ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯುವ ವರ್ಗಕ್ಕೆ ಪ್ಯಾಕೇಜ್‌ ಘೋಷಿಸಿ: ಸಿಎಂ ಯಡಿಯೂರಪ್ಪಗೆ ಸಿದ್ದರಾಮಯ್ಯ ಪತ್ರ

ತಿಂಗಳಿಗೆ ₹10 ಸಾವಿರ ಸಹಾಯಧನ ಕೊಡಿ
Last Updated 4 ಮೇ 2020, 11:58 IST
ಅಕ್ಷರ ಗಾತ್ರ

ಬೆಂಗಳೂರು: ‘ಲಾಕ್‌ಡೌನ್‌ನಿಂದಾಗಿ ಕುಶಲಕರ್ಮಿಗಳು, ಬೀದಿಬದಿ ವ್ಯಾಪಾರಿಗಳು, ಅಲೆಮಾರಿ ಸಮುದಾಯಗಳು, ಪೌರ ಕಾರ್ಮಿಕರು, ಮನೆ ಕೆಲಸದವರು, ನರೇಗಾ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು ಮುಂತಾದ ಎಲ್ಲ ರೀತಿಯ ಕಾರ್ಮಿಕರು ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ಈ ವರ್ಗಕ್ಕೆ ವಿಶೇಷ ಪ್ಯಾಕೇಜ್ ರೂಪಿಸಿ, ಪ್ರತಿಯೊಬ್ಬರಿಗೆ ಪ್ರತಿ ತಿಂಗಳು ಕನಿಷ್ಠ ₹ 10 ಸಾವಿರ ನೀಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಪತ್ರದ ಮುಖ್ಯಾಂಶಗಳಿವು...

‘ಮುಖ್ಯಮಂತ್ರಿ ಮತ್ತು ಸಚಿವರು ದುಡಿಯುವ ಸಮುದಾಯಗಳ ಮತ್ತು ವಿವಿಧ ಕಾರ್ಮಿಕ ಮುಖಂಡರ ಸಭೆಯನ್ನು ತಕ್ಷಣ ಕರೆದು, ಅವರ ಸಮಸ್ಯೆಗಳನ್ನು ಈಡೇರಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು.

‘ಲಾಕ್‍ಡೌನ್ ಹೇರಿಕೆಯಾಗಿ ರೈತರು, ಕಾರ್ಮಿಕರ ಬದುಕು, ವೈದ್ಯಕೀಯ ಸಮಸ್ಯೆ ಕುರಿತು ಏ.4ರಂದು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪತ್ರ ಸಲ್ಲಿಸಿದ್ದೆ. ಆದರೆ, ಪರಿಸ್ಥಿತಿ ಸುಧಾರಿಸದ ಕಾರಣ ಏ. 28ರಂದು ಎಲ್ಲ ಅಸಂಘಟಿತ ವಲಯದ ಕಾರ್ಮಿಕರ ಮುಖಂಡರು ಸಭೆ ನಡೆಸಿದ್ದೇನೆ. ಅವರೆಲ್ಲರೂ ತಮ್ಮ ಸಮುದಾಯ ಎದುರಿಸುತ್ತಿರುವ ಸಂಕಷ್ಟಗಳ ಭೀಕರತೆಯನ್ನು ಗಮನಕ್ಕೆ ತಂದಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ದುಸ್ಥಿತಿ ಬಂದಿದೆ.

‘ನಮ್ಮ ಆರ್ಥಿಕತೆಯನ್ನು ಉತ್ಪಾದನಾ ಸಮಯ ಮತ್ತು ವೆಚ್ಚ ಮಾಡುವ ಸಮಯ ಎಂದು ಗುರುತಿಸಬಹುದು. ಡಿಸೆಂಬರ್ ನಂತರದ ಅವಧಿಯಲ್ಲಿ ದೇಶದ ಆರ್ಥಿಕತೆಯಲ್ಲಿ ಉತ್ಪಾದನೆ ಮತ್ತು ವೆಚ್ಚ ಮಾಡುವ ಚಟುವಟಿಕೆ ತೀವ್ರಗೊಳ್ಳುತ್ತವೆ. ನೋಟು ರದ್ದತಿ ಮತ್ತು ಜಿಎಸ್‌ಟಿಯ ಅತಾರ್ಕಿಕ, ಅವಾಸ್ತವಿಕ ಕ್ರಮಗಳಿಂದಾಗಿ ಎಲ್ಲ ಉತ್ಪಾದಕ ಮತ್ತು ಕುಶಲಕರ್ಮಿ ಸಮುದಾಯಗಳ ಆರ್ಥಿಕತೆ ದಯನೀಯ ಸ್ಥಿತಿಗೆ ಬಂದು ತಲುಪಿತ್ತು. ಅದರ ನಡುವೆ ಕೊರೊನಾ ಸೋಂಕು ಆವರಿಸಿಕೊಂಡು ಆರ್ಥಿಕ ಚೈತನ್ಯವನ್ನೆಲ್ಲಾ ನಾಶ ಮಾಡಿದೆ.

‘ಸದ್ಯದ ಪರಿಸ್ಥಿತಿಯು ಸಂಘಟಿತ, ಅಸಂಘಟಿತ ವಲಯಗಳ ಸುಮಾರು 1.60 ಕೋಟಿ ಕಾರ್ಮಿಕರು ಮತ್ತು ವೃತ್ತಿ ಆಧಾರಿತ ಜಾತಿಗಳಿಗೆ ಸಂಬಂಧಿಸಿದವರನ್ನು ಸೇರಿಸಿದರೆ ದುಡಿಯುವ ವರ್ಗದ ಪ್ರಮಾಣ ಸುಮಾರು 2 ಕೋಟಿ ಮೀರುತ್ತದೆ. ಇಷ್ಟು ದೊಡ್ಡ ದುಡಿಯುವ, ಉತ್ಪಾದಕ ಸಮುದಾಯಗಳು ನಿಷ್ಕ್ರಿಯವಾದರೆಎಲ್ಲ ಚಟುವಟಿಕೆ ಸ್ತಬ್ಧಗೊಳ್ಳುತ್ತದೆ. ಆದುದರಿಂದ, ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗದೆ ಸಮರೋಪಾದಿಯಲ್ಲಿ ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳಬೇಕು’.

ಪತ್ರದ ಮೂಲಕ ಸಿದ್ದರಾಮಯ್ಯ ಮುಂದಿಟ್ಟಿರುವಬೇಡಿಕೆಗಳು

* ಲಾಕ್‍ಡೌನ್ ಅವಧಿಯಲ್ಲಿ ಕುಶಲಕರ್ಮಿ ಸಮುದಾಯಗಳಾದ ಸವಿತಾ(ಹಡಪದ) ಸಮಾಜದವವರು, ಮಡಿವಾಳರು (‌ದೋಬಿ), ಬಡಗಿಗಳು, ಕುಂಬಾರರು, ನೇಕಾರರು, ಅಕ್ಕಸಾಲಿಗರು, ಗಾಣಿಗರು, ಚಮ್ಮಾರರು, ಶಿಲ್ಪಿಗಳು ಮತ್ತು ಬೀದಿಬದಿ ವ್ಯಾಪಾರಿಗಳು, ಅಲೆಮಾರಿ ಸಮುದಾಯಗಳು, ಫೋಟೊಗ್ರಾಫರ್‌ಗಳು, ಆಟೊ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್‌ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣಪುಟ್ಟ ವ್ಯಾಪಾರಸ್ಥರುಗಳಿಗೆ ಮತ್ತು ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು, ಮನೆ ಕೆಲಸದವರು, ನರೇಗಾ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು ಮುಂತಾದ ಎಲ್ಲ ರೀತಿಯ ಕಾರ್ಮಿಕರುಗಳಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ ನೀಡುತ್ತಿರುವಂತೆ ತಲಾ 10 ಕೆ.ಜಿ. ಅಕ್ಕಿ, ಹಾಲು, 2 ಲೀಟರ್ ಅಡುಗೆ ಎಣ್ಣೆ, ತರಕಾರಿ ಮುಂತಾದ ಪದಾರ್ಥಗಳು ಸೇರಿ ಅತ್ಯಂತ ಅಗತ್ಯವಾದ 16 ಜೀವನಾವಶ್ಯಕ ವಸ್ತುಗಳನ್ನು ಒಳಗೊಂಡ ಕಿಟ್‍ಗಳನ್ನು ಪ್ರತಿ ತಿಂಗಳ ಮೊದಲ ವಾರ ಒದಗಿಸಬೇಕು. ಬಿ.ಪಿ.ಎಲ್ ಕಾರ್ಡ್ ಇಲ್ಲದ ಕುಟುಂಬಗಳಿಗೂ ವಿಸ್ತರಿಸಬೇಕು.

* ಆಹಾರವಿಲ್ಲದೆ ಪ್ರತಿನಿತ್ಯವೂ ಹಸಿವಿನಿಂದ ನರಳುತ್ತಿರುವ ಎಲ್ಲ ವರ್ಗದ ಜನರಿಗೆ ಇಂದಿರಾ ಕ್ಯಾಂಟೀನ್‍ಗಳನ್ನು ಬಳಸಿಕೊಂಡು, ಅಗತ್ಯವಿರುವ ಕಡೆ ಮೊಬೈಲ್ ಕ್ಯಾಂಟೀನ್‍ಗಳ ವ್ಯವಸ್ಥೆ ಮಾಡಿ ಉಚಿತವಾಗಿ ನಿತ್ಯ 3 ಹೊತ್ತು ಆಹಾರ ಪೂರೈಸಲು ಅಗತ್ಯ ಕ್ರಮ ವಹಿಸಬೇಕು.

* ಎಲ್ಲಾ ರೀತಿಯ ಕಾರ್ಮಿಕರುಗಳು ಯಾವುದೇ ರೀತಿಯ ದುಡಿಮೆಯಿಲ್ಲದೇ ನಷ್ಟಕ್ಕೆ ಗುರಿಯಾಗಿರುವ ಕಾರಣ ಅವರುಗಳಿಗೆ ವಿಶೇಷ ಪ್ಯಾಕೇಜ್ ರೂಪಿಸಿ, ಪ್ರತಿಯೊಬ್ಬರಿಗೆ ಪ್ರತಿ ತಿಂಗಳು ಕನಿಷ್ಠ ₹ 10 ಸಾವಿರವನ್ನು ಲಾಕ್‍ಡೌನ್ ಅವಧಿಯಲ್ಲಿ ನೀಡಬೇಕು

* ದುಡಿಮೆಯನ್ನು ನಂಬಿಕೊಂಡು ಬದುಕುವ ಸಮುದಾಯಗಳ ಆರೋಗ್ಯದ ರಕ್ಷಣೆಗಾಗಿ ಸಾಕಷ್ಟು ಸಂಖ್ಯೆಯ ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳು ಮತ್ತು ಇತರೆ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಉಚಿತವಾಗಿ ನೀಡಬೇಕು

* ಲಾಕ್‍ಡೌನ್ ಅವಧಿಯಿಂದಾಗಿ ಆಟೊ, ಟ್ಯಾಕ್ಸಿ, ಕ್ಯಾಬ್, ಮಿನಿ ಬಸ್‍ಗಳು, ವಾಣಿಜ್ಯ ಸಂಬಂಧಿ ವಾಹನಗಳು ಹಾಗೂ ಇನ್ನಿತರೆ ಸಾಗಣೆ ವಾಹನಗಳು ರಸ್ತೆಗೆ ಇಳಿಯದೇ ಇದ್ದ ಕಾರಣಕ್ಕೆ ಅವರ ಸಂಪೂರ್ಣ ದುಡಿಮೆ ಸ್ಥಗಿತಗೊಂಡಿದೆ. ಆದುದರಿಂದ, ಈ ವಾಹನಗಳ ಚಾಲಕರುಗಳು ಮನೆ ಬಾಡಿಗೆ ಕಟ್ಟಲಾಗದೆ, ಸಾಲದ ಕಂತುಗಳನ್ನು ತೀರಿಸಲಾಗದೇ, ಮಾಡಿಕೊಂಡ ಸಾಲದ ಬಡ್ಡಿ ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ. ಆದುದರಿಂದ, ಲಾಕ್‍ಡೌನ್ ಅವಧಿ ಮುಕ್ತಾಯಗೊಳ್ಳುವವರೆಗೆ ಯಾರೂ ಸಹ ಮನೆ ಬಾಡಿಗೆಗೆ ಒತ್ತಾಯಿಸದಂತೆ ಹಾಗೂ ವಾಣಿಜ್ಯ ಮತ್ತು ಖಾಸಗಿ ಬ್ಯಾಂಕ್‍ಗಳು, ಫೈನಾನ್ಸ್ ಸಂಸ್ಥೆಗಳು ಕನಿಷ್ಠಒಂದು ವರ್ಷ ಕಾಲ ಬಡ್ಡಿ, ಇ.ಎಂ.ಐ. ಕಟ್ಟುವಂತೆ ಒತ್ತಾಯಿಸಬಾರದು.

*ಎಲ್ಲಾ ವಾಹನಗಳ ಮಾಲೀಕರುಗಳಿಂದ ರಸ್ತೆ ತೆರಿಗೆ, ವಾಹನ ವಿಮೆ ಕಟ್ಟಿಸಿಕೊಳ್ಳಬಾರದು ಮತ್ತು ವಾಹನ ಸ್ಥಗಿತಗೊಂಡ ಈ ಅವಧಿಗೆ ಕಟ್ಟಿರುವ ವಿಮೆಯ ಹಣವನ್ನು ಸದರಿ ವಾಹನಗಳ ಮಾಲೀಕರಿಗೆ ಹಿಂದಿರುಗಿಸಬೇಕು. ಕಷ್ಟದಲ್ಲಿರುವ ಚಾಲಕರು ಮತ್ತು ಮಾಲೀಕರುಗಳಿಗೆ ಸಾಲದ ರೂಪದಲ್ಲಿ ಅಗತ್ಯವಿದ್ದಷ್ಟು ಸಾಲವನ್ನು ನೀಡಲು ಕ್ರಮಕೈಗೊಳ್ಳಬೇಕು. ಹಾಗೆಯೇ ಕನಿಷ್ಠ 6 ತಿಂಗಳ ಅವಧಿಯ ರಸ್ತೆ ತೆರಿಗೆಯನ್ನು ಮನ್ನಾ ಮಾಡಬೇಕು, ಏರ್‌ಪೋರ್ಟ್‌ ಮುಂತಾದ ಕಡೆ ಟ್ಯಾಕ್ಸಿ, ಕ್ಯಾಬ್‍ಗಳಿಂದ ವಸೂಲು ಮಾಡುತ್ತಿದ್ದ ಪಾರ್ಕಿಂಗ್ ಶುಲ್ಕವನ್ನು ಲಾಕ್‍ಡೌನ್ ಅವಧಿ ಮುಗಿದು ಪರಿಸ್ಥಿತಿಯು ಸಹಜ ಸ್ಥಿತಿಗೆ ಬರುವವರೆಗೆ ವಸೂಲು ಮಾಡಬಾರದು.

* ಲಾಕ್‍ಡೌನ್ ಅವಧಿಯಲ್ಲಿ ಪೊಲೀಸ್ ಇಲಾಖೆಯು ವಿನಾ ಕಾರಣ ವಶಪಡಿಸಿಕೊಂಡಿರುವ ಎಲ್ಲ ರೀತಿಯ ವಾಹನಗಳನ್ನು ಷರತ್ತು ವಿಧಿಸದೆ ಬಿಡುಗಡೆ ಮಾಡಬೇಕು

* ಕಾರ್ಮಿಕರು, ಚಾಲಕರು, ವೃತ್ತಿ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಂಸ್ಥೆಗಳು ವಿಧಿಸುತ್ತಿದ್ದ ಶುಲ್ಕವನ್ನು ಮುಂದಿನ ಒಂದು ವರ್ಷದ ಅವಧಿಯವರೆಗೆ ಕಡಿತಗೊಳಿಸಿ ಉಚಿತವಾಗಿ ಶಿಕ್ಷಣ ನೀಡುವಂತೆ ಕ್ರಮಕೈಗೊಳ್ಳಬೇಕು. ಇದನ್ನು ವಿಶೇಷ ಸಂದರ್ಭವೆಂದು ಭಾವಿಸಿ ಕಡ್ಡಾಯ ಶಿಕ್ಷಣ ಕಾಯಿದೆ ಅನ್ವಯ ಶಿಕ್ಷಣ ನೀಡಲು ಕ್ರಮಕೈಗೊಳ್ಳಬೇಕು.

* ಮಡಿವಾಳ (ದೋಬಿ) ಸಮುದಾಯದವರು ಆಸ್ಪತ್ರೆಗಳು ನೀಡುವ ಬಟ್ಟೆಗಳನ್ನು ತೊಳೆಯುತ್ತಿದ್ದಾರೆ. ಹೀಗಾಗಿ ಸದರಿ ಸಮುದಾಯದವರಿಗೆ ಮೇಲೆ ನಮೂದಿಸಿದ ಎಲ್ಲ ಸವಲತ್ತುಗಳನ್ನು ನೀಡುವುದರ ಜೊತೆಗೆ ಇನ್ನು ಮುಂದೆ ಸುರಕ್ಷಿತವಾಗಿ ತಮ್ಮ ವೃತ್ತಿಗಳನ್ನು ನಡೆಸಲು ಅನುವು ಮಾಡಿಕೊಡಬೇಕು. ಇಸ್ತ್ರಿ ಅಂಗಡಿಗಳಲ್ಲಿ ಜನರ ನೂಕುನುಗ್ಗಲು ಇರುವುದಿಲ್ಲ. ಹೀಗಾಗಿ ಅವುಗಳನ್ನು ಸಮರ್ಪಕ ಸುರಕ್ಷತ ಕ್ರಮಗಳೊಂದಿಗೆ ತೆರೆಯಲು ಅನುಮತಿ ನೀಡಬೇಕು.

* ಸವಿತಾ (ಹಡಪದ) ಸಮುದಾಯದವರು ನೇರ ಜನರ ಸಂಪರ್ಕದೊಂದಿಗೆ ಕೆಲಸ ಮಾಡುವರು. ಇವರು ಕ್ಷೌರಿಕ ವೃತ್ತಿಯಲ್ಲದೆ ಮಂಗಳ ವಾದ್ಯಗಳನ್ನು ನುಡಿಸುವ ವೃತ್ತಿಯನ್ನೂ ಮಾಡುತ್ತಾರೆ. ಲಾಕ್‍ಡೌನ್‍ ಅವಧಿಯಲ್ಲಿ ಮದುವೆ, ಮುಂಜಿಗಳು ನಡೆಯದೆ ದೇವಸ್ಥಾನಗಳನ್ನು ತೆರೆಯದೆ ಇರುವುದರಿಂದ ಅವರೂ ಉಳಿದವರಂತೆ ಬೀದಿಗೆ ಬೀಳುವಂತಾಗಿದೆ. ಈ ಸಮುದಾಯದವರಿಗೂ ಸವಲತ್ತುಗಳನ್ನು ನೀಡಬೇಕು.

* ಕೇಂದ್ರ ಸರ್ಕಾರ ಘೋಷಿಸಿರುವ ವಿಮಾ ರಕ್ಷಣೆಯನ್ನು ವೈದ್ಯಕೀಯ ಸಂಸ್ಥೆಗಳು (ಆಸ್ಪತ್ರೆಯಲ್ಲಿ) ಕೆಲಸ ಮಾಡುತ್ತಿರುವ ಅಟೆಂಡರ್‌ಗಳು, ಕಸ ಗುಡಿಸುವವರು, ಭದ್ರತಾ ಸಿಬ್ಬಂದಿ, ಲ್ಯಾಬ್ ಟೆಕ್ನೀಷಿಯನ್ಸ್, ಆಂಬ್ಯುಲೆನ್ಸ್‌ಗಳ ಚಾಲಕರು, ಸಹಾಯಕರು, ಪೊಲೀಸ್, ಹೋಂ ಗಾರ್ಡ್, ಆಶಾ ಕಾರ್ಯಕರ್ತರು, ಅಂಗನವಾಡಿ, ಪೌರ ಕಾರ್ಮಿಕರು, ಕಂದಾಯ ಸಿಬ್ಬಂದಿ, ಎಪಿಎಂಸಿಸಿಬ್ಬಂದಿ, ಆಟೋ, ಟ್ಯಾಕ್ಸಿ, ಕ್ಯಾಬ್‍ಗಳ ಚಾಲಕರು, ವಿವಿಧ ವೃತ್ತಿ ಸಮುದಾಯಗಳು ಮತ್ತು ಜನರ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಸವಿತಾ (ಹಡಪದ) ಸಮಾಜ, ಮಡಿವಾಳ (ದೋಬಿ) ಸಮಾಜ, ಚಮ್ಮಾರ, ಬೀದಿಬದಿ ವ್ಯಾಪಾರಿಗಳು ಮುಂತಾದವರಿಗೂ ವಿಸ್ತರಿಸಬೇಕು.

* ಕುಂಬಾರರು, ನೇಕಾರರು, ಅಕ್ಕಸಾಲಿಗರು, ಶಿಲ್ಪಿಗಳು, ಸಣ್ಣಪುಟ್ಟ ವ್ಯಾಪಾರಸ್ಥರು, ಪೋಟೋಗ್ರಾಫರ್‌ಗಳ, ಅಲೆಮಾರಿ ಸಮುದಾಯಗಳವರು ಮುಂತಾದವರುಗಳಿಗೆ ವಿಶೇಷ ಪ್ಯಾಕೇಜ್‍ಗಳನ್ನು ರೂಪಿಸಬೇಕು.

* ಅಲೆಮಾರಿ ಸಮುದಾಯಗಳು ನಿರಂತರವಾಗಿ ಊರಿಂದ ಊರಿಗೆ ವಲಸೆ ಹೋಗುತ್ತಿರುತ್ತಾರೆ. ಅವರ ಬಳಿ ಬಿಪಿಎಲ್ ಪಡಿತರ ಚೀಟಿ ಇರುವುದಿಲ್ಲ. ಈ ಸಮುದಾಯದ ಮುಖಂಡರಿಗೆ ತಮ್ಮ ಜನ ಎಲ್ಲಿದ್ದಾರೆಂದು ಗೊತ್ತಿರುತ್ತದೆ. ಆದುದರಿಂದ, ಆಹಾರ ಧಾನ್ಯಗಳು ಸೇರಿದಂತೆ ನೀಡುವ ಎಲ್ಲಾ ಸವಲತ್ತುಗಳನ್ನು ಆ ಸಮುದಾಯಗಳ ಮುಖಂಡರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿತರಿಸಲು ಕ್ರಮ ವಹಿಸುವುದು ಮತ್ತು ಅವರು ಊರಿಂದ ಊರಿಗೆ ಅಲೆದಾಡುತ್ತಿರುವುದರಿಂದ ರಕ್ಷಣೆಗಾಗಿ ವ್ಯವಸ್ಥಿತವಾದ ಟಾರ್ಪಾಲುಗಳನ್ನು ನೀಡಲು ಕ್ರಮವಹಿಸಬೇಕು.

* ನೇಕಾರರು ನೇಯ್ದ ಬಟ್ಟೆಗಳಿಗೆ ಮಾರುಕಟ್ಟೆಯಿಲ್ಲದೆಕೊಳ್ಳುವವರಿಲ್ಲ. ಹೀಗಾಗಿ ಕೆಎಚ್ಡಿಸಿಮುಂತಾದವುಗಳ ಮೂಲಕ ನೇಯ್ದ ಬಟ್ಟೆಗಳನ್ನು ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸುವುದು. ಅಲ್ಲಿಯವರೆಗೆ ಉಳಿದ ಸಮುದಾಯಗಳಂತೆಯೇ ಆಹಾರ ಧಾನ್ಯ ಮತ್ತು ಪರಿಹಾರ ನೀಡಬೇಕು.

* ನೇಕಾರರು, ಅಲೆಮಾರಿ ಸಮುದಾಯಗಳು, ಬೀದಿಬದಿ ವ್ಯಾಪಾರಿಗಳು, ಕುಂಬಾರರು, ಅಕ್ಕಸಾಲಿಗರು, ಶಿಲ್ಪಿಗಳು, ಸಣ್ಣಪುಟ್ಟ ವ್ಯಾಪಾರಸ್ಥರು, ಮೀನುಗಾರರು ಮುಂತಾದವರುಗಳಿಗೆ ಲಾಕ್‍ಡೌನ್ ಅವಧಿಯಲ್ಲಿ ಜೀವನ ನಿರ್ವಹಣೆಗೆ ಪರಿಹಾರ ನೀಡುವುದರ ಜೊತೆಗೆ ಲಾಕ್‍ಡೌನ್ ಅವಧಿ ಮುಗಿದ ನಂತರ ತಮ್ಮ ವ್ಯಾಪಾರ ಸಂಬಂಧಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಲದ ರೂಪದಲ್ಲಿ ಸಹಾಯ ಮಾಡಬೇಕು.

* ಫೋಟೊಗ್ರಾಫರ್‌ಗಳು ಸಾಲ ಮಾಡಿ ಉಪಕರಣಗಳನ್ನು ಖರೀದಿ ಮಾಡಿರುತ್ತಾರೆ. ಅವರೂ ಉದ್ಯೋಗವಿಲ್ಲದೇ ಉಳಿದ ಸಮುದಾಯಗಳಂತೆಯೇ ತೀವ್ರ ರೀತಿಯ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ, ಅವರ ಮನೆ ಬಾಡಿಗೆ, ಸಾಲದ ಮೇಲಿನ ಬಡ್ಡಿ, ಇಎಂಐ,ಮುಂತಾದವುಗಳನ್ನು ಕನಿಷ್ಠ 6 ತಿಂಗಳವರೆಗೆ ವಸೂಲು ಮಾಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT