ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ತವರಲ್ಲೇ ಸವಾಲು!

ಮುಖಂಡರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಗುವರೇ?
Last Updated 13 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಇಲ್ಲಿನ ಯಮಕನಮರಡಿ ಕ್ಷೇತ್ರ ಶಾಸಕರೂ ಆಗಿರುವ ಸತೀಶ ಜಾರಕಿಹೊಳಿ ಅವರಿಗೆ, ರಾಜ್ಯದಲ್ಲಿ ಪಕ್ಷ ಮುನ್ನಡೆಸುವ ಜವಾಬ್ದಾರಿ ಜೊತೆಗೆ ತವರು ಜಿಲ್ಲೆಯಲ್ಲೇ ಸಂಘಟನೆ ಶಕ್ತಗೊಳಿಸುವ ದೊಡ್ಡ ಸವಾಲಿದೆ.

ಹಿಂದೆ ಎಐಸಿಸಿ ಕಾರ್ಯದರ್ಶಿಯಾಗಿದ್ದ ಅವರಿಗೆ ತೆಲಂಗಾಣ ರಾಜ್ಯದ ಪಕ್ಷದ ಉಸ್ತುವಾರಿ ನೀಡಲಾಗಿತ್ತು. ಕೆಲವೇ ಸಮಯದಲ್ಲಿ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಅವರಿಂದ ಸ್ಥಾನ ಕಸಿದುಕೊಂಡು, ಸೋದರ ರಮೇಶ ಜಾರಕಿಹೊಳಿಗೆ ಕೊಡಲಾಗಿತ್ತು. ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲೂ ಸಚಿವ ಸ್ಥಾನ ಸಿಕ್ಕಿತ್ತು. ಈಗ, ಆ ಪಕ್ಷದ ಹೈಕಮಾಂಡ್‌ ದೊಡ್ಡ ಹುದ್ದೆಯನ್ನೇ ನೀಡಿ, ಅವರ ಮೇಲೆ ಹಲವು ನಿರೀಕ್ಷೆಗಳನ್ನೂ ಇಟ್ಟುಕೊಂಡಿದೆ.

ಬಿಜೆಪಿ ಪ್ರಾಬಲ್ಯ ಹೆಚ್ಚಳ

ಬರೋಬ್ಬರಿ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಇಲ್ಲಿ ಪಕ್ಷದ ಸ್ಥಿತಿಗತಿ, 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಇದ್ದಂತೆ ಇಲ್ಲ. ಆಗ ಪಕ್ಷದೊಂದಿಗೆ ಇದ್ದ ಹಲವರು ಬಿಜೆಪಿಯ ಮನೆ ಸೇರಿದ್ದಾರೆ. ಕೆಲವು ತಿಂಗಳಗಳ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಪಕ್ಷವು ಹೀನಾಯವಾಗಿ ಸೋಲನುಭವಿಸಿದೆ. ಗೋಕಾಕ, ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳನ್ನು ಕಾಂಗ್ರೆಸ್‌ ಕಳೆದುಕೊಂಡಿದೆ. ಎರಡು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿಯ ಸಂಸದರೇ ಇದ್ದಾರೆ. ಬಿಜೆಪಿಯು ಹಿಂದೆಂದೂ ಇಲ್ಲದಂತಹ ರಾಜಕೀಯ ಪ್ರಾತಿನಿಧ್ಯವನ್ನು ಜಿಲ್ಲೆಗೆ ಕೊಟ್ಟಿದೆ. ನಾಲ್ವರು ಸಚಿವರು ಇಲ್ಲಿನವರೇ ಆಗಿದ್ದಾರೆ. ನಿಗಮ, ಮಂಡಳಿಗಳಲ್ಲೂ ಬಿಜೆಪಿಯು ಹಲವರಿಗೆ ಅವಕಾಶ ಕೊಟ್ಟಿದೆ. ಅವರೆಲ್ಲರೂ ತಮ್ಮ ಬೆಳವಣಿಗೆಯೊಂದಿಗೆ ಬಿಜೆಪಿಯ ಸಂಘಟನೆಗೆ ‘ಕೊಡುಗೆ’ ಕೊಡುತ್ತಿದ್ದಾರೆ. ಪರಿಣಾಮ ಆ ಪಕ್ಷ ‘‍ಪ್ರಬಲ’ಗೊಂಡಿದೆ. ಇದೆಲ್ಲ ‘ಬಿರುಗಾಳಿ’ಯ ನಡುವೆಯೂ ಸಂಘಟನೆ ರಕ್ಷಿಸಿಕೊಳ್ಳುವ ಜೊತೆಗೆ ತಮ್ಮ ರಾಜಕೀಯ ಅಸ್ತಿತ್ವವನ್ನೂ ಕಾಪಾಡಿಕೊಂಡು, ವರ್ಚಸ್ಸನ್ನು ವೃದ್ಧಿಸಿಕೊಳ್ಳುವ ಸವಾಲನ್ನು ಸತೀಶ ನಿರ್ವಹಿಸಬೇಕಾಗಿದೆ.

ಹಲವು ಗುಂಪುಗಳು

‘ಪಕ್ಷದಲ್ಲಿ, ಜಿಲ್ಲಾ ಮಟ್ಟದಲ್ಲೂ ಹಲವು ಬಣಗಳಿವೆ. ಗುಂಪುಗಳಿವೆ. ನಾಯಕರ ನಡುವೆ ಸಮನ್ವಯದ ಕೊರತೆ ಢಾಳಾಗಿ ಕಾಣಿಸುತ್ತಿದೆ. ಮುಸುಕಿನ ಗುದ್ದಾಟಗಳು ಸಾಮಾನ್ಯ ಎನ್ನುವಂತಾಗಿವೆ. ಚಿಕ್ಕೋಡಿ ಭಾಗದಲ್ಲಿ ಹಿಡಿತ ಹೊಂದಿರುವ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಇತ್ತೀಚಿನ ದಿನಗಳಲ್ಲಿ ಪಕ್ಷದ ವೇದಿಕೆಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ! ಇಂತಹ ಸಂದರ್ಭದಲ್ಲಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಹೋಗಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಬಾವುಟ ಹಾರಿಸುವುದು ಸುಲಭವೇನಲ್ಲ. ನಾಯಕರ ಶಕ್ತಿಯನ್ನು ಒಟ್ಟಾಗಿ ಸೇರಿಸುವ ನಿಟ್ಟಿನಲ್ಲಿ ನೂತನ ಕಾರ್ಯಾಧ್ಯಕ್ಷರು ಯಾವ ರೀತಿಯ ತಂತ್ರಗಳನ್ನು ರೂಪಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

‘ವೈಯಕ್ತಿಕವಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ರಮೇಶ ಹಾಗೂ ಸತೀಶ ಜಾರಕಿಹೊಳಿ ಹಿಂದೆ ಒಂದೇ ಪಕ್ಷದಲ್ಲಿದ್ದರು. ಸಂಘಟನೆ ಬಲಗೊಳಿಸಲು ಶ್ರಮಿಸುತ್ತಿದ್ದರು. ಆದರೆ, ಈಗ ಸತೀಶಗೆ ಸಹೋದರ (ರಮೇಶ ಜಾರಕಿಹೊಳಿ) ನೇರ ಎದುರಾಳಿಯಾಗಿದ್ದಾರೆ. ಗೋಕಾಕದಲ್ಲಿ ‘ನಿತ್ರಾಣ’ವಾಗಿರುವ ಪಕ್ಷಕ್ಕೆ ಯಾವ ರೀತಿಯ ‘ಟಾನಿಕ್‌’ ಕೊಟ್ಟು ಚೇತರಿಸಿಕೊಳ್ಳುವಂತೆ ಮಾಡುತ್ತಾರೆ ಎನ್ನುವ ಕುತೂಹಲವೂ ಕಾರ್ಯಕರ್ತರದಾಗಿದೆ.

ಸವಾಲಿನ ಹಾದಿ...

* ಕೆಲವೇ ತಿಂಗಳುಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬರಲಿದೆ. ಆ ಚುನಾವಣೆಯಲ್ಲಿ ಯಾವುದೇ ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧೆ ನಡೆಯುವುದಿಲ್ಲ. ಆದರೆ, ಪಕ್ಷದ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಬೇಕಾಗುತ್ತದೆ. ತಳಮಟ್ಟದಲ್ಲಿ ಬೇರು ಗಟ್ಟಿಗೊಳಿಸಬೇಕಾಗುತ್ತದೆ.

* ಮುಂಬರುವ ಮಹಾನಗರಪಾಲಿಕೆ ಚುನಾವಣೆಯಲ್ಲಿ, ಪಕ್ಷದ ಚಿಹ್ನೆಯ ಮೇಲೆ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಪ್ರಮುಖ ಪಕ್ಷವಾದ ಬಿಜೆಪಿ ನಾಯಕರು ಈಗಾಗಲೇ ಘೋಷಿಸಿದ್ದಾರೆ. ಹೀಗಾದಲ್ಲಿ, ಕಾಂಗ್ರೆಸ್‌ನ ಕಾರ್ಯತಂತ್ರಗಳೇನು, ಅವು ಎಷ್ಟರ ಮಟ್ಟಿಗೆ ಫಲಿತಾಂಶ ತಂದುಕೊಡಲಿವೆ. ಇದಕ್ಕೆ ಕಾರ್ಯಾಧ್ಯಕ್ಷರು ಯಾವ ಕೊಡುಗೆ ನೀಡುತ್ತಾರೆ ಕಾದು ನೋಡಬೇಕಿದೆ.

* ಜಿಲ್ಲೆಯಲ್ಲಿ ಗೋಕಾಕ, ನಿಪ್ಪಾಣಿ ನಗರಸಭೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಈಚೆಗಷ್ಟೇ ಮೀಸಲಾತಿ ಪ್ರಕಟವಾಗಿದ್ದು, ಪಕ್ಷದವರನ್ನು ಗೆಲ್ಲಿಸಿಕೊಳ್ಳುವ ಹೊಣೆ ಇದೆ.

* ಅವರು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಅವರು ‘ದೊಡ್ಡ ಅಂತರ’ದಿಂದೇನೂ ಗೆದ್ದಿಲ್ಲ. ಈಗ, ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುವ ಹೊಣೆ ಇದೆ. ಹೀಗಿರುವಾಗ ಕ್ಷೇತ್ರದಲ್ಲೂ ‘ಅನುಕೂಲಕರ ವಾತಾವರಣ’ ಕಾಪಾಡಿಕೊಂಡಿ ಹೋಗಬೇಕಾದ ಸವಾಲಿದೆ.

* ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಪಕ್ಷದ ಪ್ರಾಬಲ್ಯ ವೃದ್ಧಿ.

* ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುತ್ತಿದ್ದಂತೆಯೇ, ವಿಧಾನಸಭೆ ಚುನಾವಣೆ ಎದುರಾಗಲಿದೆ. ಅದಕ್ಕಾಗಿಯೂ ಸಂಘಟನೆ ಬಲಗೊಳಿಸಬೇಕಾಗಿದೆ. ಇದಕ್ಕಾಗಿ 2ನೇ ಹಂತದ ಹಾಗೂ ಇತರ ನಾಯಕರನ್ನೂ ಬೆಳೆಸಲು ಸತೀಶ ಹೆಗಲು ಕೊಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT