ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವು ಕಡಿತ: ಔಷಧಿ ಸೀಮಿತ

ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನ ವರದಿಯಲ್ಲಿ ಉಲ್ಲೇಖ
Last Updated 10 ಫೆಬ್ರುವರಿ 2020, 10:58 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮಲ್ಲಿ 270 ಪ್ರಭೇದಗಳ ಹಾವುಗಳಿದ್ದು, ಅವುಗಳಲ್ಲಿ ನಾಗರಹಾವು, ಕಡಂಬಲ (ಕಾಮನ್‌ ಕ್ರೈಟ್‌) ಸೇರಿದಂತೆ ನಾಲ್ಕು ಪ್ರಭೇದಗಳ ಹಾವು ಕಡಿತಕ್ಕೆ ಮಾತ್ರ ‘ಆ್ಯಂಟಿ ಸ್ನೇಕ್ ವೆನಂ’ ಜೀವರಕ್ಷಕವಾಗಿದೆ ಎನ್ನುವುದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನಡೆಸಿದ ಅಧ್ಯಯನದಿಂದ ಸಾಬೀತಾಗಿದೆ.

ಹಾವು ಕಡಿತಕ್ಕೆ ಒಳಗಾದವರನ್ನು ರಕ್ಷಿಸಲು ಇರುವ ಏಕೈಕ ಔಷಧಿ ‘ಆ್ಯಂಟಿ ಸ್ನೇಕ್ ವೆನಂ’. ಆದರೆ, ಈ ಔಷಧಿಯೂ ಉತ್ತಮ ಫಲಿತಾಂಶ ನೀಡುತ್ತಿಲ್ಲ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ. ‘ಭಾರತವು ಪ್ರಪಂಚದ ಹಾವು ಕಡಿತದ ರಾಜಧಾನಿ’ ಎಂಬ ಶೀರ್ಷಿಕೆಯಡಿ ನಗರದ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ವಿವಿಧ ಸಂಶೋಧನಾ ಸಂಸ್ಥೆಗಳು ಈ ಅಧ್ಯಯನಕ್ಕೆ ನೆರವಾಗಿವೆ.

ನಾಗರಹಾವು, ಕಡಂಬಲ, ಗರಗಸ ಮಂಡಲ ಹಾವು ಹಾಗೂ ಕೊಳಕುಮಂಡಲ ಹಾವಿನ ಕಡಿತಕ್ಕೆ ಆ್ಯಂಟಿ ವೆನಂ ತಯಾರಿಸಲಾಗುತ್ತಿದೆ. ಉಳಿದ ವಿಷಕಾರಿ ಹಾವುಗಳ ಕಡಿತಕ್ಕೆ ಔಷಧಿ ಒದಗಿಸಲುನಿರ್ದಿಷ್ಟವಾದ ವಿಷ ನಿರ್ಬಂಧಕಗಳು ಉತ್ಪತ್ತಿಯಾಗಿಲ್ಲ. ಕೆಲವೆಡೆ ಸಾಂಪ್ರದಾಯಿಕ ಔಷಧಿಯನ್ನೇ ಬಳಕೆ ಮಾಡಲಾಗುತ್ತಿದ್ದು, ಅದು ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ. ಇದರಿಂದ ಹಾವು ಕಡಿತದಿಂದ ಸಾಯುವವರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನುವುದನ್ನು ವರದಿಯಲ್ಲಿ ನಮೂದಿಸಲಾಗಿದೆ.

ವಿಷಗಳಲ್ಲಿ ವ್ಯತ್ಯಾಸ

‘ಮೊದಲ ಹಂತದಲ್ಲಿಕಡಂಬಳ, ಕಾಳಿಂಗ ಸೇರಿದಂತೆ ನಿರ್ಲಕ್ಷಿತಭಾರತೀಯ ಹಾವುಗಳ ವಿಷಗಳ ವೈಶಿಷ್ಟ್ಯಗಳ ಬಗ್ಗೆ ಅಧ್ಯಯನ ನಡೆಸಿ,ಔಷಧೀಯ ಚಟುವಟಿಕೆಗಳು ಮತ್ತು ಸಾಮರ್ಥ್ಯಗಳನ್ನು ನಿರೂಪಿಸಲಾಯಿತು. ಹಾವುಗಳ ವಿಷ ಸಂಯೋಜನೆಗಳಲ್ಲಿ ಗಮನಾರ್ಹವಾದ ವ್ಯತ್ಯಾಸಗಳನ್ನು ಫಲಿತಾಂಶಗಳು ಬಹಿರಂಗಪಡಿಸಿದವು. ಭೌಗೋಳಿಕವಾಗಿ ಬೇರ್ಪಟ್ಟ ಒಂದೇ ಜಾತಿಯ ಗುಂಪುಗಳ ನಡುವೆ ವಿಷದ ಸಂಯೋಜನೆ ಭಿನ್ನವಾಗಿರುವುದು ಬೆಳಕಿಗೆ ಬಂದಿದೆ’ ಎಂದು ಸಂಸ್ಥೆ ವಿಜ್ಞಾನಿಡಾ.ಕಾರ್ತಿಕ್ ಸುಣಗಾರ್ ತಿಳಿಸಿದರು.

‘ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶದಲ್ಲಿ ಕಂಡುಬರುವ ಒಂದೇ ಪ್ರಭೇದಗಳಹಾವುಗಳ ವಿಷಗಳಲ್ಲಿ ಗಮನಾರ್ಹ ವ್ಯತ್ಯಾಸಗಳನ್ನು ಗಮನಿಸಲಾಯಿತು. ಪಶ್ಚಿಮ ಬಂಗಾಳದ ನಾಗರಹಾವಿನ ವಿಷ ನರಮಂಡಲಕ್ಕೆ ಹಾನಿ ಮಾಡಿದರೆ, ಅರುಣಾಚಲ ಪ್ರದೇಶದ ನಾಗರ ಹಾವಿನ ವಿಷ ಅಂಗಾಂಗಗಳಿಗೆ ಹಾನಿ ಮಾಡುತ್ತದೆ’ ಎಂದರು.

ವಿಷದ ಪರಿಣಾಮಗಳನ್ನು ನಿವಾರಿಸಲು ವಿಷ ನಿರ್ಬಂಧಕಗಳು ಸಂಪೂರ್ಣ ಅಸಮರ್ಥವಾಗಿವೆ ಎನ್ನುವುದೂ ಸಾಬೀತಾಗಿದೆ. ಇಲಿಗಳ ಮಾದರಿಯ ಮೇಲೆ ಈ ಪ್ರಯೋಗ ಮಾಡಲಾಗಿದೆ. ಅರುಣಾಚಲ ಪ್ರದೇಶದ ನಾಗರಹಾವಿನ ವಿಷದ ವಿರುದ್ಧ ಈ ವಿಷ ನಿರ್ಬಂಧಕ ಪರಿಣಾಮ ಬೀರಿಲ್ಲ ಎಂದು ಹೇಳಿದರು.

ಕಟ್ಟುಹಾವಿನ ವಿಷಕ್ಕೆ ಸ್ಪಂದಿಸದ ಔಷಧಿ

ಅಧ್ಯಯನದ ಎರಡನೇ ಭಾಗದಲ್ಲಿ ಸಂಶೋಧನಾ ತಂಡವು ಇಲ್ಲಿ ಬಳಕೆಯಲ್ಲಿರುವ ಆ್ಯಂಟಿ ಸ್ನೇಕ್ ವೆನಂ ಬಗ್ಗೆಮೌಲ್ಯಮಾಪನ ಮಾಡಿದೆ.ಪಶ್ಚಿಮ ಭಾರತದಿಂದ ಬಂದ ಕಟ್ಟುಹಾವಿನವಿಷವು ನಾಗರಹಾವಿನ ವಿಷಕ್ಕಿಂತ 40 ಪಟ್ಟು ಹೆಚ್ಚು ಪ್ರಬಲವಾಗಿರುವುದು ತಿಳಿದು ಬಂದಿದೆ.

‘ಆ್ಯಂಟಿ ಸ್ನೇಕ್ ವೆನಂ ಕಟ್ಟು ಹಾವಿನ ವಿಷವನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸಲು ಸಂಪೂರ್ಣವಾಗಿ ವಿಫಲವಾಗಿದೆ. ವಿಷ ನಿರ್ಬಂಧಕ ತಯಾರಕರು, ಸಾರ್ವಜನಿಕ ಆರೋಗ್ಯ ಅಧಿಕಾರಿಗಳು, ನೀತಿ ನಿರೂಪಕರು ಒಟ್ಟಾಗಿ ನಿರ್ಲಕ್ಷಿತ ಪ್ರಭೇದಗಳಿಗೆ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ’ ಎಂದು ಡಾ.ಸುಣಗಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT