ಬುಧವಾರ, ಏಪ್ರಿಲ್ 21, 2021
25 °C
ಚರ್ಚೆಗೆ ಗ್ರಾಸವಾದ ಸಭಾಧ್ಯಕ್ಷ ಕಾಗೇರಿ ಭಾಷಣ

‘ಸೆಕ್ಯುಲರ್‌ ಎಂದರೆ ಸರ್ವಧರ್ಮ ಸಮಭಾವವೇ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆಯಲ್ಲಿ ಸಂವಿಧಾನ ಕುರಿತ ವಿಶೇಷ ಚರ್ಚೆಗೆ ಚಾಲನೆ ನೀಡುವಾಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ‘ಸೆಕ್ಯುಲರ್‌’ ಹಾಗೂ ಸಂವಿಧಾನದ ಮೂಲ ಆಶಯಗಳ ಕುರಿತು ಪ್ರಸ್ತಾಪಿಸಿರುವ ಸಂಗತಿಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

‘ಸಂವಿಧಾನದ ಮೂಲತತ್ವಗಳನ್ನು ಆಂಶಿಕವಾಗಿ ಐದು ಪದಗಳಾದ ಸಾರ್ವಭೌಮ, ಸಮಾಜವಾದಿ, ಸರ್ವಧರ್ಮಸಮಭಾವ, ಪ್ರಜಾಸತ್ತಾತ್ಮಕ, ಗಣರಾಜ್ಯಗಳಲ್ಲಿ ಸಂಗ್ರಹಿಸಲಾಗಿದೆ. ಸೆಕ್ಯುಲರ್‌ ಎಂಬುದರ ಪದಶಃ ಅರ್ಥವನ್ನು ತೆಗೆದುಕೊಂಡರೆ ಧರ್ಮವು ಸಾರ್ವಜನಿಕ ವ್ಯವಹಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂಬುದನ್ನು ತಿಳಿಸುತ್ತದೆ. ಆದರೆ, ಈಗ ಸರ್ವಜನರ ಬೇಡಿಕೆಗೆ ಮನ್ನಣೆಯಿತ್ತು. ಈ ಪರಿಕಲ್ಪನೆಗಳನ್ನು ಎಲ್ಲ ಧರ್ಮಗಳಿಗೂ ಸಮಾನ ಗೌರವ ಅಥವಾ ಸರ್ವಧರ್ಮಸಮಭಾವ ಎಂಬ ಅರ್ಥವ್ಯಾಪ್ತಿಗೆ ತರಲಾಗಿದೆ’ ಎಂದು ಸಭಾಧ್ಯಕ್ಷರು ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

‘ಸೆಕ್ಯುಲರ್‌ ಪದಕ್ಕೆ ಕನ್ನಡದಲ್ಲಿ ಸರ್ವಧರ್ಮಸಮಭಾವ ಎಂಬ ಪದವನ್ನು ಬಳಸಿದ್ದು ಸಮಂಜಸವಲ್ಲ. ಧರ್ಮ ಎಂದರೆ ಸಾಂಸ್ಥಿಕ ಧರ್ಮ ಎಂಬರ್ಥ ಬರುತ್ತದೆ. ಭಾರತದಲ್ಲಿ ಇಂತಹ ಸಾಂಸ್ಥಿಕ ಧರ್ಮದ ಆಚೆ ನಿಂತು ಮಾನವಧರ್ಮ ಎಂದು ಗುರುತಿಸಿಕೊಳ್ಳುವ, ಧರ್ಮದ ಹಂಗೇ ಇಲ್ಲದ ಸಾವಿರಾರು ಬುಡಕಟ್ಟುಗಳು, ಜನಸಮುದಾಯಗಳೂ ಇವೆ. ಅದೇ ಕಾರಣಕ್ಕಾಗಿ ಸಂವಿಧಾನ ರಚಿಸಿದವರು ಧರ್ಮನಿರಪೇಕ್ಷ ಎಂಬರ್ಥದಲ್ಲಿ ಸೆಕ್ಯುಲರ್‌ ಪದ ಬಳಸಿದ್ದಾರೆ. ಧರ್ಮನಿರಪೇಕ್ಷ, ಧರ್ಮಾತೀತ ಎಂದು ಕನ್ನಡದಲ್ಲಿ ಬಳಸಲಾಗುತ್ತಿದೆ. ಹಾಗಿರುವಾಗ ಕಾಗೇರಿಯವರು ಹೀಗೆ ಹೇಳಿದ್ದು ಏಕೆ’ ಎಂಬ ಚರ್ಚೆ ಆರಂಭವಾಗಿದೆ.

‘ಸರ್ವಜನರ ಬೇಡಿಕೆಗೆ ಮನ್ನಣೆಯಿತ್ತು ಸೆಕ್ಯುಲರ್‌ ಪದದ ಅರ್ಥವನ್ನು ಈಗ ಎಲ್ಲ ಧರ್ಮಗಳಿಗೂ ಸಮಾನ ಗೌರವ ಅಥವಾ ಸರ್ವಧರ್ಮ ಸಮಭಾವ ಎಂಬ ಅರ್ಥವ್ಯಾಪ್ತಿಗೆ ತರಲಾಗಿದೆ’ ಎಂದು ಸಭಾಧ್ಯಕ್ಷರು ಪ್ರತಿಪಾದಿಸಿದ್ದಾರೆ.  ಈ ರೀತಿಯ ನಿರ್ಧಾರಕ್ಕೆ ಬಂದಿರುವ ಸಭಾಧ್ಯಕ್ಷರು ಸೆಕ್ಯುಲರ್ ಪದದ ಆಶಯವನ್ನೇ ಬದಲಾವಣೆ ಮಾಡಿದ್ದು ಎಷ್ಟು ಸರಿ’ ಎಂಬ ಚರ್ಚೆಯೂ ನಡೆದಿದೆ.

‘ಬ್ರಿಟಿಷರ ಆಳ್ವಿಕೆಯಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಪರಿಕಲ್ಪನೆಯ ಅರಿವು ಇತ್ತು’ ಎಂದು ಸಭಾಧ್ಯಕ್ಷರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಸಂವಿಧಾನದ ಮೂಲ ಆಶಯಗಳು ಬ್ರಿಟಿಷರ ಆಡಳಿತದಲ್ಲೇ ಇತ್ತು ಎಂದು ಪ್ರತಿಪಾದಿಸಿದಂತಾಗಲಿಲ್ಲವೇ ಎಂಬ ಚರ್ಚೆಗೂ ಇದು ದಾರಿ ಮಾಡಿಕೊಟ್ಟಿದೆ.

‘ಪೂರ್ವಾಶ್ರಮದ ವಾಸನೆ’
‘ಬಿ.ಎನ್‌.ರಾವ್‌ ರಚಿಸಿದ ಸಂವಿಧಾನದ ಮೂಲ ಕರಡು ಪ್ರತಿಯನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ನೇತೃತ್ವದಲ್ಲಿ ರಚಿಸಲಾದ ಸಂವಿಧಾನ ಕರಡು ಸಮಿತಿಗೆ ಸಲ್ಲಿಸಲಾಗಿತ್ತು. ಕರಡನ್ನು ಅಂಬೇಡ್ಕರ್‌ ನೇತೃತ್ವದ ಸಮಿತಿ ಚರ್ಚಿಸಿ, ಹಲವಾರು ಮಾರ್ಪಾಡು ಮಾಡಿ ಸಮಗ್ರ ಮತ್ತು ಸಮರ್ಥ ಸಂವಿಧಾನ ರಚಿಸಿದ್ದಾರೆ ಎಂದು ಭಾಷಣದಲ್ಲಿ ಹೇಳಿದ್ದೀರಿ. ಈ ರೀತಿ ತಿರುಚುವುದು ಸರಿಯಲ್ಲ ಅದನ್ನು ತಿದ್ದುಪಡಿ ಮಾಡಬೇಕು’ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸದಸ್ಯ ಎಚ್‌.ಕೆ.ಪಾಟೀಲ ಆಗ್ರಹಿಸಿದರು.

‘ಮೂಲ ಕರಡನ್ನು ಮಾರ್ಪಾಡು ಮಾಡಿ ಸಂವಿಧಾನ ರಚಿಸಿದರು ಎಂದರೆ ತಪ್ಪು ಅರ್ಥ ಬರುತ್ತದೆ. ಅಂಬೇಡ್ಕರ್‌ ಅವರೇ ರಚಿಸಿದರು ಎಂದಾಗಬೇಕು’ ಎಂದು ಹೇಳಿದರು.

‘ಯಾವುದೇ ತಪ್ಪು ಸಂದೇಶ ಬರಬಾರದು. ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇನೆ. ಸೂಕ್ತ ತಿದ್ದುಪಡಿ ಮಾಡುತ್ತೇನೆ’ ಎಂದು ಸಭಾಧ್ಯಕ್ಷ ಕಾಗೇರಿ ಭರವಸೆ ನೀಡಿದರು.

‘ನಿಮ್ಮ ಭಾಷಣದಲ್ಲಿ ಮೊದಲ ಭಾಗಗಳು ನಿಮ್ಮ ಪೂರ್ವಾಶ್ರಮದ ವಾಸನೆ ಇದೆ. ಹೀಗಾಗಿ ಸ್ವಾತಂತ್ರಕ್ಕಾಗಿ ಹೋರಾಡಿದ ಕಾಂಗ್ರೆಸ್‌ ಬಗ್ಗೆ, ನೆಹರೂ ಅವರ ಬಗ್ಗೆ ಪ್ರಸ್ತಾಪ ಇಲ್ಲ’ ಎಂದೂ ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು