ಗುರುವಾರ , ಜನವರಿ 23, 2020
19 °C

ವಿಪಕ್ಷ ನಾಯಕರ ತಡೆದ ಬಿಎಸ್‌ವೈ ಶೋಭಾ ಜತೆ ಮಂಗಳೂರಿಗೆ ಹೋಗುವುದೇಕೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಪಕ್ಷ ನಾಯಕರನ್ನು ಮಂಗಳೂರು ಪ್ರವೇಶ ಮಾಡದಂತೆ ತಡೆದಿರುವ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

‘ವಿಪಕ್ಷ ನಾಯಕರನ್ನು ತಡೆದು, ಕೋಮು ಭಾವನೆ ಕೆರಳಿಸುವ ಸಂಸದೆ ಶೋಭಾ ಕರಂದ್ಲಾಜೆ ಅವನ್ನು ಜೊತೆಗೆ ಕರೆದುಕೊಂಡು ಹೋಗುತ್ತಿರುವುದು ಶಾಂತಿ ಸ್ಥಾಪನೆಗೋ, ಶಾಂತಿ ಕದಡುವುದಕ್ಕೋ,’ ಎಂದೂ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಏನಿದೆ ಸಿದ್ದರಾಮಯ್ಯ ಅವರ ಟ್ವೀಟ್‌ನಲ್ಲಿ

‘ಕೋಮುಗಲಭೆಗೆ ಪ್ರಚೋದನೆ ನೀಡುತ್ತಾ ಬಂದಿರುವ ಶೋಭಾ ಕರಂದ್ಲಾಜೆ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಯಲ್ಲಿ‌ ಕಟ್ಟಿಕೊಂಡು ಮಂಗಳೂರಿಗೆ ಹೋಗುತ್ತಾರೆ. ನಮ್ಮನ್ನು ಅಲ್ಲಿಗೆ ಹೋಗದಂತೆ ನಿರ್ಬಂಧಿಸುತ್ತಾರೆ. ಮುಖ್ಯಮಂತ್ರಿಗಳ ಉದ್ದೇಶ ಏನು? ಶಾಂತಿ ಸ್ಥಾಪನೆಯೇ? ಶಾಂತಿ ಕದಡುವುದೇ?,’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಸಂಸದೆ ಶೋಭಾ ಅವರನ್ನು ಕರಾವಳಿ ಜಿಲ್ಲೆಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಿದರೆ ಅಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ. ಸುಳ್ಳು ಹೇಳಿಕೆಯಿಂದ ಕೋಮುದ್ವೇಷ ಪ್ರಚೋದಿಸಿದ ಪ್ರಕರಣಗಳ ಇತಿಹಾಸ ಶೋಭಾ ಕರಂದ್ಲಾಜೆ ಅವರಿಗಿದೆ,’ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಇದಕ್ಕೂ ಹಿಂದೆ ಮತ್ತಷ್ಟು ಟ್ವೀಟ್‌ ಮಾಡಿದ್ದ ಸಿದ್ದರಾಮಯ್ಯ, ‘ನೊಂದವರ ಧ್ವನಿಯಾಗಿ, ಸರ್ಕಾರದ ಅನ್ಯಾಯವನ್ನು ಎತ್ತಿ ತೋರಿಸಲು ಅವಕಾಶವಿಲ್ಲ ಎಂದಾದರೆ ವಿರೋಧ ಪಕ್ಷ ಏಕೆ ಬೇಕು,’ ಎಂದೂ ಪ್ರಶ್ನಿಸಿದ್ದಾರೆ.

‘ಮುಖ್ಯಮಂತ್ರಿಗಳು, ಗೃಹ ಸಚಿವರು ಮಂಗಳೂರಿಗೆ ಭೇಟಿ ನೀಡಬಹುದು. ಆದರೆ ಪ್ರತಿಪಕ್ಷ ನಾಯಕನಾದ ನನಗೆ ಭೇಟಿ ನೀಡಲು ಅವಕಾಶವಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಸರ್ಕಾರದ ವೈಫಲ್ಯ ಮತ್ತು ಪೊಲೀಸರ ಅಮಾನವೀಯತೆ ಜನರಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ನನಗೆ ಭೇಟಿ ನೀಡಲು ಅವಕಾಶ ನಿರಾಕರಿಸುತ್ತಿದ್ದಾರೆ. ನೊಂದವರ ಧ್ವನಿಯಾಗಿ, ಸರ್ಕಾರದ ಅನ್ಯಾಯವನ್ನು ಎತ್ತಿ ತೋರಿಸಲು ಅವಕಾಶವಿಲ್ಲ ಎಂದಾದರೆ ವಿರೋಧ ಪಕ್ಷ ಏಕೆ ಬೇಕು? ಎರಡೆರಡು ಬಾರಿ ಗೋಲಿಬಾರ್ ಮಾಡಿಸಿ ಅಮಾಯಕರನ್ನು ಕೊಂದ ಬಿಜೆಪಿಯವರಿಂದ ಪಾಠ ಹೇಳಿಸಿಕೊಳ್ಳಬೇಕಾದ ಅಗತ್ಯ ನನಗಿಲ್ಲ,’ ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಕೇಂದ್ರ ಸಚಿವರೊಬ್ಬರು 'ರಿವಾಲ್ವರ್‌ಗಳಿರುವುದು ಪೂಜೆ ಮಾಡೋಕೆ ಅಲ್ಲ' ಎಂದು ಹೇಳುತ್ತಾರೆ. ಇಂಥ ಮಾತುಗಳು ಗಲಭೆಗೆ ಪ್ರಚೋದನೆ ನೀಡಿದಂತೆ ಆಗುವುದಿಲ್ಲವೇ? ರಿವಾಲ್ವರ್ ಇದೆ ಎಂದು ದಿನಕ್ಕೊಬ್ಬರನ್ನು ಕೊಲ್ಲುತ್ತೀರ? ಬಿಜೆಪಿ ನಾಯಕರೇ ನಾಚಿಕೆಯಾಗಲ್ವ ನಿಮಗೆ ಇಂಥವರನ್ನು ಇನ್ನೂ ಮಂತ್ರಿಯಾಗಿ ಉಳಿಸಿಕೊಂಡಿದ್ದೀರಲ್ಲ? ಸಮಯ ಸಂದರ್ಭ ನೋಡಿ ಪೊಲೀಸರೆ ಲಾಠಿ ಚಾರ್ಜ್, ಗೋಲಿಬಾರ್ ಮಾಡಬಹುದು ಅಂತ ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಎಲ್ಲವನ್ನೂ ಪೊಲೀಸರೇ ತೀರ್ಮಾನ ಮಾಡುವುದಾದರೆ ಗೃಹ ಸಚಿವರಾಗಿ ನೀಮಗೇನು ಕೆಲಸ? ಇನ್ನೂ ಯಾಕೆ ಆ ಹುದ್ದೆಯಲ್ಲಿದ್ದೀರ, ಎಲ್ಲವನ್ನೂ ಅವರಿಗೇ ನಿರ್ಧರಿಸಲು ಬಿಟ್ಟು ರಾಜೀನಾಮೆ ನೀಡಿ ಮನೆಗೆ ಹೋಗಿ,’ ಎಂದು ಗೃಹ ಸಚಿವ ಬೊಮ್ಮಾಯಿ ಅವರ ವಿರುದ್ಧವೂ ಕಿಡಿ ಕಾರಿದ್ದಾರೆ.

‘ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ಗೋಲಿಬಾರ್ ಪ್ರಕರಣದ ನ್ಯಾಯಾಂಗ ತನಿಖೆಯಾಗಿ, ಅಪರಾಧಿಗಳನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆ ನೀಡಬೇಕು. ಪ್ರತಿಯೊಬ್ಬರ ಜೀವವೂ ಅಮೂಲ್ಯ, ಗೋಲಿಬಾರ್‌ನಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರ ಬಲಿದಾನಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ,’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು