ಮಂಗಳವಾರ, ಜನವರಿ 21, 2020
27 °C
ರಾಜ್ಯ ಸರ್ಕಾರದ ವಿರುದ್ಧ ಕಿಡಿ

ಮಂಗಳೂರು ಭೇಟಿಗೆ ಅವಕಾಶ ನಿರಾಕರಣೆ ಪ್ರಜಾಪ್ರಭುತ್ವದ ಕಗ್ಗೊಲೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾನು ಮಂಗಳೂರಿಗೆ ಹೋಗುವುದಕ್ಕೆ ತಡೆ ಒಡ್ಡುವ ಮೂಲಕ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಬಳಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಎಂದರೆ ಛಾಯಾ ಮುಖ್ಯಮಂತ್ರಿ ಇದ್ದ ಹಾಗೆ. ಆದರೆ ನನಗೆ ಮಂಗಳೂರಿಗೆ ಭೇಟಿ ನೀಡಲು ಅವಕಾಶ ನೀಡಲಿಲ್ಲ ಎಂದು ಹೇಳಿದರು.

‘ಮಂಗಳೂರಿನಲ್ಲಿ ಇಬ್ಬರು ಅಮಾಯಕರನ್ನು ಕೊಲ್ಲಲಾಗಿದೆ. ಅವರ ಮನೆಯವರಿಗೆ ಸಾಂತ್ವನ ಹೇಳಲು ಹೋಗಲು ಬಯಸಿದ್ದೆ. ವಿರೋಧ ಪಕ್ಷದ ನಾಯಕನಾಗಿ ನನಗೆ ಜವಾಬ್ದಾರಿ ಇಲ್ಲವಾ? ಪೊಲೀಸರ ವೈಫಲ್ಯ ಮುಚ್ಚಿಡುವುದಕ್ಕಾಗಿ ನಾನು ಮಂಗಳೂರಿಗೆ ಭೇಟಿ ನೀಡುವುದಕ್ಕೆ ನಿರ್ಬಂಧ ವಿಧಿಸಿದ್ದಾರೆ’ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: 

ತಮಗೆ ಮಂಗಳೂರಿನ ಪೊಲೀಸರು ಕಳುಹಿಸಿದ ನೋಟಿಸ್ ಅನ್ನು ತೋರಿಸಿದ ಅವರು, ‘ಮುಖ್ಯ ಮಂತ್ರಿ, ಗೃಹಸಚಿವ, ಉಪಮುಖ್ಯಮಂತ್ರಿ ಅವರು ಮಂಗಳೂರಿಗೆ ತೆರಳುವುದಕ್ಕೆ ಪರಿಸ್ಥಿತಿ ಪೂರಕವಾಗಿದ್ದರೆ ನನಗೆ ತೆರಳುವುದಕ್ಕೆ ಏಕೆ ಸಾಧ್ಯವಿಲ್ಲ? ನಾನು ಅಲ್ಲಿ ಅಶಾಂತಿ ಸೃಷ್ಟಿಸಲು ಹೋಗುತ್ತಿರಲಿಲ್ಲ, ಶಾಂತಿ ಸ್ಥಾಪಿಸಲು ವಿನಂತಿ ಮಾಡಲು ಹೋಗಲು ಬಯಸಿದ್ದೆ’ ಎಂದು ಹೇಳಿದರು.

ಟ್ವೀಟ್ ಮೂಲಕವೂ ಕಿಡಿ: ‘ವಾಹನ, ರೈಲು, ವಿಮಾನ ಯಾವುದರ ಮೂಲಕವೂ ನಾನು ಮಂಗಳೂರು ಪ್ರವೇಶ ಮಾಡಬಾರದೆಂದು ಪೊಲೀಸರು ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ ತುರ್ತುಪರಿಸ್ಥಿತಿ ಹೇರಿ ನಮ್ಮನ್ನೆಲ್ಲ ಜೈಲಿಗೆ ಹಾಕಿ ನಿಮ್ಮ ಮನಸೋ ಇಚ್ಛೆ ರಾಜ್ಯಭಾರ ಮಾಡಿ. ನಮ್ಮ ಜನರನ್ನು ನಾವು ಭೇಟಿಯಾಗದಂತೆ ನಿಷೇಧಿಸಿ ಹಿಂಸಿಸಬೇಡಿ’ ಎಂದು ಸಿದ್ದರಾಮಯ್ಯ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹಿಂಸಾಚಾರಕ್ಕೆ ಪ್ರಚೋದನೆ ವಿರೋಧ ಪಕ್ಷದವರಿಂದ ಅಲ್ಲ, ಅದನ್ನು ನಿರಂತರವಾಗಿ ಮಾಡುತ್ತಾ ಇರುವವರು ನಿಮ್ಮದೇ (ಯಡಿಯೂರಪ್ಪ) ಸಹೋದ್ಯೋಗಿ ಸಿ.ಟಿ.ರವಿ ಅವರು. ಯಡಿಯೂರಪ್ಪನವರೇ, ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ
ಒಬ್ಬ ವ್ಯಕ್ತಿ ಹೇಳಿಕೆ ನೀಡಿದ ನಂತರವೂ ಪೊಲೀಸರು ಕಣ್ಣು ಮುಚ್ಚಿಕೊಂಡಿದ್ದಾರೆಂದರೆ ರಾಜ್ಯದಲ್ಲಿ ಸರ್ಕಾರ ಸತ್ತಿದೆ ಎಂದರ್ಥ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಬೆಳಿಗ್ಗೆ ಸಹಜ ಸ್ಥಿತಿ: 8ರ ನಂತರ ಕರ್ಫ್ಯೂ ಬಿಸಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು