ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ತರಾತುರಿ ಸುಗ್ರೀವಾಜ್ಞೆ: ಸಿದ್ದರಾಮಯ್ಯ ಟೀಕೆ

ಕೆಪಿಸಿಸಿ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ
Last Updated 20 ಮೇ 2020, 22:06 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿ ‘ಮೃತ ಸರ್ಕಾರ’ದಂತೆ (ಡೆಡ್‌ ಗವರ್ನ್‌ಮೆಂಟ್‌) ಇರುವ ರಾಜ್ಯ ಸರ್ಕಾರ, ಎಪಿಎಂಸಿ ವಿಚಾರದಲ್ಲಿ ತರಾತುರಿಯಲ್ಲಿ ಸುಗ್ರೀವಾಜ್ಞೆ ತಂದಿದೆ. ಇಂತಹ ಬೆಳವಣಿಗೆಯನ್ನು ಹೆಚ್ಚು ಸಮಯ ಸಹಿಸಿಕೊಂಡಿರಲು ಸಾಧ್ಯವಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದರು.

ಎಪಿಎಂಸಿ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಹಾಗೂ ಗ್ರಾಮ ಪಂಚಾಯತಿಗಳಿಗೆ ಆಡಳಿತ ಸಮಿತಿ ರಚಿಸುವ ಸರ್ಕಾರದ ನಿರ್ಧಾರಗಳ ವಿರುದ್ಧ ಕೆಪಿಸಿಸಿ ವತಿಯಿಂದ ವಿಧಾನಸೌಧ ಮತ್ತು ವಿಕಾಸಸೌಧ ನಡುವಿನ ಗಾಂಧಿ ಪ್ರತಿಮೆ ಬಳಿ ಬುಧವಾರ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವೇ ಎಪಿಎಂಸಿ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆ ರೂಪಿಸಿ ಕಳುಹಿಸಿದೆ. ಅದನ್ನು ರಾಜ್ಯ ಸರ್ಕಾರ ಒಪ್ಪಬೇಕು. ಅಲ್ಲಿ ನರೇಂದ್ರ ಮೋದಿ ಹೇಳಿದರೆ, ಇಲ್ಲಿ ಯಡಿಯೂರಪ್ಪ ಸೆಲ್ಯೂಟ್ ಹೊಡಿಯಬೇಕು. ಇದು ಸಂವಿಧಾನಬಾಹಿರ’ ಎಂದರು.

‘ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಅವಶ್ಯಕತೆ ಏನಿತ್ತು? ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಗ್ರಾಮ ಪಂಚಾಯತಿ ಚುನಾವಣೆಗೆ ಸಿದ್ಧತೆಗಳು ಮಾಡಬೇಕಿತ್ತು. ಅದರೆ, ಚುನಾವಣೆ ಮುಂದೂಡಿಕೆಗೆ ಪತ್ರ ಕೊಟ್ಟಿದ್ದಾರೆ. ಚುನಾವಣಾ ಅಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಕೊರೊನಾದಿಂದ ಚುನಾವಣೆ ಮಾಡುವುದಿಲ್ಲ ಎನ್ನುವುದಾದರೆ ಈಗಿರುವ ಗ್ರಾಮ ಪಂಚಾಯತಿ ಸದಸ್ಯರನ್ನೇ ಮುಂದಿನ ಆರು ತಿಂಗಳು ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

‘ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ಆನ್ಯಾಯವಾಗುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಉಗ್ರ ಸ್ವರೂಪದ ಹೋರಾಟಕ್ಕೆ
ಇಳಿಯಲಿದೆ. ಇಡೀ ದೇಶದ ಜನರಿಗೆ ಸುಳ್ಳು ಹೇಳಿ ಟೋಪಿ ಹಾಕುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ. ₹ 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಜೆಡಿಪಿಯ ಶೇ 1 ರಷ್ಟನ್ನೂ ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಈ ಹಿಂದೆ ಹೇಳಿದ ಸುಳ್ಳುಗಳ ಮುಂದುವರಿದ ಭಾಗ ಇದೆ ಅಷ್ಟೇ.
ರೈತರಿಗೆ ಆದಾಯ ದುಪ್ಪಟ್ಟು, ಕಪ್ಪು ಹಣ ತರುವುದು ಎಂಬ ಹಸಿ ಸುಳ್ಳಿನ ಜೊತೆಗೆ ಇದೊಂದು ಹೊಸ ಸುಳ್ಳು ಸೇರ್ಪಡೆಯಾಗಿದೆ’ ಎಂದು ಕುಟುಕಿದರು.

ಪಕ್ಷದ ಹಿರಿಯ ನಾಯಕರಾದ ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಎಸ್‌.ಆರ್‌.ಪಾಟೀಲ, ಕೆ.ಜೆ.ಜಾರ್ಜ್‌, ವಿ.ಎಸ್‌.ಉಗ್ರಪ್ಪ ಇದ್ದರು.

‘ಜನರನ್ನು ತಲುಪದ ಪ್ಯಾಕೇಜ್‌’

‘ಕೇಂದ್ರದ ಪ್ಯಾಕೇಜ್ ಕೇವಲ ಘೋಷಣೆಗಷ್ಟೇ ಸೀಮಿತ. ರಾಜ್ಯ ಘೋಷಿಸಿದ ಪ್ಯಾಕೇಜ್‌ ಸಹ ಜನರಿಗೆ ತಲುಪಿಲ್ಲ. ಜನರಿಗೆ ಬಡ್ಡಿ ಮೇಲೆ ಬಡ್ಡಿ ಹಾಕಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸರ್ಕಾರ ಜನವಿರೋಧಿ ನಿರ್ಧಾರಗಳನ್ನೂ ತರಾತುರಿಯಲ್ಲಿ ಕೈಗೊಳ್ಳುತ್ತಿದೆ. ಇದರ ವಿರುದ್ಧ ಕಾಂಗ್ರೆಸ್‌ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆ ನಡೆಸಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಸಿದರು.

‘50 ಲಕ್ಷದಷ್ಟಿರುವ ರಾಜ್ಯದ ಕಾರ್ಮಿಕರನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಅವರಿಗೆ ಸೂಕ್ತ ಸೌಲಭ್ಯ ಒದಗಿಸುವ ಬದಲಿಗೆ ಅವರ ಹೆಸರಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆದಿದೆ. ರೈತ ವಿರೋಧಿಯಾದ ಎಪಿಎಂಸಿ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT