ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆಯ ಪ್ರಜ್ಞೆ ಮೂಡಿಸಲು 'ಮಕ್ಕಳ ವಿಜ್ಞಾನ ಹಬ್ಬ'

34 ಶೈಕ್ಷಣಿಕ ಜಿಲ್ಲೆಗಳ 623 ಕ್ಲಸ್ಟರ್‌ಗಳ ಆಯ್ಕೆ
Last Updated 6 ನವೆಂಬರ್ 2019, 19:37 IST
ಅಕ್ಷರ ಗಾತ್ರ

ಶಿರಸಿ: ಶಾಲೆಯ ಕೊಠಡಿಯಲ್ಲಿ ಕುಳಿತು ಪಾಠ ಕೇಳುವ ಬದಲಾಗಿ, ‘ಮಾಡಿ– ಆಡಿ– ಹಾಡಿ’ ಖುಷಿಪಡುವ ಮಕ್ಕಳ ವಿಜ್ಞಾನ ಹಬ್ಬಕ್ಕೆ ಒಂದು ಲಕ್ಷ ವಿದ್ಯಾರ್ಥಿಗಳು ಅಣಿಯಾಗುತ್ತಿದ್ದಾರೆ. ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 623 ಕ್ಲಸ್ಟರ್‌ಗಳಲ್ಲಿ ಇದೇ ತಿಂಗಳು ಈ ಹಬ್ಬ ನಡೆಯಲಿದೆ.

ಮಕ್ಕಳಲ್ಲಿ ಸೃಜನಶೀಲತೆ, ಪ್ರಶ್ನಿಸುವ ಮನೋಭಾವ, ಪ್ರಾಯೋಗಿಕ ಕಲಿಕೆಗೆ ಪೂರಕವಾಗಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಜಂಟಿಯಾಗಿ, ಸಮುದಾಯದ ಪಾಲ್ಗೊಳ್ಳುವಿಕೆಯಲ್ಲಿ ಹಬ್ಬದ ಸಿದ್ಧತೆ ನಡೆಸಿವೆ.

ಪ್ರತಿ ಕ್ಲಸ್ಟರ್‌ನ ಆಯ್ದ ಐವರು ಶಿಕ್ಷಕರು, ಸಿಆರ್‌ಪಿ ಹಾಗೂ ಹಬ್ಬ ನಡೆಸಲು ಆಯ್ಕೆ ಮಾಡಿರುವ ಶಾಲೆಯ ಮುಖ್ಯ ಶಿಕ್ಷಕರಿಗೆ ಈ ಸಂಬಂಧ ಎರಡು ದಿನಗಳ ತರಬೇತಿ ನಡೆಯುತ್ತಿದೆ. ನಿಗದಿತ ಕ್ಲಸ್ಟರ್‌ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 6, 7, 8ನೇ ತರಗತಿಗಳ 150 ಮಕ್ಕಳು ಹಬ್ಬದಲ್ಲಿ ಭಾಗವಹಿಸಲಿದ್ದಾರೆ.

‘ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸುವ, ಹಿಂಜರಿಕೆಯನ್ನು ಅಳಿಸಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ನಡೆಯುವ ಹಬ್ಬ ಇದಾಗಿದೆ. ಇದು ವಿಜ್ಞಾನ ಚಟುವಟಿಕೆಗೆ ಸೀಮಿತವಲ್ಲ. ಭಾಷೆ, ವಿಜ್ಞಾನ, ಗಣಿತ, ಕಲೆ, ನಾಟಕ, ನೃತ್ಯ ಎಲ್ಲವನ್ನೊಳಗೊಂಡು ಮಕ್ಕಳು ವೈಜ್ಞಾನಿಕವಾಗಿ ಕಲಿಯುವ ಕ್ರಮವನ್ನು ಅನ್ವೇಷಿಸುವ ಪ್ರಕ್ರಿಯೆ ಯಾಗಿದೆ’ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಉಪಾಧ್ಯಕ್ಷ ಎಫ್.ಸಿ.ಚೇಗರೆಡ್ಡಿ ತಿಳಿಸಿದರು.

‘ವಿಜ್ಞಾನ ಹಬ್ಬದಲ್ಲಿ ನಾಲ್ಕು ವಿಭಾಗಗಳಿರುತ್ತವೆ. ಸೌರವ್ಯೂಹಕ್ಕೆ ಸಂಬಂಧಿಸಿದ ‘ಚುಕ್ಕಿ– ಚಂದ್ರಮ’, ವಿಜ್ಞಾನ ಅನ್ವೇಷಿಸುವ ‘ಮಾಡಿ ಆಡು’, ಭಾಷಾ ಜ್ಞಾನ ಬೆಳೆಸುವ ‘ಆಡು– ಹಾಡು’, ಸುತ್ತಲಿನ ಪರಿಸರ, ಸಾಮಾಜಿಕ ಅಧ್ಯಯನಕ್ಕೆ ಪೂರಕವಾಗಿ ‘ಊರು ತಿಳಿಯೋಣ’ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ. ಸರ್ಕಾರಿ ಶಾಲೆಗಳೆಡೆಗೆ ಜನರಲ್ಲಿ ಪ್ರೀತಿ ಬೆಳೆಸುವ ಉದ್ದೇಶದಿಂದ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ ಎಲ್ಲವನ್ನೂ ಸಂಘಟಿಸಲಾಗುತ್ತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನ.25 ಒಳಗಾಗಿ ಕ್ಲಸ್ಟರ್ ಮಟ್ಟದ ಹಬ್ಬಗಳು ಪೂರ್ಣಗೊಳ್ಳುತ್ತವೆ. ನಂತರ ಜಿಲ್ಲಾ ಮಟ್ಟದಲ್ಲಿ ಮೂರು ದಿನಗಳ ಹಬ್ಬ ನಡೆಯುತ್ತದೆ. ಈ ಹಬ್ಬದಲ್ಲಿ ಕಾರ್ಯಕ್ರಮ ಸಂಘಟಿಸುವ ಶಾಲೆಯ ಶೇ 50ರಷ್ಟು ಮಕ್ಕಳು ಭಾಗವಹಿಸುತ್ತಾರೆ. ಹಬ್ಬದಲ್ಲಿ ಭಾಗವಹಿಸುವ ಈ ಶಾಲೆಯ ಪ್ರತಿ ಮಗು, ಉಳಿದ ಕ್ಲಸ್ಟರ್‌ನಿಂದ ಬರುವ ಒಂದೊಂದು ಮಗುವನ್ನು ತನ್ನ ಮನೆಯಲ್ಲಿ ಉಳಿಸಿಕೊಳ್ಳಬೇಕು. ಆ ಮೂಲಕ ಮಗುವಿಗೆ ಭಿನ್ನ ಸಂಸ್ಕೃತಿಯ ಅರಿವಾಗುತ್ತದೆ. ಎರಡು ಕುಟುಂಬಗಳ ನಡುವೆ ಸೌಹಾರ್ದ ಸಂಬಂಧ ಏರ್ಪಡುತ್ತದೆ’ ಎಂದು ಅವರು ವಿವರಿಸಿದರು.

*
ಹಲವು ಶಾಲೆಗಳ ಮಕ್ಕಳು ಜೊತೆಯಾಗಿ ಆಡುವ, ಹಾಡುವ, ಆಟಿಕೆಗಳ ಮೂಲಕ ಕಲಿಯುವ ವಿಜ್ಞಾನ ಹಬ್ಬ ವಿನೂತನ ಕಾರ್ಯಕ್ರಮವಾಗಿದೆ.
-ಎಸ್.ಸುರೇಶಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT