ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ನಕಾರ

ಸಂಪುಟ ಸಭೆಯಲ್ಲಿ ಚರ್ಚೆಗೆ ನಕಾರ: ಸಾಮಾಜಿಕ ಗಣತಿ ವರದಿಗೆ ಯಡಿಯೂರಪ್ಪ ತಿರಸ್ಕಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ ವರದಿಯನ್ನು ಒಪ್ಪದೇ ಇರಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಸಭೆಯ ಕಾರ್ಯಸೂಚಿ ಪಟ್ಟಿಯಲ್ಲಿ ಈ ವಿಷಯ ಅಡಕವಾಗಿತ್ತು. ಇದನ್ನು ಚರ್ಚೆಗೆ ತೆಗೆದುಕೊಳ್ಳದಿರಲು ನಿರ್ಧರಿಸಿತು. ಮುಖ್ಯವಾಗಿ ಈ ಸಮೀಕ್ಷೆಯಲ್ಲಿ ರಾಜ್ಯದ ಜಾತಿ ವ್ಯವಸ್ಥೆ, ಶಿಕ್ಷಣ ಮತ್ತು ಆರ್ಥಿಕ ಪರಿಸ್ಥಿತಿಯ ಬಗ್ಗೆ ನಿಖರ ಮಾಹಿತಿಯೇ ಇಲ್ಲ. ಇದು ವೈಜ್ಞಾನಿಕವಾಗಿಲ್ಲ ಎಂಬ ಕಾರಣಕ್ಕಾಗಿ ಸಮೀಕ್ಷೆ ನಡೆಸಿದ್ದ ಕಾಂಗ್ರೆಸ್‌ ಸರ್ಕಾರವೇ ಒಪ್ಪಿಕೊಳ್ಳಲಿಲ್ಲ.

ನಂತರ ಬಂದ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರವೂ ಬೆಲೆಯನ್ನೇ ನೀಡಲಿಲ್ಲ. ಪರಿಸ್ಥಿತಿ ಹೀಗಿರುವಾಗ ಈ ವಿಷಯವನ್ನು ಸಂಪುಟದ ಮುಂದೆ ತಂದ ಉದ್ದೇಶವಾದರೂ ಏನು ಎಂದು ಕೆಲವು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.

ಸರ್ಕಾರದ ಯೋಜನೆಗಳಿಗೆ ಈ ವರದಿಯ ಅಂಕಿ ಅಂಶ ಮತ್ತು ಮಾಹಿತಿ ಬಳಸಿಕೊಳ್ಳಬಹುದು ಎಂಬ ಕಾರಣಕ್ಕೆ ವಿಷಯ ಕಾರ್ಯಸೂಚಿ ಪಟ್ಟಿಯಲ್ಲಿ ಸೇರಿಸಿದ್ದಾಗಿ ಸಮಜಾಯಿಷಿ ನೀಡಿದರು ಎನ್ನಲಾಗಿದೆ.

- ಆರ್ಯವೈಶ್ಯ ಸಮುದಾಯದವರಿಗೆ ಶಿಕ್ಷಣ ಮತ್ತು  ಉದ್ಯೋಗ ಪಡೆಯಲು ಹಿಂದುಳಿದ ವರ್ಗಗಳ ಪ್ರಮಾಣ ಪತ್ರ ಪಡೆಯಲು ಅನುಕೂಲವಾಗಲು ವರದಿ ನೀಡುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ.

- ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಗುರುತಿಸಿ ಭರ್ತಿ ಮಾಡುವ ಉದ್ದೇಶಕ್ಕೆ ವರದಿ ಪಡೆಯಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚನೆ.

- ವಿವಿಧ ಕೌಶಲ್ಯ ತರಬೇತಿ ಯೋಜನೆಗಳನ್ನು ಒಂದೇ ಸೂರಿನಡಿ ತಂದು ತರಬೇತಿ ಚಟುವಟಿಕೆ ನಡೆಸಲು ಕೌಶಲ್ಯ ಮಿಷನ್‌ ಸ್ಥಾಪನೆಗೆ ನಿರ್ಧಾರ.

***

ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು

- ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಎಸ್‌ಸಿ– ಎಸ್‌ಟಿ ಸಮುದಾಯಕ್ಕೆ ಸೇರಿದ 5331 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲು ₹16.98 ಕೋಟಿ.

- ಬಾಗಲಕೋಟೆ ಜಿಲ್ಲೆ ಪಟ್ಟದಕಲ್ಲಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹129.25 ಕೋಟಿ ವೆಚ್ಚದಲ್ಲಿ ಪ್ರವಾಸಿ ಪ್ಲಾಜಾ ನಿರ್ಮಿಸಲು ತೀರ್ಮಾನ. 24 ಎಕರೆ ಪ್ರದೇಶದಲ್ಲಿ ಇದರ ನಿರ್ಮಾಣ ಆಗಲಿದೆ.

- ವಿಜಯಪುರ ಜಿಲ್ಲೆಯ ತಿಕೋಟಾ ಮತ್ತು ಕಲಬುರ್ಗಿಯ ಕಮಲಾಪುರಕ್ಕೆ ಪಟ್ಟಣ ಪಂಚಾಯತಿ ಭಾಗ್ಯ 

- ಅಂಗನವಾಡಿ ಕಾರ್ಯಕರ್ತೆಯರಿಗೆ ಸಮವಸ್ತ್ರ ನೀಡಲು ಪ್ರತಿ ಸೀರೆಗೆ ₹400 ನಿಗದಿ. ಇದಕ್ಕಾಗಿ ₹10.27 ಕೋಟಿ ನೀಡಲು ಒಪ್ಪಿಗೆ. ಇದರಿಂದ 62,580 ಅಂಗನವಾಡಿಗಳು ಮತ್ತು 3,331  ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಯೋಜನ ಸಿಗಲಿದೆ. ಒಟ್ಟು 2.56 ಲಕ್ಷ ಸೀರೆ ವಿತರಿಸಲಾಗುವುದು.

- ಅಂಗವಿಕಲರಿಗಾಗಿ ದ್ವಿಚಕ್ರ ವಾಹನ ಖರೀದಿ ಯೋಜನೆಗೆ ₹15 ಕೋಟಿ ನಿಗದಿ. 2,000 ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗಲಿದೆ.

- ‘ಭಾಗ್ಯಲಕ್ಷ್ಮಿ’ ಯೋಜನೆಗೆ ಭಾರತೀಯ ಜೀವ ವಿಮಾ ನಿಗಮ ಹೊಂದಿರುವ ಪಾಲುದಾರಿಕೆಯನ್ನು 2020 ರ ಮಾರ್ಚ್‌ 30 ರವರೆಗೆ ವಿಸ್ತರಣೆ.

- ಕ್ರೀಡಾ ಇಲಾಖೆ ವತಿಯಿಂದ ರಾಯಚೂರು, ಹಾವೇರಿ, ಮಂಗಳೂರು, ಚಿಕ್ಕಮಗಳೂರು, ಮಂಡ್ಯ, ಕೋಲಾರ, ಚಾಮರಾಜನಗರ, ಕಲಬುರ್ಗಿ, ಧಾರವಾಡದಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ವಸತಿ ನಿಲಯ ಸ್ಥಾಪಿಸಲು ₹15 ಕೋಟಿ ಆಡಳಿತಾತ್ಮಕ ಅನುಮೋದನೆ.

- ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನಲ್ಲಿ ಭೀಮಾನದಿಗೆ ಸೇತುವೆ ಮತ್ತು ಬಾಂದಾರ ನಿರ್ಮಾಣಕ್ಕೆ ₹72 ಕೋಟಿ.

- ಧರ್ಮಸ್ಥಳ ಸಮೀಪದ ಮುಳಿಕಾರುವಿನಲ್ಲಿ ನೆರಿಯಾ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಿಸಲು ₹14.97 ಕೋಟಿಗೆ ಆಡಳಿತಾತ್ಮಕ ಅನುಮೋದನೆ.

- ಹೊಸಪೇಟೆ ತಾಲ್ಲೂಕಿನ ಪಾಪಿನಾಯಕನಹಳ್ಳಿ ಪ್ರದೇಶದಲ್ಲಿ ಗಣಿಗಾರಿಕೆಯಿಂದ ಬಾಧಿತ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ತುಂಗಭದ್ರಾದಿಂದ ನೀರೆತ್ತಿ 18 ಕೆರೆಗಳು, 4 ಚೆಕ್‌ ಡ್ಯಾಂಗಳನ್ನು ತುಂಬಿಸಲು ₹243.35 ಕೋಟಿಗೆ ಯೋಜನೆಗೆ ಅನುಮೋದನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು