ಗುರುವಾರ , ಜನವರಿ 23, 2020
22 °C
ನೆರೆಪೀಡಿತ ಪ್ರದೇಶಗಳ ಜನರಿಗೆ ನೆರವಾಗದಿರುವ ಪರಿಣಾಮ

ನೆರೆ ಪರಿಹಾರ: ಹಲವು ಹಕ್ಕು, ನೀತಿಗಳ ಉಲ್ಲಂಘನೆ!

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನೆರೆಪೀಡಿತ ಪ್ರದೇಶಗಳಲ್ಲಿನ ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ ಇಡೀ ಸಮುದಾಯದವರು ಹಲವು ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಸಂತ್ರಸ್ತರಿಗೆ ಸರ್ಕಾರದಿಂದ ಸಮರ್ಪಕವಾಗಿ ಪರಿಹಾರ ಕಲ್ಪಿಸದೇ ಇರುವುದರಿಂದಾಗಿ ವಿವಿಧ 15 ಕಾಯ್ದೆಗಳು ಹಾಗೂ ನೀತಿಗಳ ಉಲ್ಲಂಘನೆಯಾಗುತ್ತಿದೆ.

– ಮಕ್ಕಳ ಹಕ್ಕುಗಳ ರಕ್ಷಣೆಯ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ದಿ ಕನ್ಸರ್ನ್ಡ್ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ (ಸಿಡಬ್ಯುಸಿ) ಸಂಸ್ಥೆಯ ಪ್ರತಿನಿಧಿಗಳು, ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕೂಲಿಕಾರ್ಮಿಕರು ಮತ್ತು ಸಮುದಾಯದವರ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಜಾಗೃತ ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಕಾರ್ಯಕರ್ತರು ನಡೆಸಿದ ಸಮೀಕ್ಷೆಯಲ್ಲಿ ಗುರುತಿಸಿರುವ ಪ್ರಮುಖ ಅಂಶಗಳಿವು.

ಖಾನಾಪುರ ತಾಲ್ಲೂಕಿನ ಮಾಸ್ಕೇನಹಟ್ಟಿ ಹಾಗೂ ಮಂಗೇನಕೊಪ್ಪ, ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರ, ಚಿಕ್ಕೋಡಿ ತಾಲ್ಲೂಕಿನ ಮಣಗುತ್ತಿಗೆ ಭೇಟಿ ನೀಡಿ ಅಲ್ಲಿನ ನೈಜ ಚಿತ್ರಣವನ್ನು ‘ಪಟ್ಟಿ’ ಮಾಡಿದ್ದಾರೆ. ಯಾವ ಸಮಸ್ಯೆಯು ಯಾರ ಮೇಲೆ ಪರಿಣಾಮ ಬೀರಿದೆ ಹಾಗೂ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳೇನು ಎನ್ನುವ ಹಕ್ಕೊತ್ತಾಯವನ್ನು ಜಿಲ್ಲಾಡಳಿತದ ಮಂದೆ ಮಂಡಿಸಿದ್ದಾರೆ.

ಗುರುತಿಸಿರುವುದು: ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯ್ದೆ, ಜಿಲ್ಲಾ ವಿಕೋಪ ನಿರ್ವಹಣಾ ಕಾರ್ಯತಂತ್ರ 2016, ನರೇಗಾ ಕಾಯ್ದೆ ಹಾಗೂ ಮಾರ್ಗಸೂಚಿ, ರಾಷ್ಟ್ರೀಯ ಮಕ್ಕಳ ನೀತಿ, ಬಾಲ ಕಾರ್ಮಿಕ ಹದಿಹರೆಯದ ಕಾರ್ಮಿಕರ ಕಾಯ್ದೆ, ಅಪೌಷ್ಟಿಕತೆ ನಿವಾರಣೆಗೆ ಎನ್‌.ಕೆ. ಪಾಟೀಲ ಸಮಿತಿಯು ಸೂಚಿಸಿರುವ ಕಾರ್ಯತಂತ್ರ, ಕೆಡಿಪಿ ಸಭೆಯ ಆದೇಶ, ರಾಜ್ಯ ವಿಕೋಪ ನಿರ್ವಹಣಾ ಯೋಜನೆ, ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಕಾಯ್ದೆ 1993, ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ, ರಾಜ್ಯ ಮಕ್ಕಳ ರಕ್ಷಣಾ ನೀತಿ, ಬಾಲ್ಯವಿವಾಹ ನಿಷೇಧ ಕಾಯ್ದೆ, ಆಹಾರ ಭದ್ರತಾ ಕಾಯ್ದೆ, ಕರ್ನಾಟಕ ಶಾಲೆಗಳ ಮಕ್ಕಳ ರಕ್ಷಣಾ ಕಾಯ್ದೆಯನ್ನು ಉಲ್ಲಂಘನೆ ಆಗುತ್ತಿರುವುದನ್ನು ಸಮೀಕ್ಷೆ ವೇಳೆ ಗುರುತಿಸಲಾಗಿದೆ.

ವಸತಿ, ಸಮೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳು, ಭೂಮಿ (ಕೃಷಿ ಹಾಗೂ ವಸತಿ), ಸೇವೆಗಳು, ವ್ಯವಸ್ಥೆಗಳು, ಮಕ್ಕಳು ಹಾಗೂ ಹಿರಿಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ, ಪರಿಹಾರೋಪಾಯಗಳನ್ನೂ ತಿಳಿಸಲಾಗಿದೆ.

ಮಕ್ಕಳು, ಮಹಿಳೆಯರ ಮುಂದಾಳತ್ವದಲ್ಲಾಗಲಿ: ಮನೆ ಹಾನಿಗೆ ಸಂಬಂಧಿಸಿದ ಸಮೀಕ್ಷೆಯು ಅಲ್ಲಿನ ಮಕ್ಕಳು ಹಾಗೂ ಮಹಿಳೆಯರ ಮುಂದಾಳತ್ವದಲ್ಲಿ ನಡೆಯಬೇಕು. ಆಗ ಮಾತ್ರ ನೈಜ ಚಿತ್ರಣ ಸಿಗುತ್ತದೆ. ಶಿಥಿಲವಾಗಿರುವ ಮನೆಗಳನ್ನೂ ಹಾನಿ ಎಂದೇ ಪರಿಗಣಿಸಬೇಕು. ಪ್ರತಿ ಕುಟುಂಬಕ್ಕೂ ಪರಿಹಾರ ಸಿಗಬೇಕು ಹಾಗೂ ಅವರ ಮನೆಯನ್ನು ಯಾವ ವರ್ಗದಲ್ಲಿ ಸೇರಿಸಲಾಗಿದೆ ಎನ್ನುವುದನ್ನು ತಿಳಿಸಬೇಕು’ ಎಂಬ ಆಗ್ರಹ ಮಂಡಿಸಿದ್ದಾರೆ.

ಮಾಹಿತಿಯೇ ಇಲ್ಲ!: ಪರಿಹಾರ ನೀಡಲು ಮಾಡಿದ ವರ್ಗೀಕರಣದಲ್ಲಿ ಅನೇಕ ಸಮಸ್ಯೆಗಳಿವೆ ಹಾಗೂ ವರ್ಗೀಕರಣ ಸ್ಪಷ್ಟವಾಗಿಲ್ಲ. ಕೆಲವು ಕಡೆಗಳಲ್ಲಿ ಅತಿಯಾದ ಹಾನಿ ಉಂಟಾದ ಮನೆಗಳನ್ನು ‘ಸಿ’ ವರ್ಗಕ್ಕೆ ಅಥವಾ ಕಡಿಮೆ ಹಾನಿಯಾದ ಮನೆಗಳನ್ನು ‘ಎ’ ವರ್ಗಕ್ಕೆ ಸೇರಿಸಲಾಗಿದೆ. ತಮ್ಮ ಮನೆ ಯಾವ ವರ್ಗಕ್ಕೆ ಸೇರಿಸಲಾಗಿದೆ, ಎಷ್ಟು ಹಣ ಮಂಜೂರಾಗಬೇಕಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ‘ಎ’ ವರ್ಗದಲ್ಲಿರುವ ಕೆಲವರಿಗೆ ಮೊದಲ ಕಂತು ₹ 1 ಲಕ್ಷ ಬಂದಿದೆ. ಕೆಲವರಿಗೆ ಬಂದಿಲ್ಲ’ ಎಂದು ತಿಳಿಸಿದ್ದಾರೆ.

ಹುಕ್ಕೇರಿ, ಚಿಕ್ಕೋಡಿಯಲ್ಲಿ ಕಬ್ಬು ಹಾಗೂ ಖಾನಾಪುರದಲ್ಲಿ ಭತ್ತದ ಬೆಳೆ ಹೆಚ್ಚು ನಾಶವಾಗಿದೆ. ಸಿಗುವ ಪರಿಹಾರದ ಸ್ಪಷ್ಟ ಮಾಹಿತಿ ಜನರಿಗೆ ಸಿಕ್ಕಿಲ್ಲ. ಕೃಷಿ ಉತ್ಪನ್ನಗಳ ಹಾನಿಯನ್ನು ಯಾವ ಮಾನದಂಡದ ಮೇಲೆ ಗುರುತಿಸಿ ಪರಿಹಾರ ಕೊಡಲಾಗುತ್ತದೆ ಎನ್ನುವುದು ತಿಳಿದಿಲ್ಲ. ಅವರಿಗೆ ತ್ವರಿತವಾಗಿ ಪರಿಹಾರ ಒದಗಿಸಬೇಕು. ಬೆಳೆ ವಿಮೆ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು