ಭಾನುವಾರ, ಸೆಪ್ಟೆಂಬರ್ 15, 2019
27 °C
ದೇವೇಗೌಡರ ವಿರುದ್ಧ ನೇರ ಆಕ್ರೋಶ * ‘ಗೌಡರ ಆರೋಪದ ಹಿಂದೆ ರಾಜಕೀಯ ದುರುದ್ದೇಶ’

ಇನ್ನೊಬ್ಬರ ಮೇಲೆ ಗೂಬೆಕೂರಿಸಿ ಅಳುವುದೇ ದೇವೇಗೌಡರ ಕೆಲಸ: ಸಿದ್ದರಾಮಯ್ಯ

Published:
Updated:

ಬೆಂಗಳೂರು: ‘ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ನೇರ ಕಾರಣ. ಈಗ ವಿನಾಕಾರಣ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇನ್ನೊಬ್ಬರ ಮೇಲೆ ಗೂಬೆಕೂರಿಸಿ ಅಳುವುದೇ ದೇವೇಗೌಡರ ಕೆಲಸ. ಇದರಿಂದ ಲಾಭ ಗಿಟ್ಟಿಸಿಕೊಳ್ಳಬಹುದು ಎಂಬುದು ಅವರ ಯೋಚನೆ. ಇದು ಜನರಿಗೆ ಅರ್ಥವಾಗುತ್ತೆ. ಜನರು ನನ್ನ ರಾಜಕೀಯ ಜೀವನವನ್ನೂ ನೋಡಿದ್ದಾರೆ ಮತ್ತು ದೇವೇಗೌಡರ ರಾಜಕೀಯ ಜೀವನವನ್ನೂ ನೋಡಿದ್ದಾರೆ. ಯಾರು ಏನು, ಹೇಗೆ ಎಂಬುದು ಜನರಿಗೆ ಗೊತ್ತು’ ಎಂದು 

‘ಜೆಡಿಎಸ್‌ ಅಧಿಕಾರಕ್ಕೆ ಬರುವುದನ್ನು ಸಹಿಸದ, ಕುಮಾರಸ್ವಾಮಿ ಸಿಎಂ ಆಗಿರುವುದನ್ನು ಅರಗಿಸಿಕೊಳ್ಳದ ಸಿದ್ದರಾಮಯ್ಯ ಅವರೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣ. ವಿರೋಧ ಪಕ್ಷದ ನಾಯಕನಾಗಬೇಕು ಎಂಬ ಸಿದ್ದರಾಮಯ್ಯನವರ ಹಂಬಲ ಈಗ ಈಡೇರಿದೆ ಎಂದು ದೇವೇಗೌಡ ಗುರುವಾರ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯುದ್ದಕ್ಕೂ ದೇವೇಗೌಡರ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ: ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ನೇರ ಕಾರಣ: ಎಚ್‌.ಡಿ ದೇವೇಗೌಡ

‘ದೇವೇಗೌಡರು ನನ್ನ ವಿರುದ್ದ ಮಾಧ್ಯಮಗಳಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಅಂತ ಹೇಳಿದ್ದಾರೆ. ನನ್ನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಡದಿದ್ದರೆ ತಪ್ಪಾಗುತ್ತದೆ. ಮೌನವಾಗಿರುವುದು ಸರಿಯಲ್ಲ. ಹಾಗಾಗಿ ಈಗ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ದೇವೇಗೌಡರು ನನ್ನ ವಿರುದ್ದ ಮಾಡಿರುವ ಎಲ್ಲ ಆರೋಪಗಳು ರಾಜಕೀಯ ದುರದ್ದೇಶದಿಂದ ಕೂಡಿದೆ. ಮೈತ್ರಿ ಸರ್ಕಾರದ ಪತನಕ್ಕೆ ರೇವಣ್ಣ, ಕುಮಾರಸ್ವಾಮಿ, ದೇವೇಗೌಡರೇ ಕಾರಣರೇ ಹೊರತು ನಾನಲ್ಲ. ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದು ನನ್ನ ಆಶಯವಾಗಿತ್ತು. ‌ನಾವು 70 ಶಾಸಕರಿದ್ದರೂ ಜೆಡಿ ಎಸ್‌ಗೆ ‌ಬೆಂಬಲ ನೀಡಿದ್ದೆವು. ನಾನು ಕುಮಾರಸ್ವಾಮಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಶಾಸಕರನ್ನು ನಿರ್ಲಕ್ಷ್ಯ ಮಾಡಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಮತ್ತು ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಸರ್ಕಾರ ಪತನಕ್ಕೆ ಕಾರಣ. ನಾನೂ ಐದು ವರ್ಷ ಮುಖ್ಯಮಂತ್ರಿ ಆಗಿದ್ದೆ. ಆಗ ಒಬ್ಬ ಶಾಸಕನೂ ಸರ್ಕಾರದ ವಿರುದ್ದ ಮಾತನಾಡಲಿಲ್ಲ ಏಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕುಮಾರಸ್ವಾಮಿ ಏಕಪಕ್ಷೀಯ ನಿರ್ಧಾರ ಅಸಮಾಧಾನಕ್ಕೆ ಕಾರಣ: ಸಮನ್ವಯ ಸಮಿತಿಯಲ್ಲಿ ಕೈಗೊಂಡ ಯಾವ ತೀರ್ಮಾನವನ್ನೂ ಕುಮಾರಸ್ವಾಮಿ ಜಾರಿ‌ಮಾಡಲಿಲ್ಲ. ಅವರ ನಡವಳಿಕೆಯಿಂದ ಶಾಸಕರು ಬೇಸತ್ತಿದ್ದರು. ಏಕಪಕ್ಷೀಯ ನಿರ್ಧಾರಗಳು ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿತ್ತು ಎಂದು ಸಿದ್ದರಾಮಯ್ಯ ದೂರಿದರು.

‘ದೇವೇಗೌಡರು ಯಾರನ್ನೂ ಬೆಳೆಸಲ್ಲ’

ದೇವೇಗೌಡರು ರಾಜಕೀಯವಾಗಿ ಯಾರನ್ನೂ ಬೆಳೆಸಲ್ಲ. ಇಡೀ ರಾಜಕೀಯ ಜೀವನದಲ್ಲಿ ಯಾರನ್ನೂ ಬೆಳೆಯಲು ಬಿಟ್ಟಿಲ್ಲ. ಅವರ ಕುಟುಂಬದವರನ್ನು ಮಾತ್ರ ಬೆಳೆಸುತ್ತಾರಷ್ಟೆ. ಅದು ಬಿಟ್ಟು ಅವರದ್ದೇ ಜಾತಿಯವರನ್ನೂ ಅವರು ರಾಜಕೀಯವಾಗಿ ಬೆಳೆಸಲ್ಲ. ಎಲ್ಲ ಜಾತಿಯಲ್ಲೂ ನನಗೆ ಸ್ನೇಹಿತರಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

‘ಸಿಬಿಐ ತನಿಖೆಗೆ ವಹಿಸಲು ಸಲಹೆ ನೀಡಿಲ್ಲ’

ಫೋನ್ ಕದ್ದಾಲಿಕೆ ತನಿಖೆ ಸಿಬಿಐಗೆ ವಹಿಸುವ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಸಲಹೆ ಕೇಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಸಿಬಿಐಗೆ ವಹಿಸಿರಬಹುದು. ಸಿಬಿಐ ತನಿಖೆಗೆ ವಹಿಸುವುದಾದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದ್ದೆ ಅಷ್ಟೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಇನ್ನಷ್ಟು...

ಮೈತ್ರಿ ಸರ್ಕಾರ ಬೀಳಿಸಲು ಟೈಮ್‌ ಬಾಂಬ್ ಫಿಕ್ಸ್ ಮಾಡಿದ್ದ ಸಿದ್ದರಾಮಯ್ಯ

ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿಗೆ ಹಿಂಸೆ ಕೊಟ್ಟಿದ್ದಾರೆ: ಶರವಣ​

Post Comments (+)