ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾ ಸಮಾಧಿಯಲ್ಲಿ ಸಿದ್ಧಗಂಗಾ ಶ್ರೀ ಲೀನ

Last Updated 22 ಜನವರಿ 2019, 20:04 IST
ಅಕ್ಷರ ಗಾತ್ರ

ತುಮಕೂರು: ವಚನ, ಪಂಚಾಕ್ಷರಿ ಮಂತ್ರ ಪಠಣ, ರುದ್ರಾಭಿಷೇಕ, ಮಕ್ಕಳ, ಭಕ್ತರ ಕಣ್ಣೀರು, ಜಯಘೋಷ, ಗಣ್ಯರ ನಮನಗಳ ನಡುವೆ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು ವೀರಶೈವ– ಲಿಂಗಾಯತ ಸಂಪ್ರದಾಯದ ರೀತಿ ಜರುಗಿದವು.

ಶಿವಕುಮಾರ ಸ್ವಾಮೀಜಿ ಅವರ ಗುರುಗಳಾದ ಉದ್ಧಾನ ಶಿವಯೋಗಿಗಳು ಶಿವೈಕ್ಯರಾದ ಅವಧಿಯಲ್ಲಿ ಪಾಲಿಸಿದ ಕ್ರಿಯಾ ಸಮಾಧಿಯ ವಿಧಿ ವಿಧಾನಗಳನ್ನೇ ಅನುಸರಿಸಲಾಯಿತು. ಶಿವಯೋಗಿಗಳ ಗದ್ದುಗೆ ಪಕ್ಕದಲ್ಲಿಯೇ ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾ ಸಮಾಧಿಯ ಭವನವೂ ಇರುವುದು ವಿಶೇಷ.

ಕ್ರಿಯಾ ಸಮಾಧಿ ಸ್ಥಳವನ್ನು ಮರಳಿನಿಂದ ಮುಚ್ಚಲಾಗಿತ್ತು. ಸೋಮವಾರ ಮಧ್ಯಾಹ್ನವೇ ಮರಳನ್ನು ತೆಗೆದು ಇಡೀ ಭವನವನ್ನು ಮಠದ ಸಿಬ್ಬಂದಿ ಶುಚಿಗೊಳಿಸಿದರು. ನಾನಾ ಮಠಾಧೀಶರು ಭವನ ಪ್ರವೇಶಿಸಿ ಅಲ್ಲಿ ಆಗಬೇಕಾದ ಸಿದ್ಧತೆ ಮತ್ತು ಕಾರ್ಯಗಳ ಬಗ್ಗೆ ಕ್ರಮವಹಿಸಿದ್ದರು. ಸ್ವಯಂ ಸೇವಕರು, ಮಠದ ಸಿಬ್ಬಂದಿ ಕ್ರಿಯಾ ಸಮಾಧಿಗೆ ಅಗತ್ಯವಿರುವ ವಸ್ತುಗಳನ್ನು ರಾತ್ರಿಯೇ ಭವನದೊಳಗೆ ಸಂಗ್ರಹಿಸಿದರು. ಅದಾಗಲೇ ಭವನಕ್ಕೆ ದೇಗುಲದ ಕಳೆ ಬಂದಿತ್ತು. ಭಕ್ತರು ಕ್ರಿಯಾ ಸಮಾಧಿಯ ಸ್ಥಳಕ್ಕೆ ನಮಿಸುತ್ತಿದ್ದರು.

ಮಂಗಳವಾರ ಬೆಳಿಗ್ಗೆ ಮಠದ ಅರ್ಚಕರಾದ ಎಂ.ಎನ್‌.ಚಂದ್ರಶೇಖರಯ್ಯ, ಕಂಚುಗಲ್ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಸ್ಥಳಶುದ್ಧಿ, ಪಂಚಕಳಸ ಪೂಜೆ, ಅಷ್ಟ ದಿಕ್ಪಾಲಕರು, ಸಪ್ತರ್ಷಿಗಳ ಪೂಜೆಗಳು ಜರುಗಿದವು. ತಾಮ್ರದ ತಗಡಿನಲ್ಲಿ ಮಂತ್ರಬೀಜಾಕ್ಷರ ಮತ್ತು ಓಂ ನಮಃ ಶಿವಾಯ ಎಂದು ಬರೆಯಲಾಯಿತು.

ಕ್ರಿಯಾ ಸಮಾಧಿಯ ಸ್ಥಳ ಮತ್ತು ಭವನದ ಹೊರಭಾಗವನ್ನು ಹೂವಿನಿಂದಅಲಂಕರಿಸಲಾಯಿತು.

ಸಂಜೆ 5 ಗಂಟೆಯಿಂದ ಸ್ವಾಮೀಜಿ ಅವರ ಪಾರ್ಥಿವ ಶರೀರದ ಮೆರವಣಿಗೆ ರುದ್ರಾಕ್ಷಿ ರಥದಲ್ಲಿ ನಡೆಯಿತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಚಿವರು ಸರ್ಕಾರದಪರವಾಗಿ ಪುಷ್ಪ ನಮನ ಸಲ್ಲಿಸಿದ್ದರು. ಪೊಲೀಸರು ಕುಶಾಲತೋಪು ಸಿಡಿಸುವ ಮೂಲಕ ಸರ್ಕಾರಿ ಗೌರವಗಳನ್ನು ಸಲ್ಲಿಸಿದರು. ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಕುಮಾರಸ್ವಾಮಿ ಅವರು ಹಸ್ತಾಂತರಿಸುವಾಗ ಸಿದ್ಧಲಿಂಗ ಸ್ವಾಮೀಜಿ ಭಾವುಕರಾದರು.

ಸಂಜೆ 6.30ಕ್ಕೆ ಪಾರ್ಥಿವ ಶರೀರವನ್ನು ಕ್ರಿಯಾ ಸಮಾಧಿ ಸ್ಥಳಕ್ಕೆ ತರಲಾಯಿತು. ಕ್ರಿಯಾ ಸಮಾಧಿಯ ಮೊದಲಮೆಟ್ಟಿಲಿನಲ್ಲಿ ಶರೀರಕ್ಕೆ ಪಂಚಾಮೃತಅಭಿಷೇಕ ನೆರವೇರಿಸಲಾಯಿತು. ಎರಡು ಮತ್ತು ಮೂರನೇ ಮೆಟ್ಟಿಲಿನಲ್ಲಿ ಎಳನೀರು, ಆಮ್ಲರಸ, ಸುಗಂಧ ತೈಲಗಳಿಂದ ಅಭಿಷೇಕ ಮತ್ತು ಮಂಗಳಾರತಿನೆರವೇರಿಸಲಾಯಿತು.

ನಂತರ ಸಮಾಧಿ ಸ್ಥಳದಲ್ಲಿರುವ ಗೂಡಿನಲ್ಲಿ ಶ್ರೀಗಳ ದೇಹ ಕೂರಿಸಲಾಯಿತು. ದೇಹವನ್ನು ಒಣಬಟ್ಟೆಯಿಂದ ಒರೆಸಿ, ಸ್ವಾಮೀಜಿ ಅವರು ಧರಿಸುತ್ತಿದ್ದ ಇಷ್ಟಲಿಂಗವನ್ನು ಅವರ ಕೈಗಿಟ್ಟು ಪೂಜೆ ಮಾಡಲಾಯಿತು.ಹೊಸ ಬಟ್ಟೆ ತೊಡಿಸಲಾಯಿತು. ಬಿಲ್ವಾರ್ಚನೆ, ಪುಷ್ಪಾರ್ಚನೆಗಳು ಜರುಗಿದವು. ಮಠಾಧೀಶರು, ಅರ್ಚಕರು ಗುರುಕರ್ಣ ತ್ರಿವಿಧಿ, ವೇದಗಳನ್ನು ಪಠಿಸಿದರು.

ವೀರಶೈವ–ಲಿಂಗಾಯತ ಸಂಪ್ರದಾಯದ ಪೂಜೆಯಲ್ಲಿ ಬಿಲ್ಪ ಪತ್ರೆಗೆ ಪ್ರಮುಖ ಸ್ಥಾನ ಇದೆ. ಆದ ಕಾರಣ ಇಡೀ ಪೂಜೆಯಲ್ಲಿ ಬಿಲ್ಪಪತ್ರೆ ಪ್ರಧಾನವಾಗಿ ಬಳಕೆ ಆಯಿತು.

ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ತರುವಾಯ ಸಮಾಧಿಯ ಒಳಗೆ ಉಪ್ಪು ಸುರಿಯಲಾಯಿತು. 7 ಸಾವಿರಕ್ಕೂ ಹೆಚ್ಚು ಕ್ರಿಯಾಗಟ್ಟಿ(ವಿಭೂತಿಗಟ್ಟಿ) ಜೋಡಿಸುವ ಮೂಲಕ ಶಿವಕುಮಾರ ಸ್ವಾಮೀಜಿ ಅವರದೇಹವನ್ನು ವಿಭೂತಿಯಿಂದಲೇ ಪೂರ್ಣವಾಗಿ ಮುಚ್ಚಿದರು. ನಂತರ ಅದರ ಮೇಲೆ ಮರಳನ್ನು ಹಾಕಲಾಯಿತು. ಈ ಎಲ್ಲ ವಿಧಿ ವಿಧಾನಗಳು ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಜರುಗಿದವು.

‘ಶರಣರ ಗುಣವ ಮರಣದಿ ಕಾಣು’ ಎನ್ನುವ ನುಡಿಯಂತೆ ಕ್ರಿಯಾ ವಿಧಿ ವಿಧಾನಗಳು ನಡೆಯುವಾಗ ಭಕ್ತರು ಶಿವಕುಮಾರ ಸ್ವಾಮೀಜಿ ಅವರ ಸಾಧನೆಯನ್ನು ಮೆಲುಕು ಹಾಕಿದ್ದರು. ‘ಸಿದ್ಧಗಂಗೆಯ ಗುರುವೇ ನಿನ್ನ ಚರಣಕೆ ನಮೋ ನಮೋ’ ಎಂದು ಗದ್ದುಗೆಗೆ ನಮಿಸಿದರು.

ಏನಿದು ಕ್ರಿಯಾ ಸಮಾಧಿ

ವೀರಶೈವ–ಲಿಂಗಾಯತ ಸಮುದಾಯದಲ್ಲಿ ಲಿಂಗದೀಕ್ಷೆಯಾಗಿ ಮೃತಪಟ್ಟವರಿಗೆ ಇಲ್ಲವೆ ಮಠಾಧೀಶರಿಗೆ ನಡೆಸುವ ಅಂತಿಮ ಸಂಸ್ಕಾರದ ವಿಧಿಗಳನ್ನು ಕ್ರಿಯಾ ಸಮಾಧಿ ಎನ್ನುವರು.

ಕ್ರಿಯಾ ಸಮಾಧಿಯ ವಿಸ್ತೀರ್ಣವು 9 ಪಾದ ಉದ್ದ 5 ಪಾದ ಅಗಲ ಇರುತ್ತದೆ. ಒಂದು ಪಾದ ಅಂದರೆ ಯಾರು ಮೃತಪಟ್ಟಿರುತ್ತಾರೋ ಅವರ ಬಲಪಾದದ ಕಿರುಬೆರಳಿನಿಂದ ಹಿಮ್ಮಡಿಯವರೆಗಿನ ಉದ್ದವಾಗಿರುತ್ತದೆ. ಸಮಾಧಿಯ ಸ್ಥಳದೊಳಗೆ ಇಳಿಯಲು ಮೂರು ಮೆಟ್ಟಿಲುಗಳು ಇರುತ್ತವೆ. ತ್ರಿಕೋನಾಕಾರದಲ್ಲಿ ಗೂಡು ನಿರ್ಮಿಸಿದ್ದು ಒಳಗೆ ಪಾರ್ಥಿವ ಶರೀರವನ್ನುಇರಿಸಲಾಗುತ್ತದೆ. ಆ ಗೂಡಿನ ಮೇಲೆ ದೀಪವಿಡಲು ಸಣ್ಣ ಗೂಡು ಮಾಡಲಾಗುತ್ತದೆ.

ಕ್ರಿಯಾಸಮಾಧಿಯಲ್ಲಿ ರುದ್ರಾಭಿಷೇಕ ಕಡ್ಡಾಯ. ಇಡೀ ದೇಹವನ್ನು ಕ್ರಿಯಾಗಟ್ಟಿಯಲ್ಲಿ (ವಿಭೂತಿ) ಮುಚ್ಚಬೇಕು. ಓಂ ಶ್ರೀಗುರು ಬಸವಲಿಂಗಾಯ ನಮಃ ಅಥವಾ ಓಂ ನಮಃ ಶಿವಾಯ ಎಂದು ಬರೆದ ವಿಭೂತಿಗಟ್ಟಿ ಮಾತ್ರ ಕ್ರಿಯಾ ಗಟ್ಟಿ ಎನಿಸಿಕೊಳ್ಳುತ್ತದೆ.

ಮಠಾಧೀಶರ ಕ್ರಿಯಾ ಸಮಾಧಿ ಸ್ಥಳದಲ್ಲಿ ದೇಗುಲ ನಿರ್ಮಾಣವಾದರೆ, ಸಾಮಾನ್ಯ ಜನರ ಕ್ರಿಯಾ ಸಮಾಧಿ ಮೇಲೆ ಲಿಂಗವನ್ನು ಪ್ರತಿಷ್ಠಾಪಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT