನೂರಾರು ಜನ ಸೇರುತ್ತಿದ್ದರು.

ಪ್ರಾರ್ಥನೆ ಮುಗಿಯುತ್ತಲೇ ಸ್ವಾಮೀಜಿಯಿಂದ ಮಕ್ಕಳಿಗೆ ಶಿಸ್ತಿನ ಪಾಠ. ಪ್ರಾರ್ಥನೆಗೆ ಗೈರಾಗುವ ಮಕ್ಕಳಿಗೆ ಆ ದಿನ ಬೆತ್ತದಿಂದ ಪ್ರೀತಿಯ ಏಟು. ಬಳಿಕ ಮಕ್ಕಳು ಪಾಠ, ಪ್ರವಚನಗಳಲ್ಲಿ ತಲ್ಲೀನರಾಗುತ್ತಿದ್ದರು.

ಮಠದ ಆವರಣದಲ್ಲಿ ಹಲವಾರು ವರ್ಷಗಳಿಂದ ನಿತ್ಯವೂ ಅನೂಚಾನವಾಗಿ ನಡೆಯುತ್ತಿದ್ದ ಪದ್ಧತಿ ಇದು. ಬೆಳಿಗ್ಗೆ ಮತ್ತು ಸಂಜೆ ಮಕ್ಕಳೊಂದಿಗೆ ಪ್ರಾರ್ಥನೆ ಮಾಡುವುದನ್ನು ಸ್ವಾಮೀಜಿ ಎಂದಿಗೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅದು ಅವರ ಇಷ್ಟದ ಸಮಯವೂ ಆಗಿತ್ತು. ನಸುಕಿನಲ್ಲೇ ಏಳುವ ಕ್ರಮ ವಿದ್ಯಾರ್ಥಿಗಳನ್ನು ಜಾಗೃತರನ್ನಾಗಿ ಮಾಡುತ್ತಿತ್ತು. ಈ ಶಿಸ್ತುಬದ್ಧ ದಿನಚರಿಯೇ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಕಾಗಿದೆ.

ಶತಮಾನದಿಂದಲೂ ಅನ್ನದಾಸೋಹಕ್ಕೆ ಹೆಸರಾಗಿರುವ ಸಿದ್ಧಗಂಗಾ ಮಠ ಅಕ್ಷರ ದಾಸೋಹ ದಲ್ಲೂ ಅಷ್ಟೇ ಹೆಸರು ಮಾಡಿದೆ. ಜಾತಿ, ಧರ್ಮ ತಾರತಮ್ಯ ಎಣಿಸದೆ ವಿದ್ಯಾರ್ಥಿಗಳಿಗೆ ಆಶ್ರಯ, ಊಟ ನೀಡಿ ಅಕ್ಷರವಂತರನ್ನಾಗಿ ಮಾಡಿದ ಹಿರಿಮೆ ಶಿವಕುಮಾರ ಸ್ವಾಮೀಜಿಯವರದ್ದು.

ಮಠದಲ್ಲಿ ಕಲಿಯುವ ಮಕ್ಕಳಿಗೆ ಸಂಸ್ಕೃತ ಅಭ್ಯಾಸ ಕಡ್ಡಾಯ. ‘ಸಂಸ್ಕೃತ ಕಲಿಯುವ ಮಕ್ಕಳು ಸಂಸ್ಕಾರವಂತರಾಗುತ್ತಾರೆ’ ಎಂಬುದು ಸ್ವಾಮೀಜಿಗಳ ಬಲವಾದ ನಂಬಿಕೆ. ಬೆಳಗಿನ ಪ್ರಾರ್ಥನೆ ನಂತರದ ಸಮಯವನ್ನು ಮಕ್ಕಳ ಸಂಸ್ಕೃತ ಕಲಿಕೆಗೆ ಮೀಸಲಿಟ್ಟಿದ್ದರು. ಜತೆಗೆ ಇಂಗ್ಲಿಷ್‌ ಕಲಿಕೆಗೂ ಅಷ್ಟೇ ಒತ್ತು ನೀಡಿದ್ದರು. ಸಂಸ್ಕೃತ ಹಾಗೂ ಇಂಗ್ಲಿಷ್‌ ವ್ಯಾಕರಣ ತರಗತಿಗಳನ್ನು ಸ್ವಾಮೀಜಿ ತೆಗೆದುಕೊಳ್ಳುತ್ತಿದ್ದರು.

‘ಜ್ಞಾನವೇ ಬದುಕಿನ ದೀವಿಗೆ’ ಎಂಬುದನ್ನು ಅರಿತಿದ್ದ ಸ್ವಾಮೀಜಿ ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟರು. ಇದರ ಫಲವಾಗಿ ಇಂದು ರಾಜ್ಯದಾದ್ಯಂತ ಮಠದ 125ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಸಾವಿರಾರು ವಿದ್ಯಾರ್ಥಿಗಳ ಜ್ಞಾನದಾಹ ನೀಗಿಸುತ್ತಿವೆ.

ಸರ್ಕಾರವಿನ್ನೂ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡದಿದ್ದ ಕಾಲದಲ್ಲೇ ಮಠ ಅದರ ಮಹತ್ವವನ್ನರಿತಿತ್ತು. ‘ಉಚಿತ ಶಿಕ್ಷಣ, ವಸತಿ, ಊಟ’ ಸಾವಿರಾರು ಮಕ್ಕಳ ಬದುಕಿಗೆ ದೀವಿಗೆ ಹಚ್ಚಿತ್ತು.

ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ದಿನಗಳಲ್ಲಿ ರಾಜ್ಯ ಪ್ರಕ್ಷುಬ್ಧ ದಿನಗಳನ್ನು ಎದುರಿಸುತ್ತಿತ್ತು. ಅಂತಹ ದಿನಮಾನಗಳಲ್ಲಿ ಮಠ ಉಚಿತ ಶಿಕ್ಷಣದ ಮೂಲಕ ಅಕ್ಷರ ಯಾತ್ರೆಯನ್ನು ಮುಂದುವರಿಸಿತು. ಬಡವರು, ನಿರ್ಗತಿಕರು, ಅನಾಥಮಕ್ಕಳು ಜಾತಿ, ಧರ್ಮದ ಅಂಕೆಯಿಲ್ಲದೆ ಮಠದ ಶಾಲೆಗೆ ದಾಖಲಾದರು. ಇಂದೂ ಹಲವು ಮುಸ್ಲಿಂ ವಿದ್ಯಾರ್ಥಿಗಳೂ ಮಠದಲ್ಲಿ ಕಲಿಯುತ್ತಿದ್ದಾರೆ.

ಭಗವದ್ಗೀತೆಯ ಶ್ಲೋಕಗಳನ್ನು ಪಟಪಟನೆ ನುಡಿಯುತ್ತ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ₹ 1 ಕೋಟಿ ಗೆದ್ದು ನಾಡಿನ ಗಮನ ಸೆಳೆದ ಗಂಗಾವತಿಯ ಹುಸೇನ್‌ ಭಾಷಾ ಕಲಿತಿದ್ದು ಸಿದ್ಧಗಂಗೆಯಲ್ಲಿ. ಕೋಟಿ ಗೆದ್ದ ಹುಸೇನ್‌ ಮೊದಲು ನಮಿಸಿದ್ದು ‘ಶಿವಕುಮಾರ ಗುರುವಿಗೆ’

ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಒಪ್ಪತ್ತಿನ ಊಟಕ್ಕೂ ಪರದಾಡುವ ಕುಟುಂಬ ಉದ್ಯೋಗ ಅರಸಿ ಗುಳೆ ಹೋಗುವ ಪರಿಪಾಠ ಉತ್ತರ ಕರ್ನಾಟಕ ಭಾಗದಲ್ಲಿ ಬೇರೂರಿತ್ತು. ಆ ಸಮಯದಲ್ಲಿ ಮಕ್ಕಳನ್ನು ಜತೆಗೆ ಕರೆದುಕೊಂಡು ಹೋಗಲಾಗದೆ ಮಠಕ್ಕೆ ತಂದು ಬಿಡುತ್ತಿದ್ದರು ಪೋಷಕರು. ಮಗು ಮಠದಲ್ಲಿದೆ ಎಂದರೆ ತಂದೆ–ತಾಯಿಗೂ ಏನೋ ಸಮಾಧಾನ. ‘ಮಗಿಗೆ ನಾಲ್ಕು ಅಕ್ಸರ ಕಲಿಸಿ ಬುದ್ದಿ’ ಎಂದು ಸ್ವಾಮೀಜಿ ಬಳಿ ಬಿಟ್ಟು ಹೋಗುತ್ತಿದ್ದ ಪೋಷಕರು ಮತ್ತೆ ಬರುತ್ತಿದ್ದದ್ದು ಬೇಸಿಗೆ ರಜೆ ಬಂದಾಗಲೇ. ಅಂತಹ ಮಕ್ಕಳಿಗೆಲ್ಲ ತಂದೆ–ತಾಯಿ ಪ್ರೀತಿ ಕೊಟ್ಟಿದ್ದಾರೆ ಸ್ವಾಮೀಜಿ. ಶೈಕ್ಷಣಿಕವಾಗಿ ಬಹಳಷ್ಟು ಹಿಂದುಳಿದಿದ್ದ ಉತ್ತರ ಕರ್ನಾಟಕ ಭಾಗದ ಸಾಕಷ್ಟು ಮಕ್ಕಳು ಮಠದಲ್ಲಿ ಆಶ್ರಯ ಪಡೆದಿದ್ದಾರೆ. ಈಗಲೂ ಮಠದಲ್ಲಿರುವ ಬಹುಪಾಲು ಮಕ್ಕಳು ಆ ಭಾಗದವರೇ.

ಬದುಕಿನ ಪಾಠ: ಮಠದಲ್ಲಿ ಕಲಿತ ಪ್ರತಿಯೊಬ್ಬರೂ ಇಂದು ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ದಾರೆ. ಅದಕ್ಕೆ ಮೂಲ ಮಠದಲ್ಲಿ ಕಲಿಸುತ್ತಿದ್ದ ಬದುಕಿನ ಪಾಠ. ಅಕ್ಷರಜ್ಞಾನದ ಜತೆಗೆ ಬದುಕಿಗೆ ಬೇಕಾದ ಶಿಕ್ಷಣವನ್ನೂ ಸ್ವಾಮೀಜಿ ಕಲಿಸಿದ್ದಾರೆ.

ಬಿಡುವಿನ ಸಮಯದಲ್ಲಿ ಮಠದ ಹೊಲ, ತೋಟದ ಕೆಲಸಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುತ್ತಿದ್ದರು. ಭತ್ತ, ರಾಗಿ ನಾಟಿ, ಕಳೆ ಕೀಳುವುದು, ಕೊಯ್ಲು, ಒಕ್ಕಣೆ ಮಾಡುವುದು ಈ ಎಲ್ಲ ಕೆಲಸಗಳನ್ನೂ ಸ್ವಾಮೀಜಿ ಮಕ್ಕಳಿಗೆ ಕೈ ಹಿಡಿದು ಕಲಿಸಿದ್ದಾರೆ. ಕಾಲೇಜು ಮಕ್ಕಳಲ್ಲಿ ಸೌದೆಯನ್ನೂ ಒಡೆಸಿದ್ದಾರೆ. ಕಾಯಕ ಮತ್ತು ಶ್ರಮಸಂಸ್ಕೃತಿಯೂ ಬದುಕಿನ ಭಾಗ ಎಂಬುದನ್ನು ಮನವರಿಕೆ ಮಾಡಿಸಿದ್ದಾರೆ.

ಸ್ವಾಮೀಜಿ ಮಕ್ಕಳನ್ನು ಕೂರಿಸಿಕೊಂಡು ನೀತಿಕಥೆಗಳನ್ನು ಹೇಳುತ್ತಿದ್ದರು. ಅದರಲ್ಲಿ ಗಾಂಧೀಜಿ, ಬಸವಣ್ಣನ ಕುರಿತಾದ ಕಥೆಗಳು ಹೆಚ್ಚಿರುತ್ತಿದ್ದವು. ಇವರ ಗರಡಿಯಲ್ಲಿ ಬೆಳೆದ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ, ಹಿರಿಯ ಸಾಹಿತಿಗಳಾದ ಜಿ.ಎಸ್‌. ಸಿದ್ದಲಿಂಗಯ್ಯ, ಗೊ.ರು.ಚನ್ನಬಸಪ್ಪ, ಕುಂ.ವೀರಭದ್ರಪ್ಪ ಮಠದಲ್ಲಿಂದಲೇ ಸಾಹಿತ್ಯದ ನಂಟನ್ನು ಬೆಳೆಸಿಕೊಂಡಿದ್ದರು.

ಸ್ನಾನ ಮಾಡಿಸುತ್ತಿದ್ದರು: ಮಠಕ್ಕೆ ದಾಖಲಾಗುತ್ತಿದ್ದ ಐದಾರು ವರ್ಷದ ಮಕ್ಕಳಿಗೆ ಸ್ವಕಾರ್ಯಗಳ ಬಗ್ಗೆ ಅರಿವಿರುವುದಿಲ್ಲ. ಅಂತವರಿಗೆಲ್ಲ ತಾಯಿ ಪ್ರೀತಿ ತೋರುತ್ತಿದ್ದ ಸ್ವಾಮೀಜಿ ಸ್ನಾನ ಮಾಡುವುದು, ಬಟ್ಟೆ ತೊಳೆಯುವುದನ್ನು ಕೈ ಹಿಡಿದು ಕಲಿಸಿದ್ದಾರೆ. ತುಂಟ ಮಕ್ಕಳನ್ನು ಕಂಡರೆ ಸ್ವಾಮೀಜಿಗೆ ಎಲ್ಲಿಲ್ಲದ ಪ್ರೀತಿ. ಮಕ್ಕಳ ಹಟ, ಮುಂಗೋಪವನ್ನು ಅಷ್ಟೇ ನಯವಾಗಿ ನಿಭಾಯಿಸುತ್ತಿದ್ದರು.

‘ನಾಟಕದ’ ಮಕ್ಕಳನ್ನು ಕಂಡರೆ ಸ್ವಾಮೀಜಿಗೆ ಬಲು ಪ್ರೀತಿ. ‘ಜಗಜ್ಯೋತಿ ಬಸವೇಶ್ವರ’ ನಾಟಕದಲ್ಲಿ ಮಕ್ಕಳನ್ನು ತೊಡಗಿಸಿ, ಅಭಿನಯದ ಕಲೆಯನ್ನೂ ಕಲಿಸಿದ್ದಾರೆ. ಕಣ್ಣಳತೆಯಲ್ಲೇ ಮಕ್ಕಳ ಪ್ರತಿಭೆಯನ್ನು ಗುರುತಿಸುತ್ತಿದ್ದ ಶ್ರೀಗಳು ‘ಇವನನ್ನು ಅಕ್ಕಮಹಾದೇವಿ ಪಾತ್ರಕ್ಕೆ ಹಾಕಿಕೊ, ಆತನನ್ನು ಮಂತ್ರಿಯ ಪಾತ್ರಕ್ಕೆ ಹಾಕಿಕೊ’ ಎಂದು ನಿರ್ದೇಶಕರಿಗೆ ಸಲಹೆ ಕೊಡುತ್ತಿದ್ದರಂತೆ. ಅವರ ಸಲಹೆಗೆ ತಕ್ಕಂತೇ ಆ ಮಕ್ಕಳಿಗೆ ಪಾತ್ರ ಒಪ್ಪುತ್ತಿತ್ತು.

ಎಂದಿಗೂ ಯಾರೂ ಹಸಿವಿನಿಂದ ಇರುವುದನ್ನು ಸ್ವಾಮೀಜಿ ಸಹಿಸುತ್ತಿರಲಿಲ್ಲ. ಅದರಲ್ಲೂ ಮಕ್ಕಳು ಉಪವಾಸ ಇರಲೇ ಕೂಡದಿತ್ತು. ಹುಷಾರಿಲ್ಲವೆಂದರೂ ಒಂದೆರೆಡು ತುತ್ತಾದರೂ ಊಟ ಮಾಡಬೇಕಿತ್ತು. ಚಿಕ್ಕ ಮಕ್ಕಳು ಚೆಲ್ಲಾಡಿಕೊಂಡು ಊಟ ಮಾಡಿದರೆ ಸ್ವಾಮೀಜಿಗೆ ತೃಪ್ತಿ. ತಿಂಗಳಿಗೊ, ಮೂರು ತಿಂಗಳಿಗೊ ಒಮ್ಮೆ ಮಠದಲ್ಲಿ ಸಿಹಿ ಮಾಡುವಾಗ ಸ್ವಾಮೀಜಿಯೂ ಅಡುಗೆ ತಯಾರಿಗೆ ಜತೆಯಾಗುತ್ತಿದ್ದರು. ರುಚಿಯಾದ ಅಡುಗೆಗೆ ಆದ್ಯತೆ ನೀಡುತ್ತಿದ್ದ ಸ್ವಾಮೀಜಿ, ತುತ್ತು ಅನ್ನವನ್ನೂ ವ್ಯರ್ಥ ಮಾಡದಂತೆ ಮಕ್ಕಳಿಗೆ ಬೇಕಾದಷ್ಟನ್ನೇ ಬಡಿಸಲು ಸೂಚಿಸುತ್ತಿದ್ದರು. ಸ್ವಾಮೀಜಿ ಆಗಾಗ ಹೇಳುತ್ತಿದ್ದ ‘ತುತ್ತು ಅನ್ನದ ಹಿಂದೆ ಸಾವಿರ ಕೈಗಳ ಶ್ರಮವಿದೆ’ ಎಂಬ ಬರಹ ಮಠದ ಊಟದ ಕೋಣೆಯಲ್ಲಿ ಈಗಲೂ ಇದೆ. 

ಮರಕೋತಿ ಆಟ ಪ್ರಿಯ

ಶಿವಕುಮಾರ ಸ್ವಾಮೀಜಿ ಅವರು ಬಾಲ್ಯದಲ್ಲಿ ಶಿವಣ್ಣನಾಗಿದ್ದಾಗ ಮರಕೋತಿಯ ಆಟ ಅತ್ಯಂತ ಪ್ರಿಯವಾದುದು. ಅವರ ಮರಕೋತಿಯ ಆಟ ಗ್ರಾಮದ ಬಳಿ ಇದ್ದ ಅವರ ಜಮೀನಿನ ಹಿಪ್ಪೇಮರದಲ್ಲಿ ನಡೆಯುತ್ತಿತ್ತು. ಈ ಮರಕೋತಿಯ ಆಟದಲ್ಲಿನ ವೇಗ, ಶಿವಣ್ಣ ಅವರ ಸಹಪಾಠಿಗಳಲ್ಲಿ ಅಚ್ಚರಿ ಉಂಟು ಮಾಡುತ್ತಿತ್ತು. ಮನೆಯಲ್ಲಿ ಸಹೋದರರ ಜತೆ ಜಗಳ ಮಾಡಿಕೊಂಡರೆ ಶಿವಣ್ಣ ಅವರು ಬಂದು ಕುಳಿತುಕೊಳ್ಳುತ್ತಿದ್ದು ಅವರ ತೋಟದಲ್ಲಿನ ಹಿಪ್ಪೇಮರದ ಕೆಳಗೆ. ಈ ಮರವನ್ನು 1979ರ ಸುಮಾರಿನಲ್ಲಿ ಕತ್ತರಿಸಲಾಯಿತು. ಸಿದ್ಧಗಂಗಾ ಮಠದ ದಾಸೋಹಕ್ಕೆ ಈ ಮರದ ಬುಡವನ್ನು ಸೌದೆಯಾಗಿ ತಂದು ಹಾಕಲಾಯಿತು.

ನಿಮಗೆ ದಕ್ಕುವ ಮಗನಲ್ಲ; ಸನ್ಯಾಸಿ ಹೇಳಿದ್ದ ಭವಿಷ್ಯ

ಶಿವಣ್ಣನಿಗೆ ಇನ್ನೂ ನಾಲ್ಕೈದು ವರ್ಷ. ವೀರಾಪುರಕ್ಕೆ ಹಸ್ತ ನೋಡಿ ಭವಿಷ್ಯ ಹೇಳುವ ಸನ್ಯಾಸಿಯೊಬ್ಬರು ಬಂದರು. ಪಟೇಲರ ಮನೆಯ ಮುಂದೆ ಕುಳಿತರು. ಹಸ್ತ ಸಾಮುದ್ರಿಕೆಯ ಕಡತ ಬಿಚ್ಚಿದರು. ಹಳ್ಳಿಯ ಒಬ್ಬೊಬ್ಬರೇ ಬಂದು ತಮ್ಮ ಭವಿಷ್ಯವನ್ನು ತಿಳಿಯುತ್ತಿದ್ದರು. ಪಟೇಲರ ಪಕ್ಕದಲ್ಲಿಯೇ ಇದ್ದ ಶಿವಣ್ಣನ ಮೇಲೆ ಸನ್ಯಾಸಿಯ ಕಣ್ಣು ಬಿತ್ತು.

ಶಿವಣ್ಣನ ಕೈ ನೋಡಿ ಆ ಕೈಯನ್ನು ಕಣ್ಣಿಗೆ ಒತ್ತಿಕೊಂಡರು ಆ ಸನ್ಯಾಸಿ. ‘ಸ್ವಾಮಿ ಇಷ್ಟೊಂದು ಶುಭ ಲಕ್ಷಣದ ಕೈಯನ್ನು ನಾನು ನೋಡಿಲ್ಲ. ಇವನೊಬ್ಬ ಮಹಾ ಭಾಗ್ಯವಂತ. ಅನ್ನದಾನಿ. ಇವನಿಂದ ನಾಡು ಬೆಳಗುತ್ತದೆ. ಇವನೇನಿದ್ದರೂ ಕಾರಣಪುರುಷ. ನಿಮಗೆ ದಕ್ಕುವ ಮಗನಲ್ಲ’ ಎಂದು ಭವಿಷ್ಯ ನುಡಿದರು. ಪಟೇಲರು ಆ ಮಾತುಗಳನ್ನು ಅಷ್ಟೊಂದು ಗಂಭೀರವಾಗಿ ಗಮನಿಸಲಿಲ್ಲ.

ತುಪ್ಪ ಮತ್ತು ಅನ್ನದ ಪ್ರೀತಿ

ಶಿವಣ್ಣ ಬಾಲಕರಾಗಿದ್ದಾಗ ತುಪ್ಪ ಮತ್ತು ಅನ್ನದ ಬಗ್ಗೆ ಹೆಚ್ಚು ಇಷ್ಟಪಡುತ್ತಿದ್ದರು. ಆ ಪ್ರಸಂಗವೊಂದನ್ನು ಸ್ವಾಮೀಜಿ ಅವರ ಪೂರ್ವಾಶ್ರಮದ ಸಹೋದರಿ ಗೌರಮ್ಮ ಹೀಗೆ ನೆನಪಿಸಿಕೊಂಡಿದ್ದಾರೆ: ‘ನಮ್ಮ ಶಿವಣ್ಣನಿಗೆ ಅನ್ನದ ಮೇಲೆ ತುಪ್ಪ ಹಾಕಿ ಅದನ್ನು ಕಲಸಿ ಮುಷ್ಟಿಯಲ್ಲಿ ಆ ಅನ್ನವನ್ನು ಹಿಚುಕಿದರೆ ಬೆರಳು ಸಂದಿಯಿಂದ ತುಪ್ಪ ಹೊರಬರಬೇಕು. ಹಾಗಿದ್ದರೆ ಮಾತ್ರ ಶಿವಣ್ಣ ಅನ್ನ ಉಣ್ಣುತ್ತಿದ್ದುದು. ಇಲ್ಲದಿದ್ದರೆ, ‘ಅಕ್ಕಾ ನೋಡಿಲ್ಲಿ ನೀನು ನೀಡಿದ ತುಪ್ಪ ಅನ್ನಕ್ಕೆ ಹತ್ತಲಿಲ್ಲ. ಇನ್ನಷ್ಟು ಹಾಕಿದರೇ ನಾನು ಉಣ್ಣುವುದು’ ಎಂದು ಹೇಳುತ್ತಿದ್ದರು.

ಭಕ್ತರೊಂದಿಗೆ ಪತ್ರ ವ್ಯವಹಾರವೂ ದಾಖಲೆ

ಮಠದಲ್ಲಿರುವ ಲಕ್ಷಾಂತರ ಪತ್ರಗಳು ಸ್ವಾಮೀಜಿ ಅವರ ಸಾಧನೆ ಮತ್ತು ಅವರ ಹಾದಿಯ ಕುರಿತು ಮಹತ್ವದ ಮಾಹಿತಿ ನೀಡುತ್ತವೆ. ಈ ಪತ್ರಗಳನ್ನು ಈಗಾಗಲೇ ವಿಂಗಡಿಸಿದ್ದು ದಾಖಲೆಗಳಾಗಿ ಸಂಗ್ರಹಿಸಲಾಗಿದೆ.

ವಿಶೇಷವಾಗಿ 1970–80ರ ದಶಕದಲ್ಲಿಯೇ ವಿದೇಶಗಳಿಂದ ಭಕ್ತರು ಪತ್ರಗಳನ್ನು ಬರೆದಿದ್ದಾರೆ. 1986ರಲ್ಲಿ ನೆದರ್‌ಲೆಂಡ್‌ನ ರೋರೆಗೋತ್ ಎಂಬುವವರು ಸ್ವಾಮೀಜಿ ಅವರ ಸಾಮಾಜಿಕ ಕಾರ್ಯ ಮೆಚ್ಚಿ ಪತ್ರ ಬರೆದಿದ್ದಾರೆ. ‘ನಿಮ್ಮಂತಹ ಸಮಾಜ ಸೇವಕರ ಅಗತ್ಯ ಇದೆ’ ಎಂದು ಮನದುಂಬಿ ನುಡಿದಿದ್ದಾರೆ.

ಹಳ್ಳಿಗಾಡಿನತ್ತ ಅಕ್ಷರ ಪಯಣ

ಗ್ರಾಮೀಣ ಮಕ್ಕಳಿಗೆ ಅಕ್ಷರ ಕಲಿಸುವತ್ತ ದಿಟ್ಟ ಹೆಜ್ಜೆ ಹಾಕಿದ ಸ್ವಾಮೀಜಿ ತುಮಕೂರು ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಶಾಲೆ ಗಳನ್ನು ತೆರೆದರು. ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರ ಮನ ಒಲಿಸುತ್ತಿದ್ದರು. ವೈದ್ಯಕೀಯ ಶಿಕ್ಷಣದಂತಹ ‘ಫಲ’ ನೀಡುವ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಅವಕಾಶಗಳು ಇದ್ದರೂ ಅವರು ಗಮನಹರಿಸಿದ್ದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದತ್ತ.

ಅಕ್ಷರಕ್ಕಾಗಿ ಜೋಳಿಗೆ ಹಿಡಿದರು

1941ರಲ್ಲಿ ಸ್ವಾಮೀಜಿ ಮಠಾಧ್ಯಕ್ಷರಾದಾಗ ಮಠದ ಅಂಗಳದಲ್ಲಿ ಸಂಸ್ಕೃತ ಪಾಠಶಾಲೆ, ಪುಟ್ಟದೊಂದು ವಿದ್ಯಾರ್ಥಿ ನಿಲಯವಿತ್ತು. ವಿದ್ಯಾರ್ಥಿಗಳ ಸಂಖ್ಯೆ 70. ಮಠಕ್ಕೆ ಸೇರಿದ 16 ಎಕರೆ ಭೂಮಿಯಿಂದ ಬರುತ್ತಿದ್ದ ಆದಾಯವೂ ಅಷ್ಟಕ್ಕಷ್ಟೇ. ಆದ್ದರಿಂದ ಮಠದ ನಿರ್ವಹಣೆಗಾಗಿ ಪ್ರತಿದಿನ ಜೋಳಿಗೆ ಹಿಡಿದು ಭಿಕ್ಷಾಟನೆಗೆ ತೆರಳುತ್ತಿದ್ದರು ಸ್ವಾಮೀಜಿ. (ಇದರ ದ್ಯೋತಕವಾಗಿ ಈಗಲೂ ಜಾತ್ರೆ ಸಮಯದಲ್ಲಿ ಸಾಂಕೇತಿಕವಾಗಿ ಭಿಕ್ಷಾಟನೆ ಮಾಡಲಾಗುತ್ತದೆ). ಇದರ ಫಲವಾಗೇ ಇಂದು ಮಠದ ಶಾಲೆ ಶಿಕ್ಷಣದ ಕಡಲಾಗಿದೆ.

ಬರಹ ಇಷ್ಟವಾಯಿತೆ?

 • 18

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !