ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನವಿ ಸಲ್ಲಿಸಲು ಸಿದ್ದರಾಮಯ್ಯ ಆಗ್ರಹ

‘ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಬಿಜೆಪಿಯವರಿಗೆ ವರದಾನ’
Last Updated 10 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ಸಂವಿಧಾನ ಬದಲಿಸುವ ಪ್ರಯತ್ನ ನಡೆಸಿರುವ ಬಿಜೆಪಿಯವರಿಗೆ ಉದ್ಯೋಗ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ‘ತೂಕಡಿಸುವವರಿಗೆ ಹಾಸಿಗೆ ಹಾಸಿಕೊಟ್ಟಂತಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಇಲ್ಲಿ ಆರೋಪಿಸಿದರು.

‘ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಮೀಸಲಾತಿಯನ್ನು ಪುನರ್ ವಿಮರ್ಶೆಗೆ ಒಳಪಡಿಸಬೇಕು ಎನ್ನುತ್ತಾರೆ. ಬಿಜೆಪಿ ಕೆಲವರು ಸಂವಿಧಾನ ಸುಟ್ಟುಹಾಕುತ್ತೇವೆ ಎನ್ನುತ್ತಾರೆ. ಮತ್ತೂ ಕೆಲವರು ಬದಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇಂತಹ ಸಮಯದಲ್ಲೇ ಉದ್ಯೋಗ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ತೀರ್ಪು ಬಂದಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೂಡಲೇ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ, ಸುಪ್ರೀಂ ಕೋರ್ಟ್‌ನ ಪೂರ್ಣಪೀಠಕ್ಕೆ ಮೇಲ್ಮನವಿ ಸಲ್ಲಿಸಬೇಕು. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ, ಮೀಸಲಾತಿ ಶಿಥಿಲಗೊಳಿಗೊಳಿಸುವ ಪ್ರಯತ್ನದಲ್ಲಿ ತೊಡಗಿದೆ. ಕೇಂದ್ರ ಸೇರಿದಂತೆ ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿ ಮೀಸಲಾತಿ ತೆಗೆದುಹಾಕುವ ಹುನ್ನಾರ ನಡೆದಿದೆ. ಸಂವಿಧಾನ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧ ನಿಲುವು ತಾಳಲಾಗುತ್ತಿದೆ. ಮೀಸಲಾತಿ ತೆಗೆದುಹಾಕಿದರೆ ಅನ್ಯಾಯಕ್ಕೆ ಒಳಗಾದವರು ನ್ಯಾಯ ಕೇಳಿಕೊಂಡು ಎಲ್ಲಿಗೆ ಹೋಗಬೇಕು ಎಂದರು.

‘ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ’

‘ಸರ್ಕಾರಿ ನೌಕರರ ಬಡ್ತಿಯಲ್ಲಿ ಮೀಸಲಾತಿಯು ಮೂಲಭೂತ ಹಕ್ಕಲ್ಲ’ ಎಂದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ತಕ್ಷಣ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಸೋಮಶೇಖರ್ ಒತ್ತಾಯಿಸಿದ್ದಾರೆ.

‘ಮೀಸಲಾತಿ ವಿಚಾರವನ್ನು ಸಂವಿಧಾನದಲ್ಲೇ ಕಟ್ಟುನಿಟ್ಟು ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಕೋರ್ಟ್‌ಗಳಲ್ಲಿ ಯಾರೂ ಪ್ರಶ್ನಿಸದಂತೆ ತಡೆಯಬೇಕು. ಈ ವಿಚಾರದಲ್ಲಿ ಗೊಂದಲ ಮೂಡಿಸುವುದು ಹಿಂದಿನಿಂದಲೂ ಮುಂದುವರಿದಿದ್ದು, ಎಲ್ಲಾ ರೀತಿಯ ಗೊಂದಲ, ಸಮಸ್ಯೆಗಳಿಗೆ ಈಗಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

‘ಸುಪ್ರಿಂ ಕೋರ್ಟ್‌ನಲ್ಲಿ ವಕೀಲರು ಸಮರ್ಥವಾಗಿ ವಾದ ಮಂಡಿಸಿದ್ದರೆ ಇಂತಹ ತೀರ್ಪು ಬರುತ್ತಿರಲಿಲ್ಲ. ರಾಜ್ಯದಲ್ಲೂ ಪವಿತ್ರ ಪ್ರಕರಣದಲ್ಲೂ ಇದೇ ರೀತಿ ಆಗಿತ್ತು. ಜಾತಿ ತುಂಬಿಕೊಂಡ ಮನಸ್ಸುಗಳು ಈ ರೀತಿ ಮಾಡುತ್ತವೆ. ಅಧಿಕಾರಿಗಳು ಬೇಕೆಂದೇ ಸಮರ್ಪಕವಾದ ಮಾಹಿತಿ ನೀಡದೆ ಸಮಸ್ಯೆಗಳಾಗುವಂತೆ ನೋಡಿಕೊಳ್ಳುತ್ತಾರೆ’ ಎಂದು ಆರೋಪಿಸಿದರು. ಅಸ್ಪೃಶ್ಯತೆ, ಅಸಮಾನತೆ ಇರುವುದರಿಂದಲೇ ಉದ್ಯೋಗ ನೇಮಕಾತಿಗಳಲ್ಲಿ ಮೀಸಲಾತಿ ಕಲ್ಪಿಸಿರುವುದು. ಜಾತೀಯತೆ ಇರುವವರೆಗೆ ಅಸಮಾನತೆ ಇರುತ್ತದೆ ಎಂದರು.

ಸುಪ್ರೀಂ ತೀರ್ಪು ಸಮಾಧಾನ ತಂದಿಲ್ಲ: ಖರ್ಗೆ

ಮೈಸೂರು: ‘ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ಕೋರ್ಟ್‌ ತೀರ್ಪು ಸಮಾಧಾನ ತಂದಿಲ್ಲ ಎಂಬುದು ನಿಜ. ಆದರೆ, ಅದನ್ನು ವಿಮರ್ಶಿಸಲು ಒಂದು ಚೌಕಟ್ಟು ಇದೆ ಎಂಬುದನ್ನು ಮರೆಯಬಾರದು’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್‌ ಸೋಮವಾರ ಅಭಿಪ್ರಾಯಪಟ್ಟರು.

ತಮ್ಮ ನೇತೃತ್ವದ ಆಯೋಗದ ಆಶ್ರಯದಲ್ಲಿ ಇಲ್ಲಿ ನಡೆದ ಮೈಸೂರು ವಿಭಾಗದ ಜಿಲ್ಲೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮುಖಂಡರ ‘ಮೀಸಲಾತಿ ಹೆಚ್ಚಳ ಕುರಿತ ಅಹವಾಲು ಸ್ವೀಕೃತಿ ಸಭೆ’ಯಲ್ಲಿ ಅವರು ಮಾತನಾಡಿದರು.

‘ಮೀಸಲಾತಿ ಮೂಲಭೂತ ಹಕ್ಕು ಮಾತ್ರವಲ್ಲ; ಮಾನವ ಹಕ್ಕು ಕೂಡ’ ಎಂದು ಅವರು ಪ್ರತಿಪಾದಿಸಿದರು.

‘ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ 60 ಲಕ್ಷಕ್ಕಿಂತಲೂ ಹೆಚ್ಚಿನ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಗುತ್ತಿಗೆ, ಹೊರಗುತ್ತಿಗೆ ಮೂಲಕ ಕಾರ್ಮಿಕರ ನೇಮಕಾತಿ ನಡೆಯುತ್ತಿದೆ. ಮೀಸಲಾತಿಯಡಿ ಕೆಲಸ ಪಡೆಯಬೇಕಾದವರು ಇದರಿಂದ ವಂಚಿತರಾಗಿದ್ದಾರೆ’ ಎಂದರು.

‘ರಾಜ್ಯದಲ್ಲೇ 2.60 ಲಕ್ಷ ಹುದ್ದೆಗಳು ಖಾಲಿ ಇವೆ. ಅಧ್ಯಯನವೊಂದರ ಪ್ರಕಾರ ಶೇ 34ರಷ್ಟು ಹೊರಗುತ್ತಿಗೆ ಕಾರ್ಮಿಕರಿದ್ದಾರೆ. 1992ರಿಂದ ಬಂಡವಾಳ ಹಿಂತೆಗೆತ ನಡೆಯುತ್ತಿದೆ. ಸಾರ್ವಜನಿಕ ಕ್ಷೇತ್ರ ಖಾಸಗಿ ಕ್ಷೇತ್ರವಾಗಿದೆ. ಇಲ್ಲೂ ಮೀಸಲಾತಿ ಇಲ್ಲದೆ ದಲಿತರು ಅನ್ಯಾಯಕ್ಕೆ ಒಳಗಾಗಿದ್ದಾರೆ’ ಎಂದು ನುಡಿದರು.

2011ರ ಜನಗಣತಿ ಪ್ರಕಾರ ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ 15ರಿಂದ 17ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ 7ಕ್ಕೆ ಹೆಚ್ಚಿಸುವ ಪ್ರಸ್ತಾವ ಇದೆ ಎಂದರು.

ಸಭೆಯಲ್ಲಿ ಮಾತನಾಡಿದ ಹಲವರು ಪರಿಶಿಷ್ಟಜಾತಿ ಮತ್ತು ಪಂಗಡದಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯ ಎಂದು ವಿಂಗಡಿಸಿ, ಅಸ್ಪೃಶ್ಯ ಸಮುದಾಯಗಳಿಗೆ ಹೆಚ್ಚಿನ ಒಳಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT