ಸೋಮವಾರ, ಜೂಲೈ 13, 2020
28 °C

ಶ್ರಮಿಕರಿಗೆ ವಿಶೇಷ ಪ್ಯಾಕೇಜ್ ನೀಡಿ: ಸಿದ್ದರಾಮಯ್ಯ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಲಾಕ್‍ಡೌನ್‍ನಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಸಾಂಪ್ರದಾಯಿಕ ವೃತ್ತಿ ಮಾಡುವವರೂ ಸೇರಿದಂತೆ ಶ್ರಮಿಕ ವರ್ಗದವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮಂಗಳವಾರ ಇಲ್ಲಿ ಸಾಂಪ್ರದಾಯಿಕ ವೃತ್ತಿ ಮಾಡುವ ವಿವಿಧ ಸಮುದಾಯಗಳು ಹಾಗೂ ಆಟೊ, ಟ್ಯಾಕ್ಸಿ ಸೇರಿದಂತೆ ನಾನಾ ಸಾರಿಗೆ ಸಂಘಟನೆಗಳ ಮುಖಂಡರ ಜತೆಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಆರ್ಥಿಕವಾಗಿ ನೆಲಕಚ್ಚಿರುವ ಶ್ರಮಿಕ ವರ್ಗದವರಿಗಾಗಿ ವಿಶೇಷ ಯೋಜನೆ ರೂಪಿಸದೇ ಇದ್ದರೆ ಲಾಕ್‍ಡೌನ್ ಮುಗಿದ ಕೂಡಲೇ ಬೀದಿಗಿಳಿದು ಹೋರಾಟ ನಡೆಸಲಾಗುವುದು’ ಎಂದರು. 

‘ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೆ ಬಂದು ಒಂದು ತಿಂಗಳು ಮುಗಿದುಹೋಗಿದೆ. ಜೀವನೋಪಾ
ಯಕ್ಕೆ ಸಾಂಪ್ರದಾಯಿಕ ವೃತ್ತಿಯನ್ನೇ ಅವಲಂಬಿಸಿರುವ ಸಮುದಾಯಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಈ ಸಮುದಾಯದ ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ’ ಎಂದರು.

‘ಶ್ರಮಿಕ ವರ್ಗದವರಿಗೆ ಉಚಿತವಾಗಿ ಊಟ, ತಿಂಡಿ ಕೊಡಿ ಎಂದು ಮುಖ್ಯಮಂತ್ರಿಗಳನ್ನು ಹಲವು ಬಾರಿ ಒತ್ತಾಯ ಮಾಡಿದ್ದೇನೆ. ಇದಕ್ಕಾಗಿ ₹ 18 ಕೋಟಿಯಿಂದ ₹20 ಕೋಟಿ ವೆಚ್ಚವಾಗಬಹುದು. ಅದಕ್ಕೂ ಸರ್ಕಾರ ಮೀನಮೇಷ ಎಣಿಸುವುದು ಸರಿಯಲ್ಲ. ಸರ್ಕಾರ ಈಗ ವಿತರಣೆ ಮಾಡುತ್ತಿರುವ ದವಸ-ಧಾನ್ಯದ ಕಿಟ್‍ಗಳನ್ನು ಎಲ್ಲರನ್ನೂ ತಲುಪುತ್ತಿಲ್ಲ. ಅದಕ್ಕಾಗಿಯೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು’ ಎಂದರು.

ಸರ್ಕಾರ ಈ ವರ್ಗದವರಿಗೆ ಏನಾದರೂ ಪರಿಹಾರ ನೀಡಿದೆಯೇ ಎಂಬುದನ್ನು ತಿಳಿದುಕೊಳ್ಳಲು ಈ ಸಭೆ ಕರೆಯಲಾಗಿತ್ತು. ‘ಸರ್ಕಾರದಿಂದ ನಮಗೆ ಯಾವುದೇ ರೀತಿಯ ಸಹಾಯ ಸಿಕ್ಕಿಲ್ಲ’ ಎಂದು ಸಭೆಯಲ್ಲಿ ಮುಖಂಡರು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ. ರೇವಣ್ಣ, ಎಂ.ಸಿ. ವೇಣುಗೋಪಾಲ್, ಮುಖಂಡರಾದ ಎಂ.ಡಿ.ಲಕ್ಷ್ಮೀನಾರಾಯಣ, ವಿ.ಎಸ್. ಉಗ್ರಪ್ಪ ಸಭೆಯಲ್ಲಿದ್ದರು.

*
ಮಡಿವಾಳರು, ಕುಂಬಾರರು, ಅಕ್ಕಸಾಲಿಗರು, ಗಾಣಿಗರ ಪರಿಸ್ಥಿತಿಯೂ ಶೋಚನೀಯವಾಗಿದೆ, ಸರ್ಕಾರ ತಕ್ಷಣ ಗಮನ ಹರಿಸಲಿ.
 -ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು